ಬೆಂಗಳೂರು: ನಮ್ಮ ಮೆಟ್ರೋ ಸಿಬ್ಬಂದಿಯೊಬ್ಬ ಮಹಿಳೆಯ ಮುಂದೆ ಅಸಭ್ಯವಾದ ವರ್ತನೆ ತೋರಿಸಿದ್ದಾನೆ. ಇದರಿಂದ ಆತಂಕಿತರಾದ ಮಹಿಳೆ, ʼನನಗೆ ಇಲ್ಲಿ ಅಸುರಕ್ಷಿತʼ ಎನಿಸುತ್ತಿದೆ ಎಂದು ಎಕ್ಸ್ನಲ್ಲಿ ಸಂದೇಶ ಹಾಕಿದ್ದಾರಲ್ಲದೆ, ಕ್ರಮ ಕೈಗೊಳ್ಳುವಂತೆ ಮೆಟ್ರೋ ಅಧಿಕಾರಿಗಳು ಹಾಗೂ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಜಾಲಹಳ್ಳಿ ಮೆಟ್ರೋ ಫ್ಲಾಟ್ಫಾರಂನಲ್ಲಿ ಘಟನೆ ನಡೆದಿದ್ದು, ಮೆಟ್ರೋ ಸಿಬ್ಬಂದಿಯಿಂದ ಈ ಕೃತ್ಯ ನಡೆದಿದೆ ಎಂದು ದೂರಲಾಗಿದೆ. ಎದುರಿನ ಫ್ಲಾಟ್ಫಾರಂನಲ್ಲಿದ್ದ ಮಹಿಳೆಯ ಮುಂದೆ ಖಾಸಗಿ ಅಂಗವನ್ನು ಸ್ಪರ್ಶ ಮಾಡಿಕೊಂಡು ದುರ್ವರ್ತನೆ ತೋರಿದ್ದಾನೆ. ಇದನ್ನು ಮಹಿಳೆ ಆಕ್ಷೇಪಿಸಿದರೂ ಆತ ನಿಲ್ಲಿಸಿಲ್ಲ. ಬಳಿಕ ಆಕೆ ಇದನ್ನು ವಿಡಿಯೋ ಮಾಡಿಕೊಳ್ಳಲು ಆರಂಭಿಸಿದಾಗ ಆತ ಅಲ್ಲಿಂದ ಹೋಗಿದ್ದಾನೆ ಎಂದು ಗೊತ್ತಾಗಿದೆ.
ಇದನ್ನೂ ಓದಿ : ಬೆಂಗಳೂರು ಮೆಟ್ರೋ ರೈಲಿನಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಕೇಸ್
ಈ ವಿಚಾರವನ್ನು ಮಹಿಳೆ ಮೆಟ್ರೋ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಅವರಿಂದ ಯಾವುದೇ ಕ್ರಮ ಬರದಿರುವ ಹಿನ್ನೆಲೆಯಲ್ಲಿ, ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ದಿನನಿತ್ಯ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುವ ಮೆಟ್ರೋದಲ್ಲಿ ಲೈಂಗಿಕ ಕಿರುಕುಳದ ಆರೋಪಗಳು ಕೇಳಿ ಬರುತ್ತಲೆ ಇವೆ. ನಾಲ್ಕು ತಿಂಗಳ ಅಂತರದಲ್ಲಿ ಇದು 6 ನೇ ಪ್ರಕರಣವಾಗಿದೆ. ಹೀಗೆ ಪದೇ ಪದೇ ಈ ರೀತಿಯ ಪ್ರಕರಣ ನಡೆಯುತ್ತಿರೋದ್ರಿಂದ ಮೆಟ್ರೋ ಹೆಣ್ಣುಮಕ್ಕಳಿಗೆ ಎಷ್ಟು ಸುರಕ್ಷಿತ ಅನ್ನೋ ಆತಂಕಭರಿತ ಪ್ರಶ್ನೆ ಮೂಡಿದೆ. ಇನ್ನಾದ್ರೂ ಬಿಎಂಆರ್ಸಿಎಲ್ ಅಧಿಕಾರಿಗಳು ಹೆಣ್ಣುಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತುಕೊಡುವ ಮೂಲಕ ಜನರಲ್ಲಿ ಆವರಿಸಿರುವ ಭಯವನ್ನ ಹೋಗಲಾಡಿಸಬೇಕಾಗಿದೆ.