– ಸಂಧ್ಯಾ ಸೊರಬ
ಬೆಂಗಳೂರು: ಅದು ಬೇಸಿಗೆಯ ಸಂಜೆ.ಅದೇ ತಾನೇ ಸಂಧ್ಯೆ ಕರಗಿ ತಂಪನ್ನು ಎದುರು ನೋಡುವ ರಾತ್ರಿಯ ಆಕಾಶ. ಹೀಗೆ ಬಿಸಿನ ದಣಿವನ್ನು ಆರಿಸಿಕೊಳ್ಳುವ ಸಂಜೆಯ ತಂಪಾದ ಗಾಳಿಯ ನಡುವೆ ಸುಮಧುರ ಹಾಡುಗಳನ್ನಾಲಿಸುವ ನೂರಾರು ಕಿವಿಗಳು. ಆಹಾ, ಎಂಥಹ ದೃಶ್ಯ ಅಲ್ವಾ? ದೃಶ್ಯ ಅನ್ನೋದಕ್ಕಿಂತಲೂ ಆ ಸಂಜೆಯನ್ನು ಸವಿದವರಿಗೆ ಗೊತ್ತು ಹಾಡುಗಳ ಮಾಧುರ್ಯ ಮತ್ತು ಆಹ್ಲಾದಿಸುವ ಆ ಮನಸು.ಇಂತಹ ಸುಂದರ ಸಂಜೆಗೆ ಸಾಕ್ಷಿಯಾಗಿದ್ದು ಶುಕ್ರವಾರದ ಸಂಜೆಯ ಸುಚಿತ್ರ ಫಿಲ್ಮ್ ಸೊಸೈಟಿಯ ಸುತ್ತಮುತ್ತಲ ಪ್ರಾಂಗಣ.
ಅಲ್ಲಿ ಹಿಂದಿಯ ಫೇಮಸ್ ಶಾಯರಿಗಳ ಮಾಂತ್ರಿಕ ಗುಲ್ಜಾರ್ ಅವರ ಹಳೆಯ ಹಿಂದಿ ಹಾಡುಗಳ ಜೊತೆ ಒಂದಿಷ್ಟು ಕನ್ನಡದ ಆಯ್ದ ಗೀತೆಗಳು ಕೂಡ ಗಾನಮಾಂತ್ರಿಕನ ಗರಡಿಯಲ್ಲಿ ತೇಲಿಬಂದವು, ಅವು “ಎಂದೂ ಮರೆಯದ ಹಾಡುಗಳು”. ಅಕ್ಷರ ಮಾಂತ್ರಿಕ ದಿ.ರವಿಬೆಳಗೆರೆ ಅವರ 66ನೇ ಜನ್ಮದಿನದ ಪ್ರಯುಕ್ತ ಇಂತಹ ಎಂದೂ ಮರೆಯದ ಹಾಡುಗಳ ಕಾರ್ಯಕ್ರಮವನ್ನು ಬೆಳಗೆರೆ ಕುಟುಂಬ ಆಯೋಜಿಸಿತ್ತು. ರವಿಬೆಳಗೆರೆಯ ಗುಲ್ಜಾರ್ ಶಾಯರಿಗಳ ಪ್ರೇಮ, ಸಂಗೀತದ ಬಗೆಗಿನ ಆಸಕ್ತಿ ಅಭಿರುಚಿಯನ್ನು ನಿರೂಪಣೆಯಲ್ಲಿ ಬಿಚ್ಚಿಟ್ಟಿದ್ದು, ರವಿಬೆಳಗೆರೆಯ ಸ್ನೇಹಿತ ಪದ್ಮಪಾಣಿ ಜೋಡಿದಾರ್.
