ಹಿಂದೂ ಕುಟುಂಬದಲ್ಲಿ ಮುಸ್ಲಿಂ ಧರ್ಮದ ಹೆಸರು

-ರಾಹುಲ್ ಬಾಳಪ್ಪ

ಇವತ್ತು ಇಡೀ ದೇಶದಲ್ಲಿ ಧಾರ್ಮಿಕ ಸಾಮರಸ್ಯ ಹೆಚ್ಚು ಚರ್ಚೆಯಾಗುತ್ತಿರುವ ರಾಷ್ಟ್ರೀಯ ಮಹತ್ವದ ವಿಷಯ. ಆದರೆ ನೂರಾರು ವರ್ಷಗಳ ಕಾಲದಿಂದಲೂ ಹಿಂದೂ -ಮುಸ್ಲಿಂ ಎಂಬ ಭೇದ ಇಲ್ಲದೇ ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಹೆಗಲಾಗಿ ಸೌಹಾರ್ದ ಹಾಗೂ ಸಾಮರಸ್ಯದ ಬದುಕು ನಡೆದುಕೊಂಡು ಬಂದಿರುವುದಕ್ಕೆ ನನ್ನ ಕುಟುಂಬದ ಒಂದು ಉದಾಹರಣೆಯನ್ನು ನಿಮಗೆ ನೀಡುತ್ತಿರುವೆ.

ನಮ್ಮದು ಒಂದು ಸಾಮಾನ್ಯ ಕೂಲಿಕಾರರ ಕುಟುಂಬ. ನನ್ನ ತಂದೆ ತಾಯಿಗೆ ನಾಲ್ಕು ಮಕ್ಕಳು‌,ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ನಾನು ಕೊನೆಯವನು.

ಇದನ್ನೂ ಓದಿ: ಯೋಗಿ ಆದಿತ್ಯನಾಥ್-ಮೋಹನ್ ಭಾಗವತ್ ಭೇಟಿ ಏಕೆ ಮಹತ್ವ ?

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗಾಳೆಮ್ಮ ಕ್ಯಾಂಪ್ (ಶರಣಬಸವೇಶ್ವರ ನಗರ) ನಮ್ಮೂರು. ನನ್ನ ಅಣ್ಣನ ಹೆಸರು ಹುಸೇನಪ್ಪ .ಇವರು ನನ್ನ ತಂದೆ ತಾಯಿಗೆ  ಮೊದಲನೇ ಮಗ. ನನ್ನ ತಂದೆ ಮದುವೆಯಾದ ಸಂದರ್ಭದಲ್ಲಿ ತೀವ್ರ ಆನಾರೋಗ್ಯಕ್ಕೆ ತುತ್ತಾಗಿದ್ದರು. ಅಷ್ಟರಲ್ಲಿ ನನ್ನ ತಾಯಿಗೆ ಎರಡು ಸಾರಿ ಗರ್ಭಪಾತವಾಗಿತ್ತು.

ಒಂದು ಕಡೆ ತಂದೆಯ ತೀವ್ರ ಅನಾರೋಗ್ಯ ಇನ್ನೊಂದು ಕಡೆ ಮಕ್ಕಳಾಗದೇ ಇರುವ ಯಾತನೆ ಈ ರೀತಿ ಸಮಸ್ಯೆ ನನ್ನ ತಂದೆ ತಾಯಿ ಯನ್ನು ಕಾಡುತ್ತಿತ್ತು. ನಮ್ಮ ಊರಿನ ಹತ್ತಿರದಲ್ಲಿ ಮುದಗಲ್ ಎಂಬ ಗ್ರಾಮವು ಪ್ರಸಿದ್ಧ ಮೊಹರಂ ಜಾತ್ರೆಗೆ ಹೆಸರುವಾಸಿ. ಅಲ್ಲಿಗೆ ಹೋಗಿ ಹರಕೆ ಕಟ್ಟಿಕೊಳ್ಳುವುದು ಬಹಳ ಹಿಂದಿನಿಂದ ಇರುವ ಪದ್ದತಿ. ಇಂತಹ ಸಮಸ್ಯೆಗಳು ಪರಿಹಾರ ಆಗುತ್ತವೆ ಎಂಬ ನಂಬಿಕೆ ಸುತ್ತಮುತ್ತಲಿನ ಪ್ರದೇಶಗಳ ಜನರಲ್ಲಿ ಇದೆ. ಈಗಲೂ ಹರಕೆ ಹೊರುತ್ತಾರೆ.

