ರಾಮನಗರ: ‘ನುಡಿದಂತೆ ನಡೆಯುತ್ತಾ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ಮುಂದೆ ಗಾಳಿಯಲ್ಲಿ ತೂರಿ ಹೋಗುತ್ತೇವೆ ಎಂಬ ಭಯದಿಂದ ಜೆಡಿಎಸ್ನವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ತಾಲ್ಲೂಕಿನ ಕೂಟಗಲ್ನಲ್ಲಿ ತಮ್ಮ ಸಹೋದರ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್ ಪರವಾಗಿ ಭಾನುವಾರ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ನಮ್ಮ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಇನ್ನೂ ಒಂಬತ್ತು ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಲಿದೆ. ಕುಮಾರಸ್ವಾಮಿ ಅವರು ಏನಾದರೂ ಕೆಲಸ ಮಾಡಿದ್ದರೆ, ಇಲ್ಲೇ ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ಆದರೆ, ಅವರಿಗೆ ವಿಶ್ವಾಸವಿಲ್ಲ. ಹೊಸದಾಗಿ ಜನರನ್ನು ಮರಳು ಮಾಡುವುದಕ್ಕೆ ಮಂಡ್ಯಕ್ಕೆ ಹೋಗಿದ್ದಾರೆ. ದೇವೇಗೌಡರು, ಅನಿತಾ ಕುಮಾರಸ್ವಾಮಿ ಎಲ್ಲರೂ ಇಲ್ಲಿ ಅಧಿಕಾರ ಅನುಭವಿಸಿ ಏನೂ ಮಾಡಲಿಲ್ಲ. ಈಗ ಮನೆ ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸಿದ್ದಾರೆ. ಅವರದ್ದೇನಿದ್ದರೂ ಸ್ವಾರ್ಥದ ರಾಜಕಾರಣ’ ಎಂದು ಟೀಕಿಸಿದರು.
ಇದನ್ನು ಓದಿ : ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿಗೆ ಗಾಣಿಗ ಸಮುದಾಯ ಬೆಂಬಲ
‘ಯಾರೇ ಮೈತ್ರಿ ಮಾಡಿಕೊಂಡರೂ, ಟಾರ್ಗೆಟ್ ಮಾಡಿದರೂ ಸುರೇಶ್ ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಈಗಾಗಲೇ ಇಂತಹದ್ದನ್ನೆಲ್ಲಾ ಎದುರಿಸಿದ್ದೇವೆ. ಈಗ ಚಿಹ್ನೆ ಬದಲಾಗಿದೆಯಷ್ಟೆ. ಬಿಜೆಪಿ–ಜೆಡಿಎಸ್ ನಡುವೆ ಹೆಸರಿಗಷ್ಟೇ ಮೈತ್ರಿಯಾಗಿದ್ದು ಕಾರ್ಯಕರ್ತರಲ್ಲಿ ಹೊಂದಾಣಿಕೆ ಆಗಿಲ್ಲ. ಈ ವಿಷಯ ಬಿಜೆಪಿಯ ಸಿ.ಪಿ. ಯೋಗೇಶ್ವರ್ಗೂ ಗೊತ್ತು. ಅದಕ್ಕೆ ಆ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ಗೆ ಬರುತ್ತಿದ್ದಾರೆ. ಅವರಿಗೆ ನಮ್ಮ ಮನೆಯ ಬಾಗಿಲು ಸದಾ ತೆರೆದಿರುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಚುನಾವಣೆ ಬಂದಾಗಲೆಲ್ಲಾ ಬಿಜೆಪಿಯವರು ಐ.ಟಿ ಮತ್ತು ಇ.ಡಿ ದಾಳಿ ಮಾಡಿಸುತ್ತಲೇ ಇರುತ್ತಾರೆ. ಬೆಂಗಳೂರಿನಲ್ಲಿ ಸಿಕ್ಕಿದ ದುಡ್ಡನ್ನು ಬಿಜೆಪಿಯವರು ಮೂರು ವರ್ಷದ ಹಿಂದೆ ಡ್ರಾ ಮಾಡಿದ್ದರಂತೆ. ಹಾಗೆಂದು ಲೆಟರ್ ಕೊಟ್ಟಿದ್ದಾರೆ. ಅದೊಂದು ಕಾಗದ ತೋರಿಸಿ ನೂರು ಕಡೆ ಹಣ ಹಂಚಿದ್ದಾರೆ. ಇನ್ನೂ ಏನೇನು ಮಾಡುತ್ತಾರೆಂದು ನೋಡೋಣ’ ಎಂದರು.
ಇದನ್ನು ನೋಡಿ : ಜಾಗೃತ ನಾಗರಿಕರ ಜವಾಬ್ದಾರಿ |ಸುಳ್ಳುಗಳಿಂದ ಜನರನ್ನು ವಂಚಿಸಿದವರನ್ನು ದೂರವಿಡುವ ಕಾಲ ಬಂದಿದೆ – ಅಜಂ ಶಾಹಿದ್