ಪ್ರೊ. ಪ್ರಭಾತ್ ಪಟ್ನಾಯಕ್, ಅನು:ಕೆ.ಎಂ.ನಾಗರಾಜ್
ನಿಜಕ್ಕೂ 2024ರ ಬಜೆಟ್ ನಿರುದ್ಯೋಗವನ್ನು ಮತ್ತು ದುಡಿಯುವ ಜನರ ಸಂಕಷ್ಟಗಳನ್ನು ಉಲ್ಬಣಗೊಳಿಸುತ್ತದೆ ಮತ್ತು ದೇಶದಲ್ಲಿರುವ ವಿಕೃತ ಅಸಮಾನತೆಯನ್ನು ಹೆಚ್ಚಿಸುತ್ತದೆ ಎಂಬ ಅಭಿಪ್ರಾಯವನ್ನು ಸರ್ಕಾರ ಮತ್ತು ಅದರ ಮಾಧ್ಯಮ ವಂದಿ–ಮಾಗಧರು ಸುತರಾಂ ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ, ದೇಶದಲ್ಲಿ ಈ ಸಮಸ್ಯೆಗಳಿವೆ ಮತ್ತು ಅವು ದೇಶವನ್ನು ಕಾಡುತ್ತಿವೆ ಎಂಬುದನ್ನೇ “ನಾಯಕ” ಅಸಲಿಗೆ ಒಪ್ಪಿಕೊಳ್ಳುವುದಿಲ್ಲ. ಇದನ್ನು ಹಣಕಾಸು ಸಚಿವರು ಫೆಬ್ರವರಿ 1ರಂದು ಸಂಸತ್ತಿನಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ ಕಸರತ್ತು ಪೂರ್ಣವಾಗಿ ದೃಢಪಡಿಸುತ್ತದೆ ಎಂಬುದನ್ನು ಗಮನಿಸಬಹುದು. ಮೋದಿಯವರ ಪ್ರತಿಪಾದನೆಯ “ಸತ್ಯ“ದಿಂದ ಬಜೆಟ್ ಪೇಚಿಗೆ ಒಳಗಾಗದೆ ಜನರ ನೈಜ ಸ್ಥಿತಿ–ಗತಿಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿಯನ್ನು ಒಂದು ವೇಳೆ ತೋರಿಸಿದ್ದರೆ, ಬಜೆಟ್ನ ಕಾರ್ಯತಂತ್ರದಲ್ಲಿ ಜನರ ಜೀವನ ಮಟ್ಟವನ್ನು ಸುಧಾರಿಸುವ ಎರಡು ಸಂಭಾವ್ಯ ಮಾರ್ಗಗಳಲ್ಲಿ ಯಾವುದಾದರೂ ಒಂದು ಇರುತ್ತಿತ್ತು. ಮೋದಿ
ಮೋದಿ ಏನನ್ನು ಹೇಳುತ್ತಾರೊ ಅದೇ ಸತ್ಯ ಎಂದು ಬಿಜೆಪಿ ಸರ್ಕಾರ ಭಾವಿಸುತ್ತದೆ. ಸಾಕ್ಷಾಧಾರವು ಸೂಚಿಸುವ ಸಂಗತಿಯು ಒಂದು ವೇಳೆ ಬೇರೆಯೇ ಇದ್ದರೆ, ಆ ಸಾಕ್ಷಾಧಾರವೇ ತಪ್ಪಾಗಿರಬೇಕು ಎಂಬ ನಿಲುವನ್ನು ತಳೆಯುತ್ತದೆ. ಆ ಸಾಕ್ಷಾಧಾರವು ಜನರ ಗಮನಕ್ಕೆ ಬಾರದಂತೆ ನೋಡಿಕೊಳ್ಳಲಾಗುತ್ತದೆ ಮಾತ್ರವಲ್ಲ ಅದನ್ನು ಅಡಗಿಸಲಾಗುತ್ತದೆ. ತಮ್ಮ ಸರ್ಕಾರ ಅಧಿಕಾರ ನಡೆಸಿದ ಕಳೆದ ಒಂದು ದಶಕದ ಕಾಲಾವಧಿಯಲ್ಲಿ ಭಾರತವು ಹಿಂದೆAದೂ ಇಲ್ಲದಷ್ಟು ಸಖತ್ತಾಗಿತ್ತು ಎಂದು ಮೋದಿ ಹೇಳುತ್ತಾರೆ. ಅಧಿಕೃತ ಅಂಕಿಅಂಶಗಳು ಅವರ ಅಭಿಪ್ರಾಯಕ್ಕೆ ವಿರುದ್ಧವಾಗಿರುವುದರಿಂದ, ಆ ಅಂಕಿಅಂಶಗಳಲ್ಲೇ ಏನೋ ದೋಷವಿದೆ, ಆದ್ದರಿಂದ, ದೇಶದ ಸಂಖ್ಯಾಶಾಸ್ತ್ರೀಯ ವ್ಯವಸ್ಥೆಯನ್ನು ಬದಲಾಯಿಸುವ ಇರಾದೆಯಿಂದ ಜಾಗತಿಕ ದಕ್ಷಿಣದ ಸಂಖ್ಯಾಶಾಸ್ತ್ರೀಯ ವ್ಯವಸ್ಥೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಮತ್ತು ಕಾಳಜಿಪೂರ್ವಕ ಪ್ರಯತ್ನಗಳ ಮೂಲಕ ನಿರ್ಮಿಸಲಾಗಿದ್ದ ಸಂಸ್ಥೆಯೊAದನ್ನು ಈ ಸರ್ಕಾರವು ನೆಲಸಮ ಮಾಡುತ್ತಿದೆ. ಗ್ರಾಹಕ ವೆಚ್ಚಗಳ ಅಂಕಿ ಅಂಶಗಳನ್ನು ಸಂಗ್ರಹಿಸುವ ವಿಷಯದಲ್ಲಿ, ಪಿ ಸಿ ಮಹಲನೋಬಿಸ್ ಅವರು ಆರಂಭಿಸಿದ ರಾಷ್ಟ್ರೀಯ ಮಾದರಿ ಸಮೀಕ್ಷೆಯನ್ನು ಕೈಬಿಡಲಾಗಿದೆ. ಏಕೆಂದರೆ, 2017-18ರ ಸಮೀಕ್ಷೆಯು, 2011-12ರ ಸಮೀಕ್ಷೆಗೆ ಹೋಲಿಸಿದರೆ, ಎಲ್ಲ ಸರಕು-ಸೇವೆಗಳ ಗ್ರಾಮೀಣ ತಲಾ ಬಳಕೆಯು ಒಂದು ನಿಜ ಮತ್ತು ಹಾನಿಕಾರಕ ಮಟ್ಟದಲ್ಲಿ ಕುಸಿತವಾಗಿದೆ ಎಂಬ ಚಿತ್ರಣವನ್ನು ತೋರಿಸಿತು (ಆಹಾರದ ಮೇಲಿನ ನಿಜ ತಲಾ ವೆಚ್ಚವು ಬಹಳ ವರ್ಷಗಳಿಂದಲೂ ಇಳಿಕೆಯಾಗುತ್ತಲೇ ಬಂದಿದೆ). ಅಂತೆಯೇ, ಸ್ವಾತಂತ್ರ್ಯ ಪೂರ್ವದಿಂದಲೂ ದೇಶದಲ್ಲಿ ದಶಕಗಳಿಗೊಮ್ಮೆ ನಡೆಯುತ್ತಾ ಬಂದಿದ್ದ ಜನಗಣತಿಯನ್ನು ಅದು ಮೋದಿಯವರ ಸಾಧನೆಗಳ ಪೊಳ್ಳುತನವನ್ನು ಬಹಿರಂಗಪಡಿಸುತ್ತದೆ ಎಂಬ ಕಾರಣದಿಂದ ಕೈಬಿಡಲಾಗಿದೆ. ಅದೇ ರೀತಿಯಲ್ಲಿ, ಪ್ರಸ್ತುತ ನಿರುದ್ಯೋಗ ಬಿಕ್ಕಟ್ಟನ್ನು ಮರೆಮಾಚುವ ಒಂದು ಲಜ್ಜೆಗೆಟ್ಟ ಪ್ರಯತ್ನವಾಗಿ ವೇತನವಿಲ್ಲದ ಕೆಲಸವನ್ನು ಉದ್ಯೋಗವೆಂದು ಪರಿಗಣಿಸಬಾರದು ಎಂಬ ಐಎಲ್ಓದ ಮೂಲಭೂತ ವ್ಯಾಖ್ಯಾನವನ್ನು ಕೈಬಿಡಲಾಗಿದೆ.
ವೇತನವಿಲ್ಲದ ಕೆಲಸವನ್ನು ಬಿಡಿ, ಹಣ ಪಾವತಿಸುವ ಎಲ್ಲ ಕೆಲಸಗಳನ್ನೂ, ವಾಸ್ತವವಾಗಿ, ಉದ್ಯೋಗವೆಂದು ಪರಿಗಣಿಸಬಾರದು. 1930ರ ದಶಕದ ಮಹಾ ಆರ್ಥಿಕ ಕುಸಿತದ ಸಮಯದಲ್ಲಿ, ಬ್ರಿಟನ್ನಲ್ಲಿ ಅನೇಕ ನಿರುದ್ಯೋಗಿಗಳು ರಸ್ತೆ ಬದಿಯಲ್ಲಿ ಬೂಟ್ಪಾಲಿಷ್ ಮಾಡಿದರು. ನಿಸ್ಸಂಶಯವಾಗಿ ಅವರು ಗ್ರಾಹಕರಿಂದ ಹಣ ಪಡೆಯದೆ ಬೂಟುಗಳನ್ನು ಫಳ ಫಳ ಹೊಳೆಯುವಂತೆ ಉಜ್ಜುತ್ತಿರಲಿಲ್ಲ. ಅವರನ್ನು ಒಂದು ವೇಳೆ ಉದ್ಯೋಗಿಗಳು ಎಂದು ಪರಿಗಣಿಸಿದರೆ, ಅಂಥಹ ಒಂದು ಅಭೂತಪೂರ್ವ ಬಿಕ್ಕಟ್ಟಿನ ಅವಧಿಯಲ್ಲೂ ನಿರುದ್ಯೋಗದ ಪ್ರಮಾಣವು ತೀರಾ ಕನಿಷ್ಠವಾಗಿ ಕಾಣುತ್ತಿತ್ತು. ಆದ್ದರಿಂದ, ಇಂಥಹ ಎಲ್ಲ ಪ್ರಕರಣಗಳನ್ನು ಎಣಿಕೆ ಮಾಡಲು “ವೇಷಾಂತರಿ ನಿರುದ್ಯೋಗ” (disguised unemployment)ಎಂಬ ಪದವನ್ನು ರೂಪಿಸಲಾಯಿತು. ಆದರೆ ಅದು ನಡೆದದ್ದು ಈ ಕ್ರಮವನ್ನು ತನ್ನ ನಿರುದ್ಯೋಗದ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸುವ ಸಮಾಜದಲ್ಲಿ. ಆದರೆ, ಇದನ್ನು ಸಮಕಾಲೀನ ಭಾರತದಲ್ಲಿ ನಿರೀಕ್ಷಿಸಲಾಗದು.
