ಜಲಂಧರ್: ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತರುವ ‘ದೆಹಲಿ ಚಲೋ’ ಪ್ರತಿಭಟನೆಗೆ ಮುಂಚಿತವಾಗಿ ರೈತ ಸಂಘಟನೆಗಳು ಮತ್ತು ಒಕ್ಕೂಟಗಳ ಅಧಿಕೃತ ಪುಟಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಎಕ್ಸ್ ಮತ್ತು ಫೇಸ್ಬುಕ್ನಲ್ಲಿನ ಹನ್ನೆರಡು ಖಾತೆಗಳನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ. ಎಲ್ಲವೂ ಸರ್ಕಾರದ ಕೋರಿಕೆಯ ಮೇಲೆ ಇದನ್ನು ಮಾಡಲಾಗಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ದಿ ವೈರ್ ವರದಿ ಮಾಡಿದೆ.ರೈತ ಹೋರಾಟ
ಫೆಬ್ರವರಿ 13 ರಂದು ರೈತ ಹೋರಾಟ ಪ್ರಾರಂಭಿಸುವ ಒಂದು ದಿನ ಮೊದಲು ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಡೆಹಿಡಿಯಲಾಯಿತು ಎಂದು ವರದಿ ಉಲ್ಲೇಖಿಸಿದೆ. ಜಗ್ಜಿತ್ ಸಿಂಗ್ ದಲ್ಲೆವಾಲ್ ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಸಂಯೋಜಕ ಸರ್ವನ್ ಸಿಂಗ್ ಪಂಧೇರ್ ನೇತೃತ್ವದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಜಂಟಿಯಾಗಿ ಈ ಪ್ರತಿಭಟನೆಗೆ ಕರೆ ನೀಡಿತು.
ಇದನ್ನೂ ಓದಿ: ಹಾಸನ | ಕೆಪಿಆರ್ಎಸ್ ನೇತೃತ್ವದಲ್ಲಿ ಬಗರ್ ಹುಕುಂ ಸಾಗುವಳಿ ಭೂಮಿಗಾಗಿ ಹೋರಾಟ
ರೈತ ಸಂಘಟನೆಗಳ ಸಾಮಾಜಿಕ ಮಾಧ್ಯಮ ಖಾತೆಗಳ ಮೇಲಿನ ನಿಷೇಧದ ಜೊತೆಗೆ ಫೆಬ್ರವರಿ 15 ರವರೆಗೆ ಹರಿಯಾಣದ ಏಳು ಜಿಲ್ಲೆಗಳಲ್ಲಿ ವಿಸ್ತೃತ ಇಂಟರ್ನೆಟ್ ನಿಷೇಧ ಕೂಡಾ ಮಾಡಲಾಗಿದೆ. ಇಷ್ಟೆ ಅಲ್ಲದೆ, ಹರಿಯಾಣ ಪೊಲೀಸರು ಪಂಜಾಬ್ ಹರಿಯಾಣವನ್ನು ಸಂಪರ್ಕಿಸುವ ಪಾಟಿಯಾಲಾ ಕಡೆಯ ಶಂಭು ಗಡಿಯಲ್ಲಿ ಪಂಜಾಬ್ನ ಸಂಗ್ರೂರ್ ಜಿಲ್ಲೆಯ ಗಡಿಯಾದ ಖಾನೌರಿಯ ಗಡಿಗಳನ್ನು ಬಹು ಪದರಗಳಲ್ಲಿ ದಿಗ್ಬಂಧನ ಹೇರಿ ರೈತರ ಪ್ರವೇಶವನ್ನು ನಿಷೇಧಿಸಿದ್ದಾರೆ.
