(ಇಲ್ಲಿಯವರೆಗೆ…. ರಕ್ತದ ರಾಶಿಯಲ್ಲಿದ್ದ ತಪಗಲೂರು ಜನರನ್ನು ಈ ಘಟನೆ ಕಾಡತೊಡಗಿತು, ಊರ ತುಂಬೆಲ್ಲ ಹುತಾತ್ಮರ ಮೆರವಣಿಗೆ ಸಾಗಿದ್ದಾಗ ಮನೆಯಿಂದ ಯಾರು ಬರಲಿಲ್ಲ, ಹಲಗೆಯ ಸದ್ದು, ಘೊಷಣೆಗಳು ಮೊಳಗುತ್ತಲೇ ಇದ್ದವು…. ಹೀಗೆ ಸಾಗಿರುವಾಗ… ಮುಂದೆ ಓದಿ… ) ಗಾಯ
ರಾಜಣ್ಣ, ಮಲ್ಯಾ, ದೇವ್ಯಾ, ಚೂರಿ ಪರ್ಸ್ಯಾರ ಹೆಣಗಳ ಮೆರವಣಿಗೆ ಊರೆಲ್ಲ ಸುತ್ತಾಡಿದ ನಂತರ… ಸ್ಮಶಾನದ ಕಡೆ ಸಾಗಿತು… ಧಣಿಯ ಅಣ್ಣ… ಊರ ಜನ. ಶವ ಸಂಸ್ಕಾರದಲ್ಲಿ ಭಾಗಿಯಾಗಿದ್ದರು…
ಸಣ್ಯಾ… ಜೋರಾಗಿ ಹಲಗಿ ಬಾರಿಸುತ್ತಿದ್ದ…
ಹುಡುಗರು ಘೋಷಣೆ ಕೂಗುತ್ತಿದ್ದರು….
ಭರ್ಮವ್ವ, ದೇವವ್ವ ಹಾಗೂ ಹೆಣ್ಣು ಮಕ್ಕಳ ಆಕ್ರಂದನ ಇತರರ ಕಣ್ಣಲ್ಲಿ ನೀರು ತರಿಸಿತ್ತು…
ಕೆಂಚಾ… ಬಸ್ಯಾ… ಧಣಿಯ ಅಣ್ಣನ ಕಡೆ ಕೈ ಮಾಡಿ… ಹೆಂಗಾತು ನೋಡ್ರಿ….. ದೊಡ್ಡ ಧಣಿ… ತಪ್ಪ ಮಾಡದ ನಮ್ಮ ಅಪ್ಪ ಹೆಂಗ ಹೊಂಟಾನ ನೋಡ್ರಿ… ಎಂದು… ಎದೆ ಬಡಿದುಕೊಂಡು ಅಳತೊಡಗಿದರು…
ದೊಡ್ಡ ಧಣಿ, ಅವರಿಬ್ಬರ ಬಳಿ ಬಂದು ಸಮಾಧಾನ ಮಾಡುತ್ತಿರುವಾಗ ಇಡೀ ಊರೇ ನಿಬ್ಬೆರಗಾಗಿ ನೋಡುತ್ತಿತ್ತು…
ಅಣ್ಣನ ಗುಣ… ತಮ್ಮನಿಗಿಲ್ಲ, ತಮ್ಮಗ… ಬುದ್ದಿ ಹೇಳೋ ಧೈರ್ಯ ಅಣ್ಣಂಗಿಲ್ಲ ಎಂದು ಊರ ಮಂದಿ ಗುಸು ಗುಸು ಮಾತನಾಡುತ್ತಿದ್ದರು…
ಹಾರ್ನ್ ಮಾಡುತ್ತಿದ್ದ ವಾಹನದ ಸದ್ದು ಕೇಳ ತೊಡಗಿತು… ಯಾರಿರಬಹುದು… ಎಂದು ಊರ ಜನ ಶಬ್ದ ಬಂದ ಕಡೆ ತಿರುಗಿದರು… ಅರೇ ಡಿಸಿ ಸಾಹೇಬ್ರು!!!