ಇದನ್ನೂ ಓದಿ : ಜಿಡಿಪಿ ಇಬ್ಬಗೆಯ ಸಮಾಜವನ್ನು ಮರೆಮಾಚುವ ಸಾಧನ
ಅದೇ ಹಾಡು
ಮೋದಿಯವರ ಸ್ವಯಂ ವೈಭವೀಕರಣದ ಘೋಷಣೆಗಳನ್ನು ಸತ್ಯವೆಂದು ಭಾವಿಸಿದರೆ, ಅವರ ಸರ್ಕಾರವು ಈಗ ಮಂಡಿಸಿರುವ ಬಜೆಟ್, ಹಿಂದೆ ಹಾಡಿದ ಅದೇ ಹಾಡನ್ನು ಮತ್ತೊಮ್ಮೆ ಹಾಡುವ ಕಸರತ್ತಾಗಿ ಕಾಣುತ್ತದೆ. ಅದರಲ್ಲಿ ಆಶ್ಚರ್ಯವೇನಿಲ್ಲ. ಆದರೆ, ನಿಜಕ್ಕೂ ಈ ಬಜೆಟ್ ನಿರುದ್ಯೋಗವನ್ನು ಮತ್ತು ದುಡಿಯುವ ಜನರ ಸಂಕಷ್ಟಗಳನ್ನು ಉಲ್ಬಣಗೊಳಿಸುತ್ತದೆ ಮತ್ತು ದೇಶದಲ್ಲಿರುವ ವಿಕೃತ ಅಸಮಾನತೆಯನ್ನು ಹೆಚ್ಚಿಸುತ್ತದೆ ಎಂಬ ಅಭಿಪ್ರಾಯವನ್ನು ಸರ್ಕಾರ ಮತ್ತು ಸರಕಾರಕ್ಕೆ ಜಯಕಾರ ಕೂಗಲು ಮಾಧ್ಯಮಗಳಲ್ಲಿ ನಾಯಕತ್ವ ವಹಿಸುವವರು ಸುತರಾಂ ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ, ದೇಶದಲ್ಲಿ ಈ ಸಮಸ್ಯೆಗಳಿವೆ ಮತ್ತು ಅವು ದೇಶವನ್ನು ಕಾಡುತ್ತಿವೆ ಎಂಬುದನ್ನೇ “ನಾಯಕ” ಅಸಲಿಗೆ ಒಪ್ಪಿಕೊಳ್ಳುವುದಿಲ್ಲ. ಇದನ್ನು ಹಣಕಾಸು ಸಚಿವರು ಫೆಬ್ರವರಿ 1ರಂದು ಸಂಸತ್ತಿನಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ ಕಸರತ್ತು ಪೂರ್ಣವಾಗಿ ದೃಢಪಡಿಸುತ್ತದೆ ಎಂಬುದನ್ನು ಗಮನಿಸಬಹುದು.
ಹಣಕಾಸು ಸಚಿವರ ಭಾಷಣವನ್ನು ಗಮನಿಸಿ. ದೇಶದಲ್ಲಿ ಸರಾಸರಿ ನಿಜ ವರಮಾನವು ಕಳೆದ ದಶಕದಲ್ಲಿ ಶೇ. 50ರಷ್ಟು ಹೆಚ್ಚಿದೆ ಎಂಬ ಒಂದು ವಿಲಕ್ಷಣವಾದ ಘೋಷಣೆಯನ್ನು ಅವರು ಮಾಡಿದ್ದಾರೆ. ಆದರೆ, ಈ ಹೇಳಿಕೆಯು ತಲಾ ವರಮಾನದ ಹೆಚ್ಚಳವನ್ನು ಮಾತ್ರ ಉಲ್ಲೇಖಿಸುತ್ತದೆ, ಬಹುಪಾಲು ಜನರ ವರಮಾನದ ಹೆಚ್ಚಳವನ್ನಲ್ಲ. ತಲಾ ವರಮಾನದ ಹೆಚ್ಚಳವನ್ನೇ ದೇಶದ ಆರ್ಥಿಕ ಪುರೋಭಿವೃದ್ಧಿಯ ಒಂದು ಪುರಾವೆಯಾಗಿ ಉಲ್ಲೇಖಿಸುವುದು ಅಪ್ರಾಮಾಣಿಕತೆಯಾಗುತ್ತದೆ.