ಫೆಬ್ರವರಿ 13 ರಾತ್ರಿ ರೈತರು ಶಂಭು ಗಡಿಯಲ್ಲಿ ಕಳೆದಿದ್ದಾರೆ. ಈ ವೇಳೆ ಹರಿಯಾಣದ ಗಡಿಯ ಇನ್ನೊಂದು ಭಾಗದಲ್ಲಿ ಅರೆಸೇನಾ ಪಡೆಗಳ ಭಾರೀ ನಿಯೋಜನೆ ಮಾಡಲಾಗಿತ್ತು. ಅವರನ್ನು ಹರಿಯಾಣಕ್ಕೆ ದಾಟದಂತೆ ತಡೆಯುವುದರ ಜೊತೆಗೆ, ಹರಿಯಾಣ ಪೊಲೀಸರು ಶಂಭು ಗಡಿಯಲ್ಲಿ ಪ್ರತಿಭಟನಾಕಾರ ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿದ್ದು, ಅದಕ್ಕಾಗಿ ಡ್ರೋನ್ಗಳನ್ನು ಬಳಸಿದ್ದಾರೆ. ವರದಿಗಳ ಪ್ರಕಾರ, 100 ಕ್ಕೂ ಹೆಚ್ಚು ರೈತರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ದೆಹಲಿ ರೈತ ಹೋರಾಟ | ಡ್ರೋನ್ ಮೂಲಕ ಅಶ್ರುವಾಯು ಸಿಡಿಸುತ್ತಿರುವ ಸರ್ಕಾರ
ಸಾಮಾಜಿಕ ಮಾಧ್ಯಮ ಖಾತೆಗಳ ತಡೆ
ಕಿಸಾನ್ ಮಜ್ದೂರ್ ಮೋರ್ಚಾದ (ಕೆಎಂಎಂ) ಸಂಯೋಜಕ ಸರ್ವನ್ ಸಿಂಗ್ ಪಂಧೇರ್, ಬಿಕೆಯು (ಶಹೀದ್ ಭಗತ್ ಸಿಂಗ್) ವಕ್ತಾರ ತೇಜ್ವೀರ್ ಸಿಂಗ್ ಅಂಬಾಲಾ, ರೈತ ನಾಯಕ ರಮಣದೀಪ್ ಸಿಂಗ್ ಮಾನ್, ಬಿಕೆಯು ಕ್ರಾಂತಿಕಾರಿ ನಾಯಕ ಸುರ್ಜಿತ್ ಸಿಂಗ್ ಫುಲ್, ರೈತ ಮುಖಂಡ ಹರ್ಪಾಲ್ ಸಂಘ, ಹರಿಯಾಣದ ಅಶೋಕ್ ದಾನೋಡ ಸೇರಿದಂತೆ ಅವರಂತಹ ಅನೇಕ ಪ್ರಮುಖ ರೈತ ನಾಯಕರ ಎಕ್ಸ್ ಖಾತೆಗಳು ಮತ್ತು ಫೇಸ್ಬುಕ್ ಪುಟಗಳನ್ನು ತಡೆಹಿಡಿಯಲಾಗಿದೆ.
ಸರ್ಕಾರವು ಆಂದೋಲನವನ್ನು ಬೆಂಬಲಿಸುವ ಮತ್ತು ಅದರ ಬಗ್ಗೆ ಮಾಹಿತಿಗಳನ್ನು ಪೋಸ್ಟ್ ಮಾಡಿದ ಇತರ ಬೇರೆ ಅಧಿಕೃತ ಪುಟಗಳನ್ನು ನಿಷೇಧಿಸಿದೆ. ಭಾವಜಿತ್ ಸಿಂಗ್ ನಡೆಸುತ್ತಿರುವ @Tractor2twitr_P, ಭಾರತೀಯ ಕಿಸಾನ್ ಯೂನಿಯನ್ (ಶಹೀದ್ ಭಗತ್ ಸಿಂಗ್) ಮತ್ತು ಗುರಮ್ನೀತ್ ಸಿಂಗ್ ಮಂಗತ್ ನಡೆಸುತ್ತಿರುವ ಪ್ರೋಗ್ರೇಸಿವ್ ಫಾರ್ಮರ್ ಫ್ರಂಟ್ ಈ ಪಟ್ಟಿಯಲ್ಲಿ ಇವೆ. ಭಾರತೀಯ ಕಿಸಾನ್ ಯೂನಿಯನ್ (ಶಹೀದ್ ಭಗತ್ ಸಿಂಗ್) ಪ್ರಮುಖ ರೈತ ಸಂಘಗಳಲ್ಲಿ ಒಂದಾಗಿದ್ದು ಇದು ಹರಿಯಾಣದ ಅಂಬಾಲಾದಿಂದ ರೈತರ ಪ್ರತಿಭಟನೆಯನ್ನು ಮುನ್ನಡೆಸುತ್ತಿದೆ.
