ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಈ ಮುಂಚೆ ಮಂದಿರವಿರಲಿಲ್ಲವೇ?

– ಟಿ ಸುರೇಂದ್ರ ರಾವ್
ಕಳೆದ ವಾರ ಅಯೋಧ್ಯೆಯಲ್ಲಿ ‘ಪ್ರಾಣ ಪ್ರತಿಷ್ಠಾಪನೆ’ಯ ಸಂದರ್ಭದಲ್ಲಿ ಬಹಳಷ್ಟು ಕೇಳಬಂದ ಮಾತೆಂದರೆ 500 ವರ್ಷಗಳ ನಂತರ ಶ್ರೀರಾಮ ಮರಳುತ್ತಿದ್ದಾನೆ, ಆತನಿಗೆ ತನ್ನ  ‘ಜನ್ಮಸ್ಥಾನ’ದಲ್ಲಿ ಮಂದಿರ ಕೊನೆಗೂ ಸಿಕ್ಕಿದೆ ಎಂದು. ಆದರೆ ‘1980ರ ದಶಕದಲ್ಲಿ ‘ರಾಮಜನ್ಮಭೂಮಿ’ ಚಳುವಳಿ ಬೆಳೆದು ಬರುವ ಮುನ್ನ,ರಾಮನ ‘ಜನ್ಮಸ್ಥಾನ’ ಮಂದಿರ ಅಯೋಧ್ಯೆಯಲ್ಲಿ ಇತ್ತು,ಭಕ್ತಾದಿಗಳು ಅದರ ದರ್ಶನಕ್ಕೆ ಬರುತ್ತಿದ್ದರು ಎಂದು ಹಲವರಿಗೆ ತಿಳಿದಿರಲಿಕ್ಕಿಲ್ಲ,ಅದನ್ನೀಗ,  ಅಂದರೆ ಮೂರು ವರ್ಷಗಳ ಹಿಂದೆ ‘ರಾಮಭಕ್ತರೇ  ‘ಭವ್ಯ ರಾಮಮಂದಿರ’ ನಿರ್ಮಾಣಕ್ಕಾಗಿ ಕೆಡವಿಹಾಕಿದ್ದಾರೆಎಂಬುದೂ ಹಲವರಿಗೆ ತಿಳಿದಿರಲಿಕ್ಕಿಲ್ಲ.  ಅಷ್ಠೇ ಅಲ್ಲ,ಬಾಬ್ರಿ ಮಸೀದಿ ಧ್ವಂಸ ಮಾಡಿದ ‘ಕರಸೇವಕ’ರೇ ಭಕ್ತಾದಿಗಳು ದರ್ಶನಕ್ಕಾಗಿ ಬರುತ್ತಿದ್ದ ರಾಮ್ ಚ ಬುತ್ರ/ಸೀತಾ ರಸೋಯಿಯನ್ನೂ ಕೆಡವಿ ಹಾಕಿದರು ಎಂಬುದನ್ನೂ ಸಾಮಾನ್ಯವಾಗಿ ಹೇಳಲಾಗುತ್ತಿಲ್ಲ. ‘ಜನ್ಮಸ್ಥಾನ’,ರಾಮ್ ಚಬುತ್ರ, ಸೀತಾ ರಸೋಯಿ ಮತ್ತಿತರ ಸ್ಥಳಗಳ ಧ್ವಂಸದೊಂದಿಗೆ ಸಾಮರಸ್ಯದ ಸಂಸ್ಸೃತಿಯ  ಕುರುಹಾಗಿದ್ದ ಅಯೋಧ್ಯೆಯನ್ನು ಈಗ ಕೋಮು ಸಂಘರ್ಷದ ತಾಣವಾಗಿ  ಮಾರ್ಪಾಟು ಮಾಡಲಾಗುತ್ತಿದೆಯೇ?

ಅಯೋಧ್ಯಾ ರಾಮ ಈಗ ವಿವಾದಿತ ವ್ಯಕ್ತಿಯಾಗಿ ಭಾರಿ ಚರ್ಚೆಯಲ್ಲಿ ಇದ್ದಾನೆ. ಆದರೆ ಈ ಶ್ರೀರಾಮನಿಗೂ ನಾವು ಚಿಕ್ಕಂದಿನಲ್ಲಿ ಕಾಪಿ ಪುಸ್ತಕದಲ್ಲಿ ತಿದ್ದುತ್ತಿದ್ದ ಶ್ರೀರಾಮನಿಗೂ ಬಹಳ ವ್ಯತ್ಯಾಸವಿದೆ.

ಕಾಪಿ ಪುಸ್ತಕದ ಶ್ರೀರಾಮ ಹೀಗಿದ್ದ:

‘ರಘುಪತಿ ರಾಘವ ರಾಜಾರಾಮ್ ಪತಿತ ಪಾವನ ಸೀತಾರಾಮ್

ಈಶ್ವರ ಅಲ್ಲಾ ತೇರೋ ನಾಮ್ ಸಬ್ ಕೋ ಸನ್ಮತಿ ದೇ ಭಗವಾನ್’.

