ಬೆಂಗಳೂರು:”ಕುಮಾರಸ್ವಾಮಿ ಹಾಗು ದೇವೇಗೌಡರು ತಮ್ಮ ಕುಟುಂಬದ ಸದಸ್ಯರನ್ನು ಬಿಜೆಪಿಯಿಂದ ಕಣಕ್ಕೆ ಇಳಿಸಿ, ಜೆಡಿಎಸ್ ಪಕ್ಷವನ್ನು ಹೇಗೆ ಕಟ್ಟುತ್ತಾರೆ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಚನ್ನಪಟ್ಟಣದ ಜೆಡಿಎಸ್ ನಾಯಕರಾದ ಅಕ್ಕೂರುದೊಡ್ಡಿ ಶಿವಣ್ಣ, ಮತ್ತಿತರರ ನಾಯಕರು ಹಾಗೂ ಕಾರ್ಯಕರ್ತರನ್ನು ಗುರುವಾರ ರಾತ್ರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಶಿವಕುಮಾರ್,ಹೆಚ್.ಡಿ.ದೇವೇಗೌಡರು ಪಕ್ಷದ ಅಧಿಕಾರವನ್ನು ಕುಮಾರಸ್ವಾಮಿ ಅವರಿಗೆ ಕೊಟ್ಟ ಪರಿಣಾಮ ಆ ಪಕ್ಷ ಈ ಸ್ಥಿತಿ ತಲುಪಿದೆ. ಈಗ ತಮ್ಮನ್ನು ಅಧಿಕಾರದಿಂದ ಕೆಳಗೆ ಇಳಿಸಿದವರನ್ನೇ ಕರೆದುಕೊಂಡು ಒಕ್ಕಲಿಗರ ಮಠಕ್ಕೆ ಹೋಗಿದ್ದಾರೆ. ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ತಮ್ಮ ಪಕ್ಷದ ಕಾರ್ಯಕರ್ತರಿಗೆ ಒಂದು ಸಣ್ಣ ಅಧಿಕಾರವನ್ನಾದರೂ ಕೊಟ್ಟರಾ? ಅಧಿಕಾರ ಇದ್ದಾಗಲೇ ಏನು ಮಾಡಲಿಲ್ಲ. ಕಾರ್ಯಕರ್ತರು ಇಲ್ಲದೆ ಯಾವ ಪಕ್ಷ ಇರಲು ಸಾಧ್ಯ?
ಚನ್ನಪಟ್ಟಣದವರಿಗೆ ರಾಜಕಾರಣ ಹೊಸದೇನಲ್ಲ. ಆದರೆ ಇಂದು ನಡೆಯುತ್ತಿರುವ ರಾಜಕಾರಣ ನೋಡಿದರೆ ಯಾರನ್ನು ನಂಬಬೇಕು, ಯಾರನ್ನು ಬಿಡಬೇಕು ಎಂದು ಅರ್ಥವಾಗುತ್ತಿಲ್ಲ.ಕುಮಾರಸ್ವಾಮಿ, ಯೋಗೇಶ್ವರ್ ಅವರು ಆಡಿದ್ದ ಮಾತುಗಳು ಒಂದೇ ಎರಡೇ. ಅವರು ಈಗ ಏನಾದರೂ ಮಾಡಿಕೊಳ್ಳಲಿ. ಚನ್ನಪಟ್ಟಣದಲ್ಲಿ ದಳ ಮತ್ತು ಬಿಜೆಪಿ ಒಂದಾಗಲು ಸಾಧ್ಯವೇ?ಚುನಾವಣೆ ಮುಗಿಯುವ ವೇಳೆಗೆ ಕಾಂಗ್ರೆಸ್ ಅವರಿಗೆ ಏನೂ ಮಾಡದೇ ಇದ್ದರೂ ಪರಸ್ಪರ ಒಬ್ಬರಿಗೊಬ್ಬರು ಯಾವ ಗತಿ ಮಾಡಬೇಕೋ ಮಾಡುತ್ತಾರೆ.ಇವರ ರಾಜಕೀಯಕ್ಕೆ ಸ್ವಾರ್ಥಕ್ಕೆ ಕಾರ್ಯಕರ್ತರು ಏನಾಗಬೇಕು. ಅವರು ಯಾರಿಗಾಗಿ ದುಡಿದರು, ಹೋರಾಟ ಮಾಡಿದರು?
