’ಲೋಕಸಭೆಯಲ್ಲಿ ಮೋದಿ ಹೇಳಿದ 6 ಸುಳ್ಳುಗಳು : ಸ್ಪೀಕರ್‌ಗೆ ಕಾಂಗ್ರೆಸ್ ದೂರು

ಹೊಸದಿಲ್ಲಿ : ಪ್ರಧಾನಿ ಮೋದಿ ಮತ್ತು ಬಿಜೆಪಿ ಸಂಸದ ಅನುರಾಗ್ ಠಾಕೂರ್, ಲೋಕಸಭೆಯಲ್ಲಿ ತಪ್ಪು ಮತ್ತು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಸಂಬಂಧ, ಸ್ಪೀಕರ್ ಓಂ ಬಿರ್ಲಾಗೆ ಕಾಂಗ್ರೆಸ್ ನಾಯಕರು ದೂರು ನೀಡಿ, ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಲೋಕಸಭೆ

ಸ್ಪೀಕರ್ ಅವರಿಗೆ ಕಾಂಗ್ರೆಸ್ ನಾಯಕ ಮಣಿಕಂ ಠಾಕೂರ್ ಪತ್ರ ಬರೆದು, ಪ್ರೊವಿಸನ್ಸ್ ಆಫ್ ಡೈರೆಕ್ಷನ್ ಕಾಯಿದೆ 115 (1) ಅಡಿಯಲ್ಲಿ, ಮೋದಿ ಮತ್ತು ಅನುರಾಗ್ ಠಾಕೂರ್ ವಿರುದ್ದ ಸೂಕ್ತ ತೆಗೆದುಕೊಳ್ಳುವಂತೆ ದೂರು ನೀಡಿದ್ದಾರೆ. ಯಾವುದೇ ಸಂಸದರು, ಇನ್ನೊಬ್ಬ ಸಂಸದರ ಹೇಳಿಕೆಯಲ್ಲಿ ಅಸಮರ್ಪಕತೆಯನ್ನು ಎತ್ತಿ ತೋರಿಸುವ ಮೊದಲು ಸ್ಪೀಕರ್‌ಗೆ ಪತ್ರ ಬರೆಯಬೇಕು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಮೋದಿಯವರು ಲೋಕಸಭೆಯಲ್ಲಿ ಹೇಳಿದ ಆರು  ಸುಳ್ಳು ಮಾಹಿತಿಗಳು

1. ಲೋಕಸಭೆಯಲ್ಲಿನ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಪ್ರತೀ ತಿಂಗಳು 8,500 ರೂಪಾಯಿ ಮಹಿಳೆಯರಿಗೆ ನೀಡುವ ಸುಳ್ಳು ಭರವಸೆಯನ್ನು ನೀಡಿದೆ ಎಂದು ಪ್ರಧಾನಿಗಳು ಹೇಳಿದ್ದರು. ಇದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಸರ್ಕಾರ ರಚನೆಯಾದರೆ ಮಾತ್ರ ನಾವು ಕೊಟ್ಟಿರುವ ಭರವಸೆ.

2. ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದ 16 ರಾಜ್ಯಗಳಲ್ಲಿ ವೋಟ್ ಶೇರ್ ಗಣನೀಯವಾಗಿ ಕಮ್ಮಿಯಾಗಿದೆ ಎನ್ನುವ ಸುಳ್ಳು ಮಾಹಿತಿಯನ್ನು ಮೋದಿ ನೀಡಿದ್ದಾರೆ. ಅಸಲಿಯಾಗಿ, ನಮ್ಮ ವೋಟ್ ಶೇರ್, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ತೆಲಂಗಾಣ ಮುಂತಾದ ಕಡೆ ಹೆಚ್ಚಾಗಿದೆ.

3. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಮ್ಮ ಸೈನಿಕರಿಗೆ ಬುಲೆಟ್ ಪ್ರೂಫ್ ಜ್ಯಾಕೆಟ್ ಅನ್ನು ನೀಡಲಾಗಿಲ್ಲ ಎನ್ನುವ ವಿಚಾರವನ್ನು ಮೋದಿ ಪ್ರಸ್ತಾವಿಸಿದ್ದರು. ಜ್ಯಾಕೆಟ್ ನಲ್ಲಿ ಕೊರತೆ ಇತ್ತು, ಮುಂಬೈ ದಾಳಿಯ ವೇಳೆಯೂ ಪೊಲೀಸರಿಗೂ ಜ್ಯಾಕೆಟ್ ನೀಡಲಾಗಿತ್ತು.

4. ಯುಪಿಎ ಸರ್ಕಾರದ ಅವಧಿಯಲ್ಲಿ ಸೇನೆಗೆ ಫೈಟರ್ ಜೆಟ್ ಕೊಟ್ಟಿಲ್ಲ ಎನ್ನುವ ಸುಳ್ಳು ಮಾಹಿತಿಯನ್ನು ಸದನದಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಹೇಳಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಮಿಗ್ 29, ಜಾಗ್ವಾರ್ ಮತ್ತು ಮಿರಾಜ್ 2000, ಸುಖೋಯಿ SU 30 ಜೆಟ್ ಗಳನ್ನು ಕೊಡಲಾಗಿತ್ತು. ನಮ್ಮಲ್ಲಿ ಅಣುಬಾಂಬ್, ಅಗ್ನಿ, ಪೃಥ್ವಿ, ಆಕಾಶ್, ನಾಗ್, ತ್ರಿಶೂಲ್, ಬ್ರಹ್ಮೋಸ್ ಮುಂತಾದವು ಇದ್ದವು.

5. ಹಿಮಾಚಲ ಪ್ರದೇಶದ ಹಮೀರ್‌ಪುರ್‌ ಕ್ಷೇತ್ರದ ಸಂಸದರಾಗಿರುವ ಅನುರಾಗ್ ಠಾಕೂರ್ ಅವರು, ಸುಮಾರು 25 ಕೋಟಿ ಜನರನ್ನು ಬಡತನದ ರೇಖೆಯಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೇಲೆ ತರಲಾಗಿದೆ. ಇದು ಕೂಡಾ, ಸರ್ಕಾರದ ಸುಳ್ಳು ಮಾಹಿತಿ.

6. ಅನುರಾಗ್ ಠಾಕೂರ್ ಅವರು ಪ್ರಧಾನಿ ಮೋದಿಯವರು ಒಂದೇ ಒಂದು ದಿನ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದಾರೆಂದು ಲೋಕಸಭೆಯಲ್ಲಿ ಹೇಳಿದ್ದಾರೆ. ಹಾಗಾದರೆ, ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾಗ ಅದು ಯಾವ ವರ್ಗದ ರಜೆಯಡಿಯಲ್ಲಿ ಬರುತ್ತದೆ ಎಂದು ಕಾಂಗ್ರೆಸ್, ಸ್ಪೀಕರ್ ಅವರಿಗೆ ದೂರು ಸಲ್ಲಿಸಿದೆ.

 

Donate Janashakthi Media

Leave a Reply

Your email address will not be published. Required fields are marked *