ವಿಶೇಷ ವರದಿ: ಸಂಧ್ಯಾ ಸೊರಬ
ರಾಜಕೀಯವೇ ಹಾಗೇ,ರಾಜಕಾರಣವೇ ಹಾಗೇ, ಇನ್ನು ಅಧಿಕಾರ ಹೆಸರು ಎನ್ನುವುದಿದೆಯಲ್ಲ, ಅದು ಎಂಥವರನ್ನಾದರೂ ಬದಲಾಯಿಸಿ ಬಿಡುತ್ತದೆ. ಬದಲಾದ ರಾಜಕೀಯ ಸನ್ನಿವೇಶದಲ್ಲೀಗ ದೋಸ್ತಿಗಳಾಗಿದ್ದವರು ದುಷ್ಮನಿಗಳಾಗಿದ್ದಾರೆ. ಅಂದು ಸೈಕಲ್ ಏರಿ ಪಕ್ಷ ಕಟ್ಟಿದ್ದ ಜೋಡೆತ್ತುಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ದುಷ್ಮನಿಗಳಾಗಿದ್ದಾರೆ.
ಈ ಇಬ್ಬರ ದುಷ್ಮನಿಯ ಕಥೆಯಿದೇಯಲ್ಲ, ಅದು ಇಂದು ನಿನ್ನೆಯದಲ್ಲ. ಬಹಳ ವರ್ಷಗಳದ್ದೇ. ಈ ಯಡಿಯೂರಪ್ಪ ಮತ್ತು ಈಶ್ವರಪ್ಪ ಶಿವಮೊಗ್ಗ ಜಿಲ್ಲೆಯ ಮೂಲದವರೇ ಅಲ್ಲ. ಮಂಡ್ಯದ ಕೆ.ಆರ್.ಪೇಟೆಯ ಬೂಕನಕೆರೆಯ ಯಡಿಯೂರಪ್ಪ, ಬಳ್ಳಾರಿ ಮೂಲದ ಈಶ್ವರಪ್ಪ ಈ ಇಬ್ಬರು ಬದುಕನ್ನು ಅರಸಿಬಂದಿದ್ದು ಶಿವಮೊಗ್ಗ ಜಿಲ್ಲೆಗೆ. ಬೂಕನಕೆರೆಯಲ್ಲಿ ನಿಂಬೆಹಣ್ಣು ವ್ಯಾಪಾರವನ್ನು ಮಾಡುತ್ತಿದ್ದ ಯಡಿಯೂರಪ್ಪರ ಶಿಕಾರಿಪುರದ ರೈಸ್ ಮಿಲ್ ಒಂದಕ್ಕೆ ರೈಟರ್ ಆಗಿ ಅದು ಆರ್‌ಎಸ್‌ಎಸ್ ಪರಿಚಯದಿಂದ ಸೇರಿಕೊಂಡಿದ್ದು. ಇನ್ನು ಬಳ್ಳಾರಿಯಿಂದ ಶಿವಮೊಗ್ಗಕ್ಕೆ ಬಂದಿದ್ದ ಈಶ್ವರಪ್ಪ ಸೈಕಲ್ ಮೇಲೆ ಚಾಕಲೇಟ್ಗಳ ಪ್ಯಾಕೇಟನ್ನು ಅಂಗಡಿ ಅಂಗಡಿಗೆ ಹೋಗಿ ಏಜೆಂಟ್ ತರ ಮಾರಿ ಬರುತ್ತಿದ್ದವರು. ಇವರಿಗೆ ಸಾಥ್ ನೀಡಿದ್ದು ಶಿವಮೊಗ್ಗದ ಡಿ.ಎಸ್.ಶಂಕರ್ ಮೂರ್ತಿ. ಶಂಕರ್ ಮೂರ್ತಿ ಬೇರೆ ಯಾರೂ ಅಲ್ಲ, ಮೇಲ್ಮನೆಯ ಸಭಾಪತಿ ಆಗಿದ್ದವರು. ಸಂಘ ಪರಿವಾರದ ಬೈಠಕ್ ಒಂದರಲ್ಲಿ ಈಶ್ವರಪ್ಪ ಮತ್ತು ಯಡಿಯೂರಪ್ಪ ಜೊತೆಯಾಗುತ್ತಾರೆ. ಶಿಕಾರಿಪುರದಿಂದ ಬಸ್ ಮೂಲಕ ಶಿವಮೊಗ್ಗಕ್ಕೆ ಯಡಿಯೂರಪ್ಪ ಹೋಗುತ್ತಿದ್ದರೆ, ಚಾಕಲೇಟ್ ಮಾರಿದ ಬಂದ ಹಣದಿಂದ ಲೂನಾ ಒಂದನ್ನು ಖರೀದಿಸಿ ತಿರುಗುತ್ತಿದ್ದವರು ಈಶ್ವರಪ್ಪ. ಇನ್ನು ರೈಸ್ ಮಿಲ್ ಮಾಲೀಕರ ಮಗಳಾದ ಮೈತ್ರಾದೇವಿಯೊಂದಿಗೆ ಯಡಿಯೂರಪ್ಪರ ಮದುವೆಯಾಗಿ ಅವರು ಅಲ್ಲಿಯೇ ಇರುವಂತಾಯಿತು.
ಈ ಮೊದಲು ಕರ್ನಾಟಕದಲ್ಲಿ ಬಿಜೆಪಿ ಎನ್ನುವುದೇ ಇರಲಿಲ್ಲ. ಹೀಗೆ ಬೈಠಕ್ ಗಳಲ್ಲಿ ಸೇರುತ್ತಾ, ಸೈಕಲ್ ಮೇಲೆ ಜನಸಂಘಕ್ಕಾಗಿ ಅಂದರೆ ಬಿಜೆಪಿ ಅಂದರೆ ಆಗಿನ ಜನಸಂಘಕ್ಕಾಗಿ ಪಕ್ಷ ಕಟ್ಟಲು ದುಡಿದವರು.ಸೈಕಲ್ ಮೇಲೆ ಓಡಾಡುತ್ತಿದ್ದ ಇಬ್ಬರು ಚಿತ್ರನ್ನ, ಟೀ ಅನ್ನು ಹಂಚಿ ಕುಡಿಯುತ್ತಿದ್ದವರು. ಯಡಿಯೂರಪ್ಪನನ್ನು ಶಿಕಾರಿಪುರದ ಬಸ್ ಹತ್ತಿಸುವವರೆಗೆ ಈಶ್ವರಪ್ಪರ ಸೈಕಲ್ ಇರುತ್ತಿತ್ತು. 1972ರಲ್ಲಿ ಶಿಕಾರಿಪುರದ ಜನಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡರು. ನಂತರ 1975ರಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ 45 ದಿನಗಳ ಕಾಲ ಜೈಲುವಾಸವನ್ನೂ ಅನುಭವಿಸಿದರು. ಒಂದು ದಿನ ಯಡಿಯೂರಪ್ಪರ ಮೇಲೆ ವಿರೋಧ ಪಕ್ಷಗಳಿಂದ ಅಟ್ಯಾಕ್ ಆದಾಗ ಕೂದಲೆಳೆ ಅಂತರದಿಂದ ಪಾರಾಗಿ ಆಸ್ಪತ್ರೆಗೆ ಸೇರಿದ್ದರು. ಇದು ರಾಜ್ಯಾದ್ಯಂತ ಆಗ ದೊಡ್ಡ ಸಿಂಪಥಿಯೂ ಆಗಿತ್ತು. ಈ ಹೊಡೆತ ಯಡಿಯೂರಪ್ಪಗೆ ಪ್ಲಸ್ ಪಾಯಿಂಟ್ ಆಯಿತು. ಮುಂದೆ ನಡೆದಿದ್ದೆಲ್ಲ ರಾಜಕೀಯ ಇತಿಹಾಸ.
ಇದನ್ನು ಓದಿ :ದೆಹಲಿ| ನಾಲ್ಕಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ| ಹೊಗೆಯಿಂದ ಉಸಿರುಗಟ್ಟಿ ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು
1977ರಲ್ಲಿ ಯಡಿಯೂರಪ್ಪ ಮೊದಲ ಬಾರಿಗೆ ಶಿಕಾರಿಪುರದ ಪುರಸಭಾ ಅಧ್ಯಕ್ಷರಾಗಿ ಆಯ್ಕೆಯಾದರು. 1980ರಲ್ಲಿ ಶಿಕಾರಿಪುರ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾದರು. ಶಿಕಾರಿಪುರ ಕ್ಷೇತ್ರ ಮೊದಲು ಮೀಸಲು ಕ್ಷೇತ್ರವಾಗಿತ್ತು. ಬಳಿಕ ಸಾಮಾನ್ಯ ಕ್ಷೇತ್ರವಾಯಿತು. ಅಂತೆಯೇ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ 1983ರಲ್ಲಿ ಮೊದಲ ಬಾರಿಗೆ ಶಾಸಕರಾದರು .ಬಳಿಕ 1988ರಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 1992ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾದರು. 1994ರಲ್ಲಿ ವಿಧಾನಸಭಾ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. 2004ರಲ್ಲಿ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.ಹೀಗೆ ರಾಜಕೀಯ ಪ್ರವರ್ಧಮಾನಕ್ಕೆ ಬಿಎಸ್‌ವೈ ಬಂದರು.
