ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿದು 10 ಮಂದಿ ಸಾವನ್ನಪ್ಪಿದ್ದಾರೆ.ಶಿರೂರು
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾಧಿಕಾರಿ, ಅಂಕೋಲಾ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಗುಡ್ಡ ಕುಸಿದಿದೆ. ಗುಡ್ಡದ ಮಣ್ಣಿನಡಿ 10ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ ಇದ್ದು, ಒಂದೇ ಕುಟುಂಬದ ಐವರು ಸೇರಿ ಹತ್ತಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ. ಗುಡ್ಡ ಕುಸಿದ ರಭಸಕ್ಕೆ ನದಿಗೆ 2 ಗ್ಯಾಸ್ ಟ್ಯಾಂಕರ್ಗಳು ಕೊಚ್ಚಿ ಹೋಗಿದೆ. ಗುಡ್ಡದ ಕೆಳಗಿದ್ದ ಲಾರಿ, ಮತ್ತೊಂದು ಟ್ಯಾಂಕರ್ ಹಾಗೂ ಚಾಲಕರು ಪಾರಾಗಿದ್ದಾರೆ.
ಕಾರವಾರದಲ್ಲಿ ಅಂಕೋಲಾ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ. ಅವಘಡದಲ್ಲಿ 7ಕ್ಕೂ ಮಂದಿ ಸಾವನ್ನಪ್ಪಿರಬಹುದು, ಆದರೆ ಇನ್ನೂ ಕೂಡಾ ಖಚಿತ ಮಾಹಿತಿ ಬರಬೇಕಿದೆ ಎಂದಿದ್ದಾರೆ. ಸದ್ಯ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಎಷ್ಟು ಸಾವಾಗಿದೆ ಹೇಳುವುದು ಸಾಧ್ಯವಿಲ್ಲ. ಕಾರ್ಯಾಚರಣೆಗೆ ಅಗತ್ಯ ಸಲಕರಣೆಗಳು ಸಾಕಾಗುತ್ತಿಲ್ಲ. ಹೀಗಾಗಿ ಕುಮಟಾ ಹಾಗೂ ಅಂಕೋಲಾ ಎರಡೂ ಕಡೆಯಿಂದ ಕಾರ್ಯಾಚರಣೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಜೆಸಿಬಿ, ಹಿಟಾಚಿ ಮತ್ತಿತರ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಜೆಡಿಎಸ್ ನಾಯಕರಾಗಿ ಹಿರಿಯ ಶಾಸಕ ಸುರೇಶ್ ಬಾಬು ಆಯ್ಕೆ
ಮಳೆ ನಡುವೆಯೂ ಶೋಧ ಕಾರ್ಯ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರು ಸೇರಿ 7ಕ್ಕೂ ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಶಾಂತಿ ನಾಯ್ಕ ಎಂಬ ಮಹಿಳೆಯ ಶವ ಪತ್ತೆಯಾಗಿದ್ದು, ಮಣ್ಣಿನ ಅಡಿ ಸಿಲುಕಿರುವ ಇನ್ನೂ ಆರು ಮಂದಿಗಾಗಿ ಶೋಧ ನಡೆಯುತ್ತಿದೆ.
ಮಳೆ ನಡುವೆಯೂ ಬೆಳಗ್ಗೆಯಿಂದಲೂ ಜೆಸಿಬಿ ಮೂಲಕ ಮಣ್ಣು ತೆಗೆಯುವ ಕೆಲಸ ನಡೆಯುತ್ತಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ಎನ್ಡಿಆರ್ಎಫ್ ತಂಡ ಭೇಟಿ ನೀಡಿದೆ. ಹೆದ್ದಾರಿ ಬಂದ್ ಆಗಿದ್ದರಿಂದ ಯಲ್ಲಾಪುರ ಮಾರ್ಗವಾಗಿ ಶಿರೂರಿಗೆ ಆಗಮಿಸಿದ್ದಾರೆ. ಕಾರ್ಯಾಚರಣೆಗೆ ಧಾರಾಕಾರ ಮಳೆಯು ಅಡ್ಡಿಯಾಗುತ್ತಿದೆ. ಸ್ಥಳದಲ್ಲಿ ಪೊಲೀಸ್, ತಾಲ್ಲೂಕಾಡಳಿತದ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.
ಇದನ್ನೂ ನೋಡಿ: ಇಡಿಗಂಟುಗಾಗಿ ಬಿಸಿಯೂಟ ನೌಕರರ ಅನಿರ್ಧಿಷ್ಟ ಧರಣಿ Janashakthi Media