ದೊಡ್ಡ ಧಣಿ!!! ಸಾಹೇಬ್ರು ಬಂದ್ರು ನೋಡ್ರಿ…
ಬರ್ರಿ ಸಾಹೇಬರ… ಎಂದು ದೊಡ್ಡ ಧಣಿ ಡಿಸಿ ಸಾಹೇಬರನ್ನ ಬರಮಾಡಿಕೊಂಡ…
ಡಿಸಿ ಸಾಹೇಬರು ಶವದ ಹತ್ತಿರ ಬಂದು ಮತ್ತೊಮ್ಮೆ ಅಂತಿಮ ದರ್ಶನ ಪಡೆದರು. ಜನರ ಕಡೆ ತಿರುಗಿ ಬಂದು ಬಳಗ ಎಲ್ಲಾ ಬಂದಾರ, ಬಂದಿದ್ರ ಮುಂದಿನ ಕಾರ್ಯ ಮಾಡ್ರಲ್ಲ ತಡ ಯಾಕೆ??? ಎಂದರು.
ಬಂದಾರ್ರಿ… ಎಲ್ಲಾರು ಬಂದಾರ… ಮೇಲಾಗಿ ಊರ ಮಂದಿನೂ ಬಂದಾರ್ರಿ… ಎಂದ ಸಣ್ಯಾ.
ಆಯ್ತು… ಹಾಗಿದ್ರೆ ಮುಂದಿನ ಕಾರ್ಯ ನಡಸ್ರಲ… ಎಂದರು ಡಿಸಿ ಸಾಹೇಬರು…
ಇದನ್ನೂ ಓದಿ : ಗಾಯ ಕಥಾ ಸರಣಿ | ಸಂಚಿಕೆ 21- ಲಾಠಿಯ ಏಟಿಗೆ ಹರಿದ ನೆತ್ತರು
ಕೆಂಚಾ, ಬಸ್ಯಾ ಮತ್ತು ರಾಜಪ್ಪಣ್ಣನ ಮಕ್ಕಳು… ನಾಲ್ವರನ್ನು ಮೂರು ಸುತ್ತು ಹಾಕಿ… ಜೋರಾಗಿ ಅಳಲಾರಂಭಿಸಿದರು. ಅಪ್ಪಂದಿರನ್ನು ನೆನಸಿಕೊಂಡು ಗೋಳಾಡುತ್ತಿದ್ದ ದೃಶ್ಯ ನೆರದವರ ಕಣ್ಣಲ್ಲಿಯೂ ನೀರು ತರಿಸಿತ್ತು…
ಡಿಸಿ ಸಾಹೇಬರು ಮತ್ತು ದೊಡ್ಡ ಧಣಿ ಒಂದೊಂದು ಹಿಡಿ ಮಣ್ಣು ಹಾಕಿದರು… ನಂತರ ಊರವರೆಲ್ಲ ಒಬ್ಬೊಬ್ಬರೆ ಮಣ್ಣು ಹಾಕಿ ಕಣ್ಣೀರು ಹಾಕಿದರು… ಜಾತಿ ದೌರ್ಜನ್ಯದ ವಿರುದ್ದ ಹೋರಾಡಿದ್ದ ರಾಜಣ್ಣ… ಮಲ್ಯಾ… ದೇವ್ಯಾ… ಚೂರಿಪರ್ಸ್ಯಾ… ಮಣ್ಣಲ್ಲಿ ಮಣ್ಣಾದರು!!!!. ಅವರ ಮುಖ ಮಣ್ಣಿನಲ್ಲಿ ಮರೆಯಾಗುವವರೆಗೂ… ಶ್ರೀಧರ…. ತದೇಕ ಚಿತ್ತದಿಂದ!!! ನೋಡುತ್ತಾ ನಿಂತಿದ್ದ…
ಕೆಂಚ, ಬಸ್ಯಾ, ಭರ್ಮವ್ವ, ದೇವವ್ವರ ಆಕ್ರಂದನ ಮಾತ್ರ ನಿಂತಿರಲಿಲ್ಲ. ಅಲ್ಲಿರುವ ಜನ ಎಷ್ಟೇ ಸಮಾಧಾನ ಮಾಡಿದರೂ… ಅನ್ಯಾಯದ ಸಾವಿಗೆ ಇಷ್ಟೇನಾ ಉತ್ತರ?? ಎಂಬ ಪ್ರಶ್ನೆ ಅವರನ್ನು ಕಾಡುತ್ತಿತ್ತು…