2011-12 ಮತ್ತು 2017-18ರ ನಡುವೆ ದೇಶದಲ್ಲಿ, ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ ಪೌಷ್ಟಿಕಾಂಶದ ಬಡತನ ಹೆಚ್ಚಿದೆ ಎಂಬುದು ಸಂದೇಹಪಡಲಾಗದ ಒಂದು ಸಂಗತಿ: ಪ್ರತಿ ವ್ಯಕ್ತಿ ಪ್ರತಿ ದಿನ 2200 ಕ್ಯಾಲೊರಿಗಳ ಆಹಾರದ ಸೇವನೆ (ಈ ಪ್ರಮಾಣವನ್ನು ಯೋಜನಾ ಆಯೋಗವು ಬಡತನವನ್ನು ವ್ಯಾಖ್ಯಾನಿಸುವ “ಮಾನದಂಡ”ವಾಗಿ ಬಳಸುತ್ತಿತ್ತು) ಸಾಧ್ಯವಾಗದ ಗ್ರಾಮೀಣ ಜನರ ಸಂಖ್ಯೆಯು ಅಂದಾಜು ಶೇ. 68ರಿಂದ ಶೇ. 80ಕ್ಕೆ ಏರಿತು! ಹಾಗಾಗಿ ಈ ಅವಧಿಯಲ್ಲಿ ದೇಶದ ಬಹುಪಾಲು ಜನರ ಸ್ಥಿತಿ-ಗತಿ ಉತ್ತಮವಾಗಿತ್ತು ಎಂದು ಹೇಳಲಾಗದು. ಆದ್ದರಿಂದ, ವಿಷಯಕ್ಕೆ ಬರುವುದಾದರೆ: ಅಂದಿನಿಂದ ಜನರ ಸ್ಥಿತಿ-ಗತಿಯ ಬಗ್ಗೆ ಆಗುತ್ತಿರುವುದಾದರೂ ಏನು?
ಜೀವನ ಪರಿಸ್ಥಿತಿಗಳು ಹದಗೆಟ್ಟಿವೆ
ಈಗಾಗಲೇ ಹೇಳಿದಂತೆ, ಇನ್ನು ಮುಂದೆ, ಗ್ರಾಹಕ ವೆಚ್ಚಗಳ ರಾಷ್ಟ್ರೀಯ ಮಾದರಿ ಸಮೀಕ್ಷೆಗಳು (NSS) ನೆಡೆಯುವುದಿಲ್ಲ. ಅಂದರೆ, ಬಡತನದ ವ್ಯಾಪಕತೆಗೆ ಸಂಬಂಧಿಸಿದ ದತ್ತಾಂಶಗಳು ಲಭಿಸುವ ಮೂಲವನ್ನೇ ನಾಶಪಡಿಸಲಾಗುವುದು. ಆದಾಗ್ಯೂ, ನಾವು ಅವಲಂಬಿಸಬಹುದಾದ ದತ್ತಾಂಶಗಳು ಲಭಿಸುವ ಕೆಲವು ಮೂಲಗಳಿವೆ. ಅನೇಕರು ಈಗಾಗಲೇ ಬಳಸುತ್ತಿರುವ ದತ್ತಾಂಶವನ್ನು ಒದಗಿಸುವ ಪುರಾವೆಯ ಎರಡು ತುಣುಕುಗಳಿವೆ. ಮೊದಲನೆಯದು, ಕಾರ್ಮಿಕ ಪಡೆಯ ಆವರ್ತಕ ಸಮೀಕ್ಷೆ (Periodic Labour Force Survey). ಕಳೆದ ಐದು ವರ್ಷಗಳಲ್ಲಿ ಗ್ರಾಮೀಣ ನಿಜ ವೇತನಗಳು, ಕೃಷಿ ಚಟುವಟಿಕೆಗಳಲ್ಲಿ ಅಥವಾ ಕೃಷಿಯೇತರ ಚಟುವಟಿಕೆಗಳಲ್ಲಿ ನಕಾರಾತ್ಮಕ ಬೆಳವಣಿಗೆಯನ್ನು ತೋರಿಸಿವೆ. ನಗರ ನಿಜ ವೇತನಗಳ ವಿಷಯದಲ್ಲೂ ನಕಾರಾತ್ಮಕ ಬೆಳವಣಿಗೆ ಇದೆ ಎಂಬ ಸೂಚನೆಗಳಿವೆ. ವಾಸ್ತವವಾಗಿ, ಇತ್ತೀಚಿನ ಕಾರ್ಮಿಕ ಪಡೆಯ ಆವರ್ತಕ ಸಮೀಕ್ಷೆಯು ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ಒಟ್ಟಾರೆಯಾಗಿ ದೇಶದ ಸರಾಸರಿ ನಿಯತ ಮಾಸಿಕ ನಿಜ ವೇತನವು 2017-18 ಮತ್ತು 2022-23ರ ನಡುವೆ ಶೇ. 20ರಷ್ಟು ಕುಸಿದಿದೆ ಎಂಬುದನ್ನು ತೋರಿಸುತ್ತದೆ! ಆದ್ದರಿಂದ, 2017-18ರಿಂದ ನಿಜ ವೇತನ ಕುಸಿದಿರುವ ಬಗ್ಗೆ ಅನುಮಾನವೇ ಇಲ್ಲ.