ಸ್ವತಂತ್ರ ಪತ್ರಕರ್ತ ಮಂದೀಪ್ ಪುನಿಯಾ ನಡೆಸುತ್ತಿದ್ದ ‘ಗಾಂವ್ ಸವೇರಾ’ ಪುಟವನ್ನು ತಡೆಹಿಡಿಯಲಾಗಿದೆ, ಹಾಗೆಯೇ ಮಂದೀಪ್ ಅವರ ವೈಯಕ್ತಿಕ ಪುಟವನ್ನು ತಡೆಹಿಡಿಯಲಾಗಿದೆ. ಮಂದೀಪ್ ರೈತರ ಪ್ರತಿಭಟನೆಯನ್ನು ಬೆಂಬಲಿಸುವ ಪ್ರಮುಖ ವ್ಯಕ್ತಿಯಾಗಿದ್ದು, 2020 ರಲ್ಲಿ ಅವರನ್ನು ಬಂಧಿಸಲಾಗಿತ್ತು. “ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ ನಿಮ್ಮ ಖಾತೆಯನ್ನು [ಭಾರತದಲ್ಲಿ] ತಡೆಹಿಡಿಯಲಾಗಿದೆ” ಎಂದು ತಡೆಹಿಡಿಯಲಾಗಿರುವ ಖಾತೆಗಳಿಗೆ ಸಂದೇಶ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಅದಾಗ್ಯೂ, ದೆಹಲಿ ಚಲೋ ಪ್ರತಿಭಟನೆಗೆ ಮುಂಚಿತವಾಗಿ ಇತ್ತೀಚೆಗೆ ಪ್ರಾರಂಭಿಸಲಾದ ಕಿಸಾನ್ ಮಜ್ದೂರ್ ಮೋರ್ಚಾದ ಅಧಿಕೃತ ಪುಟವು ಇನ್ನೂ ಚಾಲನೆಯಲ್ಲಿದೆ.
ಇದನ್ನೂ ಓದಿ: ‘ಇದು ಆರಂಭ ಮಾತ್ರ’ | ದೆಹಲಿ ರೈತ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ
ಈ ಹಿಂದೆ 2020-2021ರಲ್ಲಿ ರೈತರ ಪ್ರತಿಭಟನೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಕಿಸಾನ್ ಏಕ್ತಾ ಮೋರ್ಚಾದ ಅಧಿಕೃತ ಪುಟ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷೇಧಿಸಿತ್ತು.ಈ ಖಾತೆಯು ರೈತರ ಹೋರಾಟದ ಮುಖವಾಣಿಯಂತೆ ಕೆಲಸ ಮಾಡಿದ್ದು ಇಲ್ಲಿ ಸ್ಮರಿಸಬಹುದಾಗಿತ್ತು. ಅದೇ ವೇಳೆ ಪಂಜಾಬಿ ಗಾಯಕ ಜಾಝಿ ಬಿ ಮತ್ತು ಖಾಲ್ಸಾ ಏಡ್ನ ರವಿ ಸಿಂಗ್ ಅವರಂತಹ ರೈತ ಹೋರಾಟದ ಬೆಂಬಲಿಗರು ಹಾಗೂ ಸ್ವತಂತ್ರ ಪತ್ರಕರ್ತ ಸಂದೀಪ್ ಸಿಂಗ್ ಅವರ ಖಾತೆಗಳನ್ನು ಕೂಡಾ ತಡೆಹಿಡಿಯಲಾಗಿತ್ತು.
‘ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮರುಸ್ಥಾಪಿಸಿದರೆ ಮಾತ್ರ ಸಭೆ’
ತಮ್ಮ ಖಾತೆಗಳನ್ನು ತಡೆಹಿಡಿರುವ ಬಗ್ಗೆ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಖಾತೆಗಳನ್ನು ಮರುಸ್ಥಾಪಿಸುವವರೆಗೆ ಮುಂದಿನ ಸಭೆಗಳನ್ನು ಬಹಿಷ್ಕರಿಸಲು ನಾಯಕರು ನಿರ್ಧರಿಸಿದ್ದಾರೆ ಎಂದು @Tractor2Twitr_i ಪುಟವನ್ನು ನಡೆಸುತ್ತಿರುವ ಭಾವಜಿತ್ ಸಿಂಗ್ ಹೇಳಿದ್ದಾರೆ. “ಸರ್ಕಾರವು ಈ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮರುಪ್ರಾರಂಭಿಸಿದರೆ ಮಾತ್ರ ಮೂರನೇ ಸುತ್ತಿನ ಸಭೆಗಳಿಗೆ ಆಹ್ವಾನವನ್ನು ಸ್ವೀಕರಿಸಲಾಗುವುದು ಎಂದು ರೈತ ಸಂಘದ ಮುಖಂಡರು ನಿರ್ಧರಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ವಿಡಿಯೊ ನೋಡಿ: ರಾಮನಿಗೆ ಭವ್ಯ ಮಂದಿರ, ಶ್ರಮಿಕರಿಗೆ ಟೆಂಟ್ – ನಾಗೇಶ ಹೆಗಡೆ ವಿಶ್ಲೇಷಣೆ Janashakthi Media