ಮೈಸೂರು : ಪ್ರತಿಪಕ್ಷಗಳು ನೇಹಾ ಕುಲಕರ್ಣಿ ಪ್ರಕರಣವನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದರು.
ನೇಹಾ ಕುಲಕರ್ಣಿ ಕೊಲೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದ ಮುಖ್ಯಮಂತ್ರಿಗಳು, ಕೊಲೆಗಾರರನ್ನು ಕೂಡಲೇ ಬಂಧಿಸಲಾಗಿದೆ. ಇದು ಲವ್ ಜಿಹಾದ್ ಪ್ರಕರಣವಲ್ಲ. ಸರ್ಕಾರ ತನಿಖೆಯನ್ನು ಗಂಭೀರವಾಗಿ ಕೈಗೊಂಡಿದ್ದು. ಕೊಲೆಗಾರನಿಗೆ ಉಗ್ರ ಶಿಕ್ಷೆ ನೀಡಲು ಪ್ರಯತ್ನ ಮಾಡಲಾಗುವುದು ಎಂದರು.
ಬಿಜೆಪಿ ತಮ್ಮ ರಾಜಕೀಯಕ್ಕಾಗಿ ಒಬ್ಬರ ಸಾವನ್ನು ಬಳಸಿಕೊಳ್ಳುವುದು ದುರ್ದೈವ.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಗ್ಗೆ ಮಾತನಾಡಿ ಎಲ್ಲಾ ಕಾಲದಲ್ಲಿಯೂ ಕೊಲೆಗಳಾಗಿವೆ. ಹಾಗೆಂದು ಕಾನೂನು ಸುವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಲ್ಲ. ಕರ್ನಾಟಕದಲ್ಲಿ ಇರುವಷ್ಟು ಶಾಂತಿ ಸುವ್ಯವಸ್ಥೆ ಬೇರೆ ರಾಜ್ಯಗಳಲ್ಲಿಲ್ಲ. ನಾವು ಯಾವುದೇ ಕೃತ್ಯ ನಡೆದರೂ, ಅದನ್ನು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ರಾಜಕೀಯಕ್ಕಾಗಿ ಒಬ್ಬರ ಸಾವನ್ನು ಬಳಸಿಕೊಳ್ಳುವುದು ದುರ್ದೈವ ಎಂದು ಖಂಡಿಸಿದ ಸಿದ್ದರಾಮಯ್ಯ,ರಾಜ್ಯಾದ್ಯಂತ ಪ್ರತಿಭಟನೆಗಳಾಗುತ್ತಿರುವ ಬಗ್ಗೆ ಮಾತನಾಡಿ ಇದರ ಪರಿಣಾಮ ಸರ್ಕಾರದ ಮೇಲೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದೇಶದಲ್ಲಿ ಅಥವಾ ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲ.
ರಾಜ್ಯದಲ್ಲಿ ಚುನಾವಣಾ ವಾತಾವರಣ ಉತ್ತಮವಾಗಿದ್ದು ದೇಶದಲ್ಲಿ ಅಥವಾ ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲ. ಬಿಜೆಪಿ ಅಭ್ಯರ್ಥಿಗಳು ಮೋದಿ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ. ಮೋದಿಯವರ ಮೇಲೆ ಅವಲಂಬನೆಯಾಗಿದ್ದು, ಜನ ಮೋದಿ ಸರ್ಕಾರದ ವಿರುದ್ಧವಾಗಿದ್ದಾರೆ. ದೇಶದಲ್ಲಿ ಇಂಡಿಯಾ ಪರವಾದ ವಾತಾವರಣವಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮೃತ ನೇಹಾ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಈ ದೇಶದ ಜನರಿಗೆ ಬಿಜೆಪಿ ಸರ್ಕಾರ ಖಾಲಿ ಚಂಬು ಕೊಟ್ಟಿದೆ ಎಂದು ತಿಳಿಸಲು ನೀಡಿದೆ. ದೇಶದ ಜನರಿಗೆ 15 ಲಕ್ಷ ಕೊಟ್ಟರೇ? 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದುಪ್ಪಟ್ಟು , ಅಚ್ಛೇ ದಿನ್ ಬಂದಿದೆಯೇ? ಅದಕ್ಕೆ ಬಿಜೆಪಿಯವರು ಚಂಬು ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಜಾಹೀರಾತು ನೀಡಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಿಎಂ ಉತ್ತರಿಸಿದರು.
ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಿದ್ದು, 11 ತಿಂಗಳಲ್ಲಿ ಬೊಕ್ಕಸ ಖಾಲಿಯಾಗಿದೆ ನಮಗೆ ಭಿಕ್ಷೆ ಕೊಡಿ ಎಂಬ ಅರ್ಥದಲ್ಲಿ ಜಾಹೀರಾತು ನೀಡಿದೆ ಎಂಬ ಬಿಜೆಪಿಯ ಆರೋಪಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಮೋದಿ ಕೊಟ್ಟಿರುವ ಆಶ್ವಾಸನೆಗಳನ್ನು ಒಂದನ್ನೂ ಈಡೇರಿಸಿಲ್ಲ. ದೇಶದ ಜನರಿಗೆ ಖಾಲಿ ಚಂಬು ನೀಡಿದ್ದಾರೆ ಎಂದು ಜಾಹೀರಾತು ನೀಡಿದ್ದೇವೆ. ಅವರು ಏನಾದರೂ ಹೇಳಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೊಕ್ಕಸ ಖಾಲಿಯಾಗಿಲ್ಲ. ಎಲ್ಲಾ ಗ್ಯಾರಂಟಿ ಗಳನ್ನು ಜಾರಿ ಮಾಡಿ ಅಭಿವೃದ್ಧಿ ಕೆಲಸವನ್ನೂ ಮಾಡಿದ್ದೇವೆ ಎಂದರು.
ಏಣಿ ಹತ್ತಿಸಿ ನಂತರ ಸರ್ವನಾಶ ಮಾಡುತ್ತಾರೆ ಎಂಬ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಕೋಮುವಾದಿಗಳಾಗಿದ್ದು, ಅದರ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷವನ್ನು ಹೆಚ್.ಡಿ.ಕುಮಾರಸ್ವಾಮಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು. ನನಗೆ ಕುಮಾರಸ್ವಾಮಿ ಬಗ್ಗೆ ಭಯವಿದ್ದರೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಹೋರಾಟ ಮಾಡುತ್ತಿರಲಿಲ್ಲ. ಆದರೆ, ಕುಮಾರಸ್ವಾಮಿಗೆ ಸೋಲಿನ ಭಯವಿರುವುದರಿಂದ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಇದನ್ನೂ ನೊಡಿ: ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಬಿಜೆಪಿಯನ್ನು ಸೋಲಿಸಿ – ವಸುಂಧರಾ ಭೂಪತಿ Janashakthi Media