“ ನೋಡ್ರಿ ಮಣ್ಣಿಗೆ ಬಂದಿರೋ ಎಲ್ಲಾರು ಅಗಸಿಕಟ್ಟಿ ಹತ್ರ ಬರ್ರಿ ಮಾತೋಡೋದು ಐತಿ.. ಡಿಸಿ ಸಾಹೇಬ್ರು ಸಹ ಇರ್ತಾರ ಎಂದ ದೊಡ್ಡ ಧಣಿ… ಎಲ್ಲರೂ ಅಗಸಿ ಕಟ್ಟಿಯ ಹತ್ತಿರ ಧಾವಿಸಿ ಹೊರಟರು…
ದೊಡ್ಡ ಧಣಿ, ಡಿಸಿ ಸಾಹೇಬರು ಅಗಸಿಕಟ್ಟಿಯ ಮೇಲೆ ನಿಂತರು. ಅವರ ಸುತ್ತ ಜನರೆಲ್ಲ ಕುಳಿತುಕೊಂಡರು…
ಜನ ಬಂದಿದ್ದನ್ನು ಗಮನಿಸಿದ ಡಿಸಿ ಸಾಹೇಬರು… ದೊಡ್ಡ ಧಣಿ ಜನ ಎಲ್ಲ ಬಂದ್ರು, ಏನೋ ಮಾತಾಡಬೇಕು ಅಂದ್ರಿ, ಶುರು ಮಾಡಬಹುದಲ್ಲ , ನಂಗೂ ಟೈಮ್ ಆಯ್ತು ಮುಂದೆ ಬೇರೆ ಕೆಲಸಗಳಿವೆ ಎಂದರು ಡಿಸಿ ಸಾಹೇಬರು…
ಆತ್ರಿ!!! ಸಾಹೇಬರ… ಎಂದು ದೊಡ್ಡ ಧಣಿ ಅಗಸಿಕಟ್ಟಿಯಿಂದ ಕೆಳಗಿಳಿದು… ಸುತ್ತಲು ಕುಳಿತಿದ್ದ ಜನರ ನಡುವೆ ಕುಳಿತು ಕೊಂಡ…
ದೊಡ್ಡ ಧಣಿ… ನೀವು!!!! ನಿಮ್ಮ ಸಮಾನ ನಾವು ಕೊಂದ್ರೋದು ಅಂದ್ರ… ಅದು ಸರಿ ಕಾಣಗಿಂಲ್ಲರಿ… ಎಂದು ಭರ್ಮವ್ವ ಎದ್ದು ನಿಂತಳು… ಗಾಯ
ಇದನ್ನೂ ಓದಿ : ಗಾಯ ಕಥಾ ಸರಣಿ | ಸಂಚಿಕೆ 22| ಶೋಷಿತರ ದನಿಯಾದ ಹುತಾತ್ಮರ ಮೆರವಣಿಗೆ
ಕುಂತ್ಕೊ ಭರ್ಮವ್ವ… ಇದೇ ನಿಮ್ಮನ್ನ ಇಷ್ಟ ವರ್ಷ ಶೋಷಣೆ ಮಾಡಂಗ ಮಾಡೈತಿ… ಇನ್ನಾದ್ರು… ಬದಲಾಗಲಿ, ದೊಡ್ಡವರು… ಸಣ್ಣವರು… ಶ್ರೀಮಂತರು… ಬಡವರು… ಅನ್ನೋದು ಆ ಮಂದಿಗೆ ಕೊನೆ ಆಗ್ಲಿ (ಧಣಿ, ದಳಪತಿ, ಗೌಡ, ಶಾನಭೋಗ, ರಾಜಣ್ಣ, ಮಲ್ಯ, ದೇವ್ಯಾ, ಚೂರಿ ಪರ್ಸ್ಯಾ), ಕ್ರೌರ್ಯ ಹೆಂಗಿರ್ತೈತಿ…, ಹೆಂಗ… ನಷ್ಟ ಅಕ್ಕೈತಿ ಅನ್ನೋದನ್ನ ಈ ಮಂದಿ ನಮಗ ತಿಳಿಸಿ ಕೊಟ್ಟಾರ… ಇವರು ನಮಗಷ್ಟ ಅಲ್ಲ… ಇಡೀ ಜಗತ್ತಿಗೆ ಪಾಠ ಕಲಿಸ್ಯಾರ… ಈ ಅನಿಷ್ಟ ವ್ಯವಸ್ಥೆ ಶುರುವಾಗಿದ್ದು ನಮ್ಮಿಂದಾನ ಅದು ನಮ್ಮಿಂದನ ಕೊನೆ ಆಗಬೇಕು. ಆಗ ಜನ ನೆಮ್ದಿಯಿಂದ ಇರ್ತಾರ… ಹೀಗೆ ದೊಡ್ಡ ಧಣಿಯ ಮಾತನಾಡುತ್ತಿರುವಾಗ … ಜನರ ಕಣ್ಣಲ್ಲಿ ನೀರೂರಿತ್ತು. ಕೆಲವರು ಗದ್ದದ ಮೇಲೆ ಕೈ ಇಟ್ಟುಕೊಂಡು ಮಾತುಗಳನ್ನು ಕೇಳುತ್ತಿದ್ದರು…
ಧಣಿಯ ಮಾತುಗಳು ಮುಂದುವರೆದಿದ್ದವು… ಕೆಂಚ, ಬಸ್ಯಾಗ ಎಲ್ಲಾ ಅಧಿಕಾರ ಇತ್ತು ಹಾಗಾಗಿ ತೊಗೊಂಡಿದ್ರು, ನನ್ನ ತಮ್ಮ ಚೂರು ಯೋಚ್ನಿ ಮಾಡಿದ್ರ ಇವತ್ತ ಇಂತಹ ಅನಾಹುತ ಅಕ್ಕಿರಲಿಲ್ಲ,, ಅವನಿಗೂ ಗೊತ್ತಿತ್ತು ಇದು ಅಪರಾಧ ಅಂತ.. ಆದ್ರೆ ಒಣ ಪ್ರತಿಷ್ಠೆ ಇವರನ್ನ ಸುಮ್ನೆ ಬಿಡಲಿಲ್ಲ… ಪ್ರತಿಷ್ಠೆಯ ಕೈಗೆ ಬುದ್ದಿಕೊಟ್ಟು ಅವರೂ… ಜೈಲುಪಾಲಾಗಿ… ಇವರನ್ನೂ ಮಣ್ಣ ಪಾಲು ಮಾಡಿದ್ರು… ಹಾಗಾಗಿ ಇಂತಹ ತಪ್ಪು ಮತ್ತ ಆಗಬಾರ್ದು.. ಅದಕ್ಕ ಈ ಬಹಿಷ್ಕಾರ ಅನ್ನೋದು ನಾಶ ಆಗಬೇಕು… ಜಾತಿ, ಕುಲ, ಮೇಲು ಎಂಬುದೆಲ್ಲ ಇರಬಾರ್ದು… ಊರು-ಕೇರಿ ಅಂತಾ ಇನ್ಮುಂದ ಪ್ರತ್ಯೇಕ ಇರೋದಿಲ್ಲ. ನಾವೆಲ್ಲ ಒಂದಾಗಿ ಇರ್ತೀವಿ… ಇದು ಊರು, ತಪಗಲೂರು ಅಷ್ಟೇ… ತಮ್ಮ ಮಾಡಿದ ತಪ್ಪಿಗೆ , ಅವ ಶಿಕ್ಷೆ ಅನುಭವಿಸಕತ್ತಾನ… ಆದ್ರ… ಅದು ಸಾಕಾಗೋದಿಲ್ಲ… ಇನ್ಮುಂದ… ಊರು ಶಾಂತವಾಗಿರ್ಬೇಕು. ನೆಮ್ಮದಿಯಿಂದ ಇರಬೇಕು. ಎಲ್ಲಾ ಜನಾನು ಅಣ್ಣ ತಮ್ಮಂದಿರ ತರ ಬಾಳಬೇಕು… ಎಂದು… ದೊಡ್ಡ ಧಣಿ ಎದ್ದು ನಿಂತು ಕೈ ಮುಗಿದಾಗ ಇಡೀ ವಾತಾವರಣ ಸ್ಥಬ್ದವಾಗಿತ್ತು. ಗಾಯ