ಇವನು ಮಹಾತ್ಮಾ ಗಾಂಧಿಯವರ ಭಜನೆಯ ಶ್ರೀರಾಮ. ಇದರ ಉದ್ದೇಶ ‘ದೇವನೊಬ್ಬ ನಾಮ ಹಲವು’ ಎಂದು ಎಲ್ಲಾ ಸಮುದಾಯದ ಜನರನ್ನು ಒಗ್ಗೂಡಿಸುವುದಾಗಿತ್ತು.

ಆದರೆ, ಈಗ ಚರ್ಚೆಯಲ್ಲಿರುವ ಅಯೋಧ್ಯಾ ರಾಮ 1990 ರ ನಂತರ ಹೆಚ್ಚು ಪ್ರಚಾರಕ್ಕೆ ಬಂದವನು.  ಅಯೋಧ್ಯಾ ರಾಮನಿಗೊಂದು ತಲೆಯ ಮೇಲೆ ಸೂರು ಕಟ್ಟಿಸಬೇಕೆಂಬ ನೆಪದಲ್ಲಿ ದೇಶಾದ್ಯಂತ ಕೋಮು ಸಾಮರಸ್ಯ ಹಾಳುಗೆಡವಲು ಅವನನ್ನು ದುರ್ಬಳಕೆ ಮಾಡಲಾಯಿತು.

ಹಾಗಾದರೆ ಅಯೋಧ್ಯೆಯಲ್ಲಿ ಈ ಮುಂಚೆ ರಾಮನಿಗೆ ಒಂದು ಸೂರು ಇರಲಿಲ್ಲವೇ? ಎಂಬ ಪ್ರಶ್ನೆ ಹಾಕಿದರೆ ಅದಕ್ಕೆ ಸರಿಯಾದ ಉತ್ತರ ಸಿಗುತ್ತಿರಲಿಲ್ಲ.  ಅದರ ಹುಡುಕಾಟದಲ್ಲಿ ಸಿಕ್ಕಿರುವ ಒಂದು ಮಾಹಿತಿ ಎಂದರೆ ಇತ್ತೀಚಿನ ವರೆಗೂ ‘ರಾಮ ಜನ್ಮಸ್ಥಾನ’ವೆಂದೇ ಹೆಸರಾಗಿದ್ದ 300 ವರ್ಷಗಳಷ್ಟು ಹಳೆಯದಾದ ಮಂದಿರವಿತ್ತು. 1980 ರಲ್ಲಿ ಆರಂಭವಾದ ರಾಮಜನ್ಮಭೂಮಿ ಚಳವಳಿಗೆ ಬಾಬ್ರಿ ಮಸೀದಿ ಮಾತ್ರವಲ್ಲ, ಈ ‘ಜನ್ಮಸ್ಥಾನ’ ಮಂದಿರವೂ ಬಲಿಯಾಗಿದೆ.. ಆಗಸ್ಟ್ 27, 2020 ರಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ‘ನಿರ್ಮಾಣ ಸಮಿತಿ’ಯ ಉಸ್ತುವಾರಿಯಲ್ಲಿ ಸಂಘಪರಿವಾರದ ಪ್ರಸ್ತಾಪಿತ ಹೊಸ ರಾಮ ಮಂದಿರದ ‘ವಿಶಾಲತೆಗೆ ಅವಕಾಶ ಮಾಡಿಕೊಡುವ’ ಉದ್ದೇಶದಿಂದ ಇದನ್ನು ಧ್ವಂಸ ಮಾಡಲಾಯಿತು!

ಇದಕ್ಕಿಂತ ವಿಪರ್ಯಾಸ ಬೇರೆ ಇರಲು ಸಾಧ್ಯವೆ ಎಂದಿದ್ದಾರೆ ಈ ಕುರಿತ ವಿವರಗಳನ್ನು ನೀಡಿರುವ ಫೈಜಾಬಾದ್‌ನ ಹಿಂದಿ ದೈನಿಕ ‘ಜನಮೋರ್ಚಾ’ದ ಹಿರಿಯ ಪತ್ರಕರ್ತ ಸುಮನ್‌ಗುಪ್ತ (ಅವರ ಈ ಲೇಖನದ ಇಂಗ್ಲಿಷ್ ಅನುವಾದ In Ayodhya, Landmark Ram Temple Demolished by Ram Mandir Trust to Make Way for New One ಈ ಹಿಂದೆ ‘ದಿ ವೈರ್’ನಲ್ಲಿ ಸಪ್ಟಂಬರ್ 6, 1920ರಲ್ಲಿ ಪ್ರಕಟವಾಗಿತ್ತು. ‘ಪ್ರಾಣ ಪ್ರತಿ಼ಷ್ಠಾಪನೆ’ಯ ಸಂದರ್ಭದಲ್ಲಿ ಅದನ್ನು ಮರುಪ್ರಕಟಿಸಲಾಗಿದೆ-)

ಆ ಮಂದಿರಕ್ಕೆ ಅಗತ್ಯವಾದ ಜಮೀನನ್ನು ಮುಸ್ಲಿಂ ಜಮೀನ್ದಾರರೊಬ್ಬರು 319 ವರ್ಷಗಳ ಹಿಂದೆ ದಾನ ಮಾಡಿದ್ದರು.  ಅಯೋಧ್ಯಾ ನಗರವು ಇತ್ತೀಚಿನ ವರೆಗೂ ಸೌಹಾರ್ದ ಪರಂಪರೆಯ ಸಂಕೇತವಾಗಿತ್ತು ಎಂಬುದುಕ್ಕೆ ಇಂತಹ ಹಲವು ಉದಾಹರಣೆಗಳಿವೆ ಎಂದು ಅವರು ಹೇಳುತ್ತಾರೆ. ಅದೀಗ ಸಾಮರಸ್ಯದ ಸಂಕೇತವಾಗಿ ಉಳಿಯದೆ ಕೋಮು ಸಂಘರ್ಷದ ತಾಣವಾಗಿ ಮಾರ್ಪಾಟಾಗಿದೆ ಎಂಬುದು ಬೇರೆ ಮಾತು.

