“ಸವೆದ ಪಯಣ” ದ ಸವಿಯಾದ ಮೆಲುಕು

-ನಾ ದಿವಾಕರ

ಯಾವುದೇ ಸಮಾಜದಲ್ಲಿ ಕಳೆದುಹೋದ ಕಾಲಘಟ್ಟಗಳ  ಜನಜೀವನ, ಸಾಮಾಜಿಕ ಚೌಕಟ್ಟುಗಳು ಮತ್ತು ಸಾಂಸ್ಕೃತಿಕ ಆಗುಹೋಗುಗಳನ್ನು ತಿಳಿದುಕೊಳ್ಳಬೇಕೆಂದರೆ ನಾವು ಮೊರೆ ಹೋಗಬೇಕಿರುವುದು ಚರಿತ್ರೆಯ ಪುಟಗಳಿಗೆ ಅಲ್ಲ. ಅಲ್ಲಿ ರಚನಕಾರನ ವ್ಯಕ್ತಿಗತ ಗ್ರಹಿಕೆ ಮತ್ತು ತಾತ್ವಿಕ ನಿಲುವುಗಳಿಂದ ನಿರ್ದೇಶಿಸಲ್ಪಡುವ ಅಭಿವ್ಯಕ್ತಿಯೇ ಪ್ರಧಾನವಾಗಿರುತ್ತದೆ. ವರ್ತಮಾನದಲ್ಲಿ ನಿಂತು ಗತಕಾಲದತ್ತ ನೋಡುವಾಗ ಈ ಹೊತ್ತಿನ ವಾಸ್ತವಗಳೇ ನಮ್ಮ ಚಿಂತನಾ ಕ್ರಮವನ್ನು ಪ್ರಭಾವಿಸುವ ಸಾಧ್ಯತೆಗಳಿರುತ್ತವೆ. ಸವೆದ 

ಇದರ ಪರಿಣಾಮ ನಾವು ಮೆಲುಕು ಹಾಕುವ ಗತಕಾಲದ ಸಾಂಸ್ಕೃತಿಕ ಪಲ್ಲಟಗಳು, ವ್ಯತ್ಯಯಗಳು, ಬದಲಾವಣೆಗಳು ಇವೆಲ್ಲವೂ ಸಹ ವಸ್ತುನಿಷ್ಠತೆಯಿಂದ ದೂರ ಸರಿದು ವ್ಯಕ್ತಿನಿಷ್ಠ ಅಭಿವ್ಯಕ್ತಿಗಳಲ್ಲಿ ಪರ್ಯವಸಾನ ಹೊಂದುತ್ತವೆ. ಇದರೊಟ್ಟಿಗೆ ಕಾಡಬಹುದಾದ ಮತ್ತೊಂದು ಜಟಿಲ ಸಮಸ್ಯೆ ಎಂದರೆ ಗತ ಸಮಾಜದ ಬಗ್ಗೆ ವ್ಯಾಖ್ಯಾನಿಸುವಾಗ ಯಾವುದೇ ವ್ಯಕ್ತಿಯಾದರೂ ತನ್ನನ್ನೇ ಕೇಂದ್ರದಲ್ಲಿರಿಸಿಕೊಂಡು ಸಮಾಜವನ್ನು ನೋಡುವ ಸಾಧ್ಯತೆಗಳಿರುತ್ತವೆ. ಸವೆದ 

ತನ್ನನ್ನೇ ಕೇಂದ್ರ ಬಿಂದುವಾಗಿರಿಸಿಕೊಂಡು, ತನ್ನ ಗ್ರಹಿಕೆಯಲ್ಲಿ ಅಂದಿನ ಸಮಾಜ ಹೇಗಿತ್ತು, ಹೇಗಿರಬಾರದಿತ್ತು ಎಂಬ ಆಲೋಚನಾ ಲಹರಿ ಹರಿಯಲಾರಂಭಿಸುತ್ತದೆ. ಪ್ರಸ್ತುತ ನಾವು ಕಾಣುತ್ತಿರುವ ದಲಿತ ಚಳುವಳಿಯ 50 ವರ್ಷಗಳ ಸುತ್ತ ನಡೆಯುತ್ತಿರುವ ಸಂಕಥನ-ಸಂವಾದವನ್ನು ಗಮನಿಸಿದರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ. ಸವೆದ 

ಇದನ್ನೂ ಓದಿ: ಸಂಸತ್ತಿನ ಬಜೆಟ್ ಅಧಿವೇಶನ ಜುಲೈ 22ಕ್ಕೆ ಆರಂಭ – ಸಚಿವ ಕಿರಣ್ ರಿಜಿಜು

ವರ್ತಮಾನದ ಸಮಯದಲ್ಲಿ ನಿಂತು ನೋಡಿದಾಗ ನಮಗೆ 1970ರ ದಶಕ ಬಹಳ ವಿಶಿಷ್ಟವಾಗಿಯೂ, ಯುಗಪ್ರವರ್ತಕ ಕಾಲಘಟ್ಟವಾಗಿಯೂ ಕಾಣುತ್ತದೆ. 70ರ ದಶಕದ ಪೀಳಿಗೆಗೆ, ಅಂದರೆ ಅಂದಿನ ಸಾಹಿತ್ಯ-ಸಾಂಸ್ಕೃತಿಕ ವಲಯದಲ್ಲಿ ಸಕ್ರಿಯವಾಗಿದ್ದ ಕ್ರಿಯಾಶೀಲ ವ್ಯಕ್ತಿಗಳಿಗೆ 20ನೆಯ ಶತಮಾನದ ಆರಂಭದ ದಿನಗಳು ಇದೇ ರೀತಿ ಕಾಣುತ್ತಿದ್ದವು. ಸುತ್ತಲಿನ ಸಮಾಜವನ್ನು ಸದಾ ಕಾಲಮಾನಗಳ ತುಲನಾತ್ಮಕ ದೃಷ್ಟಿಯಿಂದಲೇ ನೋಡಬಯಸುವ ಸೃಜನಶೀಲ ಮನಸುಗಳಿಗೆ ಈ ರೀತಿಯ ಹಿನ್ನೋಟ ಒಂದು ಬೌದ್ಧಿಕ ಅನಿವಾರ್ಯತೆಯೂ ಆಗಿರುತ್ತದೆ. ಸವೆದ 

