ದಕ್ಷಿಣ ಕನ್ನಡ: ರಾಜ್ಯದಲ್ಲೆ ಇದೇ ಮೊದಲ ಬಾರಿಗೆ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ ಮಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಇತಿಹಾಸ ನಿರ್ಮಿಸಿದೆ. ಬೀದಿಬದಿ ವ್ಯಾಪಾರಿಗಳ ಆರ್ಥಿಕ ಹಿತರಕ್ಷಣೆ ಮತ್ತು ಸ್ವಾಭಿಮಾನದ ಬದುಕಿಗಾಗಿ ಇದನ್ನು ಸ್ಥಾಪಿಸಲಾಗುತ್ತಿದೆ ಎಂದು ಸಹಕಾರಿ ಸಂಘದ ನೂತನ ಚುನಾಯಿತ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ಜನಶಕ್ತಿ ಮೀಡಿಯಾ ಜೊತೆಗೆ ಮಾಡನಾಡುತ್ತಾ ಹೇಳಿದ್ದಾರೆ.
ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ(ನಿ)ದ ನಿರ್ದೇಶಕ ಮಂಡಳಿ ಚುನಾವಣೆ ನಡೆದು ಒಟ್ಟು 17 ಜನರು ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷರಾಗಿ ಬಿ.ಕೆ ಇಮ್ತಿಯಾಝ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹರೀಶ್ ಪೂಜಾರಿ ಅವಿರೋಧ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ | ಉಪ ಮುಖ್ಯಮಂತ್ರಿಯಿದ್ದ ವೇದಿಕೆಯಲ್ಲೆ ಪೊಲೀಸ್ ಅಧಿಕಾರಿಗೆ ಥಳಿಸಿದ ಬಿಜೆಪಿ ಶಾಸಕ ಸುನಿಲ್ ಕುಮಾರ್!
ಬೀದಿಬದಿ ವ್ಯಾಪಾರಿಗಳನ್ನು ಆರ್ಥಿಕ ಸ್ವಾವಲಂಭಿಗಳನ್ನಾಗಿ ಮಾಡುವುದು ಈ ಸಹಕಾರಿ ಸಂಘದ ಧ್ಯೇಯ ಎಂದು ಸಂಘದ ಅಧ್ಯಕ್ಷರಾದ ಬಿ.ಕೆ. ಇಮ್ತಿಯಾಝ್ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡುತ್ತಾ ಹೇಳಿದರು. “ಸಾಮಾನ್ಯವಾಗಿ ಬೀದಿಬದಿ ವ್ಯಾಪಾರಿಗಳಲ್ಲಿ ಹೆಚ್ಚಿನವರು ಬಡವರು ಮತ್ತು ಅವಿದ್ಯಾವಂತರೇ ಇದ್ದಾರೆ. ಅವರನ್ನು ಸ್ವಾಭಿಮಾನಿ ಮತ್ತು ಸ್ವಾವಲಂಭಿಗಳನ್ನಾಗಿ ಮಾಡುವುದು ಈ ಸಂಘ ಆಸ್ತಿತ್ವಕ್ಕೆ ಬರಲು ಕಾರಣ. ಈ ಸಂಘಕ್ಕೆ ಯಾವುದೆ ಶ್ರೀಮಂತರಿಂದ ಹೂಡಿಕೆ ಮಾಡುತ್ತಿಲ್ಲ. ಬೀದಿಬದಿ ವ್ಯಾಪಾರಿಗಳೆ ಇದಕ್ಕೆ ಹೂಡಿಕೆ ಮಾಡುತ್ತಿದ್ದಾರೆ. ಇದರ ನಿರ್ದೇಶಕರಾಗಿ ಆಯ್ಕೆಯಾದ ಎಲ್ಲರೂ ಬೀದಿಬದಿ ವ್ಯಾಪಾರಿಗಳೆ” ಎಂದು ಹೇಳಿದರು.