ಆ ರಾಮ ‘ಜನ್ಮಸ್ಥಾನ’ ಮಂದಿರವು ಬಾಬರಿ ಮಸೀದಿಯ ಪಕ್ಕದಲ್ಲಿ ಹಾದುಹೋಗುವ ಹನುಮಾನ್‌ಗಢಿಯಿಂದ ದೋರಾಹಿ ಕುವಾಂ ವರೆಗಿನ ರಸ್ತೆಯ ಇನ್ನೊಂದು ಪಕ್ಕದಲ್ಲಿ ಇತ್ತು.  ಆ ಮಂದಿರವನ್ನು ನಿರ್ಮಾಣ ಮಾಡಿದ ಸಮಯದಲ್ಲಿ ಬಾಬರಿ ಮಸೀದಿಯಲ್ಲಿ ರಾಮನ ವಿಗ್ರಹವಿರಲಿಲ್ಲ. ರಾಮನ ವಿಗ್ರಹವನ್ನು 1949 ರ ಡಿಸೆಂಬರ್ 22 ಮತ್ತು 23 ರ ನಡುವಿನ ರಾತ್ರಿ ಬಾಬರಿ ಮಸೀದಿಯಲ್ಲಿ ಇಡಲಾಯಿತು ಎಂಬುದು ಈಗ ಎಲ್ಲರಿಗೂ ತಿಳಿದಿರುವ ಸಂಗತಿ.

ಅಯೋಧ್ಯಾ ಪಟ್ಟಣ ಫೈಜಾಬಾದ್ ಜಿಲ್ಲೆಯಲ್ಲಿದ್ದು, 1870 ರಲ್ಲಿ, ‘ಫೈಜಾಬಾದ್ ಜಿಲ್ಲೆಯ ಫೈಜಾಬಾದ್ ತಹಶೀಲ್‌ನ ಚಾರಿತ್ರಿಕ ನಕ್ಷೆ’  ಎಂಬ ಶೀರ್ಷಿಕೆಯ ವರದಿಯೊಂದನ್ನು ಅವಧದ ಸರ್ಕಾರಿ ಮುದ್ರಣಾಲಯವು ಪ್ರಕಟಿಸಿದೆ. ಆಗಿನ ಆ ಪ್ರದೇಶದ ಬ್ರಿಟಿಷ್ ಆಡಳಿತದ ಪ್ರಭಾರಿ ಕಮಿಷನರ್ ಹಾಗೂ ವಸಾಹತು ಅಧಿಕಾರಿ ಪಿ.ಕಾರ್ನಿಗಿ ಮತ್ತಿತರು ತಯಾರಿಸಿದ ಆ ವರದಿಯಲ್ಲಿ ಆಗ ಅಯೋಧ್ಯೆಯಲ್ಲಿದ್ದ ಮಹತ್ವದ ಧಾರ್ಮಿಕ ಸ್ಥಳಗಳ ಪಟ್ಟಿಮಾಡಲಾಗಿದ್ದು, ಅದರಲ್ಲಿ ಈಗ ಧ್ವಂಸವಾಗಿರುವ ಈ ರಾಮ ‘ಜನ್ಮಸ್ಥಾನ’ವು ಪ್ರಮುಖವಾಗಿದೆ ಎನ್ನುತ್ತಾರೆ ಸುಮನ್ ಗುಪ್ತ.

1867-68 ರಲ್ಲಿ ಬರೆದ ಆ ವರದಿಯ ಪ್ರಕಾರ ಆ ವೇಳೆಗೆ ಆಗ 166 ವರ್ಷಗಳಷ್ಟು ಹಳೆಯದಾದ ಆ ಮಂದಿರವನ್ನು ಮಹಂತ ರಾಮದಾಸ್ ಅವರು ಕಟ್ಟಿಸಿದರು;  ಒಂದು ಎಕರೆಯಷ್ಟು ವಿಸ್ತೀರ್ಣದ ಆ ನಿವೇಶನವನ್ನು ಮಿರ್ ಮಾಸುಮ್ ಅಲಿ ಎಂಬ ಜಮೀನ್ದಾರರು ದಾನವಾಗಿ ನೀಡಿದ್ದರು.ಆ ಮಂದಿರದ ಆವರಣದಲ್ಲಿ 22 ಸಾಧುಗಳು ವಾಸಿಸುತ್ತಿದ್ದರು ಎಂದi ಆ ವರದಿ ಹೇಳುತ್ತದೆ.