ನಾವು ನಿಂತ ವರ್ತಮಾನದ ನೆಲೆ ಆಗ ಹೇಗಿತ್ತು, ಈಗ ಹೇಗಾಗಿದೆ ಎಂಬ ಪ್ರಶ್ನೆಗಳೊಂದಿಗೇ ಅದು ಏಕೆ ಎಂಬ ಜಿಜ್ಞಾಸೆಗಳಿಗೂ ನಾವು ಉತ್ತರಗಳನ್ನು ಶೋಧಿಸುತ್ತಾ ಹೋಗುತ್ತೇವೆ. ಒಂದು ನಿರ್ದಿಷ್ಟ ಉದಾಹರಣೆ ನೀಡುವುದಾದರೆ 70ರ ದಶಕದ ಹೋರಾಟದ ಕಾವು ಇಂದೇಕೆ ಕಾಣುತ್ತಿಲ್ಲ ಎಂಬ ಪ್ರಶ್ನೆ.  ಈ ಪರಿಶೋಧನೆಯ ಪ್ರಕ್ರಿಯೆಯಲ್ಲಿ ನಮಗೆ ಸಮಾಜ ಮತ್ತು ಸಂಸ್ಕೃತಿಯ ವಿಕಾಸದ ಹಾದಿಯಲ್ಲಿ ಎದುರಾಗುವ ಎಲ್ಲ ರೀತಿಯ ತಡೆಗೋಡೆಗಳೂ ಗೋಚರಿಸಲಾರಂಭಿಸುತ್ತವೆ.

ಈ ತಡೆಗೋಡೆಗಳನ್ನು ದಾಟುವ ವಿಧಾನ/ಮಾರ್ಗಗಳು ಹಲವು ಸೈದ್ಧಾಂತಿಕ/ತಾತ್ವಿಕ ರೂಪಗಳಲ್ಲಿ ನಮ್ಮೆದುರು ಇದ್ದರೂ, ಅದಕ್ಕೆ ಬೇಕಾದ ಸೃಜನಶೀಲ ಮನಸ್ಸು, ವಿಕಸಿತ ಬೌದ್ಧಿಕ ನಿರೂಪಣೆಗಳು (Narratives) ಮತ್ತು ಕ್ರಿಯಾಶೀಲ ಚಟುವಟಿಕೆಗಳು ಇಲ್ಲದೆ ಹೋದರೆ ನಾವು ನಿರುತ್ತರರಾಗುತ್ತೇವೆ. ಇಂದು ನಮ್ಮ ಯುವ ಪೀಳಿಗೆ/ಮಿಲೆನಿಯಲ್‌ ತಲೆಮಾರು ಎದುರಿಸುತ್ತಿರುವ ಸಮಸ್ಯೆ ಇದು.  ಈ ಜಟಿಲ ಸಿಕ್ಕುಗಳಿಂದ ಹೊರಬರಬೇಕಾದರೆ ನಾವು ಮತ್ತೆ ಮತ್ತೆ 60-70ರ ದಶಕದತ್ತ ನೋಡುತ್ತಲೇ ಇರಬೇಕಾಗುತ್ತದೆ. ಆ ಹಿನ್ನೋಟದಲ್ಲಿ ನಮಗೆ ಗೋಚರಿಸುವ ಕಾಣ್ಕೆಗಳು ಬಹಳ ಮುಖ್ಯವಾಗಿ ಸಾಹಿತ್ಯ ಮತ್ತು ರಂಗಭೂಮಿಯ ಹೆಜ್ಜೆ ಗುರುತುಗಳಲ್ಲಿ ದೊರೆಯುತ್ತವೆ. ಆದರೆ ಈ ಕಾಣ್ಕೆಗಳನ್ನು ಭವಿಷ್ಯದ ತಲೆಮಾರಿಗಾಗಿ, For the posterity, ಕಾಪಿಡಬೇಕಾದರೆ ನಾವು, ಅಂದರೆ 60-70ರ ದಶಕದಲ್ಲಿ ಬೌದ್ಧಿಕ ವಿಕಸನಕ್ಕೆ ತೆರೆದುಕೊಂಡ ನಮ್ಮ ತಲೆಮಾರು, ಏನು ಮಾಡಬೇಕು ?. ಇಲ್ಲಿ ನಮಗೆ ಚರಿತ್ರೆ ಎನ್ನಲಾಗುವ ಬರಹಗಳಿಗಿಂತಲೂ ಅಪ್ಯಾಯಮಾನವಾಗಿ ಕಾಣುವುದು ಆ ಕಾಲಘಟ್ಟದ ಕ್ರಿಯಾಶೀಲ, ಸೃಜನಶೀಲ , ಸಂವೇದನಾಶೀಲ ಮನಸುಗಳ ಬದುಕು ಮತ್ತು ಜೀವನ ವಿಧಾನಗಳು. ಆ ಮನಸುಗಳು ಹಾದು ಬಂದ ದಾರಿ, ಅಲ್ಲಿ ಎದುರಿಸಿದ ಅಡೆತಡೆಗಳು, ಸಿಕ್ಕುಗಳು, ಸವಾಲುಗಳು ಮತ್ತು ಅವುಗಳನ್ನು ಯಶಸ್ವಿಯಾಗಿ ದಾಟಿ ಬರಲು ನೆರವಾದ ಸಾಮಾಜಿಕ-ಸಾಂಸ್ಕೃತಿಕ ಪರಿಸರ. ಸವೆದ 