ಮೂಲಗಳ ಪ್ರಕಾರ ಕೆ.ಎಸ್.ಈಶ್ವರಪ್ಪ, ಯಡಿಯೂರಪ್ಪರ ಬಲಗೈ ಬಂಟನಂತೆ ಇದ್ದರು. ಇನ್ನು ಈಶ್ವರಪ್ಪ ಶಾಸಕರಾಗುವಲ್ಲಿ ಅವರ ಬೆಳವಣಿಗೆಯಲ್ಲಿ ಯಡಿಯೂರಪ್ಪರ ಪಾಲುಬಹುತೇಕವೇ. ಮೊದಲ ಬಾರಿಗೆ ಶಿವಮೊಗ್ಗದಿಂದ ಈಶ್ವರಪ್ಪ ಸ್ಪರ್ಧಿಸಿ ಶಾಸಕರಾಗಿ ಗೆಲ್ಲುವಲ್ಲಿ ಯಡಿಯೂರಪ್ಪರ ಪಾತ್ರ ಮಹತ್ವದ್ದಾಗಿತ್ತು. ಕಾರಣ ಲಿಂಗಾಯತ ಮತ್ತು ಬ್ರಾಹ್ಮಣ ಮತಗಳು ಇಲ್ಲಿ ನಿರ್ಣಾಯಕ. ಲಿಂಗಾಯತರು ಯಡಿಯೂರಪ್ಪರ ಮಾತನ್ನು ತಪ್ಪುತ್ತಿರಲಿಲ್ಲ. ಅದರಂತೆ ಬ್ರಾಹ್ಮಣ ಮತಗಳು ಕೂಡ. ಹೀಗಾಗಿ ಈಶ್ವರಪ್ಪರ ಬೆಳವಣಿಗೆಯಲ್ಲಿ ಯಡಿಯೂರಪ್ಪರ ಪಾತ್ರವಿದೆ ಎನ್ನುತ್ತಾರೆ. ಇದಕ್ಕೆ ಉದಾಹರಣೆಯನ್ನು ನೋಡುವುದಾದರೆ, ಯಡಿಯೂರಪ್ಪ ಕೆಜೆಪಿ ಕಟ್ಟಿದ್ದಾಗ ಈಶ್ವರಪ್ಪ ಸೋತಿದ್ದು, ಈಶ್ವರಪ್ಪರ ಉಗ್ರ ಹಿಂದೂತ್ವವನ್ನು ನಾವು ಅಡ್ವಾಣಿಯ ಕಾರ್ಯಕ್ಕೆ ಹೋಲಿಸಿದರೆ, ವಾಜಪೇಯಿಯ ಮೃದು ಹಿಂದೂತ್ವವನ್ನು ಯಡಿಯೂರಪ್ಪಗೆ ಇಲ್ಲಿ ಹೋಲಿಸಬಹುದಾಗಿದೆ.