1984 ರ ವರೆಗೆ, ಈ ರಾಮ‘ಜನ್ಮಸ್ಥಾನ’ ಶ್ರೀರಾಮನ ದರ್ಶನಕ್ಕೆ ಅಯೋಧ್ಯೆಗೆ ಬರುವ ಭಕ್ತರಿಗೆ ಚಾರಿತ್ರಿಕ ಮಹತ್ವದ ಸ್ಥಳವಾಗಿತ್ತು.  ಹನುಮಾನ್‌ಗಢಿಯಿಂದ ಆರಂಭವಾಗುತ್ತಿದ್ದ ತಮ್ಮ ದರ್ಶನಗಳ ಹಾದಿಯಲ್ಲಿ ಕನಕ ಭವನ, ದಶರಥ ಮಹಲ್, ರಾಮ್ ಖಜಾನಾ, ರತ್ನಸಿಂಹಾಸನ ಮತ್ತು ರಂಗ ಮಹಲ್‌ಗಳನ್ನು ನೋಡಿಕೊಂಡು ಕೊನೆಯಲ್ಲಿ ಜನ್ಮಸ್ಥಾನ ಮತ್ತು ರಾಮ ಚಬೂತರ್/ ಸೀತಾ ರಸೋಯಿ ತಲುಪುತ್ತಿದ್ದರು. ಈ ಎಲ್ಲಾ ದೇವಸ್ಥಾನಗಳು ಅಯೋಧ್ಯಾ ಪಟ್ಟಣದ ಅತ್ಯಂತ ಶ್ರೀಮಂತರ ಪ್ರದೇಶವೆಂದು ಪರಿಗಣಿಸಲ್ಪಟ್ಟ ಕೋಟ್ ರಾಮಚಂದ್ರ ಕ್ಷೇತ್ರದಲ್ಲಿದ್ದವು.

ಹಿಂದುತ್ವ ರಾಜಕೀಯದ ಏರುಗತಿಯೊಂದಿಗೆ ರಾಮಜನ್ಮಸ್ಥಾನ ಮತ್ತಿತರ ಮಂದಿರಗಳ ಅವನತಿ ಆರಂಭವಾಯಿತು ಎನ್ನುತ್ತಾರೆ ಸುಮನ್ ಗುಪ್ತ ತಮ್ಮ ಲೇಖನದಲ್ಲಿ.

1984 ರ ನಂತರ ಹಿಂದುತ್ವ ಕಥನಗಳು ರಾಮಜನ್ಮಸ್ಥಾನದ ಗತಿಯನ್ನೇ ಬದಲಾಯಿಸಿದವು, ಅಯೋಧ್ಯಾ ವಿವಾದ ಚಾಲನೆ ಪಡೆದುಕೊಂಡಿತು. ಈ ಕಾರಣಗಳಿಂದಾಗಿ ಕೋಟ್ ರಾಮಚಂದ್ರ ಪ್ರದೇಶವು ವಿವಾದಗ್ರಸ್ತ ರಾಜಕೀಯ ವಲಯವಾಗಿ ಮಾರ್ಪಾಟಾಯಿತು; ಸುರಕ್ಷಾ ಕಾಳಜಿಗಳು ಹೆಚ್ಚಾಗುತ್ತಲೇ ಸಾಮಾನ್ಯ ಭಕ್ತರಿಗೆ ಈ ‘ಜನ್ಮಸ್ಥಾನ’ ಸೇರಿದಂತೆ ಹಲವು ಹಳೆಯ ಮಂದಿರಗಳ ಭೇಟಿ ದುಸ್ತರವಾಯಿತು.

1984 ರ ಹೊತ್ತಿಗೆ ಮಂದಿರದ ವಸತಿ ಪ್ರದೇಶದ ಕೆಳ ಮಹಡಿಯಲ್ಲಿ ಅಂಚೆ ಕಛೇರಿ ಬಂತು.. 1991  ರ ನಂತರ ಬಾಬರಿ ಮಸೀದಿಯಲ್ಲಿನ ಚಲನವಲನಗಳ ಮೇಲೆ ಕಣ್ಗಾವಲಿಡಲು ಜನ್ಮಸ್ಥಾನದ ಮೇಲುಗಡೆಯ ಭಾಗವನ್ನು ಪೋಲಿಸ್ ನಿಯಂತ್ರಣ ಕೊಠಡಿಯಾಗಿ ಪರಿವರ್ತನೆ ಮಾಡಲಾಯಿತು. ಡಿಸೆಂಬರ್ 6, 1992 ರಂದು ಇದೇ ನಿಯಂತ್ರಣ ಕೊಠಡಿಯಲ್ಲಿ ಉತ್ತರ ಪ್ರದೇಶದ ಹಿರಿಯ ಪೋಲಿಸ್ ಅಧಿಕಾರಿಗಳು ಮತ್ತು ಆಡಳಿತ ಸಿಬ್ಬಂದಿಗಳು ಕರಸೇವಕರು ಬಾಬರಿ ಮಸೀದಿಯನ್ನು ಧ್ವಂಸಮಾಡುವ ಕ್ರಿಯೆಯನ್ನು ನೋಡುತ್ತಾ ಕುಳಿತಿದ್ದರು ಎಂದು ಸುಮನ್ ಗುಪ್ತ ನೆನಪಿಸುತ್ತಾರೆ.

