ಹೈದರಾಬಾದ್‌ | ಮೈಸೂರು ಸ್ಯಾಂಡಲ್ ಸೋಪ್ ನಕಲಿ ಘಟಕ ಬಯಲಿಗೆ; 2 ಕೋಟಿ ರೂ. ಸರಕು ವಶಕ್ಕೆ!

ಬೆಂಗಳೂರು: ಕರ್ನಾಟಕ ಸರ್ಕಾರ ಸ್ವಾಮ್ಯದ ಕಂಪೆನಿಯಾದ ಕೆಎಸ್‌ಡಿಎಲ್‌ನ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪ್ ಅನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದ ಘಟಕವನ್ನು ಹೈದರಾಬಾದ್‌ನಲ್ಲಿ ಭೇದಿಸಲಾಗಿದೆ ಎಂದು ವರದಿಯಾಗಿದೆ. ಕೆಲವು ನಕಲಿ ಮೈಸೂರು ಸ್ಯಾಂಡಲ್ ಸೋಪ್ ಉತ್ಪನ್ನಗಳ ಸಹಿತ 2 ಕೋಟಿ ಮೌಲ್ಯದ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ಹೇಳಿದೆ.

ಹೈದರಾಬಾದ್ ಮೂಲದ ಆರೋಪಿಗಳ ವಿರುದ್ಧ ಮಲಕಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ರಾಜ್ಯ ಕೈಗಾರಿಕಾ ಸಚಿವರ ಕಚೇರಿಯು ಹೇಳಿಕೆ ನೀಡಿದ್ದು, ಕಾರ್ಯಾಚರಣೆಯ ವೇಳೆ ನಕಲಿ ಉತ್ಪನ್ನಗಳು ಮತ್ತು ಪ್ಯಾಕಿಂಗ್‌ಗೆ ಬಳಸುವ ರಟ್ಟಿನ ಪೆಟ್ಟಿಗೆಗಳು ಸೇರಿದಂತೆ ಸುಮಾರು 2 ಕೋಟಿ ಮೌಲ್ಯದ ಸರಕುಗಳು ಪತ್ತೆಯಾಗಿವೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಭಾರತ್ ಜೋಡೋ ನ್ಯಾಯ್ ಯಾತ್ರೆ | ಮಣಿಪುರದಲ್ಲಿ ಮತ್ತೆ ಸಾಮರಸ್ಯ ತರಲು ಬಯಸುತ್ತೇವೆ – ರಾಹುಲ್ ಗಾಂಧಿ

150 ಗ್ರಾಂ (1,800 ಪೀಸಸ್) ತೂಕದ ಮೂರು ಸಾಬೂನು ಪ್ಯಾಕ್‌ಗಳ ಇಪ್ಪತ್ತು ಪೆಟ್ಟಿಗೆಗಳು, 75 ಗ್ರಾಂ (9,400 ಪೀಸಸ್) ತೂಕದ ಸಾಬೂನು ಪ್ಯಾಕ್‌ಗಳ  47 ಪೆಟ್ಟಿಗೆಗಳು, 150 ಗ್ರಾಂ ಸಾಬೂನುಗಳ ಪ್ಯಾಕ್‌ ಮಾಡಲು ಸಾಧ್ಯವಿರುವ ಮೈಸೂರು ಸ್ಯಾಂಡಲ್ ಸೋಪ್ ಪ್ಯಾಕಿಂಗ್‌ನ ಖಾಲಿ ಬಾಕ್ಸ್‌ಗಳು (400 ಪೀಸಸ್) ಮತ್ತು 75 ಗ್ರಾಂಗೆ ಖಾಲಿ ಮೈಸೂರು ಸ್ಯಾಂಡಲ್ ಸೋಪ್ ಪ್ಯಾಕಿಂಗ್ ಬಾಕ್ಸ್‌ಗಳು ಸೋಪ್ (400 ಪೀಸಸ್) ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವರ ಕಚೇರಿಯ ಪ್ರಕಟಣೆ ತಿಳಿಸಿದೆ.

ಹೈದರಾಬಾದ್ ಮಾರುಕಟ್ಟೆಗೆ ನಕಲಿ ಮೈಸೂರು ಸ್ಯಾಂಡಲ್ ಸೋಪ್ ಸರಬರಾಜಾಗುತ್ತಿರುವ ಬಗ್ಗೆ ಕೆಎಸ್‌ಡಿಎಲ್ ಅಧ್ಯಕ್ಷರೂ ಆದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್ ಅವರಿಗೆ ಸೂಚಿಸಿದ್ದರು.

ಇದನ್ನೂ ಓದಿ: ಬಹಿಷ್ಕಾರಕ್ಕೆ ಜಗ್ಗದ ಮಾಲ್ಡೀವ್ಸ್ | ಮಾರ್ಚ್ 15ರ ಮೊದಲು ಸೇನೆ ಹಿಂಪಡೆಯಲು ಭಾರತಕ್ಕೆ ಗಡುವು

“ಹೈದರಾಬಾದ್‌ನ ಕೆಲವು ಪ್ರದೇಶಗಳಲ್ಲಿ ನಕಲಿ ಸಾಬೂನುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ, ಯಾರು ಸರಬರಾಜು ಮಾಡುತ್ತಿದ್ದಾರೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ನಂತರ ಸ್ವತಃ ಕೆಎಸ್‌ಡಿಎಲ್ ಸಿಬ್ಬಂದಿಯೇ 5 ಲಕ್ಷ ಮೌಲ್ಯದ ಉತ್ಪನ್ನ ಖರೀದಿಸಿ ಅಸಲಿತನ ಪರೀಕ್ಷಿಸಿದ್ದಾರೆ. ಆದರೆ, ಅದು ನಕಲಿ ಎಂಬುದು ದೃಢಪಟ್ಟಿದೆ” ಎಂದು ಪ್ರಕಟಣೆ ತಿಳಿಸಿದೆ.

ಕೆಎಸ್‌ಡಿಎಲ್ ಸಿಬ್ಬಂದಿ 25 ಲಕ್ಷ ರೂಪಾಯಿ ಮೌಲ್ಯದ ಸಾಬೂನು ಖರೀದಿಸಲು ಆರ್ಡರ್ ಮಾಡಿದ್ದು, ವಾಹನದಲ್ಲಿ ಸಾಗಿಸುವ ನೆಪದಲ್ಲಿ ತಯಾರಿಕೆ ನಡೆಯುತ್ತಿರುವ ಸ್ಥಳಕ್ಕೆ ತಲುಪಿದ್ದಾರೆ ಎಂದು ಪ್ರಶಾಂತ್ ಹೇಳಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ವಿಡಿಯೊ ನೋಡಿ: ಸುಗ್ಗಿ ಹಬ್ಬ. ಸಂಕ್ರಾಂತಿಯ ಸೊಬಗು..ಜನಪದ ಹಾಡು… Janashakthi Media

Donate Janashakthi Media

Leave a Reply

Your email address will not be published. Required fields are marked *