ಮಂಗಳೂರು: ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೆಸರಿಡಲು ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಚಿವ ವಸಂತ ಬಂಗೇರ ಉತ್ತರ ಕ್ರಿಯೆ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿಎಂ ಮಾತನಾಡಿದರು.
ನಡೆನುಡಿಯಲ್ಲಿ ಸತ್ಯ ಹೇಳುವ ಗುಣ ಹೊಂದಿದ್ದ ವಸಂತ ಬಂಗೇರ ಹಾಗೂ ತಾವು ಒಟ್ಟಿಗೆ ವಿಧಾನಸಭೆ ಪ್ರವೇಶಿಸಿದ್ದು ಎನ್ನುವುದನ್ನು ಸಿಎಂ ಸಿದ್ದರಾಮಯ್ಯ ಸ್ಮರಿಸಿ, ಉಸಿರಿನ ಕೊನೆ ಗಳಿಗೆಯವರೆಗೂ ನನ್ನ ಸ್ನೇಹಿತರಾಗಿದ್ದರು. ಸತ್ಯ, ಬಡವರ ಪರ ಕಾಳಜಿ, ರಾಜಿ ರಹಿತ ಜನಪರ ಕೆಲಸಗಳ ಮೂಲಕ ತಮ್ಮ ವೈಯುಕ್ತಿಕ ಮತ್ತು ರಾಜಕೀಯ ಜೀವನವನ್ನು ಸಾರ್ಥಕಗೊಳಿಸಿಕೊಂಡವರು ಬಂಗೇರ ಜನ ಮಾನಸದಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿ ಫೋನ್ ಟ್ಯಾಪಿಂಗ್ ಮಾಡಿದ್ದಕ್ಕೆ ಸಾಕ್ಷಿ ಒದಗಿಸಲೀ ಎಂದ ಗೃಹ ಸಚಿವ ಜಿ.ಪರಮೇಶ್ವರ್
ಬೆಳ್ತಂಗಡಿ ಬಸ್ಟಾಂಡ್ ಗೆ ವಸಂತ ಬಂಗೇರ ಹೆಸರಿಡಲು ಸರ್ಕಾರ ಸಿದ್ಧವಿದೆ. ಜೊತೆಗೆ ಬೆಳ್ತಂಗಡಿ ವೃತ್ತದಲ್ಲಿ ವಸಂತ ಬಂಗೇರ ಪ್ರತಿಮೆ ಸ್ಥಾಪಿಸಬೇಕೆನ್ನುವ ಬೇಡಿಕೆಗೂ ಸರ್ಕಾರ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.
ಬಂಗೇರ ತಮ್ಮ ಬದುಕಿನುದ್ದಕ್ಕೂ ವಿಶ್ವ ಮಾನವ ಮೌಲ್ಯವನ್ನು ಪಾಲಿಸಿದರು. ಬಂಗೇರ ಅವರು ನನ್ನ ಬಳಿಗೆ ಯಾವತ್ತೂ ವೈಯುಕ್ತಿಕ ಕೆಲಸಗಳಿಗಾಗಿ ಬಂದಿಲ್ಲ. ಬಂದಾಗಲೆಲ್ಲಾ ಜನರ ಕೆಲಸಗಳಿಗಾಗಿ ಬೇಡಿಕೆ ಇಟ್ಟಿದ್ದರು. ಐದು ಬಾರಿ ಶಾಸಕರಾದರೂ ಮಂತ್ರಿ ಆಗಲು ಯಾವತ್ತೂ ಸಣ್ಣ ಲಾಭಿ ಕೂಡ ನಡೆಸಿದವರಲ್ಲ. ಹೀಗಾಗಿ ಇವರು ಅತ್ಯಂತ ಮಾದರಿ ರಾಜಕೀಯ ನಾಯಕರಾಗಿದ್ದರು ಎಂದು ಬಣ್ಣಿಸಿದರು.2023 ರಲ್ಲೂ ಚುನಾವಣೆಯಲ್ಲಿ ಸ್ಪರ್ಧಿಸಲು ಮನವಿ ಮಾಡಿದರೂ ಅವರು ಒಪ್ಪಲಿಲ್ಲ. ಈ ಬಾರಿ ಸ್ಪರ್ಧಿಸಿದ್ದರೆ ಖಂಡಿತಾ ಗೆದ್ದು ಮಂತ್ರಿಯಾಗುತ್ತಿದ್ದರು ಎಂದು ವಿವರಿಸಿದರು.
ವಸಂತ ಬಂಗೇರ ಸಾವಿನಿಂದ ರಾಜ್ಯ ರಾಜಕಾರಣ ಅತ್ಯಂತ ಬಡವಾಗಿದೆ. ಇವರ ಆರೋಗ್ಯ ಚೇತರಿಸಿಕೊಳ್ಳುತ್ತದೆ ಮತ್ತಷ್ಟು ಕಾಲ ನಮ್ಮ ಜೊತೆಗೆ ಇರುತ್ತಾರೆ ಎನ್ನುವ ಆಸೆ ಇತ್ತು. ಆದರೆ ನಮ್ಮನ್ನು ಅಗಲಿಬಿಟ್ಟಿರುವುದು ನನ್ನ ಪ್ರೀತಿಯ ಸ್ನೇಹಿತನನ್ನು ಕಳೆದುಕೊಂಡಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಚಿವ ಜನಾರ್ಧನ ಪೂಜಾರಿ, ಸ್ಪೀಕರ್ ಯು.ಟಿ.ಖಾದರ್ ಮತ್ತು ವಸಂತ ಬಂಗೇರ ಕುಟುಂಬದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ಲೈಂಗಿಕ ಹತ್ಯಾಕಾಂಡ :ಪ್ರಜ್ವಲ್ ಬಂಧನ ವಿಳಂಬಕ್ಕೆ ಹೈಕೋರ್ಟ್ ವಕೀಲ ಬಿ.ಟಿ.ವೆಂಕಟೇಶ್ ಆಕ್ರೋಶ