ದೆಹಲಿ : ಶಾಸ್ತ್ರಿನಗರದ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಇಡೀ ಕಟ್ಟಡಕ್ಕೆ ಆವರಿಸಿಕೊಂಡ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳು, ದಂಪತಿ ಸೇರಿ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ ದುರ್ಘಟನೆ ಇಂದು (ಗುರುವಾರ) ಬೆಳಗ್ಗೆ ದೆಹಲಿಯ ಶಾಸ್ತ್ರಿ ನಗರ ಪ್ರದೇಶದಲ್ಲಿ ನಡೆದಿದೆ. ಉಳಿದವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಮನೋಜ್(30) ಮತ್ತು ಅವರ ಪತ್ನಿ ಸುಮನ್(28) ಎಂದು ಗುರುತಿಸಲಾಗಿದೆ, ಜೊತೆಗೆ ಐದು ಮತ್ತು ಮೂರು ವರ್ಷದ ಇಬ್ಬರು ಹೆಣ್ಣುಮಕ್ಕಳು ಮೃತಪಟ್ಟಿದ್ದಾರೆ. ಉಸಿರುಗಟ್ಟುವಿಕೆಯಿಂದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ನಮಗೆ ಆಸ್ಪತ್ರೆಯಿಂದ ಮಾಹಿತಿ ಸಿಕ್ಕಿತು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ದೆಹಲಿಯ ಎಮ್ಸ್ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ:ರೋಗಿಗಳ ಸ್ಥಳಾಂತರ
ಬೆಳ್ಳಂಬೆಳಗ್ಗೆ ಶಾಸ್ತ್ರಿ ನಗರ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಕರೆ ಬಂದಿತು. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಅಲ್ಲಿಗೆ ತೆರಳಿದೆ. ಪೊಲೀಸ್ ತಂಡ, ನಾಲ್ಕು ಅಗ್ನಿಶಾಮಕ ವಾಹನಗಳು, ಆಂಬ್ಯುಲೆನ್ಸ್ಗಳು ಮತ್ತು ಪಿಸಿಆರ್ ವ್ಯಾನ್ಗಳನ್ನು ಸ್ಥಳಕ್ಕೆ ರವಾನಿಸಲಾಯಿತು. ಕಟ್ಟಡದಲ್ಲಿ ಸಿಲುಕಿದ್ದ 9 ಮಂದಿಯನ್ನು ರಕ್ಷಿಸಲಾಯಿತು. ತೀವ್ರ ಉಸಿರಾಟ ತೊಂದರೆಯಿಂದ ನರಳುತ್ತಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅದರಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ಬಂದಿದ್ದಾಗಿ ಪೊಲೀಸರು ತಿಳಿಸಿದರು.
ಬೆಂಕಿ ಅವಘಡ ಸಂಭವಿಸಿದ ಕಟ್ಟಡವು ನಾಲ್ಕು ಮಹಡಿಗಳನ್ನು ಹೊಂದಿದ್ದು, ನೆಲ ಮಹಡಿಯಲ್ಲಿ ಕಾರ್ ಪಾರ್ಕಿಂಗ್ ಸೌಲಭ್ಯವಿದೆ. ಅಲ್ಲಿಂದಲೇ ಬೆಂಕಿ ಕಾಣಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಹೊಗೆ ಇಡೀ ಕಟ್ಟಡವನ್ನು ಆವರಿಸಿ ಅನಾಹುತಕ್ಕೆ ಕಾರಣವಾಗಿದೆ. ರಸ್ತೆ ಕಿರಿದಾಗಿದ್ದರೂ, ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಡಿಯೋ ನೋಡಿ : ದೆಹಲಿ V/S ಕೇಂದ್ರ : ಚುನಾಯಿತ ಸರ್ಕಾರದ ಮೇಲೆ ಕೇಂದ್ರದ ಸುಗ್ರೀವಾಜ್ಞೆ ಅಸ್ತ್ರ