“ಮುಖ್ಯವಾಗಿ ಎರಡು ಕಾರಣಕ್ಕೆ ಇದನ್ನು ಅಸ್ತಿತ್ವಕ್ಕೆ ತರಲಾಗಿದೆ. ಮೊದಲನೆಯದಾಗಿ, ಬಡ ಬೀದಿಬದಿ ವ್ಯಾಪಾರಿಗಳು ಸಣ್ಣಪುಟ್ಟ ವ್ಯಾಪಾರ ಮಾಡಲು ಕೂಡಾ ಮೀಟರ್ ಬಡ್ಡಿ ನೀಡುವ ವ್ಯಕ್ತಿಗಳೊಂದಿಗೆ ಸಾಲ ಪಡೆಯುತ್ತಾರೆ. ಈ ಬೀದಿಬದಿ ವ್ಯಾಪಾರಿಗಳು ಕಷ್ಟಪಟ್ಟು ದುಡಿದ ದುಡಿಮೆಯ ಪಾಲನ್ನು ಅವರು ಬಡ್ಡಿಯ ರೂಪದಲ್ಲಿ ದೂಚುತ್ತಿದ್ದರು. ಎರಡನೆಯದಾಗಿ ಪ್ರತಿದಿನ ದುಡಿದು ಆದಾಯ ಮಾಡುವ ಬೀದಿಬದಿ ವ್ಯಾಪಾರಿಗಳಿಗೆ ತಮ್ಮ ಉಳಿತಾಯವನ್ನು ಹೇಗೆ ಹೂಡಿಕೆ ಮಾಡಬೇಕು ಎಂದು ಸರಿಯಾದ ಮಾಹಿತಿ ಇರುತ್ತಿರಲಿಲ್ಲ. ಹೀಗಾಗಿ ಅನೇಕ ಬ್ಲೇಡ್ ಕಂಪೆನಿಗಳು ಅವರಿಗೆ ನಿರಂತರ ವಂಚನೆ ಮಾಡುತ್ತಲೆ ಬಂದಿದೆ. ಇದರಿಂದ ಬೀದಿಬದಿ ವ್ಯಾಪಾರಿಗಳ ರಕ್ಷಣೆಗಾಗಿ ಈ ಸಹಕಾರಿ ಸಂಘವನ್ನು ಸ್ಥಾಪಿಸಿದ್ದೇವೆ” ಎಂದು ಹೇಳಿದರು.
ಸಹಕಾರಿ ಸಂಘದ ನಿರ್ದೇಶಕರಾಗಿ ಮೊಹಮ್ಮದ್ ಮುಸ್ತಫಾ, ದಯಾನಂದ ಶೆಟ್ಟಿ, ಮೊಹಮ್ಮದ್ ಆಸೀಫ್, ಮೇರಿ ಡಿಸೋಜಾ, ಮೇಬಲ್ ಡಿಸೋಜಾ, ಪಿ.ಜಿ ಅಬ್ದುಲ್ ರಫೀಕ್ ಬೆಂಗರೆ, ಪ್ರವೀಣ್ ಕುಮಾರ್, ಅಬ್ದುಲ್ ರಹಿಮಾನ್, ಎಂ.ಕೆ. ರಿಯಾಝ್, ಇಸ್ಮಾಯಿಲ್ ಉಳ್ಳಾಲ, ನೌಶಾದ್ ಉಳ್ಳಾಲ, ಶ್ರೀನಿವಾಸ್ ಕಾವೂರು, ಜಿತೇಂದ್ರ ಅತ್ತಾವರ, ಮೊಹಮ್ಮದ್ ತಂಜಿಲ್, ರೂಪೇಶ್ ನಾಯ್ಕ ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಹಿರಿಯ ಅಧಿಕಾರಿ ವಿಲಾಸ್ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ವಿಡಿಯೊ ನೋಡಿ: ಹಿಟ್ & ರನ್ ಪ್ರಕರಣಗಳ ಹೊಸ ಕಾನೂನಿಗೇಕೆ ಇಷ್ಟು ವಿರೋಧ? ಚಾಲಕರಿಗೆ ಇದು ತೂಗುಕತ್ತಿಯೇ? Janashakthi Media