ಇದನ್ನು ಓದಿ : ಬಿಜೆಪಿ ವಿರುದ್ಧ ಮತ ಚಲಾಯಿಸಲು ಕಟ್ಟಡ ಕಾರ್ಮಿಕರ ನಿರ್ಧಾರ
ಕಳೆದ ಒಂದು ತಿಂಗಳಲ್ಲಿ ಸುಮಾರು ಹತ್ತು ಸಾವಿರ ಕಾರ್ಯಕರ್ತರು ಬಿಜೆಪಿ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ನಮಗೆ ಪ್ರತಿ ಬಾರಿ ಹಿನ್ನಡೆಯಾಗುತ್ತಿದ್ದ ಬೆಂಗಳೂರು ದಕ್ಷಿಣದಲ್ಲೂ ಈ ಬಾರಿ ನಮಗೆ ಮುನ್ನಡೆ ಸಿಗುತ್ತಿದೆ. ಅದರ ಜತೆ ರಾಜರಾಜೇಶ್ವರಿ ನಗರ, ಆನೇಕಲ್ ನಲ್ಲೂ ನಮಗೆ ಲೀಡ್ ಬರಲಿದೆ. ಎಲ್ಲೂ ಮೋದಿ ಗಾಳಿ ಇಲ್ಲ ಎಂದರು.
ಕುಮಾರಸ್ವಾಮಿ ಅವರು ದೆಹಲಿಯಿಂದ ಒಂದು ದಿನ ಬಂದು ಬಿಜೆಪಿ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದರು. ಮರುದಿನ ನನ್ನ ಮೇಲೆ ಟೀಕೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯವರು ಸಿಎಂ ಆಗಲಿ ಎಂದು ಬೆಂಬಲ ನೀಡಿದರೆ, ನಾನೇ ವಿಷ ಹಾಕಿದ್ದೇನೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ನಮ್ಮ ಕಾರ್ಯಕರ್ತರ ವಿರೋಧದ ನಡುವೆ ಅವರಿಗೆ ಬೆಂಬಲ ಕೊಟ್ಟಿದ್ದೆ.
ಈ ಚುನಾವಣೆಯನ್ನು ದೇಶವೇ ನೋಡುತ್ತಿದೆ. ಈಗ ರಾಮನಗರದಲ್ಲಿ ನಂಬಿಕೆ ಇಲ್ಲದೆ ಮಂಡ್ಯಕ್ಕೆ ಹೋಗಿ ಸ್ಪರ್ಧೆ ಮಾಡುತ್ತಿದ್ದಾರೆ. ನಿಮ್ಮ ಊರಲ್ಲಿ ನಿನಗೆ ನಂಬಿಕೆ ಇಲ್ಲದಿದ್ದರೆ ಬೇರೆ ಊರಲ್ಲಿ ಹೋಗಿ ನಿಂತು ಏನು ಮಾಡುತ್ತೀರಿ? ನನ್ನ ಪ್ರಕಾರ ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ, ಹಾಸನ ಈ ನಾಲ್ಕು ಕ್ಷೇತ್ರಗಳಲ್ಲಿ ಅವರು ಗೆಲ್ಲುವುದಿಲ್ಲ.ಚನ್ನಪಟ್ಟಣದಲ್ಲಿ ಒಂದು ಮತ ಲೀಡ್ ಕೊಡಿ ಸಾಕು. ಯೋಗೇಶ್ವರ್ ಗೆ ಏನು ಮಾಡಬೇಕೋ ಅದನ್ನು ಕುಮಾರಸ್ವಾಮಿ ಮಾಡುತ್ತಾರೆ. ಅವರಿಗೆ ಮೊದಲ ಬಲಿ ಯೋಗೇಶ್ವರ್. ಯೋಗೇಶ್ವರ್ ಕೂಡ ಕಮ್ಮಿ ಇಲ್ಲ. ಅವರು ಮಾಡಿರುವ ಕರ್ಮಗಳು ವಿಪರೀತ ಇವೆ. ಚುನಾವಣೆ ಮುಗಿಯಲಿ ಎಂದು ಸುಮ್ಮನೆ ಇದ್ದೇನೆ ಎಂದು ಡಿ.ಕೆ.ಶಿವಕುಮಾರ್ ಸೂಚ್ಯವಾಗಿ ಹೇಳಿದರು.
ಇದನ್ನು ನೋಡಿ : ‘ಉದ್ಯೋಗದ ಪ್ರಶ್ನೆ ಎಲ್ಲಿಗೆ ಬಂತು ಸಂಗಯ್ಯ’? ಬಹುಪಾಲು ಭಾರತೀಯರ ದಿನದ ಸರಾಸರಿ ಆದಾಯವೇನು? Janashakthi Media