ಎರಡನೆಯದು, ಉದ್ಯೋಗದ ಪರಿಸ್ಥಿತಿ. ನಿರುದ್ಯೋಗದ ಪರಿಸ್ಥಿತಿಯು ಸ್ವಾತಂತ್ರ್ಯಾನಂತರದ ಯಾವುದೇ ಸಮಯದಲ್ಲಿ ಇದ್ದುದಕ್ಕಿಂತಲೂ ಈಗ ಹೆಚ್ಚು ಗಂಭೀರವಾಗಿದೆ. ಸಂಸ್ಥೆಯ ದತ್ತಾಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಉದ್ಯೋಗಗಳ ಒಟ್ಟು ಸಂಖ್ಯೆಯು ಯಾವುದೇ ಹೆಚ್ಚಳವನ್ನು ದಾಖಲಿಸಿಲ್ಲ. ಈ ಎರಡೂ ಅಂಶಗಳನ್ನು, ಅಂದರೆ, ಕಾರ್ಮಿಕರ ನಿಜ ವೇತನದ ಕುಸಿತ ಮತ್ತು ಏರಿಕೆ ಕಾಣದ ಉದ್ಯೋಗಳ ಸಂಖ್ಯೆ, ಈ ಎರಡನ್ನು ಒಟ್ಟಿಗಿಟ್ಟು ನೋಡಿದಾಗ, ದುಡಿಯುವ ಬಹು ದೊಡ್ಡ ಸಂಖ್ಯೆಯ ಜನರ ತಲಾ ನಿಜ ವರಮಾನವು ವಾಸ್ತವವಾಗಿ ಕುಸಿದಿರಲೇಬೇಕು ಎಂಬುದು ಸ್ಪಷ್ಟವಾಗುತ್ತದೆ.
ರೈತರ ಮತ್ತು ಕಾರ್ಮಿಕರ ನಿಜ ತಲಾ ವರಮಾನಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುವುದಿಲ್ಲ. ಏಕೆಂದರೆ, ರೈತರ ವರಮಾನ ಹೆಚ್ಚಿದರೆ ಅದು ಕಾರ್ಮಿಕರ ಮೇಲಿನ ಬೇಡಿಕೆಯನ್ನು ಹೆಚ್ಚಿಸುತ್ತದೆ. ಅದರಿಂದಾಗಿ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಮತ್ತು ಕಾರ್ಮಿಕರಿಗೆ ಹೆಚ್ಚಿನ ಮಟ್ಟದ ನಿಜ ವೇತನವೂ ದೊರೆಯುತ್ತದೆ. ಆದ್ದರಿಂದ, ಈ ಎಲ್ಲ ವಿವರಗಳಿಂದ ವ್ಯಕ್ತವಾಗುವ ಅಂಶವೆಂದರೆ, ಕೃಷಿ ಕಾರ್ಮಿಕರು ಮತ್ತು ಕೃಷಿಯೇತರ ಕಾರ್ಮಿಕರು ಮತ್ತು ರೈತರು ಮತ್ತು ಕಿರು ಉತ್ಪಾದಕರನ್ನು ಒಳಗೊಂಡ ದುಡಿಯುವವರ ತಲಾ ನಿಜ ವರಮಾನವು ಕಳೆದ ಐದು ವರ್ಷಗಳಲ್ಲಿ ಕುಸಿದಿರಲೇಬೇಕು ಎಂಬುದು. ಬಹುಪಾಲು ಜನರು ದುಡಿಯುವವರೇ ಆಗಿರುವ ದೇಶದ ಅತಿ ದೊಡ್ಡ ಜನ ವಿಭಾಗವು ದುಡಿಯುವವರಿಂದಲೇ ಕೂಡಿರುವುದರಿಂದ, ಕಳೆದ ಐದು ವರ್ಷಗಳಲ್ಲಿ ದೇಶದ ಅತಿ ದೊಡ್ಡ ಸಂಖ್ಯೆಯ ಜನರ ಸ್ಥಿತಿ-ಗತಿಗಳು ಹದಗೆಟ್ಟಿವೆ ಎಂಬುದನ್ನು ನಿರಾಕರಿಸಲಾಗದು. ಈ ಅಂಶದೊಂದಿಗೆ ಈ ಹಿಂದೆ ಗಮನಿಸಲಾದ ಗ್ರಾಹಕ ವೆಚ್ಚಗಳ ಸರ್ವೆಯ ಮೂಲಕ 2011-12 ಮತ್ತು 2017-18ರ ನಡುವೆ ಕಂಡು ಬಂದ ಬಹುಪಾಲು ಜನರ ವೆಚ್ಚಗಳ ಕುಸಿತದ ಅಂಶವನ್ನು ಸೇರಿಸಿ ನೋಡಿದರೆ, ಒಟ್ಟಾರೆಯಾಗಿ ಮೋದಿ ಆಡಳಿತದ ವರ್ಷಗಳು ಬಹುಪಾಲು ಜನತೆಯ ಜೀವನ ಪರಿಸ್ಥಿತಿಗಳು ಹದಗೆಟ್ಟಿವೆ ಎಂಬುದನ್ನು ಸೂಚಿಸುತ್ತದೆ.
