ಪೋಕ್ಸೋ ಪ್ರಕರಣ | ಸೋಮವಾರ ಯಡಿಯೂರಪ್ಪ ಕೋರ್ಟ್‌ಗೆ ಹಾಜರು

ಬೆಂಗಳೂರು: ಜಾಮೀನುರಹಿತ ವಾರೆಂಟ್‌ ಭೀತಿಯಿಂದ ಕಣ್ಮರೆಯಾಗಿರುವ ಪೋಕ್ಸೋ ಪ್ರಕರಣದ ಆರೋಪಿ ಮಾಜಿ ಸಿಎಂ ಬಿಜೆಪಿಯ ನಾಯಕ ಬಿ.ಎಸ್.ಯಡಿಯೂರಪ್ಪ ಸೋಮವಾರ ಪೊಲೀಸರ ಎದುರು ಹಾಜರಾಗುತ್ತಾರೆ ಎಂದು ಅವರೇ ಹೇಳಿರುವುದಾಗಿ ಗೃಹಸಚಿವ ಡಾ| ಜಿ.ಪರಮೇಶ್ವರ್‌ ಹೇಳಿದ್ದಾರೆ.

ನಗರದಲ್ಲಿ ಯಡಿಯೂರಪ್ಪ ಕಣ್ಮರೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ್, ಮಾಜಿ ಸಿಎಂ ಯಡಿಯೂರಪ್ಪಗೆ ಬಂಧನ ವಾರೆಂಟ್ ಜಾರಿ ಆಗಿದೆ. ಅವರು ಎಲ್ಲೋ ದೆಹಲಿಯಲ್ಲಿದ್ದಾರೆಂಬ ಮಾಹಿತಿ ಇದೆ. ಅವರು ಬೇಗ ಬಂದರೆ ಒಳ್ಳೆಯದು. ನಂತರ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ದೆಹಲಿಯಲ್ಲಿ ಇದ್ದೇನೆ, ಸೋಮವಾರ ಬರುವುದಾಗಿ ಯಡಿಯೂರಪ್ಪ ಅವರೇ ಹೇಳಿದ್ದಾರೆ. ಅಧಿಕಾರಿಗಳು ಕಾನೂನಿನ ಅಡಿ ಕ್ರಮಕೈಗೊಳ್ಳುತ್ತಾರೆ.ಆದಷ್ಟು ಬೇಗ ಬಂದರೆ ಒಳ್ಳೆಯದು, ಇಲ್ಲವೇ ಅವರನ್ನು ಪೊಲೀಸರೇ ಹೋಗಿ ಕರೆದುಕೊಂಡು ಬರುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸೂಚ್ಯವಾಗಿ ಹೇಳಿದ್ದಾರೆ.

ಯಡಿಯೂರಪ್ಪರನ್ನು ರಾಜಕೀಯ ಸೇಡಿಗಾಗಿ ವಾರೆಂಟ್‌ ಜಾರಿಮಾಡಲಾಗಿದೆ ಎಂಬ ಬಿಜೆಪಿಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ಬಿಜೆಪಿಯವರಿಗೆ ಈ ರೀತಿ ಹೇಳುವುದನ್ನು ಬಿಟ್ಟು ಬೇರೆ ಯಾವುದೇ ಕೆಲಸವಿಲ್ಲ. ಎಫ್‌ಎಸ್‌ಎಲ್‌ಗೆ ವಿಡೀಯೋ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬರಬೇಕು. ನಿಯಮಾನುಸಾರ ಪರಿಶೀಲನೆ ಮಾಡಿ ಮುಂದುವರೆಯಬೇಕು. ಹಿರಿಯರಾಗಿರುವ ಯಡಿಯೂರಪ್ಪ ವಿಐಪಿ ಕೂಡ ಹೌದು. ಹೀಗಾಗಿ ಎಲ್ಲವನ್ನೂ ಪರಿಶೀಲಿಸಿ ಮುಂದುವರೆಯಬೇಕಾಗುತ್ತದೆ. ಏಕಾಏಕಿ ಮುಂದುವರೆದರೆ ತಪ್ಪಾಗುವ ಸಾಧ್ಯತೆಯಿದೆ. ಅದು ಪೊಲೀಸರ ತನಿಖೆ ಮೇಲೆ ತಪ್ಪು ಭಾವನೆ ತರುವ ಸಾಧ್ಯತೆಯಿದೆ. ರಾಹುಲ್ ಗಾಂಧಿ ಇದರಲ್ಲಿ ಭಾಗಿಯಾಗಿಲ್ಲ, ಬಿಜೆಪಿಯವರು ಸುಮ್ಮನೆ ಕಥೆ ಕಟ್ಟುತ್ತಿದ್ದಾರೆ. ಇದರಿಂದ ಏನೂ ಪ್ರಯೋಜನ ಇಲ್ಲ, ಇದರಲ್ಲಿ ರಾಹುಲ್ ಗಾಂಧಿ ಭಾಗಿಯಾಗುವದಾದರೂ ಏಕೆ? ಎಂದು ಪ್ರಶ್ನಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *