ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಆರಂಭಗೊಂಡ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸಹ ಕೆಲವು ದಿನಗಳಿಂದ ಆಗಾಗ್ಗೆ ಮಳೆ ಬೀಳುತ್ತಿದ್ದು, ಅಲ್ಲಲ್ಲಿ ಎಂದಿನಂತೆ ಮರಬಿದ್ದಿರುವ, ಚರಂಡಿ ಸಮಸ್ಯೆಗಳು, ನೀರು ನಿಂತಿರುವುದು ಸೇರಿದಂತೆ ಮಳೆಹಾನಿಯ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಸಿದ್ದರಾಮಯ್ಯ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಸ್ ರಜನೀಶ್ ಗೋಯಲ್ ಸೇರಿದಂತೆ ಇದಕ್ಕೆ ಸಂಬಂಧಿಸಿದ ಇಲಾಖೆಗಳ ಎಸಿಎಸ್ಗಳು, ಅಧಿಕಾರಿಗಳ ಜೊತೆ ಸಿಟಿ ರೌಂಡ್ಸ್ ಸುತ್ತು ಹಾಕಿದರು.
ಸಿಟಿ ರೌಂಡ್ಸ್ನಲ್ಲಿ ಅಲ್ಲಲ್ಲಿ ಕಂಡುಬಂದ ಸಮಸ್ಯೆಗಳನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ, ಕೆಲ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಪಟ್ಟಿಮಾಡಿಕೊಳ್ಳುವಂತೆಯೂ,ಸಣ್ಣಪುಟ್ಟ ಸ್ಥಳದಲ್ಲಿಯೇ ಬಗೆಹರಿಸಬಹುದಾದ ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸಿದರು. ನಗರದಾದ್ಯಂತ ಇರುವ ಒಣ ಮರಗಳು, ರಂಬೆ-ಕೊಂಬೆಗಳನ್ನು ಗುರುತಿಸಿ ಅನಾಹುತಕ್ಕೆ ಮೊದಲು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ,ಮೆಟ್ರೋ ಕಾಮಗಾರಿ, ಫ್ಲೈ ಓವರ್ ಸೇರಿ ಕಾಮಗಾರಿಗಳ ಡೆಬ್ರಿಗಳನ್ನು ತೆರವುಗೊಳಿಸಬೇಕೆಂದು ತಾಕೀತು ಮಾಡಿದರು. ಮಳೆಗಾಲ ಸಂದರ್ಭದಲ್ಲಿ ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್ಬಿ, ಬಿಡಿಎ, ಬೆಸ್ಕಾಂ ಇವುಗಳು ಪರಸ್ಪರ ಸಹಯೋಗದಿಂದ ಕೆಲಸ ನಡೆಸಬೇಕು ಎಂದು ಹೇಳಿದರು.
ನಂತರ ಸುದ್ದಿಗೋಷ್ಠಿ ನಡೆಸಿದ ಸಿಎಂ ಮಾತನಾಡಿ, ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್, ರಾಮಲಿಂಗಾರೆಡ್ಡಿ ಬಿಡಿಎ ಅಧ್ಯಕ್ಷರು, ಆಯುಕ್ತರು ಸೇರಿ ಅಧಿಕಾರಿಗಳ ತಂಡದ ಜೊತೆ ಅನೇಕ ಪ್ರದೇಶಗಳಿಗೆ ಭೇಟಿ ನೀಡಿ, ಜೂನ್ ತಿಂಗಳಿನಿಂದ ಮುಂಗಾರು ಪ್ರಾರಂಭವಾಗಲಿದೆ. ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿ ಪ್ರವಾಹ ಉಂಟಾಗಿದೆ ಎಂದು ವರದಿಯಾಗಿರುವ ಹಿನ್ನೆಲೆಯಲ್ಲಿ ಸಿಟಿ ರೌಂಡ್ಸ್ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೂ ಯಲಹಂಕಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ 20 ಮನೆಗಳಿಗೆ ನೀರು ನುಗ್ಗಿದೆ ಎಂದು ವರದಿಯಾಗಿತ್ತು. ಯಲಹಂಕ ಕೆರೆಗೆ ನೀರು ಹೋಗುವಂತೆ ಮಾಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಬಿಬಿಎಂಪಿ ಗೆ ನೀರು ಹೋಗಲು ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಬೆಂಗಳೂರು ನಗರದಲ್ಲಿ 860 ಕಿಮೀ ರಾಜಕಾಲುವೆ ಇದೆ. ತಾವು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 491 ಕಿಮೀ ರಾಜಕಾಲುವೆಯನ್ನು ತೆರವು ಮಾಡಲಾಗಿತ್ತು .ಗಾಳಿ ಆಂಜನೇಯ ದೇವಾಲಯದ ಬಳಿ ಮಳೆ ಜಾಸ್ತಿಯಾದಾಗ ನೀರು ಹರಿಯಲು ಎತ್ತರ ಸಾಲುವುದಿಲ್ಲ, ಹೂಳು ತುಂಬಿತ್ತು. ಪರ್ಯಾಯವಾಗಿ ಇನ್ನೊಂದು ಮೋರಿ ನಿರ್ಮಿಸುವಂತೆ ಹೇಳಲಾಗಿದೆ. ಹಿಂದಿ ಸರ್ಕಾರ ಜನವರಿ 2023 ರಲ್ಲಿ 193 ಕಿಮೀ ತೆರವು ಮಾಡಲು ಕ್ರಮ ತೆಗೆದುಕೊಂಡರು. ಮೊದಲೇ ಈ ಕೆಲಸ ಮಾಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. 1800 ಕೋಟಿ ರೋ. ಇದಕ್ಕೆ ವೆಚ್ಚವಾಗುತ್ತಿದೆ. 174 ಕಿಮೀ ಉಳಿದಿದೆ.
ಇದನ್ನು ಓದಿ : ಪ್ರಜ್ವಲ್ ರೇವಣ್ಣರಿಂದ 400 ಮಹಿಳೆಯರ ಮೇಲೆ ಮಾಸ್ ರೇಪ್ ಆಗಿದೆ ಎಂದಿದ್ದ ಕಾಂಗ್ರೆಸ್ ನಾಯಕನ ವಿರುದ್ಧ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು
ವಿಶ್ವ ಬ್ಯಾಂಕ್ ಸುಮಾರು 2000 ಕೋಟಿ ರೂಪಾಯಿ ನೀಡಲಿದೆ. 12 ಪ್ರಕರಣ ಸಿವಿಲ್ ನ್ಯಾಯಾಲಯದಲ್ಲಿವೆ. ವಕೀಲರು ಇದಕ್ಕೆ ಹಾಜರಾಗುತ್ತಿದ್ದು, ಅಗತ್ಯ ಬಿದ್ದರೆ ವಿಶೇಷ ವಕೀಲರನ್ನು ನೇಮಿಸಿ ಪ್ರಕರಣ ಇತ್ಯರ್ಥ ಗೊಳಿಸಲಾಗುವುದು. 12.15 ಕಿಮೀ ನ್ಯಾಯಾಲಯದಲ್ಲಿ ಪ್ರಕರಣವಿದೆ.ವಿಳಂಬವಾಗಿರುವ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು, ಹೂಳೆತ್ತಬೇಕು, ಒಣಗಿರುವ ಕೊಂಬೆಗಳನ್ನು ಕತ್ತರಿಸಲು ಸೂಚನೆ ನೀಡಲಾಗಿದೆ. ಪಾದಚಾರಿ ಮಾರ್ಗಗಳನ್ನು ಸರಿಪಡಿಸಬೇಕು. ರಾಜಕಾಲುವೆಗೆ ಕಸ ಹಾಕುವುದನ್ನು ತಡೆಗಟ್ಟಲು ಸೂಚನೆ ನೀಡಲಾಗಿದೆ. ಮುಂಗಾರು ಪ್ರಾರಂಭವಾಗುವ ಮುಂಚಿತವಾಗಿ ರಾಜಕಾಲುವೆಗಳ ಹೂಳು ತೆಗೆಯಬೇಕು ಎಂದರು.