ಆತ್ಮಕಥೆ ಅಥವಾ ಜೀವನಗಾಥೆಗಳು ಮೂಲತಃ ನೆರವಾಗುವುದು ಇಲ್ಲಿ. ಯಾವುದೇ ದೇಶ ಅಥವಾ ಸಮಾಜದಲ್ಲಾದರೂ ಕಳೆದುಹೋದ ಕಾಲಮಾನದ ಸಾಮಾಜಿಕ-ಸಾಂಸ್ಕೃತಿಕ ಚಿತ್ರಣವನ್ನು ಕಾಣಲು ಸಾಧ್ಯವಾಗುವುದು ಆತ್ಮಕಥೆಗಳಲ್ಲೇ ಎನ್ನುವುದು ಸರ್ವವೇದ್ಯ. ವಿಶೇಷವಾಗಿ ಭಾರತದಲ್ಲಿ ಇದು ಹೆಚ್ಚು ಅವಶ್ಯ ಏಕೆಂದರೆ ನಮ್ಮಲ್ಲಿ ಇಂದಿಗೂ ದಾಖಲೀಕರಿಸುವ ಪ್ರವೃತ್ತಿಯನ್ನು ನಾವು ರೂಢಿಸಿಕೊಂಡಿಲ್ಲ. (ಉದಾಹರಣೆಗೆ ಕಳೆದ ಐವತ್ತು ವರ್ಷಗಳಲ್ಲಿ ಡಿಎಸ್‌ಎಸ್‌ ಸಾವಿರಾರು ಶಿಬಿರ/ಕಮ್ಮಟ/ವಿಚಾರ ಸಂಕಿರಣಗಳನ್ನು ನಡೆಸಿರಬಹುದು. ಆದರೆ ಅಲ್ಲಿ ಚರ್ಚಿತವಾದ , ಮಂಥನಕ್ಕೊಳಗಾದ ವಿಚಾರಗಳ ದಾಖಲೆ ಏನಾದರೂ ಇದೆಯೇ ?) ಈ ಕೊರತೆಯನ್ನು ನೀಗಿಸಲು ನಮಗೆ ಜೀವನಗಾಥೆ/ಆತ್ಮಕಥೆಗಳು ನೆರವಾಗುತ್ತವೆ. ಅಂತಹ ಒಂದು ಪ್ರಯತ್ನವನ್ನು ಗೆಳೆಯ/ಸಹೋದ್ಯೋಗಿ ಬಿ.ಎಂ ಮಹದೇವ್‌ ಮೂರ್ತಿ ಅವರು ತಾವು ಸವೆಸಿದ ಜೀವನ ಪಯಣವನ್ನು ನೆನೆಯುವ ಮೂಲಕ ತಮ್ಮ ಕೃತಿ “ ಸವೆದ ಪಯಣ ”ದಲ್ಲಿ ಮಾಡಿದ್ದಾರೆ. ಸವೆದ 

ಕೃತಿಯ ಒಳತಿರುಳು

ಸಾಹಿತ್ಯದ ಯಾವುದೇ ಪ್ರಕಾರದಲ್ಲೂ ಸಿದ್ಧಮಾದರಿಗಳು ಇರುವುದಿಲ್ಲ, ಇರಕೂಡದು. ಶೈಲಿ ಮತ್ತು ಧೋರಣೆಗಳಲ್ಲಿ ವ್ಯತ್ಯಾಸಗಳಿರಲು ಸಾಧ್ಯ. ಸೃಜನಶೀಲತೆಯನ್ನು ಕಾಪಾಡಿಕೊಳ್ಳಬೇಕೆಂದರೆ ಇದಮಿತ್ಥಂ ಎಂಬ ಚೌಕಟ್ಟುಗಳನ್ನು ದಾಟಿ ಬರಲೇಬೇಕು. ಜೀವನಗಾಥೆ ಅಥವಾ ಆತ್ಮಕತೆಯ ಪ್ರಕಾರದಲ್ಲೂ ಇದನ್ನೇ ಅನ್ವಯಿಸಬಹುದು. ಆದಾಗ್ಯೂ ಬೆಳೆದುಬಂದ ಹಾದಿಯಲ್ಲಿ ಮೂರು ವಿಧಾನಗಳನ್ನು ಆತ್ಮಕತೆಯ ಪಯಣದಲ್ಲಿ ಗುರುತಿಸಬಹುದು. ಮೊದಲನೆಯದು ವ್ಯಕ್ತಿಯು ತನ್ನನ್ನೇ ಕೇಂದ್ರವಾಗಿರಿಸಿಕೊಂಡು, ತನ್ನ ಜೀವನಾನುಭವದೊಂದಿಗೇ, ತನ್ನ ಸುತ್ತಲಿನ ಸಮಾಜದ ಚಿತ್ರಣವನ್ನು ಅನುಭಾವಾತ್ಮಕ ನೆಲೆಯಲ್ಲಿ ಕಟ್ಟಿಕೊಡುವುದು. ಎರಡನೆಯದು ಆತ್ಮಕತೆಯ ಕೇಂದ್ರ ವ್ಯಕ್ತಿ ತನ್ನನ್ನು ನಿರೂಪಕನ ಸ್ಥಾನದಲ್ಲಿ ನಿಲ್ಲಿಸಿ ತನ್ನ ಬದುಕಿನಿಂದಾಚೆಗಿನ ಸಮಾಜ-ಸಂಸ್ಕೃತಿಯನ್ನು ಸ್ವಾನುಭವದ ನೆಲೆಯಲ್ಲಿ ನಿರೂಪಿಸುವುದು. ಮೂರನೆಯ ವಿಧಾನ ಎಂದರೆ ವ್ಯಕ್ತಿಯು ತನ್ನನ್ನು ಸಮಾಜದ ಒಂದು ಅಂಶಿಕ ಭಾಗವಾಗಿಸಿಕೊಂಡು, ತನಗೂ ಸಮಾಜಕ್ಕೂ ಇರುವ ಸೂಕ್ಷ್ಮ ಸಂಬಂಧಗಳನ್ನು ವಿಭಿನ್ನ ನೆಲೆಗಳಲ್ಲಿ ನಿಷ್ಕರ್ಷಿಸುತ್ತಾ, ಸಮಾಜದ-ತನ್ನ ಬದುಕಿನ ಚಿತ್ರಣವನ್ನು ಕಟ್ಟಿಕೊಡುವುದು.

