ನವದೆಹಲಿ: ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ 43 ವರ್ಷದ ವರುಣ್ ಗಾಂಧಿ ಅವರು 2019 ರಲ್ಲಿ ಗೆದ್ದ ಪಿಲಿಭಿತ್ ಲೋಕಸಭಾ ಕ್ಷೇತ್ರದ ಮತದಾರರಿಗೆ ಗುರುವಾರ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.
ಆ ಕ್ಷೇತ್ರಕ್ಕೆ ಬಾಲ್ಯದಲ್ಲಿ ಕಾಲಿಟ್ಟಾಗಿನಿಂದ ಇಲ್ಲಿಯವರೆಗಿನ ಸಂತಸಮಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಫಿಲ್ಪಿಟ್ ಲೋಕಸಭಾ ಕ್ಷೇತ್ರವು ಕೇವಲ ತನ್ನ ಕಾರ್ಯಕ್ಷೇತ್ರ ಮಾತ್ರವಾಗಿರದೆ, ಅದು ಹೇಗೆ ನನ್ನ ಗುರುತನ್ನು ವೃದ್ಧಿಸಿತು ಹಾಗೂ ನನ್ನ ಜೀವನ ಪಯಣದಲ್ಲಿ ಅಲ್ಲಿನ ಜನರು ಹೇಗೆ ನನ್ನ ಜೀವನದ ಅವಿಭಾಜ್ಯ ಅಂಗವಾದರರು ಇಂದು ಈ ಪತ್ರ ಬರೆಯುತ್ತಿರುವಾಗ ಅಸಂಖ್ಯಾತ ನೆನಪುಗಳು ನನ್ನನ್ನು ಭಾವುಕರನ್ನಾಗಿಸಿದೆ ಎಂದಿದ್ದಾರೆ.
‘1983ರಲ್ಲಿ ಮೊದಲ ಬಾರಿಗೆ ಪಿಲಿಭಿತ್‌ಗೆ ತನ್ನ ತಾಯಿಯ ಕೈಬೆರಳನ್ನು ಹಿಡಿದು ಬಂದ 3 ವರ್ಷದ ಪುಟ್ಟ ಮಗುವಾಗಿದ್ದ ನನ್ನ ಆ ದಿನಗಳು ನನಗೆ ಇಂದಿಗೂ ನೆನಪಿದೆ. ‘ಮುಂದೊಂದು ದಿನ ಈ ಭೂಮಿ ತನ್ನ ಕರ್ಮಭೂಮಿಯ ಸ್ಥಳವಾಗುತ್ತದೆ ಮತ್ತು ಇಲ್ಲಿನ ಜನರು ತನ್ನ ಕುಟುಂಬವಾಗುತ್ತಾರೆ ಎಂದು ಅವನಿಗೆ (ಮೂರು ವರ್ಷದ ಮಗುವಿಗೆ) ಹೇಗೆ ಗೊತ್ತಾಯಿತು? ಹಲವು ವರ್ಷಗಳಿಂದ ಪಿಲಿಭಿತ್‌ನ ಮಹಾನ್ ಜನರಿಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ.
ಇದನ್ನೂ ಓದಿ : ಬಿಜೆಪಿಯ 40 ಮಂದಿಗೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಧಾನ
ಪಿಲಿಭಿತ್ ಕ್ಷೇತ್ರದಿಂದ ಪಡೆದ ಆದರ್ಶಗಳು, ಸರಳತೆ ಮತ್ತು ದಯೆಯು ಸಂಸದನಾಗಿ ಮಾತ್ರವಲ್ಲದೆ ವ್ಯಕ್ತಿಯಾಗಿಯೂ ನನ್ನ ಉನ್ನತಿಗೆ ಮತ್ತು ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಹೇಳಿರುವ ವರುಣ್ ಗಾಂಧಿ, ನಿಮ್ಮ ಪ್ರತಿನಿಧಿಯಾಗಿರುವುದು ಮತ್ತು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಯಾವಾಗಲೂ ನಿಮ್ಮ ಹಿತಾಸಕ್ತಿಗಳಿಗಾಗಿ ಮಾತನಾಡುವುದು ನನ್ನ ಜೀವನದ ದೊಡ್ಡ ಗೌರವವಾಗಿದೆ’ ಎಂದು ವರುಣ್ ಗಾಂಧಿ ಹೇಳಿದ್ದಾರೆ.
‘ಸಂಸದನಾಗಿ ನನ್ನ ಅಧಿಕಾರಾವಧಿ ಮುಗಿಯುತ್ತಿದ್ದರೂ ಪಿಲಿಭಿತ್ ಜೊತೆಗಿನ ಸಂಬಂಧ ನನ್ನ ಕೊನೆಯ ಉಸಿರು ಇರುವವರೆಗೂ ಕೊನೆಗೊಳ್ಳುವುದಿಲ್ಲ.. ಸಂಸದನಾಗಿ ಇಲ್ಲದಿದ್ದರೆ ಮಗನಾಗಿ ನನ್ನ ಜೀವನದುದ್ದಕ್ಕೂ ನಿಮ್ಮ ಸೇವೆ ಮಾಡಲು ಬದ್ಧನಾಗಿದ್ದೇನೆ. ಪಿಲಿಭಿತ್‌ನ ಜನರಿಗೆ ಮೊದಲಿನಂತೆ ತನ್ನ ಮನೆಯ ಬಾಗಿಲು ಯಾವಾಗಲೂ ತೆರೆದಿರುತ್ತದೆ. ನನ್ನ ಮತ್ತು ಪಿಲಿಭಿತ್ ನಡುವಿನ ಸಂಬಂಧವು ಯಾವುದೇ ರಾಜಕೀಯ ಅರ್ಹತೆಗಿಂತಲೂ ಹೆಚ್ಚಿನ ಪ್ರೀತಿ ಮತ್ತು ನಂಬಿಕೆಯ ವಿಷಯವಾಗಿದೆ. ನಾನು ಹಿಂದೆಯೂ ನಿಮ್ಮೊಂದಿಗೆ ಇದ್ದೆ, ಈಗಲೂ ಇದ್ದೇನೆ ಮತ್ತು ಮುಂದೆಯೂ ನಿಮ್ಮವನಾಗಿರುತ್ತೇನೆ’ ಎಂದು ವರುಣ್ ಗಾಂಧಿ ಪತ್ರದ ಕೊನೆಯಲ್ಲಿ ಬರೆದಿದ್ದಾರೆ.
ಈ ಹಿಂದೆ ತಮ್ಮದೇ ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸುವ ಮೂಲಕ ವರುಣ್ ಗಾಂಧಿ ಬಿಜೆಪಿ ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇನ್ನು ಈ ಬಾರಿ ವರುಣ್ ಗಾಂಧಿ ಅವರು ತಮ್ಮ ತಾಯಿ ಮೇನಕಾ ಗಾಂಧಿ ಪರ ಸುಲ್ತಾನ್‌ಪುರದಲ್ಲಿ ಪ್ರಚಾರ ನಡೆಸಲಿದ್ದಾರೆ.