ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್‌ಗೆ ತಮಿಳುನಾಡು ಸರ್ಕಾರದಿಂದ ಕೋಮು ಸೌಹಾರ್ದ ಪ್ರಶಸ್ತಿ

ನವದೆಹಲಿ: ತಮಿಳುನಾಡು ಸರ್ಕಾರ ನೀಡುವ 2024 ರ ‘ಕೋಟ್ಟೈ ಅಮೀರ್ ಕೋಮು ಸೌಹಾರ್ದ ಪ್ರಶಸ್ತಿ’ಗೆ ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಕ್ಟ್‌ಚೆಕ್ಕರ್, ಪತ್ರಕರ್ತ ಮೊಹಮ್ಮದ್ ಜುಬೇರ್‌ ಭಾಜನರಾಗಿದ್ದಾರೆ. “ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ಜುಬೈರ್ ವಿವಿಧ ರೀತಿಯ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ” ಎಂದು ತಮಿಳುನಾಡು ಸರ್ಕಾರ ಶುಕ್ರವಾರ ಹೇಳಿದೆ.

ಪತ್ರಕರ್ತ ಪ್ರತಿಕ್ ಸಿನ್ಹಾ ಅವರ ಜೊತೆ ಸೇರಿ ಆಲ್ಟ್ ನ್ಯೂಸ್ ವೆಬ್‌ಸೈಟ್ ಅನ್ನು ಸ್ಥಾಪಿಸಿದ್ದ ಜುಬೇರ್‌ ಅವರು “ಸಾಮಾಜಿಕ ಮಾಧ್ಯಮದಲ್ಲಿ ಬರುವ ಸುದ್ದಿಗಳ ಸತ್ಯಾಸತ್ಯತೆಯನ್ನು” ವಿಶ್ಲೇಷಿಸಿ, ಅದು ನಿಜವೇ ಸುಳ್ಳೆ ಎಂದು ಫ್ಯಾಕ್ಟ್‌ಚೆಕ್ ಮಾಡುತ್ತಾರೆ. ಜುಬೇರ್ ಅವರ ಕೆಲಸವು ಸಮಾಜದಲ್ಲಿ ಹಿಂಸಾಚಾರ ಸಂಭವಿಸುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.

ಇದನ್ನೂ ಓದಿ: 75 ನೇ ಗಣರಾಜ್ಯೋತ್ಸವ ಆಚರಿಸಿದ ಭಾರತ | ಮಹಿಳಾ ಮತ್ತು ಮಿಲಿಟರಿ ಶಕ್ತಿಯ ಭವ್ಯ ಪ್ರದರ್ಶನ!

2023ರ ಮಾರ್ಚ್ ವೇಳೆಗೆ ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿ ನಡೆಯುತ್ತಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಹರಡಿದಾಗ, ವೀಡಿಯೊದ ಸತ್ಯಾಸತ್ಯತೆಯ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ನಡೆಸಿ, ದಾಳಿ ಎಂದು ಹರಡಲಾಗುತ್ತಿರುವ ವಿಡಿಯೊ ತಮಿಳುನಾಡಿನದ್ದಲ್ಲ ಎಂದು ಸಾಬೀತುಪಡಿಸಿದ್ದರು. ಇದನ್ನು ಸರ್ಕಾರ ಪ್ರಮುಖವಾಗಿ ಉಲ್ಲೇಖಿಸಿದೆ.

ಅವರ ಈ ಫ್ಯಾಕ್ಟ್‌ಚೆಕ್, ತಮಿಳುನಾಡಿನ ವಿರುದ್ಧ ವದಂತಿಗಳನ್ನು ಹರಡುವುದನ್ನು ನಿಲ್ಲಿಸಿತು ಮತ್ತು ತಮಿಳುನಾಡಿನಲ್ಲಿ ಜಾತಿ, ಧರ್ಮ, ಜನಾಂಗ ಮತ್ತು ಭಾಷೆಯಿಂದ ಉಂಟಾದ ಹಿಂಸಾಚಾರವನ್ನು ತಡೆಯುವಂತಾಯಿತು ಎಂದು ಸರ್ಕಾರ ಹೇಳಿದೆ.

ಜುಬೈರ್ ಅವರು 1983 ರ ಹಿಂದಿ ಚಲನಚಿತ್ರದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡು 2018 ರ ವೇಳೆಗೆ ಟ್ವೀಟ್ ಮಾಡಿದ್ದ ಕಾರಣಕ್ಕೆ 2022 ರಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ ದೆಹಲಿ ಪೊಲೀಸರು ಬಂಧಿಸಿದ್ದರು. ಸುಪ್ರೀಂ ಕೋರ್ಟ್ ಜುಬೇರ್‌ ಅವರಿಗೆ ಜಾಮೀನು ನೀಡುವವರೆಗೆ ಅವರು ಜೈಲಿನಲ್ಲಿ ಇರುವಾಗಲೆ ಅವರ ವಿರುದ್ಧ ಆರು ಪ್ರಕರಣಗಳು ದಾಖಲಾಗಿದ್ದವು.