ವಿದೇಶಗಳಿಗೆ ಬೇಡಿಕೆಯ ‘ಸೋರಿಕೆ’
ಜನರ ಜೀವನ ಮಟ್ಟದ ಕುಸಿತದ ಅಂಶವು, ದೊಡ್ಡ ಬಂಡವಾಳಗಾರರಿಗೆ, ಅದರಲ್ಲೂ ವಿಶೇಷವಾಗಿ ಆಯ್ದ ಬಂಟ ಬಂಡವಾಳಶಾಹಿ(ಕ್ರೋನಿ ಕ್ಯಾಪಿಟಲಿಸ್ಟ್)ಗಳ ಬಗ್ಗೆ ಬಿಜೆಪಿ ಬಹಳ ಕಳಕಳಿ ತೋರಿಸಿದ ಹೊರತಾಗಿಯೂ, ಮೋದಿ ವರ್ಷಗಳಲ್ಲಿ ಖಾಸಗಿ ಹೂಡಿಕೆ ಏಕೆ ಸ್ಥಗಿತಗೊಂಡಿದೆ ಎಂಬುದನ್ನೂ ಸಹ ವಿವರಿಸುತ್ತದೆ. ಸ್ಥಗಿತಗೊಂಡಿರುವುದು ಅಥವಾ ಇಳಿಕೆಯಾಗಿರುವುದು, ವಾಸ್ತವವಾಗಿ, ಕಾರ್ಪೊರೇಟ್-ಅಲ್ಲದ ಖಾಸಗಿ ಹೂಡಿಕೆಯಷ್ಟೇ ಅಲ್ಲ. ಅದು ಒಂದು ಆಶ್ಚರ್ಯದ ಸಂಗತಿಯೂ ಅಲ್ಲ. ನೋಟು ರದ್ದತಿ, ಜಿಎಸ್ಟಿ ಮತ್ತು ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೇರಿದ ಕಠಿಣ ಲಾಕ್ಡೌನ್ಗಳ ಭಾರೀ ಹೊಡೆತಗಳನ್ನು ತಿಂದಿರುವ ಈ ವಲಯವೂ ತತ್ತರಿಸಿ ಹೋಗಿದೆ. ಹಾಗಾಗಿ, ತೆರಿಗೆ-ನಂತರದ ಕಾರ್ಪೊರೇಟ್ ಲಾಭಗಳು ಉನ್ನತವಾಗಿದ್ದರೂ ಸಹ, ಮೋದಿ ವರ್ಷಗಳಲ್ಲಿ ಕಾರ್ಪೊರೇಟ್ ಹೂಡಿಕೆಯು ಸ್ಥಗಿತಗೊಂಡಿದೆ. ಈ ವಿದ್ಯಮಾನವು, ಕಾರ್ಪೊರೇಟ್ ಹೂಡಿಕೆಯು ಮಾರುಕಟ್ಟೆಯ ಬೆಳವಣಿಗೆಗೆ(ಬೇಡಿಕೆಯ ಹೆಚ್ಚಳದೊಂದಿಗೆ) ಹೆಚ್ಚು ಸ್ಪಂದಿಸುತ್ತದೆಯೇ ವಿನಃ ಅದಕ್ಕೆ ದಕ್ಕುವ ಲಾಭದ ನಿಯೋಜನೆಗಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ತನ್ನ ಬಜೆಟ್ಗಳ ಮೂಲಕ ಸರ್ಕಾರವು ಬಂಡವಾಳ ವೆಚ್ಚಗಳನ್ನು ಸತತವಾಗಿ ಹೆಚ್ಚಿಸುತ್ತಿದೆ ಮತ್ತು ಸ್ವತಃ ಈ ಅಂಶವೇ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಖಾಸಗಿ ಬಂಡವಾಳಗಾರರಿಂದ ಹೆಚ್ಚಿನ ಹೂಡಿಕೆ ಆಗುವ ಮಟ್ಟಿಗೆ, ಮಾರುಕಟ್ಟೆಗಳ ಗಾತ್ರವನ್ನು ವಿಸ್ತರಿಸಬೇಕು ಎಂದು ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಇಲ್ಲಿರುವ ಸಮಸ್ಯೆಯೆಂದರೆ, ಈ ಬಂಡವಾಳ ವೆಚ್ಚಗಳಿಂದ ಸೃಷ್ಟಿಯಾದ ಬೇಡಿಕೆಯ ದೊಡ್ಡ ಪ್ರಮಾಣವು ವಿದೇಶಗಳಿಗೆ “ಸೋರಿಕೆ”ಯಾಗುತ್ತದೆ (ಆಮದುಗಳ ಮೂಲಕ). ಹಾಗಾಗಿ, ಆಂತರಿಕ ಮಾರುಕಟ್ಟೆಯನ್ನು ವಿಸ್ತರಿಸುವಲ್ಲಿ ಬಂಡವಾಳ ವೆಚ್ಚಗಳ ಕೊಡುಗೆ ತುಂಬಾ ಸೀಮಿತವಾಗಿದೆ. ಮತ್ತು, ಸರ್ಕಾರದ “ಆರ್ಥಿಕ ಕಾರ್ಯತಂತ್ರ”ದ ಇನ್ನೊಂದು ತಂತುವಿನ ಬಗ್ಗೆಯೂ ಬಹುತೇಕ ಇದನ್ನೇ ಹೇಳಬಹುದು. ಅಂದರೆ, “ಮೂಲಸೌಕರ್ಯ” ವಲಯದಲ್ಲಿ ಹೂಡಿಕೆಯನ್ನು ಕೈಗೊಳ್ಳಲು, ಬಂಟ ಬಂಡವಾಳಶಾಹಿಗಳೂ ಸೇರಿದಂತೆ ಖಾಸಗಿ ಬಂಡವಾಳಗಾರರಿಗೆ ಸಾವಿರ ಸಾವಿರ ಕೋಟಿಗಟ್ಟಲೆ ಸಾಲವನ್ನು ಸಾರ್ವಜನಿಕ ವಲಯದ ಬ್ಯಾಂಕುಗಳು ನೀಡುವಂತೆ ಮಾಡಲಾಗುವುದು. ಈ ಸಾಲಗಳು ಕಾಲ ಕ್ರಮದಲ್ಲಿ ಅನುತ್ಪಾದಕ ಆಸ್ತಿಗಳಾಗಿ ತಿರುಗುತ್ತವೆ. ಅಸಲು, ಬಡ್ಡಿ ಎರಡನ್ನೂ ಕಳೆದುಕೊಳ್ಳುವ ರಿಸ್ಕ್ಅನ್ನು ಬ್ಯಾಂಕುಗಳ ಮೇಲೆ ಹೊರಿಸಲಾಗುವುದು. ಅಂದರೆ, ಅಂತಿಮವಾಗಿ, ಹೂಡಿಕೆಯ ರಿಸ್ಕ್ಅನ್ನು ಖಾಸಗಿ ಬಂಡವಾಳಗಾರರಿಂದ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ವರ್ಗಾಯಿಸಲಾಗುತ್ತದೆ. ಅರ್ಥವ್ಯವಸ್ಥೆಗೆ ಚೈತನ್ಯ ತುಂಬುವ ಈ ವಿಧಾನವೂ ಸಹ ಅದೇ ಸಮಸ್ಯೆಯಿಂದ ಬಳಲುತ್ತಿದೆ: ಈ ವಿಧಾನವು ಅರ್ಥವ್ಯವಸ್ಥೆಗೆ ಚೈತನ್ಯ ತುಂಬುವುದು ಸಾಧ್ಯವಿಲ್ಲ. ಏಕೆಂದರೆ, ಅರ್ಥವ್ಯವಸ್ಥೆಯಲ್ಲಿ ಸೃಷ್ಟಿಯಾಗುವ ಬೇಡಿಕೆಯ ಒಂದು ಬಹು ದೊಡ್ಡ ಭಾಗವು ವಿದೇಶಗಳಿಗೆ “ಸೋರಿಕೆ”ಯಾಗುತ್ತದೆ.
ಕ್ರೆಡಿಟ್ ರೇಟಿಂಗ್ ಪಡೆಯಲಾರದ ‘ವಿತ್ತೀಯ ವಿವೇಕ’
ಮೋದಿಯವರ ಪ್ರತಿಪಾದನೆಯ “ಸತ್ಯ”ದಿಂದ ಬಜೆಟ್ ಪೇಚಿಗೆ ಒಳಗಾಗದೆ ಜನರ ನೈಜ ಸ್ಥಿತಿ-ಗತಿಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿಯನ್ನು ಒಂದು ವೇಳೆ ತೋರಿಸಿದ್ದರೆ, ಬಜೆಟ್ನ ಕಾರ್ಯತಂತ್ರದಲ್ಲಿ ಜನರ ಜೀವನ ಮಟ್ಟವನ್ನು ಸುಧಾರಿಸುವ ಎರಡು ಸಂಭಾವ್ಯ ಮಾರ್ಗಗಳಲ್ಲಿ ಯಾವುದಾದರೂ ಒಂದು ಇರುತ್ತಿತ್ತು: ಜನರಿಗೆ ಹಣ ವರ್ಗಾವಣೆಗಳನ್ನು ಹೆಚ್ಚಿಸುವುದು ಅಥವಾ ವೇತನದ (ಕನಿಷ್ಠ) ಮಟ್ಟವನ್ನು ಶಾಸನಬದ್ಧವಾಗಿ ಹೆಚ್ಚಿಸುವುದು. ಅಂತಹ ಒಂದು ತಂತ್ರವು ಒಂದೇ ಕಲ್ಲಿನಿಂದ ಹಲವು ಹಕ್ಕಿಗಳನ್ನು ಉರುಳಿಸುತ್ತಿತ್ತು: ಅದನ್ನು ಬಯಸತಕ್ಕ ಜನರಿಗೆ ನೇರವಾಗಿ ಪ್ರಯೋಜನವಾಗುತ್ತಿತ್ತು ಮತ್ತು ಜೊತೆಗೆ ಆಂತರಿಕ ಮಾರುಕಟ್ಟೆಯ ವಿಸ್ತರಣೆಯ ಮೂಲಕ ಖಾಸಗಿ ಹೂಡಿಕೆಯನ್ನು ಹೆಚ್ಚಿಸುತ್ತಿತ್ತು ಮತ್ತು ಆ ಮೂಲಕ ಅರ್ಥವ್ಯವಸ್ಥೆಯನ್ನು ಉತ್ತೇಜಿಸುತ್ತಿತ್ತು.