ಒಂದು ತಿಂಗಳಲ್ಲಿ ರಸ್ತೆ ಗುಂಡಿಗಳನ್ನು ಭರ್ತಿ ಮಾಡಬೇಕು :-
ಬೆಂಗಳೂರು ನಗರದಲ್ಲಿ ವಾರ್ಡ್ ರಸ್ತೆಗಳಲ್ಲಿ 5500 ಗುಂಡಿಗಳು ಬಿದ್ದಿದ್ದು, ಅವುಗಳನ್ನು ಮುಚ್ಚಬೇಕು, ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ 557 ಗುಂಡಿಗಳಿವೆ. ಈ ತಿಂಗಳಲ್ಲಿ ಭರ್ತಿ ಮಾಡಬೇಕು ಎಂದು ಸೂಚಿಸಲಾಗಿದೆ. ಸಿಲ್ಕ್ ಬೋರ್ಡ್ ಬಳಿ ಮೆಟ್ರೋ ನಿರ್ಮಿಸಿರುವ ರಸ್ತೆಯನ್ನು ಅಗಲೀಕರಿಸಲು ಸೂಚನೆ ನೀಡಲಾಗಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಡಿವಾಳ ಕೆರೆಯ ಬಳಿ ಇನ್ನೊಂದು ಚರಂಡಿ ನಿರ್ಮಿಸಲು ಸೂಚಿಸಲಾಗಿದೆ. ಈಜಿಪುರದಲ್ಲಿ ಬಿಬಿಎಂಪಿ ವತಿಯಿಂದ ಮೇಲ್ಸೇತುವೆ ನಿರ್ಮಾಣ ನೆನೆಗುದಿಗೆ ಬಿದ್ದಿದ್ದು, ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ. ಇವರ ಗುತ್ತಿಗೆ ರದ್ದು ಮಾಡಿ ಹೊಸಬರಿಗೆ ಕೊಡಲು ಸೂಚನೆ ನೀಡಲಾಗಿದೆ. ಮುಂಗಾರು ಮಳೆಗೂ ಮುನ್ನ ಪ್ರವಾಹ ಉಂಟಾಗಬಾರದೆಂದು ಚುನಾವಣಾ ಆಯೋಗದಿಂದ ಅನುಮತಿ ಪಡೆದು 7-8 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ಸಿಎಂ ಹೇಳಿದರು.
ರಸ್ತೆ ಹಾಗೂ ಗುಂಡಿಗಳನ್ನು ನಿರ್ವಹಿಸಲು ಒಂದು ಶಾಶ್ವತ ನಿರ್ವಹಣಾ ವ್ಯವಸ್ಥೆ ರೂಪಿಸಲು ಸೂಚನೆ :-
ಮಳೆಗಾಲ ನಿರ್ವಹಣೆಗೆ ಎಲ್ಲಾ ರೀತಿಯಲ್ಲಿಯೂ ಸಜ್ಜಾಗಬೇಕು.ಗುಂಡಿಗಳು ಬಿದ್ದ ಹಾಗೆಯೇ ಕೂಡಲೇ ದುರಸ್ತಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಬಿಡಿಎ ನಲ್ಲಿಯೂ ಈ ರೀತಿ ವ್ಯವಸ್ಥೆ ರೂಪಿಸಲು ಸೂಚಿಸಿದೆ. ಯಾವುದೇ ಕಾರಣಕ್ಕೂ ಮಳೆ ಬಂದಾಗ ನೀರು ನುಗ್ಗಿದರೆ ಇಂಜಿನಿಯರ್ ಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.
ಇದನ್ನು ನೋಡಿ : ದೇವೇಗೌಡ್ರೆ ಜನ ನಿಮಗೆ ಅಧಿಕಾರ ಕೊಟ್ರು – ನೀವು ವಿಕೃತಿ ಕಾಮಿಯನ್ನು ಕೊಟ್ರಿ. ನಿಮಗೆ ನಾವು ತಕ್ಕ ಪಾಠ ಕಲಿಸುತ್ತೇವೆ.