ವೈರಲ್ ಆಗಿರುವ ಸುಳ್ಳು ಪ್ರತಿಪಾದನೆ ಮತ್ತು ಸುಳ್ಳು ಮಾಹಿತಿಗಳನ್ನು ಫ್ಯಾಕ್ಟ್‌ಚೆಕ್ ಮಾಡುವ ಜುಬೈರ್ ಅವರನ್ನು ಆನ್‌ಲೈನ್‌ನಲ್ಲಿ ಹಿಂದುತ್ವದ ಬೆಂಬಲಿಗರು ತೀವ್ರ ದಾಳಿ ಮಾಡುತ್ತಾರೆ.

ಇದನ್ನೂ ಓದಿ: ಜೆಡಿಎಸ್ – ಬಿಜೆಪಿ ಸೀಟು ಮಾತುಕತೆ | ಯಾವುದೆ ಕಾರಣಕ್ಕೂ ಮಂಡ್ಯ ಬಿಟ್ಟುಕೊಡಲ್ಲ ಎಂದ ಸುಮಲತಾ

ತಮಗೆ ತಮಿಳುನಾಡು ನೀಡಿರುವ ಪ್ರಶಸ್ತಿಯ ಬಗ್ಗೆ ಪ್ರತಿಕ್ರಿಯಿಸಿರುವ ಜುಬೇರ್ ಅವರು, “ಎಲ್ಲರಿಗೂ ಧನ್ಯವಾದಗಳು. ತಮಿಳುನಾಡು ಸರ್ಕಾರದಿಂದ ‘ಕೋಟ್ಟೈ ಅಮೀರ್ ಕೋಮು ಸೌಹಾರ್ದ ಪ್ರಶಸ್ತಿ’ ಸ್ವೀಕರಿಸಿದ್ದು ನನಗೆ ಸಂತೋಷವಾಗಿದೆ. ಆಲ್ಡ್‌ ನ್ಯೂಸ್‌ನಲ್ಲಿನ ನಮ್ಮ ಕೆಲಸವನ್ನು ಗುರುತಿಸಿ ಪ್ರಶಂಸಿಸಲಾಗಿದೆ ಮತ್ತು ಆಚರಿಸಲಾಗಿದೆ ಎಂಬುದಕ್ಕೆ ತುಂಬಾ ಸಂತೋಷವಾಗಿದೆ. ನನ್ನ ಎಲ್ಲಾ ತಂಡದ ಸದಸ್ಯರಿಗೆ ಅಭಿನಂದನೆಗಳು. ನಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ಬೆಂಬಲಕ್ಕಾಗಿ ಎಲ್ಲಾ ಹಿತೈಷಿಗಳಿಗೆ ಧನ್ಯವಾದಗಳು” ಎಂದು ಅವರು ಹೇಳಿದ್ದಾರೆ.

ಅವರನ್ನು ಪ್ರಶಸ್ತಿಗಾಗಿ ಪರಿಗಣಿಸಿದ ಪ್ರಮುಖವಾದ ಫ್ಯಾಕ್ಟ್‌ಚೆಕ್ ಅನ್ನು ಕೂಡಾ ಜಬೇರ್‌ ಹಂಚಿಕೊಂಡಿದ್ದು, “ನನ್ನ ತಂಡವು ತಮಿಳುನಾಡಿನಲ್ಲಿ ಬಿಹಾರದಿಂದ ವಲಸೆ ಬಂದ ಕಾರ್ಮಿಕರಿಗೆ ಸಂಬಂಧಿಸಿದ ಅಪಾಯಕಾರಿ ನಕಲಿ ಸುದ್ದಿಗಳನ್ನು ಫ್ಯಾಕ್ಟ್‌ಚೆಕ್ ಮಾಡಿರುವ ಹಲವು ವರದಿಗಳನ್ನು ಸರ್ಕಾರವು ಗುರುತಿಸುತ್ತದೆ ಎಂದು ನನಗೆ ತಿಳಿದಿರಲಿಲ್ಲ” ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ಗಣತಂತ್ರ 75 : ಎತ್ತ ಚಲಿಸುತ್ತಿದೆ ಭಾರತ | ಜಾತ್ಯಾತೀತ ಆಶಯಗಳ ಆಚರಣೆ, ವಿಶ್ಲೇಷಣೆ : ಕೆ.ಎನ್‌ ಉಮೇಶ್‌

Donate Janashakthi Media

Leave a Reply

Your email address will not be published. Required fields are marked *