ಬಿಎಂಎಂ ಮೊದಲನೆಯ ವಿಧಾನವನ್ನು ಅನುಸರಿಸಿದ್ದಾರೆ.  ಹಾಗಾಗಿಯೇ ಅವರು “ ಈ ನನ್ನ ಆತ್ಮಕಥೆಯನ್ನು ಓದಿದ ಕೆಲವರಿಗಾದರೂ ತಾವೂ ಈ ರೀತಿ ತಮ್ಮ ಆತ್ಮಕಥೆಯನ್ನು ಬರೆಯಬೇಕೆನಿಸಿದರೆ ನನ್ನ ಆತ್ಮಕಥೆಯ ಉದ್ದೇಶ ಸಾರ್ಥಕವಾಗುತ್ತದೆ ” ಎಂಬ ಆತ್ಮಪ್ರತ್ಯಯದ ಮಾತುಗಳನ್ನಾಡುತ್ತಾರೆ. 50 ವರ್ಷಗಳ ಹಿಂದೆ ವಿವಾಹ ಎಂಬ ಸಂಸ್ಥೆಯು ಕೇವಲ ನಿರ್ದಿಷ್ಟ ಜಾತಿ ಧರ್ಮಗಳ ಸಂಕೋಲೆಗಳ ನಡುವೆ ಬಂಧಿಸಲ್ಪಟ್ಟಿದ್ದ ಕಾಲದಲ್ಲಿ ಅನ್ಯಕೋಮಿನ ವ್ಯಕ್ತಿಯೊಡನೆ ಸಂಬಂಧ ಬೆಳೆಸಿರುವ ಬಿಎಂಎಂ ಹೀಗೆ ಹೇಳುವುದು ಸಹಜವೇ ಎನಿಸುತ್ತದೆ. ಏಕೆಂದರೆ ಇಂದು ಅಂತರ್‌ ಧರ್ಮೀಯ ವಿವಾಹಗಳು (ಅದರಲ್ಲೂ ಹಿಂದೂ ಮುಸ್ಲಿಂ ವಿವಾಹಗಳು) ಲವ್‌ ಜಿಹಾದ್‌ ಎಂಬ ನಿರೂಪಣೆಗೆ ಸಿಲುಕಿ ಸಮಾಜದ ಒಂದು ವರ್ಗದ ದೃಷ್ಟಿಯಲ್ಲಿ ಘೋರ ಅಪರಾಧವೇ ಆಗಿಹೋಗಿದೆ. ಆದರೆ ಬಿಎಂಎಂ ಮತ್ತು ಅವರ ಪತ್ನಿ ಈ ಅಪರಾಧವನ್ನು 50 ವರ್ಷಗಳ ಹಿಂದೆಯೇ ಮಾಡಿ ಯಶಸ್ವಿಯಾಗಿ ಕೈಹಿಡಿದು, ಹೆಗಲಿಗೆ ಹೆಗಲು ನೀಡಿ ನಡೆದುಬಂದಿದ್ದಾರೆ. ಬಹುಶಃ ಈ ಹೆಮ್ಮೆಯಿಂದಲೇ ಬಿಎಂಎಂ ತಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯನ್ನೂ ಬಿಡಿಬಿಡಿಯಾಗಿ ಓದುಗರ ಮುಂದೆ ಬಿಡಿಸಿಡುತ್ತಾ ಹೋಗುತ್ತಾರೆ. ಸವೆದ 