1993ರಲ್ಲಿ ಪಿ.ವಿ.ನರಸಿಂಹ ರಾವ್ ನೇತೃತ್ವದ ಕೇಂದ್ರ ಸರ್ಕಾರವು ಬಾಬರಿ ಮಸೀದಿಯು ಇದ್ದ ಜಾಗದ ಸುತ್ತಮುತ್ತಲ 67.703  ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ವರೆಗೂ ಭಕ್ತಾದಿಗಳು ಇಲ್ಲಿಗೆ ದರ್ಶನಕ್ಕಾಗಿ ಬರುತ್ತಿದ್ದರು, ಕೆಲವರು ಅಲ್ಲಿಯೇ ಉಳಿಯುತ್ತಿದ್ದರು ಮತ್ತು ಪೂಜೆಗಳನ್ನು ನೆರವೇರಿಸುತ್ತಿದ್ದರು.

ಆದರೆ, ಕೇಂದ್ರ ಸರ್ಕಾರವು 67 ಎಕರೆಗಳಷ್ಟು ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು ಆ ಪ್ರದೇಶದ ಸುತ್ತಮುತ್ತಲಿದ್ದ ಹತ್ತಾರು ಮಂದಿರಗಳಿಗೆ ಸಮಸ್ಯೆಗಳನ್ನು ಸೃಷ್ಟಿಮಾಡಿತು.  ಈ ಮಂದಿರಗಳಿಗೆ ಹೋಗಿಬರುವ ದಾರಿಗಳಿಗೆ ಬೇಲಿ ಹಾಕಿದ್ದರಿಂದ ಸಾರ್ವಜನಿಕರ ಕೊಡುಗೆಗಳು ಬತ್ತಿಹೋಗಿ ಆದಾಯದ ಪ್ರಮುಖ ಸಂಪನ್ಮೂಲಗಳೇ ಇಲ್ಲದಂತಾಯಿತು. ಈ ಹಿನ್ನೆಲೆಯಲ್ಲಿ ಆ ಮಂದಿರಗಳಲ್ಲಿ ದಿನನಿತ್ಯದ ಆರತಿ ಹಾಗೂ ಭೋಗ್ ಆಚರಣೆಗಳು ನಡೆಯುವುದು ತೀರ ಕಷ್ಟವಾಗಿ ಆ ಮಂದಿರಗಳ ಅಸ್ತಿತ್ವವೇ ಪ್ರಶ್ನೆಯಾಗಿ ಪರಿಣಮಿಸಿತು. ಜಮೀಂದಾರ ಮಿರ್ ಮಾಸುಮ್ ಅಲಿಯವರು ದಾನವಾಗಿ ನೀಡಿದ್ದ ಜಾಗದಲ್ಲಿನ ರಾಮ ಜನ್ಮಸ್ಥಾನಕ್ಕೆ ಪ್ರವೇಶಿಸುವುದು ಹಾಗೂ ದಿನನಿತ್ಯದ ಆರತಿ ಮತ್ತು ಭೋಗ್ ಆಚರಣೆಗಳ ವೆಚ್ಚಗಳನ್ನು ಭರಿಸುವುದು ಕೂಡ ಕಷ್ಟವಾಯಿತು.

ವಾಸ್ತವ ಸಂಗತಿಯೆಂದರೆ, ಭಕ್ತಾದಿಗಳು ಭೇಟಿ ನೀಡಲು ಉಳಿದ ಒಂದೇ ಒಂದು ಸ್ಥಳವೆಂದರೆ,  ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ನಂತರ ರಾಮಲಲ್ಲಾ ಮೂರ್ತಿಯನ್ನು ಇಟ್ಟು ತಾತ್ಕಾಲಿಕವಾಗಿ ಸೃಷ್ಟಿ ಮಾಡಿದ್ದ ಮಂದಿರ ಮಾತ್ರ. ಅಲ್ಲಿಗೆ ಹೋಗಲು ನಿರ್ಮಿಸಿದ್ದ ಅಡ್ಡಾದಿಡ್ಡಿಯಾದ ಹಾದಿಯಲ್ಲಿ ಬಂದೂಕುಧಾರಿ ಪೋಲಿಸರನ್ನು ದಾಟಿಕೊಂಡು ಅವರು ಹೋಗಬೇಕಾಗಿತ್ತು.

ಡಿಸೆಂಬರ್ 6, 1992 ರಂದು ಬಾಬರಿ ಮಸೀದಿಯನ್ನು ಕೆಡವಿದ ‘ರಾಮ ಭಕ್ತ ಕರಸೇವಕರು’  ಆ ಮಸೀದಿಯ ಹೊರ ಅಂಗಣದಲ್ಲಿದ್ದ ರಾಮ ಚಬೂತ್ರ ಮತ್ತು ಸೀತಾ ರಸೋಯಿಯನ್ನು ಕೂಡ ಧ್ವಂಸಗೊಳಿಸಿದ್ದರು ಎಂಬ ಸಂಗತಿಯನ್ನು ಸಾಮಾನ್ಯವಾಗಿ ಹೇಳಲಾಗುತ್ತಿಲ್ಲ.