ಒಂದು ಹಂತದ ವರೆಗೆ ಈಶ್ವರಪ್ಪ ಲೀಡರ್ ಶೀಪ್‌ಗೆ ಬೆಳೆಯಲು ಈ ಉಗ್ರ ಹಿಂದೂತ್ವ ಅವರು ಬೆಳೆಯಲು ಸಾಧ್ಯವಾಯಿತು ಎನ್ನಬಹುದು. ಇನ್ನೊಂದು ಅವರದ್ದೇ ಬಿಜೆಪಿ ವಲಯದ ಆಪ್ತವಲಯದಲ್ಲಿ ಕೇಳಿ ಬರುವ ಮುಖ್ಯವಾದ ಮಾತು ಏನಪ್ಪಾ ಅಂದರೆ, ಗಣಿಹಗರಣದ ಆರೋಪ ಯಡಿಯೂರಪ್ಪ ಅವರ ಮೇಲೆ ಬಂದಾಗ ಇದೇ ಈಶ್ವರಪ್ಪರ ಸಹಕಾರವು ಪರೋಕ್ಷವಾಗಿ ವಿರೋಧಿಗಳಿಗೆ ಇತ್ತು ಎನ್ನುವುದು. ಅಷ್ಟರೊಳಗೆ ಶಿವಮೊಗ್ಗ ಜಿಲ್ಲೆಯನ್ನು ಯಡಿಯೂರಪ್ಪ ತಮ್ಮ ಹದ್ದುಬಸ್ತಿಗೆ ತೆಗೆದುಕೊಂಡಿದ್ದರು. ಇನ್ನು ಅವರ ಮಕ್ಕಳಾದ ಬಿ.ವೈ.ರಾಘವೇಂದ್ರ ಮತ್ತು ಬಿ.ವೈ.ವಿಜಯೇಂದ್ರರನ್ನು ರಾಜಕೀಯವಾಗಿ ಬೆಳೆಸಿದರು. ಆದರೆ ಈ ಅವಕಾಶ ಈಶ್ವರಪ್ಪಗೆ ತಮ್ಮ ಸುಪುತ್ರ ಕಾಂತೇಶ್‌ನನ್ನು ಬೆಳೆಸುವಲ್ಲಿ ಸಾಧ್ಯವಾಗಲಿಲ್ಲ. ಅಲ್ಲಿಂದ ಒಂದಲ್ಲ ಒಂದು ರೀತಿಯಲ್ಲಿ ಈಶ್ವರಪ್ಪರನ್ನು ಯಡಿಯೂರಪ್ಪ ಸೈಡ್ಲೈನ್ ಮಾಡುತ್ತಲೇ ಬಂದರು. ಇವರಿಬ್ಬರ ನಡುವೆ ಆಂತರಿಕ ಜಿದ್ದಾಜಿದ್ದಿ ನಡೆದೇ ಇತ್ತು. ಕುರುಬ ಮತಗಳ ಪ್ರಾಬಲ್ಯವಿದೆ ಎನ್ನುವುದನ್ನು ತೋರಿಸಲು ಪರ್ಯಾಯವಾಗಿ ಕೆ.ಎಸ್.ಈಶ್ವರಪ್ಪ “ರಾಯಣ್ಣ ಬ್ರಿಗೇಡ್ ಕಟ್ಟಿದ್ರು” ಆದರೆ, ಅದು ಠುಸ್ ಪಠಾಕಿ ಆಯಿತು. ಇದೂ ಈಶ್ವರಪ್ಪರನ್ನು ಯಡಿಯೂರಪ್ಪ ಇನ್ನಷ್ಟು ದೂರ ಮಾಡಲು ಕಾರಣವಾಯಿತು.
ಯಡಿಯೂರಪ್ಪ ಕಳೆದ ಬಾರಿ ಸಿಎಂ ಸ್ಥಾನದಿಂದ ಕೆಳಗಿಳಿಯುವಾಗ ಕೇಂದ್ರದ ವರಿಷ್ಠರಿಗೆ ಷರತ್ತುಗಳನ್ನು ವಿಧಿಸಿಯೇ ಕೆಳಗಿಳಿದರು. ಪರಿಣಾಮ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಹೀನಾಯವಾಗಿ ಸೋಲುವಂತಾಯಿತು. ಕಾಂಗ್ರೆಸ್ ನೀಡಿದ್ದ ಪ್ರಣಾಳಿಕೆಯ ಅಂಶಗಳು ಜನರನ್ನು ಒಂದೆಡೆ ಆಕರ್ಷಿಸಿದರೆ, ಬಿಜೆಪಿಯ ನಡೆಗಳೇ ಬಿಜೆಪಿಗೆ ಮುಳುವಾಗಿದ್ದು, ರಾಜಕೀಯ ತಜ್ಞರ ಅಭಿಪ್ರಾಯ ಅಂಬೋಣವಾದರೂ ನಿಜವೇ. ಆ ಷರತ್ತುಗಳಲ್ಲಿ ಈಶ್ವರಪ್ಪಗೆ ಟಿಕೇಟ್ ಕೊಡದಂತೆಯೂ ಇತ್ತು. ಶಿಕಾರಿಪುರದಿಂದ ಈಶ್ವರಪ್ಪ ಪುತ್ರ ಕಾಂತೇಶ್ಗೆ ಟಿಕೇಟ್ ಎನ್ನುವ ಚರ್ಚೆಗಳು ಏಳುತ್ತಿದ್ದಂತೆಯೇ ಬಿ.