ಶಾಂತಿಪುರ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕುತ್ತಿದೆ ಎಂದು ಗುರುವಾರ ಆರೋಪಿಸಿದ್ದಾರೆ. ನಾಡಿಯಾ ಜಿಲ್ಲೆಯ ಶಾಂತಿಪುರದಲ್ಲಿ ಸಾರ್ವಜನಿಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತನ್ನನ್ನು ಕಂಬಿ ಹಿಂದೆ ಹಾಕಿದರೂ ಅದರಿಂದ ಹೊರಬರುತ್ತೇನೆ ಎಂದು ಹೇಳಿದ್ದಾರೆ.
“ನೀವು ಭಾರತದಲ್ಲಿ ಎಲ್ಲರನ್ನು ಬೆದರಿಸಿ ಜೈಲಿಗೆ ಹಾಕುತ್ತೀರಿ. ನೀವು ನನ್ನನ್ನು ಕೂಡಾ ಕಂಬಿಗಳ ಹಿಂದೆ ಹಾಕುತ್ತೀರಿ, ಆದರೆ ನಾನು ಖಂಡಿತವಾಗಿಯೂ ಅದರಿಂದ ಹೊರಗೆ ಬರುತ್ತೇನೆ. ಬಿಜೆಪಿ ಚುನಾವಣೆಯಲ್ಲಿ ಗೆಲ್ಲಲು ಬೇಕಾಗಿ ಎಲ್ಲರನ್ನೂ ಜೈಲಿಗೆ ಹಾಕುತ್ತಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆಪಾದಿತ ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಏಳು ಗಂಟೆಗಳ ಕಾಲ ನಡೆಸಿದ ವಿಚಾರಣೆ ನಂತರ ಹೇಮಂತ್ ಸೋರೆನ್ ಅವರನ್ನು ಬುಧವಾರ ರಾತ್ರಿ ಬಂಧಿಸಿತ್ತು.
ಇದನ್ನೂ ಓದಿ: ಹೇಮಂತ್ ಸೋರೆನ್ | ಬಂಧನಕ್ಕೊಳಗಾದ ಜಾರ್ಖಂಡ್ನ 3ನೇ ಮುಖ್ಯಮಂತ್ರಿ
“ವಿರೋಧ ಪಕ್ಷದ ನಾಯಕರಾದ ನಾವೆಲ್ಲರೂ ಕಳ್ಳರು ಮತ್ತು ನೀವು ಬಿಜೆಪಿಯವರು ನಿಮ್ಮನ್ನು ಸಾಧು ಎಂದು ಕರೆಯುತ್ತೀರಿ. ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಿರುವ ನೀವು, ಗ್ರಾಮೀಣ ಆವಾಸ್ ಯೋಜನೆಗೆ ರಸ್ತೆಗಳನ್ನು ಸಿದ್ಧಪಡಿಸಲು ಹಣವನ್ನು ಬಿಡುಗಡೆ ಮಾಡಿಲ್ಲ. ನೀವು ಕಳ್ಳ ಜಮೀನ್ದಾರನಲ್ಲದೆ ಬೇರೇನೂ ಅಲ್ಲ. ಇಂದು ನೀವು ಅಧಿಕಾರದಲ್ಲಿರುವುದರಿಂದ ನೀವು ಕೇಂದ್ರೀಯ ಸಂಸ್ಥೆಗಳೊಂದಿಗೆ ತಿರುಗಾಡುತ್ತಿದ್ದೀರಿ. ನಾಳೆ ಏನಾಗುತ್ತದೆ?” ಎಂದು ಅವರು ಕೇಳಿದ್ದಾರೆ.
ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಹೇರುವುದಾಗಿ ಬಿಜೆಪಿ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. “ನಾನು ಎನ್ಆರ್ಸಿ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ. ಬಿಜೆಪಿಯು ಚುನಾವಣೆಗೆ ಮುನ್ನ ಎನ್ಆರ್ಸಿಯನ್ನು ಜಾರಿಗೆ ತರಲು ಯೋಜಿಸಿದೆ. ಅವರು ಸಿಎಎ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಇದು ಅವರ ರಾಜಕೀಯ ತಂತ್ರವಲ್ಲದೆ ಬೇರೇನೂ ಅಲ್ಲ. ಅವರು ಜನರನ್ನು ವಿಭಜಿಸಲು ಬಯಸುತ್ತಾರೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನೂ ಓದಿ: ‘ದೇಶದ ಜನರನ್ನು ವಂಚಿಸುವ ಪ್ರಯತ್ನ’ – ಬಜೆಟ್ ಬಗ್ಗೆ ಪ್ರತಿಪಕ್ಷಗಳ ಪ್ರತಿಕ್ರಿಯೆ
ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬ್ಯಾನರ್ಜಿ, ಚುನಾವಣೆ ಮುಗಿದ ನಂತರ, ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಟಿಎಂಸಿ ಕೇಂದ್ರದಲ್ಲಿ ಸರ್ಕಾರ ರಚಿಸುವ ಕಾರ್ಯತಂತ್ರವನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಪಕ್ಷದ ನಾಯಕ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾದ್ದು, ಏಕೆಂದರೆ ಅವರು ಸಾಮಾನ್ಯ ಜನರ ಪರವಾಗಿ ಮಾತನಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿ ಅವರನ್ನು ಸಾರ್ವತ್ರಿಕ ಚುನಾವಣೆಗೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಸುಳಿವು ನೀಡಿದ್ದು, “ಮಹುವಾ ಮತ್ತೊಮ್ಮೆ ಸಾಮಾನ್ಯ ಜನರ ಮತಗಳ ಮೇಲೆ ಗೆಲ್ಲುತ್ತಾರೆ ಎಂದು ನನಗೆ ಖಾತ್ರಿಯಿದೆ” ಎಂದು ಹೇಳಿದ್ದಾರೆ.
ಕೇಂದ್ರವು ವಿವಿಧ ಯೋಜನೆಗಳ ಅಡಿಯಲ್ಲಿ ರಾಜ್ಯಕ್ಕೆ ನೀಡಬೇಕಾದ ಹಣವನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು, ಶುಕ್ರವಾರದಿಂದ ಕೋಲ್ಕತ್ತಾದಲ್ಲಿ ತನ್ನ ನಿಗದಿತ 48 ಗಂಟೆಗಳ ಧರಣಿಯನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ.
ವಿಡಿಯೊ ನೋಡಿ: ಏನಿದು ಮಧ್ಯಂತರ ಬಜೆಟ್ ? ಚುನಾವಣಾ ರಾಮನ ಮುಂದೆ ಸಪ್ಪೆಯಾದ ಬಜೆಟ್ Janashakthi Media