ಮೇಲ್ವಿಚಾರಕಿ ಗಾಯತ್ರಿ ಅಮಾನತ್ತಿಗೆ ಎಸ್.ಎಫ್.ಐ. ಆಗ್ರಹ
ಸಿರವಾರ: ಸಿರವಾರ ಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮೇಲ್ವಿಚಾರಕಿ ಗಾಯತ್ರಿ ಸರಕಾರದ ವತಿಯಿಂದ ನಿಲಯದ ವಿದ್ಯಾರ್ಥಿಗಳಿಗೆ ನೀಡಬೇಕಾದ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೆಳಿ ಬಂದಿದೆ.
ಹಾಸ್ಟೇಲ್ ಮಕ್ಕಳಿಗೆ ನೀಡಬೇಕಾದ ಊಟದ ಸಾಮಗ್ರಿ ಹಾಗೂ ಮೂಲ ಸೌಲಭ್ಯಗಳನ್ನು ಹೊರಗಿನ ಜನರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಆರೋಪಿಸಿದೆ. ಹಾಸ್ಟೇಲ್ಗೆ ಬಂದಿರುವ 5 ಚೀಲ ಅಕ್ಕಿ, 2 ಚೀಲ ಗೋಧಿ, 20 ಬೆಡ್ ಶೀಟುಗಳು, 16 ಚಾದಾರ್, 2 ಬಾಕ್ಸ್ ಸೋಪ್ ಕಿಟ್ , 1 ಬಾಕ್ಸ್ ಟೂತ್ಪೇಸ್ಟ್ ಕಿಟ್, 8 ಜಮಕಾನೆ, 24 ನೈಟ್ ಡ್ರೆಸ್, 15 ಜಾಕೆಟ್ ಈ ಮುಂತಾದ ಆಹಾರ ಮತ್ತು ಸಾಮಾಗ್ರಿಗಳನ್ನು ದಿನಾಂಕ 28-05-2024 ರಂದು ಕಳ್ಳಸಾಗಾಣಿಕೆ ಮಾಡಿದ್ದಾರೆ ಎಂದು ಎಸ್ಎಫ್ಐ ಸಿರವಾರ ತಾಲೂಕು ಅಧ್ಯಕ್ಷ ಚಿದಾನಂದ ಕರಿಗೂಳಿ ಆರೋಪಿಸಿದ್ದಾರೆ.
ಸುಮಾರು 5-6 ಕಿಲೋ ಮೀಟರ್ ದೂರದಲ್ಲಿರುವ ಜಕ್ಕಲದಿನ್ನಿ ಗ್ರಾಮದ ಅಯ್ಯನಗೌಡ ಎಂಬುವವರ ಮನೆಯಲ್ಲಿ ಸಾಮಾಗ್ರಿಗಳನ್ನು ಸಂಗ್ರಹಣೆ ಮಾಡಿ ಮಾರಾಟ ಮಾಡಲು ಮುಂದಾಗಿದ್ದು ಸರಕಾರದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಬಂದಿರುವ ಆಹಾರ ಮತ್ತು ಸಾಮಾಗ್ರಿಗಳನ್ನು ನೀಡದೆ ದ್ರೋಹ ಎಸಗಿ ವಂಚನೆ ಮಾಡಿದ ಮೇಲ್ವಿಚಾರಕಿ ಗಾಯತ್ರಿಯನ್ನು ಅಮಾನತು ಮಾಡದೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಿ ಕೈತೊಳೆದುಕೊಂಡ ಮೇಲಾಧಿಕಾರಿಗಳ ನಡೆ ಅತ್ಯಂತ ಖಂಡನೀಯವಾಗಿದೆ ಎಂದು ಎಸ್ಎಫ್ಐ ಹೇಳಿದೆ.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಪಿಎ ಹರೀಶ್ ಬಂಧನ
ಮೇಲ್ವಿಚಾರಕಿ ಗಾಯತ್ರಿಯನ್ನು ಈ ಕೂಡಲೇ ಅಮಾನತು ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಂಡು ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು. ವಸತಿ ನಿಲಯವನ್ನು ಶಾಲೆಯ ಹತ್ತಿರಕ್ಕೆ ಸ್ಥಳಾಂತರ ಮಾಡಬೇಕು. ನಿತ್ಯ ವಿದ್ಯಾರ್ಥಿಗಳು ಹಾಸ್ಟೇಲ್ ನಿಂದ ಶಾಲೆಗೆ 3-4 ಕಿ.ಮಿ ನಡೆದು ಹೋಗಬೇಕಿದೆ. ಶಾಲೆಯು ಗೋವಾ-ರಾಯಚೂರು ರಾಜ್ಯ ಹೆದ್ದಾರಿ ಮುಂಬಾಗದಲ್ಲಿದ್ದು ಬಾರಿ ಗಾತ್ರದ ವಾಹನಗಳು ಹೆಚ್ಚು ವೇಗವಾಗಿ ಚಲಿಸುತ್ತವೆ. ವಿದ್ಯಾರ್ಥಿಗಳಿಗೆ ಅಪಾಯವಾಗು ಸಾಧ್ಯತೆ ಇದೆ ಹಾಗಾಗಿ ಶಾಲೆಯ ಹತ್ತಿರಕ್ಕೆ ಸ್ಥಳಾಂತರ ಮಾಡಬೇಕು ಮತ್ತು ಮೂಲ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ನಿರ್ಲಕ್ಷ್ಯ ವಹಿಸಿದಲ್ಲಿ ಮುಂದಿನ ದಿನಗಳಲ್ಲಿ ನಿಲಯದ ವಿದ್ಯಾರ್ಥಿಗಳೊಂದಿಗೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಸ್ಎಫ್ಐ ತಾಲ್ಲೂಕ ಖಜಾಂಚಿ ಸುದರ್ಶನ್, ಸಹಕಾರ್ಯದರ್ಶಿ ಪ್ರತಾಪ್ ತಿಳಿಸಿದ್ದಾರೆ.
ಇದನ್ನೂ ನೋಡಿ: ಕನ್ನಡ ಕಟ್ಟುವಿಕೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪಾತ್ರ – ಡಾ. ಪುರುಷೋತ್ತಮ ಬಿಳಿಮಲೆ ಜೊತೆ ಮಾತುಕತೆ