 ಇದನ್ನು ಓದಿ : ಕೆರಗೋಡು ರಾಷ್ಟ್ರಧ್ವಜದ ಸ್ತಂಭದಲ್ಲಿ ಹನುಮ ಧ್ವಜ ವಿವಾದ | ಕರ್ತವ್ಯಲೋಪ ಆರೋಪದಡಿ ಪಂಚಾಯಿತಿ ಅಧಿಕಾರಿ ಅಮಾನತು

ರಾಮ ಚಬೂತ್ರ/ಸೀತಾರಸೋಯಿ ಮತ್ತು ಬಾಬರಿ ಮಸೀದಿಯಿಂದ ಪ್ರತ್ಯೇಕಿಸಲ್ಪಟ್ಟ ಬೇಲಿಯ ಸಮೀಪ ಇದ್ದ ‘1 ಜನ್ಮಭೂಮಿಎಂಬ ಫಲಕ.

1898 ರಲ್ಲಿ, ರಾಜಕುಮಾರ ಅಲ್ಬರ್ಟ್ ಎಡ್ವರ್ಡ್ ಹುಟ್ಟುಹಬ್ಬದ ವರ್ಷಾಚರಣೆಯ ಸಂದರ್ಭದಲ್ಲಿ ಅಯೋಧ್ಯಾದಲ್ಲಿನ ಬಡಾಸ್ಥಾನ್ (ದಶರಥ್ ಮಹಲ್) ಮಹಂತ,  ಮನೋಹರ್ ಪ್ರಸಾದ್ ಅವರು ಎಡ್ವರ್ಡ್ ತೀರ್ಥ ರಕ್ಷಿಣಿ ವಿವೇಚಿಣಿ ಸಭಾವನ್ನು ರಚಿಸಿದರು. ಆ ಸಭಾವು ಸಾರ್ವಜನಿಕರಿಂದ ರೂ.1,000 ಹಣವನ್ನು ಸಂಗ್ರಹಿಸಿತು ಮತ್ತು ದೇವಸ್ಥಾನಗಳು ಹಾಗೂ ಕುಂಡಗಳ ಹೆಸರುಗಳನ್ನು ಗುರುತಿಸುವ ಹಾಗೂ ಫಲಕಗಳ ಮೂಲಕ ಅವನ್ನು ಪ್ರದರ್ಶಿಸುವ ಕೆಲಸ ಮಾಡಲು ಮುಂದಾಯಿತು. ಅಂದಿನಿAದ ಅದು ‘ಜನ್ಮಭೂಮಿ’ ಎಂದನಿಸಿದ್ದರೆ, ಅದಕ್ಕಿಂತಲೂ ಮೊದಲು , ನಂತರವೂ ಮಂದಿರ ಇದ್ದ ಸ್ಥಳ ‘ಜನ್ಮಸ್ಥಾನ’ದ ಎಂದೇ ಪ್ರಚಲಿತವಾಗಿತ್ತು.

1885 ರಲ್ಲಿ ಮಹಂತ ರಘುವರ ದಾಸ್ ಅವರು ರಾಮ್ ಚಬೂತ್ರದ ಮೇಲೆ ರಾಮ ಮಂದಿರ ನಿರ್ಮಿಸಲು ಅನುಮತಿಯನ್ನು ಕೋರಿದ್ದರು.  ಆ ಅರ್ಜಿಯನ್ನು ಫೈಜಾಬಾದಿನ ಉಪ ನ್ಯಾಯಾಧೀಶರು ವಜಾ ಮಾಡಿದ್ದರು ಮತ್ತು ಆ ನಂತರದ ಮನವಿಯನ್ನು ಕೂಡ ಜಿಲ್ಲಾ ನ್ಯಾಯಾಧೀಶರು ವಜಾ ಮಾಡಿದರು.

ರಾಮ್ ಚಬೂತ್ರ ಹಾಗೂ ಸೀತಾ ರಸೋಯಿ ಎರಡೂ ಪರಸ್ಪರ ಲಂಬಕೋನದಲ್ಲಿ ನಿರ್ಮಿತವಾಗಿದ್ದು, ಎರಡೂ ಬಾಬರಿ ಮಸೀದಿಯ ಮುಖ್ಯದ್ವಾರಕ್ಕೆ ಸಮೀಪದಲ್ಲಿದ್ದವು. 1859  ರಲ್ಲಿ ವಸಾಹತು ಅಡಳಿತವು ಮಸೀದಿ ಮತ್ತು ಈ ಎರಡೂ ಕಟ್ಟಡಗಳ ನಡುವೆ ಒಂದು ಕಬ್ಬಿಣದ ಕಂಬಿಗಳ ಬೇಲಿಯನ್ನು ನಿರ್ಮಿಸಿತ್ತು; ಎರಡೂ ಸಮುದಾಯದವರು ತಮ್ಮ ತಮ್ಮ ಪ್ರದೇಶಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಕೂಲ ಮಾಡಿ ಕೊಟ್ಟಿತ್ತು.

ಬಾಬರಿ ಮಸೀದಿಯ ಹಕ್ಕುಪತ್ರಗಳಲ್ಲಿ ಮಸೀದಿಯಿದ್ದ ಸ್ಥಳವನ್ನು ‘ಒಳಗಿನ ಅಂಗಳ’ ಎಂದೂ, ರಾಮ್ ಚಬೂತ್ರ ಹಾಗೂ ಸೀತಾ ರಸೋಯಿ ಇದ್ದ ಸ್ಥಳವನ್ನು ‘ಹೊರ ಅಂಗಳ’ ಎಂದು ಉಲ್ಲೇಖಿಸಲಾಗಿತ್ತು.  1949ರ ಡಿಸೆಂಬರ್ 22 ರ ವರೆಗೆ ಒಳಗಿನ ಅಂಗಳದಲ್ಲಿ ‘ರಾಮ್‌ಲಲ್ಲಾ’ ಮೂರ್ತಿಯಿರಲಿಲ್ಲ, ಅಲ್ಲಿ ನಮಾಜುಗಳು ನಡೆಯುತ್ತಿದ್ದವು. ಮತ್ತು ರಾಮ್ ಚಬೂತ್ರಾದಲ್ಲಿ ಡಿಸೆಂಬರ್ 6, 1992ರಂದು ಕರಸೇವಕರು ಬಾಬ್ರಿಮಸೀದಿಯೊಂದಿಗೆ ಅದನ್ನು ಕೂಡ ಧ್ವಂಸ ಮಾಡುವ ವರೆಗೂ ಅಲ್ಲಿ ಪೂಜೆಗಳು ನಡೆಯುತ್ತಿದ್ದವು ಎಂದು ನೆನಪಿಸಿದ್ದರು ತಮ್ಮ ಲೇಖನದಲ್ಲಿ ಸುಮನ್ ಗುಪ್ತ.

2010 ರಲ್ಲಿ ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಆ ಪ್ರದೇಶವನ್ನು ಮೂರು ವಿಭಾಗಗಳಾಗಿ ವಿಭಜಿಸಿ ಒಂದು ಭಾಗವನ್ನು ನಿರ್ಮೋಹಿ ಅಖಾಡಾದ ಸ್ವಾಧೀನಕ್ಕೆ ನೀಡಿತು. ಡಿಸೆಂಬರ್ 6, 1992  ರ ವರೆಗೂ ರಾಮ್ ಚಬೂತ್ರ ಹಾಗೂ ಸೀತಾ ರಸೋಯಿ ಇದ್ದ ಭಾಗವು ನಿರ್ಮೋಹಿ ಅಖಾಡರವರ ಸ್ವಾಧೀನದಲ್ಲಿತ್ತು.

ನವಂಬರ್ 9, 2019 ರಂದು ಸುಪ್ರೀಂ ಕೋರ್ಟು ತನ್ನ ಅಂತಿಮ ತೀರ್ಪಿನಲ್ಲಿ ನೂತನ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು.  ಮೋದಿ ಸರ್ಕಾರವು ತೀರ್ಪಿನ ಅನುಸಾರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಂಬುದನ್ನು ಸ್ಥಾಪಿಸಿತು. 1993 ರಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ 67 ಎಕೆರೆಯ ಜಮೀನನ್ನು ಆ ಟ್ರಸ್ಟಿಗೆ ಹಸ್ತಾಂತರಿಸಿದ ಕೇಂದ್ರ ಸರ್ಕಾರವು ಮಂದಿರ ನಿರ್ಮಾಣ ಮಾಡಲು ಆ ಟ್ರಸ್ಟಿಗೆ ಆದೇಶ ನೀಡಿತು. ವಿಶ್ವ ಹಿಂದೂ ಪರಿಷತ್ ತಯಾರಿಸಿದ್ದ ಹಳೆಯ ರಾಮ ಮಂದಿರ ಮಾದರಿಯನ್ನು ಪರಿಷ್ಕರಿಸಿ ಭವ್ಯ ಪ್ರಮಾಣದ ಮಂದಿರ ನಿರ್ಮಾಣಕ್ಕೆ ಸಿದ್ಧತೆ ಆರಂಭವಾಯಿತು.

ಈ ಸಿದ್ಧತೆಯ ಭಾಗವಾಗಿಯೇ ಆಗಸ್ಟ್ 27, 2020  ರಂದು ರಾಮ ಜನ್ಮಸ್ಥಾನ ಮತ್ತು ಅಲ್ಲಿ ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಇದ್ದ ರಾಮನ ಹೆಸರಿನೊಂದಿಗೆ ಜೋಡಿಸಲ್ಪಟ್ಟ ಸುಮಾರಾಗಿ ಎಲ್ಲ ಕಟ್ಟಡಗಳನ್ನೂ ಧ್ವಂಸ ಮಾಡಲಾಯಿತು.

ಇದಕ್ಕೂ ಮುಂಚೆ, ಕಲ್ಯಾಣ ಸಿಂಗ್ ನೇತೃತ್ವದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು 1991 ರಲ್ಲಿ ಸಾರ್ವಜನಿಕ ಸೌಕರ್ಯ ಕಲ್ಪಿಸಲು ಎಂಬ ಉದ್ದೇಶಕ್ಕಾಗಿ ಬಾಬರಿ ಮಸೀದಿಯ ಬಳಿ 2.77  ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿತ್ತು. ಆ ಜಮೀನನ್ನು ಸಮತಟ್ಟಾಗಿ ಮಾಡುವ ಉದ್ದೇಶದಿಂದ ಆ ಪ್ರದೇಶದಲ್ಲಿದ್ದ ಹಲವಾರು ಚಿಕ್ಕ-ದೊಡ್ಡ ಮಂದಿರಗಳನ್ನು ನಾಶಗೊಳಿಸಲಾಗಿತ್ತು. ಹಾಗೆ ನಾಶಗೊಂಡ ಪ್ರಮುಖ ಮಂದಿರಗಳಲ್ಲಿ ಸುಮಿತ್ರಾ ಭವನ್, ಸಂಕಟಮೋಚನ್ ಮತ್ತು ರಾಮ್ ಜಾನಕಿ ಮಂದಿರಗಳು ಅಲ್ಲಿದ್ದವು. ಇವತ್ತು ಆ ಪ್ರದೇಶವು ವಿಶಾಲ ಮೈದಾನದಂತೆ ಕಾಣುತ್ತಿದೆ.

