ಮಂತ್ರಾಕ್ಷತೆಯಿಂದ ಹಸಿದ ಹೊಟ್ಟೆ ತುಂಬುವುದಿಲ್ಲ : ಸಚಿವ ಶಿವರಾಜ ತಂಗಡಗಿ

ಚಿತ್ರದುರ್ಗ:  ಮಂತ್ರಾಕ್ಷತೆಯಿಂದ  ನಿರುದ್ಯೋಗಿಗಳ ಕಷ್ಟ ತಪ್ಪುವುದಿಲ್ಲ, ಹಸಿದ ಹೊಟ್ಟೆ ತುಂಬುವುದಿಲ್ಲ, ಬೀದಿಯಲ್ಲಿರುವವರಿಗೆ ಮನೆಯೂ ಸಿಗುವುದಿಲ್ಲ. ಪ್ರಧಾನಿ ಮೋದಿಯವರು ದೇವಸ್ಥಾನ ತೊಳೆಯುವುದರ ಬದಲು ದೇಶದ ನಿರುದ್ಯೋಗ ಸಮಸ್ಯೆ ನಿವಾರಿಸಲಿ ಎಂದು ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಶಿವರಾಜ ತಂಗಡಗಿ ಸವಾಲು ಹಾಕಿದ್ದಾರೆ. ಮಂತ್ರಾಕ್ಷತೆ

ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯವರಿಗೆ ಧರ್ಮ, ಪಾಕಿಸ್ತಾನ, ದೇವಸ್ಥಾನ, ಮಸೀದಿ ವಿಚಾರಗಳು ನೆನಪಾಗುತ್ತವೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳಲ್ಲಿ ಎಂದಿಗೂ ಬಡವರು, ದೀನದಲಿತರು, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಒಂದೂ ಮಾತನಾಡಲಿಲ್ಲ. ಅವರಿಗಾಗಿ ರೂಪಿಸಿದ ಯೋಜನೆಗಳ ಮಟ್ಟಿಗೂ ಚರ್ಚೆಯಾಗಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ ತಂಗಡಗಿ ಅವರು ಹೇಳಿದರು. ದೇವಸ್ಥಾನ

ರಾಮಮಂದಿರ ನಿರ್ಮಾಣವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ರಾಮಮಂದಿರದ ಬಾಗಿಲು ತೆರೆದಿದ್ದು ರಾಜೀವ್ ಗಾಂಧಿಯವರು. ಅದನ್ನು ಎಂದಿಗೂ ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ. ಈಗ ಮಂತ್ರಾಕ್ಷತೆ ಹಿಡಿದುಕೊಂಡು ಮನೆಮನೆಗೆ ಓಡಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. 

ಇದನ್ನು ನೋಡಿ : ಜಾತಿ ಆಧಾರಿತ ಬಹಿಷ್ಕಾರ ಸಮರ್ಥನೆ : ಪೇಜಾವರ ಶ‍್ರೀ, ಟಿವಿ ನಿರೂಪಕ ಅಜಿತ್‌ ಹನುಮಕ್ಕನವರ್ ವಿರುದ್ಧ ದೂರು ದಾಖಲು

ಅನ್ನಭಾಗ್ಯ ಯೋಜನೆಗೆ ಹಣ ಕೊಡುತ್ತೇವೆ, ಅಕ್ಕಿ ಕೊಡಿ ಎಂದು ಕೇಳಿದರೂ ಅಕ್ಕಿ ಪೂರೈಸಲಿಲ್ಲ. ಈಗ ಮಂತ್ರಾಕ್ಷತೆಯನ್ನು ತೆಗೆದುಕೊಂಡು ಮನೆಮನೆಗೆ ತಲುಪಿಸುತ್ತಿದ್ದಾರೆ. ಮಂತ್ರಾಕ್ಷತೆಯಿಂದ ಹೊಟ್ಟೆ ತುಂಬುವುದಿಲ್ಲ, ಹಸಿವು ನೀಗುವುದಿಲ್ಲ, ಬಡತನವೂ ಹೋಗುವುದಿಲ್ಲ, ಮನೆಯೂ ಸಿಗುವುದಿಲ್ಲ. ಬೀದಿಬೀದಿ ಅಲೆಯುತ್ತಿರುವ ಯುವಕರಿಗೆ ಉದ್ಯೋಗವೂ ದೊರಕುವುದಿಲ್ಲ. ಅದು ಕೇವಲ ಇವರ ರಾಜಕೀಯ ಲಾಭಕ್ಕಷ್ಟೇ ಬಳಕೆಯಾಗುತ್ತಿದೆ. ಮಂತ್ರಾಕ್ಷತೆಗಾಗಿ ಮನೆಮನೆ ಸುತ್ತುವವರು ಪ್ರತಿ ಮನೆಯ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿ. ಆ ಮೂಲಕ ಜನರಿಗಾಗಿ ಒಳ್ಳೆಯ ಯೋಜನೆ ಜಾರಿಗೊಳ್ಳುವಂತೆ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಮಾಜಿ ಸಚಿವ ಈಶ್ವರಪ್ಪ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಜೈಲು ಸೇರಬೇಕಿತ್ತು. ತಮ್ಮ ತಟ್ಟೆಯಲ್ಲಿ ಬಿದ್ದಿರುವ ಸತ್ತ ಕತ್ತೆಯನ್ನು ನೋಡಿಕೊಳ್ಳದೆ, ಇನ್ನೊಬ್ಬರ ತಟ್ಟೆಯ ನೊಣದ ಬಗ್ಗೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.

ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ 4 ವರ್ಷದಿಂದ ಎಲ್ಲಿ ಹೋಗಿದ್ದರು. ಚುನಾವಣೆ ಸಮೀಪಿಸುತ್ತಿರುವಂತೆ ಹೊರಗೆ ಬಂದು ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ. ಮಸೀದಿಗಳ ಜಾಗದಲ್ಲಿ ದೇವಸ್ಥಾನಗಳಿದ್ದವು ಎಂದು ಹೇಳಿ ಶಾಂತಿ ಕದಡುವುದನ್ನು ಬಿಟ್ಟರೆ ಅವರ ಸಾಧನೆಯೇನು? ಕ್ಷೇತ್ರದ ಎಷ್ಟು ಜನರ ಸಮಸ್ಯೆ ಬಗೆಹರಿಸಿದ್ದಾರೆ? ಯಾವ ಯೋಜನೆಗಳನ್ನು ಜನರಿಗಾಗಿ ಜಾರಿಗೆ ತಂದಿದ್ದಾರೆ ಎಂದು ಪ್ರಶ್ನಿಸಿದರು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ನಮಗೂ ಅವರದೇ ಭಾಷೆಯಲ್ಲಿ ಮಾತನಾಡಲು ಗೊತ್ತಿದೆ ಎಂದು ಏಕವಚನದಲ್ಲಿ ತಿರುಗೇಟು ನೀಡಿದರು.

ಇದನ್ನು ನೋಡಿ : ಸಂಕ್ರಾಂತಿ, ಸಂಕ್ರಮಣ ಎಂದರೇನು? ಉತ್ತರಾಯಣ ಪುಣ್ಯಕಾಲ ನಿಜವೇ? – ಚಿಂತಕ ಜಿ.ಎನ್. ನಾಗರಾಜ ರವರ ವಿಶ್ಲೇಷಣೆ

Donate Janashakthi Media

Leave a Reply

Your email address will not be published. Required fields are marked *