ಬೆಂಗಳೂರು : ನಿವೃತ್ತಿ ಹೊಂದಿದವರಿಗೆ ಮತ್ತು ಹೊಂದುತ್ತಿರುವ ಬಿಸಿಯೂಟ ನೌಕರರಿಗೆ ಇಡಿಗಂಟು ನೀಡಬೇಕು ಎಂದು ಆಗ್ರಹಿಸಿ ಬಿಸಿಯೂಟ ನೌಕರರು ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘಟನೆ (ಸಿಐಟಿಯು) ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ ಮಾತನಾಡಿ, ಕಳೆದ ವರ್ಷ ಆಯುಕ್ತರ ಕಚೇರಿಯಲ್ಲಿ ನಮ್ಮ ಬೇಡಿಕೆಗಳ ಕುರಿತು ಸಂಘಟನೆಯ ಮುಖಂಡರೊಂದಿಗೆ ಸಭೆ ನಡೆದಿತ್ತು. ಆ ಸಭೆಯಲ್ಲಿ ಈಗಾಗಲೇ ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದುತ್ತಿರುವ ಬಿಸಿಯೂಟ ನೌಕರರಿಗೆ ಇಡಿಗಂಟು ಜಾರಿ ಮಾಡುವ ಕುರಿತು ಚರ್ಚೆ ನಡೆಸಲಾಗಿತ್ತು. ನ 10, 2023 ರಂದು ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಮ್ಮ ಸಂಘಟನೆಯ ಪದಾಧಿಕಾರಿಗಳ ಜೊತೆ ಜಂಟಿಸಭೆ ನಡೆದಿತ್ತು. ನ.15 ರಂದು ಶಿಕ್ಷಣ ಸಚಿವರು ನಮ್ಮ ಬೇಡಿಕೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳುವ ಕುರಿತು ಲಿಖಿತವಾಗಿ ಪತ್ರ ಕಳುಹಿಸಿ, ಹೋರಾಟವನ್ನು ವಾಪಸ್ಸು ಪಡೆಯಲು ಕೋರಿದ್ದರಿಂದ ಸರ್ಕಾರ ನೀಡಿದ ಲಿಖಿತ ಭರವಸೆಯಿಂದಾಗಿ ಹೋರಾಟವನ್ನು ವಾಪಸ್ಸು ಪಡೆಯಲಾಗಿತ್ತು.
ಈ ಸಭೆಗಳಲ್ಲಿ ಮಾತುಕತೆ ನಡೆಸಿದಂತೆ ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದುತ್ತಿರುವ ಅಡುಗೆ ನೌಕರರಿಗೆ ಇಡಿಗಂಟು ಜಾರಿ ಮಾಡುವ ಬಗ್ಗೆ ಸರ್ಕಾರವು ಸಹಮತ ಸೂಚಿಸಿತ್ತು. ಅಲ್ಲದೇ ಬಜೆಟ್ ಸಂದರ್ಭದಲ್ಲಿ, ಚುನಾವಣಾ ಸಂದರ್ಭದಲ್ಲಿ ಈ ನೌಕರರಿಗೆ ವೇತನ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಇದುವರೆಗೂ ಕೂಡಾ ಅದು ಜಾರಿ ಆಗಿಲ್ಲ ಎಂದು ಮಾಲಿನಿ ಆರೋಪಿಸಿದ್ದಾರೆ.
ಸಂಘಟನೆಯ ರಾಜ್ಯಾಧ್ಯಕ್ಷೆ ಲಕ್ಷ್ಮಿದೇವಿ ಮಾತನಾಡಿ, 2022 ರಿಂದ ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದುತ್ತಿರುವ ಎಲ್ಲಾ ಬಿಸಿಯೂಟ ನೌಕರರಿಗೆ 1 ಲಕ್ಷ ಇಡಗಂಟು ಕೊಡಬೇಕು.ಬಜೆಟ್ ನಲ್ಲಿ ಈ ನೌಕರರಿಗೆ ಹೆಚ್ಚಳ ಮಾಡಿದ ರೂ. 1000 ವೇತನವನ್ನು ಜನವರಿ 2023 ರಿಂದ ಅನ್ವಯಿಸಿ ಜಾರಿಮಾಡಬೇಕು. ಸಾದಿಲ್ವಾರು ಜಂಟಿ ಖಾತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಮತ್ತು ಎಸ್ಡಿಎಂಸಿ ಅಧ್ಯಕ್ಷರ ಹೆಸರಿಗೆ ವರ್ಗಾವಣೆ ಮಾಡಿರುವುದು ವಾಪಸ್ಸಾಗಬೇಕು. ಕೂಡಲೇ ಆ ಆದೇಶ ಹಿಂಪಡೆದು ಮುಖ್ಯೋಪಾಧ್ಯಾಯ ಮತ್ತು ಮುಖ್ಯ ಅಡುಗೆಯವರ ಜಂಟಿ ಬ್ಯಾಂಕ್ ಖಾತೆ ಮುಂದುವರಿಸಬೇಕು’ ಅಕ್ಷರ ದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೆ ನಡೆಯಬೇಕು. ಬಿಸಿಯೂಟ ತಯಾರಕರನ್ನು ಮಾರ್ಚ್ 31ಕ್ಕೆ ಬಿಡುಗಡೆಗೊಳಿಸಿ ಜೂನ್ 1ಕ್ಕೆ ಪುನಃ ನೇಮಕಾತಿ ಮಾಡಿಕೊಳ್ಳುವ ಆದೇಶವನ್ನು ಹಿಂಪಡೆಯಬೇಕು. ಜತೆಗೆ ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ವೇಳೆ ಕೆಲಕಾಲ ಮಳೆ ಸುರಿಯಿತು, ಮಳೆಯಲ್ಲೂ ಕೊಡೆ (ಛತ್ರಿ) ಹಿಡಿದು ಪ್ರತಿಭಟನೆಕಾರರು ಘೋಷಣೆ ಮೊಳಗಿಸಿದರು. ಪ್ರತಿಭಟನೆಯಲ್ಲಿ ಎಲ್ಲಾ ಜಿಲ್ಲೆಗಳ ಸಾವಿರಾರು ಬಿಸಿಯೂಟ ನೌಕರರು ಭಾಗವಹಿಸಿದ್ದರು. ಎರಡು ದಿನದಲ್ಲಿ ನಮ್ಮ ಬೇಡಿಕೆ ಈಡೇರದೆ ಇದ್ದಲ್ಲಿ ಜು17 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ತಿಳಿಸಿದರು.