ವರ್ಷಕ್ಕೊಮ್ಮೆ ನಡೆಯುವ ಮೊಹರಮ್ ಜಾತ್ರೆಯಲ್ಲಿ ಪೂಜಿಸುವ ಹುಸೇನ ದೇವರು ಬಹಳ ಶಕ್ತಿ ದೇವರು ಎಂದು ಪ್ರಸಿದ್ದಿ. ಮೊಹರಮ್ ದಿನದಂದು ಅಲಾಯಿ ದೇವರ ಮೂರ್ತಿ ಕೂರಿಸುವುದು ಈ ಹಬ್ಬದ ವಿಶೇಷ.

ಈ ಪ್ರದೇಶದ ಜನಪದರ ನಂಬಿಕೆಯಂತೆ ನನ್ನ ತಾಯಿ ಕೂಡ ಈ ದೇವರ ಮುಂದೆ ಹರಕೆ ಕಟ್ಟಿಕೊಳ್ಳುತ್ತಾಳೆ. “ತನ್ನ ಗಂಡನ ಆರೋಗ್ಯವನ್ನು ಈ ದೇವರು ಗುಣಪಡಿಸಿದರೆ ,ತನಗೆ ಜನಿಸುವ ಮೊದಲ ಗಂಡು ಮಗುವಿಗೆ ಈ ದೇವರ  ಹೆಸರನ್ನು ಇಡುವುದೇ”  ನನ್ನ ತಾಯಿಯ ಹರಕೆಯಾಗಿತ್ತು.

ಕಾಕಾತಾಳೀಯ ಎಂಬಂತೆ ನನ್ನ ತಂದೆಯ ಆರೋಗ್ಯವು ಕೂಡ ಸುಧಾರಿಸಿತು. ಇದಾದ ನಂತರ ಮೊದಲನೆ ಮಗ ಜನಿಸಿದ . ಹರಕೆ ಹೊತ್ತಂತೆ ಈ ಮಗುವಿಗೆ ಹುಸೇನಪ್ಪ ಎಂದು ನಾಮಕರಣ ಮಾಡಲಾಯಿತು. ನನ್ನ ಅಣ್ಣನ ಶಾಲಾ ದಾಖಲೆಗಳು ಸೇರಿದಂತೆ ಎಲ್ಲಾ ದಾಖಲೆಗಳಲ್ಲೂ ಈ ಹೆಸರೇ ಇದೆ. ಈಗಲೂ ಈ ಹೆಸರೇ ಮುಂದುವರೆದಿದೆ.

ಹಿಂದೂ ಕುಟುಂಬದಲ್ಲಿ ಮುಸ್ಲಿಂ ಹೆಸರು ಇರುವ ಬಗ್ಗೆ ನಮ್ಮ ಭಾಗದಲ್ಲಿ ಯಾರೂ ಅಶ್ಚರ್ಯ ವ್ಯಕ್ತಪಡಿಸುವುದಿಲ್ಲ. ಏಕೆಂದರೆ ನಮ್ಮ ಬದುಕಿನಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯ ಹಾಸುಹೊಕ್ಕಾಗಿದೆ.

ಆದರೆ ಈಗಿನ ಸಮಾಜದ ಸ್ಥಿತಿಗತಿಗಳನ್ನು ನೋಡಿದಾಗ ,ಒಂದು ಧರ್ಮದ ಪ್ರತಿಷ್ಠೆಗಾಗಿ ಇನ್ನೊಂದು ಧರ್ಮವನ್ನು ಅವಹೇಳನ ಮಾಡುತ್ತಿರುವ ಮನಸ್ಥಿತಿಗಳು ಎಲ್ಲೆಡೆ ಯಾವುದೇ ಎಗ್ಗಿಲ್ಲದೇ ನಡೆಯುತ್ತಿರುವುದು ನಮ್ಮ ಸಹೋದರತ್ವದ ಬುನಾದಿಯನ್ನೇ ಅಲುಗಾಡುವಂತೆ ಮಾಡುತ್ತಿದೆ.

ಇದನ್ನೂ ನೋಡಿ: ಗಾಯಗೊಂಡಿರೋ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿರುತ್ತೆದೆಯೇ? ವಾಸ್ತವ ತಿಳಿಯಲು ಈ ವಿಡಿಯೋ ನೋಡಿ

Donate Janashakthi Media

Leave a Reply

Your email address will not be published. Required fields are marked *