ತಮ್ಮ ಪೂರ್ವಜರ ಪೂರ್ವಾಪರಗಳೊಂದಿಗೆ ಸವೆದ ಪಯಣದ ಕಥನವನ್ನು ಆರಂಭಿಸುವ ಬಿಎಂಎಂ ಬಹಳ ವಿಸ್ತೃತವಾಗಿಯೇ ಪೂರ್ವಸೂರಿಗಳನ್ನು ನೆನೆಯುತ್ತಾ, ಪರಿಚಯಿಸುತ್ತಾ, ತಾವು ರೂಢಿಸಿಕೊಂಡ ಜೀವನ ವಿಧಾನಕ್ಕೆ ಹೇಗೆ ಆ ಕಾಲಮಾನದ ಗ್ರಹೀತಗಳು ನೆರವಾದವು ಎನ್ನುವುದನ್ನು ದಾಖಲಿಸುತ್ತಾರೆ. ಅವರ ಅಪ್ಪಾಜಿ ಬಿ. ಎಂ. ಬಸವಯ್ಯ ಅವರ ಬದುಕು ಮತ್ತು ವ್ಯಕ್ತಿತ್ವ ಮತ್ತು ಅವರು ರೂಢಿಸಿಕೊಂಡಿದ್ದ ಪ್ರಾಮಾಣಿಕತೆ/ನಿಷ್ಠೆ ಮತ್ತು ಪಾರದರ್ಶಕತೆಯೇ ತಮ್ಮ ಬದುಕಿನುದ್ದಕ್ಕೂ ಪ್ರಭಾವಿಸಿರುವುದನ್ನು ಮೊದಲ ಅಧ್ಯಾಯದಲ್ಲೇ ಬಿಎಂಎಂ ವಿಹಂಗಮವಾಗಿ ಬಿಡಿಸಿಟ್ಟಿರುವುದು ಇಡೀ ಕೃತಿಯನ್ನು ಆಪ್ತವಾಗಿಸಲು ಕಾರಣವಾಗುತ್ತದೆ. ಸೋದರ ಸೋಮು, ಸೋದರಿ ಸೌಭಾಗ್ಯ ಅವರ ಅಕಾಲಿಕ ಮರಣ ಅದರ ಸುತ್ತಲಿನ ನೋವಿನ ಪ್ರಸಂಗಗಳು ಮನಕಲಕುವಂತಿದ್ದು ಬಿಎಂಎಂ ಅವರ ಅಕ್ಷರಗಳಲ್ಲೂ ನೋವು ಕಾಣಿಸುವಂತೆ ದಾಖಲಿಸಿರುವುದು ಅವರ ಸಾಹಿತ್ಯಕ ಗುಣಕ್ಕೆ ಸಾಕ್ಷಿ. ತಮ್ಮ ಸೋದರನನ್ನು ನೆನೆಯುತ್ತಲೇ ಕರುಣಾಶ್ರಯ ಎಂಬ ಕ್ಯಾನ್ಸರ್‌ ಪೀಡಿತ ವ್ಯಕ್ತಿಗಳ ಆಸರೆಯ ಬಗ್ಗೆಯೂ ಬರೆದಿರುವುದು ನಿಜಕ್ಕೂ ಮೆಚ್ಚತಕ್ಕ ಅಂಶ.ಪ್ರಾಮಾಣಿಕವಾಗಿ ತಮ್ಮ ಬದುಕಿನ ಪಯಣದಲ್ಲಿ ನಡೆದುದನ್ನು ನಡೆದಂತೆಯೇ ಹೇಳದೆ ಹೋದರೆ ಆತ್ಮಕತೆಯನ್ನೇ ಬರೆಯಕೂಡದು ಎಂದು ಬೀಚಿ ಒಂದೆಡೆ ಹೇಳುತ್ತಾರೆ. ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ ಎನ್ನುವುದೂ ವಾಸ್ತವ. ಬಿಎಂಎಂ ಈ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಸವೆದ 

ಯಾರಿಗೇ ಆದರೂ ಹುಟ್ಟೂರು ಒಂದು ಹೆಮ್ಮೆಯ ಗುಡಿ. ಅದು ಎಷ್ಟೇ ಹಿಂದುಳಿದಿದ್ದುದಾದರೂ, ಈಗ ಎಷ್ಟೇ ಆಧುನಿಕವಾಗಿದ್ದರೂ ಆ ಊರಿನಲ್ಲಿ ಕಳೆದ ಬಾಲ್ಯವೇ ಜೀವನದುದ್ದಕ್ಕೂ ನಮ್ಮನ್ನು ಸೆಳೆಯುತ್ತಿರುತ್ತದೆ. ಬಿಎಂಎಂ ತಮ್ಮ ಹುಟ್ಟೂರಾದ ಮುತ್ತಲವಾಡಿ ಕೆಬ್ಬೇಹುಂಡಿ ಎಂಬ ಗ್ರಾಮವನ್ನು ಅಷ್ಟೇ ಅಪ್ಯಾಯತೆಯಿಂದ ನೆನೆಯುತ್ತಾರೆ. ಅಷ್ಟೇ ಅಲ್ಲ ಆ ಬಾಲ್ಯ ದಿನಗಳ ಚಿತ್ರಣ ನೀಡುವ ಮೂಲಕ ಅಂದಿನ ಕಾಲಘಟ್ಟದ ಗ್ರಾಮೀಣ ಬದುಕಿನ ಚಿತ್ರಣವನ್ನೂ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಾ ಹೋಗುತ್ತಾರೆ. ಕೃಷಿ ಅವಲಂಬಿತವಾದ ಯಾವುದೇ ಕುಟುಂಬದಲ್ಲಿ ಬೆಳೆದವರಲ್ಲಿ ಸಹಜವಾಗಿ ಇರಬಹುದಾದ ಹೆಮ್ಮೆ, ಗರಿಮೆ ಬಿಎಂಎಂ ಅವರಲ್ಲೂ ಕಾಣುತ್ತದೆ. ಹಿತ್ತಲಿನ ತೆಂಗಿನ ಮರದ ಇತಿಹಾಸವನ್ನು ಅವರು ಬಣ್ಣಿಸಿರುವ ರೀತಿ, ಒಕ್ಕಲುತನದಲ್ಲಿ-ವ್ಯವಸಾಯ ಚಟುವಟಿಕೆಗಳಲ್ಲಿ ಇವರ ಭಾಗವಹಿಸುವಿಕೆಯ ಚಿತ್ರಣ ಇವೆಲ್ಲವೂ ಇದರ ದ್ಯೋತಕ. ಸವೆದ 