ಅಯೋಧ್ಯೆ ಅದರ ‘ಗಂಗಾಜಮುನಿ ಸಂಸ್ಕೃತಿಅಂದರೆ ಸಮನ್ವಯದ ಸಂಸ್ಕೃತಿಗೆ ಹೆಸರಾಗಿತ್ತು. ಮುಸ್ಲಿಂ ರಾಜರುಗಳು ಹಾಗೂ ಜಮೀನುದಾರರು ಅಯೋಧ್ಯಾ ಸುತ್ತಮುತ್ತಲ ಪ್ರದೇಶಗಳಲ್ಲಿ ರಾಮ ಜನ್ಮಸ್ಥಾನ ಹಾಗೂ ಹತ್ತಾರು ದೇವಸ್ಥಾನಗಳ ಸ್ಥಾಪನೆ ಹಾಗೂ ಸಂರಕ್ಷಣೆಗೆ ಜಮೀನುಗಳನ್ನು ದಾನ ಮಾಡಿರುವುದ ಕ್ಕೆ ಸಾಕಷ್ಟು ಸಾಕ್ಷಾಧಾರಗಳಿವೆ. ಹನುಮಾನ್‌ಗಢಿ, ಆಚಾರಿ, ರಾಣೋಪಲಿ ನಾನಕ್‌ಶಾಹಿ ಮತ್ತು ರಾಮ ಗುಲೇಲ ದೇವಸ್ಥಾನಗಳು, ಹಾಗೂ ಖಾಕಿ ಅಖಾಡಾ ಮಂದಿರಗಳು ಬಹಳ ಪ್ರಮುಖವಾದವು. ಈಗಾಗಲೇ ಈ ಮೇಲೆ ಹೇಳಿರುವ 1870 ರ ಕಾರ್ನೆಗಿ ಒಪ್ಪಂದದ ವರದಿಯಲ್ಲಿ ಇವುಗಳ ಬಗ್ಗೆ ದಾಖಲೆಗಳಿವೆ.

ಒಂದು ಶತಮಾನದ ನಂತರ ರಾಮ ಚಬೂತ್ರ/ ಸೀತಾ ರಸೋಯಿ ನೆನಪು ಮಾಸಿ ಹೋಗಲಾರಂಭಿಸಿದೆ. ಕೆಲವರು ಮಾತ್ರವೇ ಅದರ ಕೊನೆಯನ್ನು – ಡಿಸೆಂಬರ್ 6, 1992 ರಂದು ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಕರಸೇವಕರೇ ಅದನ್ನೂ ನೆಲಸಮ ಮಾಡಿದರು ಎಂದು ನೆನಪು ಮಾಡಿಕೊಳ್ಳಬಹುದು. “ಜನ್ಮಸ್ಥಾನ’ದ ನೆನಪೂ ಕೂಡ ಮಾಸಿ ಹೋಗುತ್ತದೆ. ಕೆಲವರು, ಮುಸ್ಲಿಂ ರಾಜರುಗಳು ಹಾಗೂ ಜಮೀನುದಾರರ ಜಮೀನು ಹಾಗೂ ಹಣ ದಾನಗಳಿಂದ ಕಟ್ಟಲ್ಪಟ್ಟ ಅಯೊಧ್ಯ್ಯಾದಲ್ಲಿನ 300 ವರ್ಷಗಳ ಹಳೆಯ ಚಾರಿತ್ರಿಕ ‘ಜನ್ಮಸ್ಥಾನ’ವನ್ನು ಹಾಗು ಮತ್ತಿತರ ದೇವಸ್ಥಾನಗಳನ್ನು,  ನೆನಪು ಮಾಡಿಕೊಳ್ಳಬಹುದುಅಯೋಧ್ಯೆಯ ಸಹಜೀವನ ಸಂಸ್ಕೃತಿಯ ಪ್ರತೀಕಗಳಾಗಿದ್ದ ಇತಿಹಾಸದ ಹೆಗ್ಗುರುತುಗಳ ನಾಶದೊಂದಿಗೆ ಇತಿಹಾಸದ ಇಡೀ ಅಧ್ಯಾಯವೊಂದನ್ನು ಹೇಳಹೆಸರಿಲ್ಲದಂತೆ ನಿರ್ನಾಮ ಮಾಡಲಾಯಿತು ಎಂದಿದ್ದಾರೆ ಸುಮನ್ ಗುಪ್ತ.

ಇದನ್ನು ನೋಡಿ : ಸೌಹಾರ್ದ ಕರ್ನಾಟಕ : ಮಾನವಸರಪಳಿ ತಯಾರಿ ಕುರಿತು ಡಾ. ಎಸ್‌.ವೈ ಗುರುಶಾಂತ್‌ ಮಾತುಗಳು

Donate Janashakthi Media

Leave a Reply

Your email address will not be published. Required fields are marked *