ಆದರೆ, ಹಣ ವರ್ಗಾವಣೆ ಅಥವಾ ವೇತನದ ಹೆಚ್ಚಳದ ಮೂಲಕ ಆಂತರಿಕ ಮಾರುಕಟ್ಟೆಯ ವಿಸ್ತರಣೆ, ಆ ಮೂಲಕ ಖಾಸಗಿ ಹೂಡಿಕೆಯ ಹೆಚ್ಚಳ ಮತ್ತು ಆ ಮೂಲಕ ಅರ್ಥವ್ಯವಸ್ಥೆಯನ್ನು ಉತ್ತೇಜಿಸುವ ಕಾರ್ಯತಂತ್ರವನ್ನು ತ್ಯಜಿಸಲಾಗಿದೆ. ಆಹಾರ, ರಸಗೊಬ್ಬರ ಮತ್ತು ಇಂಧನ ಇವುಗಳ ಮೇಲಿನ ಸಬ್ಸಿಡಿಗಳನ್ನು ಪ್ರಸಕ್ತ ವರ್ಷದಲ್ಲಿ ಪರಿಷ್ಕೃತ ಅಂದಾಜಿನ 4.13 ಲಕ್ಷ ಕೋಟಿ ರೂಪಾಯಿಗಳಿಂದ 2024-25ರ ವರ್ಷಕ್ಕೆ 3.81 ಲಕ್ಷ ಕೋಟಿಗಳಿಗೆ ಇಳಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆ (MNREGS) ಮೇಲಿನ ವೆಚ್ಚವನ್ನು ರೂ 86,000 ಕೋಟಿಗಳ ಮಟ್ಟದಲ್ಲೇ ಇಟ್ಟುಕೊಳ್ಳಲಾಗಿದೆ, 2023-24ರಲ್ಲಿ ಈ ವೆಚ್ಚವು ಸರಿಸುಮಾರು ಅಷ್ಟೇ ಇತ್ತು. ಈ ಜಿಪುಣತನವನ್ನು, ‘’ಜನಮರುಳಿನ’ (populism) ಬದಲಾಗಿ “ವಿತ್ತೀಯ ವಿವೇಕ”ವು ಸರ್ಕಾರದ ಆರೋಗ್ಯಕರ ಆದ್ಯತೆ ಎಂದು ನಿಷ್ಠಾವಂತ ಮಾಧ್ಯಮಗಳಲ್ಲಿ ಪ್ರಶಂಸಿಸಿರುವುದರಲ್ಲಿ ಆಶ್ಚರ್ಯವಿಲ್ಲ. ಈ ಬಗ್ಗೆ ಸರ್ಕಾರದ್ದೇ ನಿರೂಪಣೆಯೆಂದರೆ “ವಿತ್ತೀಯ ವಿವೇಕ”ದೊಂದಿಗೆ ಭಾರತವು ತನ್ನ ಬೆಳವಣಿಗೆಯ ದರವನ್ನು ಹೆಚ್ಚಿಸುವ ವಿದೇಶಿ ಹೂಡಿಕೆಯನ್ನು ಬಹಳಷ್ಟು ಪ್ರಮಾಣದಲ್ಲಿ ಸೆಳೆಯುವುದು ಸಾಧ್ಯವಾಗುತ್ತದೆ ಎಂಬುದು. ವಿಪರ್ಯಾಸವೆಂದರೆ, “ವಿತ್ತೀಯ ವಿವೇಕ”ದ ಬಗ್ಗೆ ಈ ಮಟ್ಟದ ಬದ್ಧತೆಯನ್ನು ಹೊಂದಿರುವುದರ ಹೊರತಾಗಿಯೂ ಭಾರತದ ಅಂತಾರಾಷ್ಟ್ರೀಯ “ಕ್ರೆಡಿಟ್ ರೇಟಿಂಗ್” ಹೀನಾಯ ಮಟ್ಟದಲ್ಲೇ ಉಳಿದಿದೆ: ರೇಟಿಂಗ್ ಪಟ್ಟಿಯಲ್ಲಿ, ಇಂಡೋನೇಷ್ಯಾದ ಮಟ್ಟದಿಂದ ಒಂದು ಮೆಟ್ಟಿಲು ಕೆಳಗೆ, ಥೈಲ್ಯಾಂಡ್ ಮಟ್ಟದಿಂದ ಎರಡು ಮೆಟ್ಟಿಲು ಕೆಳಗೆ ಮತ್ತು “ಜಂಕ್ ಬಾಂಡ್” ಮಟ್ಟದಿಂದ ಕೇವಲ ಒಂದು ಮೆಟ್ಟಿಲು ಮೇಲೆ! ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತದ “ವಿತ್ತೀಯ ವಿವೇಕ”ದ ಬಗ್ಗೆ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಮೆಚ್ಚುಗೆಯ ಭಾವನೆ ಹೊಂದಿಲ್ಲ.
ಹೊಸ ಸಂಸದ್ ಭವನಕ್ಕೆ
ಲೋಹ ಪತ್ತೆಮಾಡುವ
ಉಪಕರಣಕ್ಕಿಂತ ಹೆಚ್ಚಾಗಿ
ಸುಳ್ಳು ಪತ್ತೆ ಮಾಡುವ
ಉಪಕರಣ ಬೇಕಾಗಿದೆ
ವ್ಯಂಗ್ಯಚಿತ್ರ: ಮಂಜುಲ್, ಫೇಸ್ಬುಕ್
ಈ ವಿಡಿಯೋ ನೋಡಿ : ಸೆಕ್ಯೂಲರಿಸಂ ಹಾಗೂ ಸೊಶಿಯಲಿಸಂ ಬೆಸದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ – ಡಾ. ಪ್ರಕಾಶ್