ತಾವು ಬೆಳೆದ ಸಮಾಜದ ಸಾಂಸ್ಕೃತಿಕ ಮುಖವನ್ನು ಬಿಎಂಎಂ ಹಬ್ಬ ಹರಿದಿನಗಳ ಆಚರಣೆಯಲ್ಲಿ ಗುರುತಿಸಲು ಯತ್ನಿಸುತ್ತಾರೆ. ಮಾರಿಹಬ್ಬ, ದೀಪಾವಳಿ, ಉಗಾದಿ, ಸಂಕ್ರಾಂತಿ, ಮಾರ್ಲಮಿ, ಗೌರಿ ಹಬ್ಬಗಳು ನಮ್ಮ ಬಾಲ್ಯದ ದಿನಗಳನ್ನು ರೂಪಿಸುವಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿರುತ್ತವೆ. ನಂಬಿಕೆ/ವಿಶ್ವಾಸ/ನಾಸ್ತಿಕತೆ ಇವೆಲ್ಲದರಿಂದ ಹೊರತಾಗಿ ಇವುಗಳತ್ತ ನೋಡಿದಾಗ, ಇವೆಲ್ಲವೂ ನಮ್ಮ ಸಾಂಸ್ಕೃತಿಕ ಬದುಕಿಗೆ ಬುನಾದಿಯಾಗಿ ಭವಿಷ್ಯದ ಹಾದಿಯನ್ನು ನಿರ್ಧರಿಸುವ ಆಚರಣೆಗಳಾಗಿಯೇ ಕಾಣುತ್ತವೆ. ಎಷ್ಟೋ ವರ್ಷಗಳ ನಂತರ ನಾಸ್ತಿಕತೆ-ವಿಚಾರವಾದದ ನೆಲೆಯಲ್ಲಿ ನಿಂತು ಇವುಗಳನ್ನು ತಿರಸ್ಕರಿಸಿದರೂ ಸಹ ಈ ಹಬ್ಬಗಳು, ವಿಶೇಷವಾಗಿ ಗ್ರಾಮೀಣ ಬದುಕಿನಲ್ಲಿ, ನಮ್ಮ ಸಾಂಸ್ಕೃತಿಕ ಅರಿವಿನ ಒಂದು ಭಾಗವಾಗಿರುತ್ತದೆ ಎನ್ನುವುದು ನಿರ್ವಿವಾದ ಅಂಶ. ಬಿಎಂಎಂ ತಮ್ಮ ಕಥನದಲ್ಲಿ ಇದನ್ನೇ ಹೇಳಲು ಪ್ರಯತ್ನಿಸಿದ್ದಾರೆ ಎನಿಸುತ್ತದೆ. ಸವೆದ 

ಬಾಲ್ಯದ ವಿದ್ಯಾಭ್ಯಾಸದ ದಿನಗಳನ್ನು ನೆನೆಯುವುದು ಎಂಥವರಿಗೇ ಆದರೂ ಖುಷಿ ನೀಡುವ ಸಂಗತಿ. ಇಂದು ಹಾಸ್ಟೆಲುಗಳು ಜಾತಿಗೊಂದು ಇವೆ. ಹಾಗಾಗಿ ಒಂದೇ ಸೂರಿನಡಿ ಇರಬಹುದಾದ  ಹಾಸ್ಟೆಲ್‌ ಜೀವನದ ತಾರತಮ್ಯಗಳು ಗೋಚರಿಸುವುದಿಲ್ಲ. ಬಿಎಂಎಂ ತಮ್ಮ ವಿದ್ಯಾರ್ಥಿ ದೆಸೆಯನ್ನು, ಹಾಸ್ಟೆಲಿನ ದಿನಗಳನ್ನು, ದಸರಾದಲ್ಲಿ ಕಳೆದುಹೋದ ಕ್ಷಣಗಳನ್ನು ನೆನೆಯುತ್ತಲೇ ತಮಗೆ ಬಾಲ್ಯದಲ್ಲೇ ಎದುರಾದ ತಾರತಮ್ಯಗಳ ಪ್ರಪಂಚವನ್ನೂ ಬಿಚ್ಚಿಡುತ್ತಾ ಹೋಗುತ್ತಾರೆ. ಹಾಗೆಯೇ ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ರೂಢಿಸಿಕೊಂಡ ರಂಗಕಲೆಯನ್ನೂ ಕೆಲವು ಪ್ರಸಂಗಗಳ ಮೂಲಕ ವಿವರಿಸುತ್ತಾರೆ. ಈ ಓಘದಲ್ಲೇ ಇಂದು ನಾವು ವೈಚಾರಿಕತೆಯ ನೆಲೆಯಲ್ಲಿ ನಿಂತು ತಿರಸ್ಕರಿಸುವ ಗಾಳಿ ಓಡಿಸುವುದು ಮುಂತಾದ ಮೌಢ್ಯದ ಪ್ರಸಂಗಗಳನ್ನೂ ಬಿಎಂಎಂ ವಿವರಿಸುತ್ತಾರೆ. ಮೈಮೇಲೆ  ದೇವರು ಬರುವುದು, ದೆವ್ವ ಅಥವಾ ಗಾಳಿ ಬರುವುದು ಅದನ್ನು ಓಡಿಸಲು ಅನುಸರಿಸುವ ಕ್ರೂರ ವಿಧಾನಗಳು ಇಂಥವುಗಳನ್ನು ನಡೆದಂತೆಯೇ ದಾಖಲಿಸುವ ಮೂಲಕ ನಾವು ಒಂದು ಸಮಾಜವಾಗಿ ಎಲ್ಲಿಂದ ಎಷ್ಟು ದೂರ ಸಾಗಿದ್ದೇವೆ ಎಂಬ ಅರಿವನ್ನು ಭವಿಷ್ಯದ ಪೀಳಿಗೆಗೆ ಮೂಡಿಸಬಹುದು. ಬಿಎಂಎಂ ಈ ಕೆಲಸವನ್ನು ಕ್ಷಮತೆಯಿಂದ, ಪ್ರಾಮಾಣಿಕವಾಗಿ ಮಾಡಿದ್ದಾರೆ. ಸವೆದ 