ದೊಡ್ಡ ಧಣಿಯ ಮಾತುಕೇಳಿ ಜನ ಮೂಕವಿಸ್ಮಿತರಾಗಿದ್ದರು… ನಾವು ಕಾಣುತ್ತಿರುವುದು ಕನಸಾ ನನಸಾ ಎಂದು ಪಕ್ಕದಲ್ಲಿ ಕುಳಿತಿದ್ದವರನ್ನು ಚಿವುಟಿ ನೋಡಿ ಕೊಳ್ಳುತ್ತಿದ್ದರು… ಡಿಸಿ ಸಾಹೇಬರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದ್ದರು… ಊರ ಜನರೆಲ್ಲ ಚಪ್ಪಾಳೆ ತಟ್ಟಿ ಕೇಕೆ ಹಾಕಿ… ಶಿಳ್ಳೆ ಹೊಡೆದು ಸಂಭ್ರಮಿಸಿದರು…
ಡಿಸಿ ಸಾಹೇಬರು ದೊಡ್ಡ ಧಣಿಯ ಕಡೆ ತಿರುಗಿ ಕೈ ಮುಗಿದು… ಒಳ್ಳೆಯ ನಿರ್ಧಾರ ಸರ್… ಯಾರು ಶೋಷಣೆ ಮಾಡಿದ್ರೋ… ಅವರೆ ಮುಲಾಮು ಕೊಡಬೇಕು… ಆಗ ದೇಶ ನೆಮ್ಮದಿ ಆಗಿರುತ್ತೆ.. ನಿಮ್ಮ ಈ ನಿರ್ಧಾರ ಇಡೀ ದೇಶಕ್ಕೆ ಮಾದರಿ, ಎಲ್ಲಾ ಊರಿನವರು ಅನುಸರಿಸಬೇಕಾದ ದಾರಿ ಸರ್… ಎಂದು ದೊಡ್ಡ ಧಣಿಯನ್ನು ಡಿಸಿ ಸಾಹೇಬರು ತಬ್ಬಿಕೊಂಡರು…
ಜನರೆಲ್ಲ ಜೋರಾಗಿ ಕೇಕೆ ಹಾಕಿದರು….
ಇನ್ನೇನು ಸಭೆ ಮುಗಿಸೋಣ, ಎಲ್ಲರೂ ನೆಮ್ಮದಿಯಿಂದ ನಿದ್ದಿ ಮಾಡ್ರಿ… ಈ ಗಾಯ ಅಷ್ಟು ಸುಲಭವಾಗಿ ಮಾಯಂಗಿಲ್ಲ… ಹಾಗಾಗಿ ಈ ಊರು ಮುಳುಗಡಿ ಆಗೋ ವರೆಗೂ ಈ ನಾಲ್ವರ ಸತ್ತ ದಿನಾನ… ಹುತಾತ್ಮ ದಿನ ಎಂದು ಆಚರಿಸೋಣ ಎಂದು ದೊಡ್ಡ ಧಣಿ ಹೇಳಿ ಮನೆಯತ್ತ ಹೊರಟ…
ಜನರೆಲ್ಲ ತಬ್ಬಿಕೊಂಡು ಖುಷಿ ಪಡುತ್ತಿದ್ದರು… ಇತ್ತ ಶ್ರೀಧರ ಮತ್ತು ನಾಗ್ಯಾ ತಬ್ಬಿಕೊಂಡು, ಹೆಗಲ ಮೇಲೆ ಕೈ ಹಾಕಿಕೊಂಡು ಖುಷಿ ಪಡುತ್ತಿದ್ದರು.. ಜನರೆಲ್ಲ ಇವರಿಬ್ಬರನ್ನು ಎತ್ತಿ ಇನ್ನಷ್ಟು ಸಂಭ್ರಮ ಪಟ್ಟರು…
ಕೇಕೆಯ ಸದ್ದು, ಹಲೆಗೆಯ ಸದ್ದು, ಶಿಳ್ಳೆಗಳ ಮೂಲಕ ತಪಗಲೂರು ಹೊಸ ಹೆಜ್ಜೆಯತ್ತ ಸಾಗಿತು……
(ಮುಂದುವರೆಯುವುದು……………)
ವಿಡಿಯೋ ನೋಡಿ : ಮೋದಿ ದೊಡ್ಡ ನಟ| ರಾಮ ಮಂದಿರ ಕಲ್ಲಿನಲ್ಲಿ ಕಟ್ಟಿದ್ದೀರಿ| ಸಂಗ್ರಹಿಸಿದ ಇಟ್ಟಿಗೆ ಏನಾಗಿದೆ ? ಪ್ರಕಾಶ್ ರೈ ಗಾಯ