ಲಖ್ನೋ: ತಮ್ಮ ಪಕ್ಷವು 2024 ರ ಲೋಕಸಭಾ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲಿದ್ದು, ಪ್ರತಿಪಕ್ಷಗಳ ಒಕ್ಕೂಟವಾದ ಇಂಡಿಯಾ ಅಥವಾ ಬಿಜೆಪಿ ನೇತೃತ್ವದ ಎನ್ಡಿಎಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ಅಧ್ಯಕ್ಷರಾದ ಮಾಯಾವತಿ ಅವರು ಸೋಮವಾರ ಹೇಳಿದ್ದಾರೆ. ತನ್ನ 68 ನೇ ಹುಟ್ಟುಹಬ್ಬದಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ ಅವರು, ರಾಜಕೀಯ ನಿವೃತ್ತಿ ಹೊಂದುವ ಯಾವುದೇ ಯೋಚನೆ ಇಲ್ಲ ಎಂದು ಹೇಳಿದ್ದು, ಮಾಧ್ಯಮಗಳ ವರದಿಯಗಳನ್ನು ತಳ್ಳಿ ಹಾಕಿದ್ದಾರೆ.
ತಮ್ಮ ಚುನಾವಣಾ ನಂತರದ ಆಯ್ಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ರಚನೆಯನ್ನು ಬೆಂಬಲಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಆದರೆ ಯಾವುದೇ ಸರ್ಕಾರಕ್ಕೆ ಸೇರುವುದಿಲ್ಲ ಎಂದು ಹೇಳಿದ್ದಾರೆ. ಮಾಯಾವತಿ ಅವರ ಜನ್ಮದಿನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ರಾಜನಾಥ್ ಸಿಂಗ್, ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಎಕ್ಸ್ನಲ್ಲಿ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ: ಎನ್ಡಿಟಿವಿ ತೊರೆದ ವರ್ಷದ ನಂತರ ‘ಡಿಕೋಡರ್’ ಮೂಲಕ ಹಿಂತಿರುಗಿದ ಪ್ರಣಯ್ ರಾಯ್!
ಈ ನಡುವೆ ರಾಮ ಮಂದಿರ ಉದ್ಘಾಟನೆ ಆಹ್ವಾನದ ವಿಚಾರವಾಗಿ ಮಾತನಾಡಿದ ಅವರು, ಕಾರ್ಯಕ್ರಮದ ಆಹ್ವಾನವನ್ನು ಸ್ವೀಕರಿಸಿದ್ದೇನೆ ಆದರೆ ಅದರರಲ್ಲಿ ಹಾಜರಾಗುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ದೇವಾಲಯದ ನಿರ್ಮಾಣವನ್ನು ಸ್ವಾಗತಿಸಿದ ಅವರು, ತಮ್ಮ ಪಕ್ಷವು ಧರ್ಮಗಳ ನಡುವೆ ಯಾವುದೆ ವ್ಯತ್ಯಾಸ ಮಾಡುವುದಿಲ್ಲ, ಹಾಗಾಗಿ ಮಸೀದಿಯ ನಿರ್ಮಾಣವನ್ನು ಬಿಎಸ್ಪಿ ಸಹ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.
ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂಡಿಯಾ ಒಕ್ಕೂಟದ ಸಂಚಾಲಕರಾಗಿ ಆಗಿ ಆಯ್ಕೆ ಆಗಬೇಕು ಎಂಬುವುದನ್ನು ಟಿಎಂಸಿ ಪುನರುಚ್ಚರಿಸಿದೆ. ಬಿಹಾರ ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥರಾಗಿರುವ ನಿತೀಶ್ ಕುಮಾರ್ ವಿರುದ್ಧ ಪಕ್ಷಕ್ಕೆ ಯಾವ ವಿರೋಧವಿಲ್ಲದಿದ್ದರೂ, ಖರ್ಗೆ ಅವರು ವಿರೋಧ ಪಕ್ಷದ ಮೈತ್ರಿಕೂಟದ ಸಂಚಾಲಕರಾಗಿ ಆಯ್ಕೆಯಾದರೆ ಉತ್ತಮ ಪರಿಣಾಮ ಬೀರುತ್ತಾರೆ. ದಲಿತ ಸಮುದಾಯದಿಂದ ಬಂದಿರುವ ಖರ್ಗೆ ಅವರು 58 ಸ್ಥಾನಗಳಲ್ಲಿ ಪ್ರಭಾವ ಬೀರಲು ಉತ್ತಮ ಆಯ್ಕೆ ಎಂದು ಟಿಎಂಸಿ ನಂಬಿದೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ನಲ್ಲಿ ದೆಹಲಿಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ, 2024 ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಮಾತುಕತೆಯನ್ನು ಶೀಘ್ರವಾಗಿ ಅಂತಿಮಗೊಳಿಸಬೇಕು ಎಂದು ನಿರ್ಧರಿಸಲಾಗಿದೆ. 2023ರ ಡಿಸೆಂಬರ್ 31ರೊಳಗೆ ಸೀಟು ಹಂಚಿಕೆಯ ವಿವರಗಳನ್ನು ಅಂತಿಮಗೊಳಿಸುವಂತೆ ಟಿಎಂಸಿ ಕೋರಿತ್ತು. ಆದರೆ ಈ ಗಡುವು ಮುಗಿದಿದ್ದು, ಒಕ್ಕೂಟವು ಸೀಟು ಹಂಚಿಕೆಯ ಕುರಿತು ಇನ್ನೂ ಒಮ್ಮತಕ್ಕೆ ಬಂದಿಲ್ಲ.
ವಿಡಿಯೊ ನೋಡಿ: ಮನೆ ಮನೆಗೆ ಬರುತ್ತಿರುವುದು ಮಂತ್ರಾಕ್ಷತೆಯೇ? ಬಿಜೆಪಿ ಪ್ರಣಾಳಿಕೆಯೇ? ಆರೆಸ್ಸೆಸ್ ಸಿದ್ಧಾಂತವೇ? Janashakthi Media