ಲವ್‌ ಮ್ಯಾರೇಜ್‌ ಎನ್ನುವುದು ಕೇವಲ ಚಲನಚಿತ್ರಗಳ ಪರದೆಯ ಮೇಲಿನ ವಿದ್ಯಮಾನವಾಗಿದ್ದ ಕಾಲದಲ್ಲಿ ಪ್ರೇಮಾಂಕುರಕ್ಕೆ ಒಲಿದ ಬಿಎಂಎಂ ಹೈದರಾಬಾದಿನ ನವಾಬ್‌ ಕುಟುಂಬಕ್ಕೆ ಸೇರಿದ ಸೋಗರ ಬೇಗಂ ( ಆಕೆಯ ಮೂಲ ಹೆಸರು) ಅವರನ್ನು ಪ್ರೇಮಿಸುವುದು, ಇಬ್ಬರ ನಡುವೆ ಬೆಳೆಯುವ ಪ್ರೀತಿ ಪ್ರೇಮ, ಅದರ ಸುತ್ತಲಿನ ಘಟನೆಗಳನ್ನು ಯಾವುದೇ ಉತ್ಪ್ರೇಕ್ಷೆ ಇಲ್ಲದೆಯೇ ಓದುಗರ ಮುಂದಿಡುತ್ತಾರೆ. ಸಹಜವಾಗಿಯೇ ಅಂತರ್‌ ಧರ್ಮೀಯ ವಿವಾಹದಲ್ಲಿ ಎದುರಿಸಬಹುದಾದ ಕಷ್ಟ ಕಾರ್ಪಣ್ಯಗಳನ್ನು ಬಿಎಂಎಂ ಯಥಾವತ್ತಾಗಿ ವಿವರಿಸಿದ್ದಾರೆ.  ಅಷ್ಟೇ ನಿಸ್ಪೃಹತೆಯಿಂದ ಅಗಲಿಕೆಯ ದಿನಗಳನ್ನೂ ದಾಖಲಿಸಿದ್ದಾರೆ. ವಿರಹ ವೇದನೆ ಅನುಭವಿಸದೆ ಹೋದರೆ ಲವ್‌ ಎಂಬ ಪದ ಅರ್ಥಹೀನವಾಗಿಬಿಡುತ್ತದೆ. ಬಿಎಂಎಂ ಅದನ್ನೂ ಅನುಭವಿಸಿರುವುದು ಕೃತಿಯಲ್ಲಿ ದಾಖಲು ಮಾಡಿದ್ದಾರೆ. ತಮ್ಮ ಪ್ರೇಮ ವಿವಾಹಕ್ಕೆ ಸಾಥ್‌ ನೀಡಿದ ಪ್ರೊ ನಂಜುಂಡಸ್ವಾಮಿ, ಪ. ಮಲ್ಲೇಶ್‌, ರಾಮದಾಸ್‌ , ಬಿ. ಎನ್‌ ಶ್ರೀರಾಮ್‌, ಟಿ.ಎನ್‌ ನಾಗರಾಜು, ಹೊರೆಯಾಲ ದೊರೆಸ್ವಾಮಿ ಎಲ್ಲರನ್ನೂ ಆಪ್ತತೆಯಿಂದ ನೆನೆಯುವ ಬಿಎಂಎಂ ವಿವಾಹ ಜೀವನದ ವಿರಹದ ದಿನಗಳನ್ನೂ ಅಷ್ಟೇ ಪ್ರಾಮಾಣಿಕವಾಗಿ ದಾಖಲಿಸಿರುವುದು ಅಪ್ಯಾಯಮಾನವಾಗಿ ಕಾಣುತ್ತದೆ.

ಮಗನ ಜನನ ಅಪ್ಪನ ವಿಯೋಗ, ಇಂತಹ ಸನ್ನಿವೇಶಗಳು ಅಪರೂಪ ಆದರೆ ಜೀವನವಿಡೀ ನೆನಪಿರುವಂತಹುದು. ಬಿಎಂಎಂ ಅದನ್ನು ಅನುಭವಿಸಿದ್ದಾರೆ. ಹರುಷ-ದುಃಖಗಳು ಒಂದರ ಹಿಂದೊಂದು ಬಂದಾಗ ಸಹಜವಾಗಿ ಹರುಷ ಮರೆಯಾಗಿ ದುಃಖ ದೀರ್ಘಕಾಲ ಉಳಿಯುತ್ತದೆ. ಏಕೆಂದರೆ ದುಃಖಕ್ಕೆ ಕಾರಣರಾದ ಆಪ್ತರ ಸಾವು ಎಡಬಿಡದೆ ಕಾಡುತ್ತಲೇ ಹೋಗುತ್ತದೆ. ಬಿಎಂಎಂ ಬದುಕಿನಲ್ಲಿ ಈ ಪರ್ವವೂ ಹಾದು ಹೋಗಿದೆ. ಕೆನರಾಬ್ಯಾಂಕ್‌ ಸೇವೆಯನ್ನು ಆರಂಭಿಸಿದ ದಿನದಿಂದಲೂ ಬಿಎಂಎಂ ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿರುವ ಪರಿ ನಿಜಕ್ಕೂ ಮೆಚ್ಚುವಂತಹುದು.  ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಳ್ಳಲು ನೆರವಾಗುವ ರಂಗಭೂಮಿ, ಕಲಾವೇದಿಕೆ, ಸಮಾಜ ಸೇವೆ, ಸಮಾಜದಲ್ಲಿ ಸಾಕ್ಷರತೆ ಉಂಟುಮಾಡುವ ಪ್ರಯತ್ನಗಳು ಇವೆಲ್ಲಕ್ಕೂ ಬಿಎಂಎಂ ಅವರ ಬ್ಯಾಂಕ್‌ ಪಯಣ ಸಾಕ್ಷಿಯಾಗಿ ನಿಲ್ಲುತ್ತದೆ. ಮುಖ್ಯವಾಗಿ ರಂಗಭೂಮಿಯೊಡನೆಯೇ ಗುರುತಿಸಿಕೊಂಡು ಸಕ್ರಿಯವಾಗಿ ಬಂದಿರುವ ಬಿಎಂಎಂ ಈಗಲೂ ಟಿವಿ ಧಾರಾವಾಹಿ/ಚಲನಚಿತ್ರಗಳಲ್ಲಿ ಬಣ್ಣ ಹಚ್ಚುವುದನ್ನು ನಿಲ್ಲಿಸಿಲ್ಲ ಎನ್ನುವುದು ಮನದ ಮೆಚ್ಚುಗೆ ಪಡೆಯುವ ಅಂಶ.