ವೈ.ವಿಜಯೇಂದ್ರಗೆ ಟಿಕೇಟ್ ಸಿಕ್ಕು ಜಯಭೇರಿಯೂ ಆಯಿತು. ಇನ್ನು ಎಂಪಿ ಚುನಾವಣೆ ಅಷ್ಟೊತ್ತಿಗೆ ನಿಮ್ಮ ಮಗ ಕಾಂತೇಶನಿಗೆ ಸ್ಥಾನ ನೀಡಲಾಗುವುದು ಎಂದು ವರಿಷ್ಠರು ನೀಡಿದ್ದ ಮಾತಿನಂತೆ ಈಶ್ವರಪ್ಪ ಟಿಕೇಟ್ ಕೇಳಲಿಲ್ಲ. ಗುತ್ತಿಗೆದಾರರ ಆರೋಪ ಆತ್ಮಹತ್ಯೆ ನಡೆದಾಗಲೂ ಈಶ್ವರಪ್ಪ ಪರ ಯಡಿಯೂರಪ್ಪ ನಿಲ್ಲಲಿಲ್ಲ. ಒಂದೊಂದೇ ಹಂತದಲ್ಲಿ ತಮಗೆಲ್ಲಿ ಸರಿಸಾಟಿಯಾಗಬಲ್ಲನು ಎಂಬ ಮುಂದಾಲೋಚನೆಯೋ ಅಥವಾ ರಾಜಕೀಯ ಜಿದ್ದಿಯೋ ಗೊತ್ತಿಲ್ಲ? ಯಡಿಯೂರಪ್ಪ ಒಂದೊಂದೇ ಮೆಟ್ಟಿಲಾಗಿ ಈಶ್ವರಪ್ಪರನ್ನು ಸೈಡ್ಲೈನ್ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಹಾವೇರಿ-ಗದಗ ಲೋಕಸಭಾ ಟಿಕೆಟ್ ಕಾಂತೇಶ್ಗೆ ಬಿಜೆಪಿ ನೀಡುತ್ತದೆ ಎಂಬ ಆಸೆಯಿಂದಲೇ ಚುನಾವಣೆಗೂ ಮುನ್ನ ಕಾಂತೇಶ್ ಹಾವೇರಿಯಲ್ಲಿ ನಾಲ್ಕೈದು ಸಲ ಅಡ್ಡಾಡಿದರೂ ಅಲ್ಲಿನ ಜನ ಕ್ಯಾರೇ ಎನ್ನಲಿಲ್ಲ. ಈ ಎಲ್ಲಾ ಲೆಕ್ಕಾಚಾರದಿಂದ ಜಿಲ್ಲೆಯವರೇ ಆದ ಮಾಜಿ ಸಿಎಂ ಶಿಗ್ಗಾಂ ಶಾಸಕ ಬಸವರಾಜ ಬೊಮ್ಮಾಯಿಗೆ ಟಿಕೇಟ್ ಸಿಕ್ಕಿದೆ. ಇದರಲ್ಲಿ ಯಡಿಯೂರಪ್ಪರದ್ದು ಕೈಯಿದೆ ಎಂದರೆ ತಪ್ಪಾಗಲಾರದು.
ನೋಡಿ, ಬದಲಾದ ರಾಜಕೀಯ ಪರಿಸ್ಥಿತಿಗಳು ದೋಸ್ತಿಗಳನ್ನು ದುಷ್ಮನಿಗಳನ್ನಾಗಿಯೂ ಮಾಡುತ್ತದೆ. ಇದು ರಾಜಕಾರಣ ಸ್ವಾಮಿ, ರಾಜಕಾರಣದಲ್ಲಿ ಯಾರೂ ಮಿತ್ರರೂ ಅಲ್ಲ, ಶತೃಗಳೂ ಅಲ್ಲ, ಎಲ್ಲವೂ ಲೆಕ್ಕಾಚಾರದ ರಾಜಕಾರಣ.
ಇದನ್ನು ನೋಡಿ : ಸುಳ್ಳು ಹೇಳುವ ಜ್ಯೋತಿಷ್ಯವನ್ನು ದಿಕ್ಕರಿಸಿವಿಜ್ಞಾನವನ್ನು ನಂಬಿ, ಬೆಳಸಿ – ಎಂಆರ್‌ಎನ್ ಮೂರ್ತಿ Janashakthi Media