ಇನ್ನು ಗಾಯಕಿ ಬಿ.ಆರ್.ಛಾಯಾ ಅವರ ಧ್ವನಿಯನ್ನು ಮತ್ತೆ ಕೇಳಿಸುವಂತೆ ಅವರ ಹಾಡುಗಳನ್ನು ಆಲಿಸಲು ಕಿವಿ ನಿಮಿರೇಳುವಂತೆ ಮಾಡಿದ್ದು ಇದೇ “ಎಂದೂ ಮರೆಯದ ಹಾಡುಗಳು”.ಸಂಗೀತ ಪ್ರೇಮಿಗಳಿಗೆ ಮುದ ನೀಡುವ ಹಾಡುಗಳಿಗೆ ಭಾಷೆಯ ಮಿತಿಯಾಗಲೀ ಗಡಿಯಾಗಲೀ ಇರದು. ಅಂತಹ ಸೆಳೆತದ ಶಕ್ತಿ ಸಂಗೀತ ಮತ್ತು ಒಳ್ಳೆಯ ಹಾಡುಗಳಿಗೆ ಇದೆ ಎನ್ನುವುದನ್ನು ರವಿಬೆಳಗೆರೆ ಅವರೊಳಗಿದ್ದ ಸಂಗೀತದ ಪ್ರೇಮಿಯನ್ನು ಈ ಆಯ್ದ ಹಾಡುಗಳು ನೆನಪು ಮಾಡಿಕೊಟ್ಟವು.
ಇನ್ನು ಗಾಯಕ ರಾಮಚಂದ್ರ ಹಡಪದ್ ಬಗ್ಗೆ ಹೇಳುವುದೇನೂ ಬೇಕಿಲ್ಲ. ಆಗಾಗ ಪರಮಪದ ತಂಡದೊಂದಿಗೆ ಗುಲ್ಜಾರ್ ಅವರನ್ನು ಕಿಶೋರ್ ಕುಮಾರ್ ಅವರನ್ನು ಗಾಯಕಿ ಲತಾ ಅವರನ್ನು ಹೀಗೆ ಅವರೆಲ್ಲರನ್ನು ಇದರ ಜೊತೆಗೆ ಇನ್ನೂ ಹಲವರನ್ನು ಆಗಾಗ್ಗೆ ನೆನಪಿಸಿ ಹಾಡುಗಳನ್ನು ಎಲ್ಲರೂ ಗುನುಗುನಿಸುತ್ತಾ ಆ ಸಂಜೆಯನ್ನು ರಸಪೂರ್ಣವಾಗಿ ಮಾಡುವ ಶಕ್ತಿ ಇದೆ ಎಂದರೆ, ಬಹುಶಃ ಅತಿಶಯೋಕ್ತಿಯಾಗಲಾರದು. ಹೀಗೆ ಲೈವ್ ಸಂಗೀತಕ್ಕೆ ಪರಪಮಪದ ತಂಡ ಇಲ್ಲಿ ಮತೆ ಸಾಕ್ಷಿಯಾಯಿತು. “ ಕೈ ತುತು ಕೊಟ್ಟೋಳೆ ಐ ಲವ್ಯೂ ಮೈ ಮದರ್ ಇಂಡಿಯಾ” ಕನ್ನಡದ ಹಾಡಿನೊಂದಿಗೆ ಆರಂಭವಾದ ಗೀತ ಪಯಣ ಸೀತಾ ಚಿತ್ರದ “ಬರೆದೆ ನೀನು ನಿನ್ನ ಹೆಸರಾ ನನ್ನ ಬಾಳ ಪುಟದಲೀ” ಹಾಡಿನೊಂದಿಗೆ ಅಂತ್ಯಗೊಂಡರೂ ಈ ನಡುವೆ ಲಂಬೀಜುದಾಯಿ ಚಾರೂಂ ದಿನೋದಾ.. ಆಜ್ ಜಾನೇ ಕೀ ಜಿದ್ ನಾ ಕರೋ.. ಮುಸಾಫೀರ್ ಹೂಂ ಯಾರೋ… ಹಾಡುಗಳು ವ್ಹಾ …ವ್ಹಾ…ವ್ಹಾ… ಎನ್ನುವಂತಿದ್ದವು..
“ ಓಮನಸೇ”ಯ ಆಯ್ದ ಕೆಲವು ಸಂಚಿಕೆಗಳನ್ನೊಳಗೊಂಡ “ಓ ಮನಸೇ “..ಮನಸು ಮನಸುಗಳ ಪಿಸುಮಾತು ಪುಸ್ತಕವನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು. ಇನ್ನು ರವಿ ಬೆಳಗೆರೆ ಪುತ್ರ ಕರ್ಣ ಸಹ ಹಾಡುಗಾರ ಎನ್ನುವುದನ್ನು ಈ ಕಾರ್ಯಕ್ರಮ ಸಾಬೀತು ಪಡಿಸಿತು.