ಬಿಎಂಎಂ ಅವರೊಳಗೆ ಒಬ್ಬ ಪಾಗಲ್‌ ಪ್ರೇಮಿ, ನಾಟಕಕಾರ, ಕಲಾವಿದ, ಸಮಾಜಸೇವಕ ಇರುವಂತೆಯೇ ಒಬ್ಬ ಆತ್ಮೀಯ ಸೋದರ, ಒಲುಮೆಯ ಅಪ್ಪನೂ ಇದ್ದಾನೆ. ಈ ಎಲ್ಲದರ ಸಮ್ಮಿಳಿತವೇನೋ ಎಂಬಂತೆ ಅವರೊಳಗೊಬ್ಬ ಕವಿಯೂ ಉದಯಿಸಿದ್ದಾನೆ. ( ಕವನ ಸಂಕಲನವೂ ಇಂದೇ ಬಿಡುಗಡೆಯಾಗಿದೆ).  ಹೆತ್ತ ಮಕ್ಕಳನ್ನು ಕಳೆದುಕೊಳ್ಳುವ ತಂದೆಯ ಅಥವಾ ತಾಯಿಯ ವೇದನೆ ಅನುಭಾವಕ್ಕೆ ಸುಲಭವಾಗಿ ನಿಲುಕುವುದಿಲ್ಲ. ಆ ಯಾತನೆ/ತುಮುಲ ಅನಭವಜನ್ಯವಾಗಿಯೇ ಅಭಿವ್ಯಕ್ತಗೊಳ್ಳಬೇಕು. (ಬೇಂದ್ರೆ ಅವರ ನೀ ಹೀಂಗ ನೋಡಬ್ಯಾಡ ನನ್ನ,,,) ಬಿಎಂಎಂ ತಮ್ಮ ಮಗಳು ರಷ್ಮಿಯನ್ನು ಕಳೆದುಕೊಂಡ ನೆನಪಿನಲ್ಲಿ ಬರೆದಿರುವ ಒಂದು ಕವಿತೆ ಕಾವ್ಯಾತ್ಮಕತೆಗಿಂತಲೂ ಮಾನವೀಯ ತುಡಿತಗಳಿಗಾಗಿ, ಹೃದಯಸ್ಪರ್ಶಿ ಸಂವೇದನೆಗಳಿಗಾಗಿ ಮನಮಿಡಿಯುವಂತಿದೆ.

ಹಾಗೆಯೇ

“ ಬೇಗ ಬೇಗನೆ ಹೋದೆ

ಅವಸರವಿತ್ತೇ ಗೆಳತಿ

ನೀ ಒಬ್ಬಂಟಿಯಲ್ಲ

ನಾವಿದ್ದೇವೆ ಗೆಳತಿ”

ಎಂಬ ಆಕೆಯ ಗೆಳತಿಯೊಬ್ಬಳ  ಮನದಾಳದ ಮಾತುಗಳ ಮೂಲಕ ಇಲ್ಲೊಬ್ಬ ತಂದೆ ತನ್ನ ಅಗಲಿದ ಮಗಳಿಗೆ ಅಶ್ರುತರ್ಪಣ ನೀಡುತ್ತಾರೆ.

ನಿವೃತ್ತ ಜೀವನವನ್ನು ವ್ಯರ್ಥಗೊಳಿಸದೆ ತಮ್ಮ ಸಾಂಸ್ಕೃತಿಕ ಬದುಕಿನ ಹೊಸ ಪುಟಗಳನ್ನು ತೆರೆಯುವ ಬಿಎಂಎಂ ಇಂದಿಗೂ ಕಲಾಸೇವೆಯಲ್ಲಿ ಸಕ್ರಿಯವಾಗಿರುವ ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ. ಇದಕ್ಕೆ ಅವರ ಸಂಗಾತಿಯನ್ನೂ ಅಭಿನಂದಿಸದೆ ಹೋದರೆ ನಾವು ಆ ಪ್ರೇಮಾಂಕುರದ ಜಗತ್ತಿಗೆ ಕೃತಘ್ನರಾಗಿಬಿಡುತ್ತೇವೆ. ಬಿ ಎಂ ಎಂ ಬಹಳ ಓದುಗರಿಗೆ ಅಪ್ಯಾಯಮಾನವಾಗುವಂತೆ ಬರೆದಿರುವ ಆತ್ಮಕಥೆ ಅವರು ಸವೆಸಿದ ಹಾದಿಯಲ್ಲಿ ಗುರುತಿಸಬಹುದಾದ ಸಾಮಾಜಿಕ ಕಳಕಳಿ, ಕಲೆ ಮತ್ತು ಸಾಂಸ್ಕೃತಿಕ ಹರವು ಹಾಗೂ ಮಾನವೀಯ ಮಿಡಿತಗಳಿಂದ ಹೆಚ್ಚು ಆಪ್ತ ಎನಿಸುತ್ತದೆ. ಕೃತಿಯ ಭಾಗವಾಗಿ ಅವರ ಸಂಗಾತಿಯ ಒಂದೆರಡು ನುಡಿಗಳು ಇದ್ದಿದ್ದರೆ ಮೌಲಿಕವಾಗಿ ಹೆಚ್ಚು ಆಪ್ತವಾಗುತ್ತಿತ್ತೇನೋ.

ಇದನ್ನೂ ನೋಡಿ: ಮಕ್ಕಳಿಗೆ ವ್ಯಾಕರಣ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *