ನವದೆಹಲಿ: ವೈಎಸ್ಆರ್ ತೆಲಂಗಾಣ ಪಕ್ಷ(YSRTP)ವನ್ನು ಸ್ಥಾಪಿಸಿದ ಸುಮಾರು 2.5 ವರ್ಷಗಳ ನಂತರ ಪಕ್ಷದ ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರು ತಮ್ಮ ಪಕ್ಷವನ್ನು ಔಪಚಾರಿಕವಾಗಿ ಕಾಂಗ್ರೆಸ್ನೊಂದಿಗೆ ಗುರುವಾರ ಇಲ್ಲಿ ವಿಲೀನಗೊಳಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದ ಶರ್ಮಿಳಾ ಅವರು, “ವೈಎಸ್ಆರ್ಟಿಪಿ ಇಂದಿನಿಂದ ಐಎನ್ಸಿಯ ಭಾಗವಾಗುತ್ತಿರುವುದು ನನಗೆ ಅಪಾರ ಸಂತೋಷವಾಗುತ್ತಿದೆ” ಎಂದು ಹೇಳಿದ್ದಾರೆ.
ಶರ್ಮಿಳಾ ಅವರು ಅವಿಭಜಿತ ಆಂಧ್ರಪ್ರದೇಶದ ಮಾಜಿ ಕಾಂಗ್ರೆಸ್ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ ಮತ್ತು ಈಗಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿಯಾಗಿದ್ದಾರೆ. ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗಬೇಕು ಎಂಬುದು ವೈಎಸ್ಆರ್ ಅವರ ಕನಸಾಗಿತ್ತು ಎಂದು ಶರ್ಮಳಾ ಹೇಳಿದ್ದಾರೆ. “ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿಯಾಗಿ ನೋಡುವುದು ನನ್ನ ತಂದೆಯ ಕನಸಾಗಿತ್ತು. ಅದನ್ನು ಈಡೇರಿಸುವ ಕಾರ್ಯದಲ್ಲಿ ನಾನು ಭಾಗವಾಗಲಿದ್ದೇನೆ ಎಂಬುವುದೆ ನನಗೆ ತುಂಬಾ ಸಂತೋಷ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮುಸ್ಲಿಮರ ಹೆಸರು ಬಳಸಿ ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ | ಇಬ್ಬರು ಯುವಕರ ಬಂಧನ
ಈ ಬಗ್ಗೆ ಮಾತನಾಡಿದ ಶರ್ಮಿಳಾ ಅವರು, “ತೆಲುಗು ಜನರ ದಿಗ್ಗಜ ನಾಯಕ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಅವರು ತಮ್ಮ ಜೀವಮಾನವಿಡೀ ಕಾಂಗ್ರೆಸ್ಗೆ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ತಮ್ಮ ಪ್ರಾಣವನ್ನೇ ಕಾಂಗ್ರೆಸ್ ಪಕ್ಷಕ್ಕೆ ಅರ್ಪಿಸಿದ್ದಾರೆ. ಇಂದು ಅವರ ಮಗಳು ಅವರ ಹೆಜ್ಜೆಯಲ್ಲಿ ಸೇರುತ್ತಿರುವುದು ಅವರಿಗೆ ಅತೀವ ಸಂತೋಷವನ್ನು ನೀಡುತ್ತದೆ. ಕಾಂಗ್ರೆಸ್ ಪಕ್ಷವು ಇನ್ನೂ ನಮ್ಮ ದೇಶದ ಅತಿದೊಡ್ಡ ಜಾತ್ಯತೀತ ಪಕ್ಷವಾಗಿದೆ. ಇದು ಯಾವಾಗಲೂ ಭಾರತದ ನಿಜವಾದ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದು, ಭಾರತದ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸುತ್ತದೆ” ಎಂದು ಹೇಳಿದ್ದಾರೆ.
“ಒಬ್ಬ ಕ್ರೈಸ್ತಳಾದ ನನಗೆ ಮಣಿಪುರದಲ್ಲಿ ಇಂತಹ ಕ್ರೌರ್ಯ ನಡೆದಿರುವುದು ನೋವು ತಂದಿದೆ. ಅಲ್ಲಿ ಎರಡು ಸಾವಿರ ಚರ್ಚುಗಳನ್ನು ಧ್ವಂಸಗೊಳಿಸಲಾಗಿದ್ದು, 60,000 ಜನರು ನಿರಾಶ್ರಿತಗಿದ್ದಾರೆ. ಅಂತಹ ಕ್ರೌರ್ಯವನ್ನು ನಾನು ಇಂದಿಗೂ ಸಹ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಾತ್ಯತೀತ ಪಕ್ಷ ಅಧಿಕಾರದಲ್ಲಿರದಿದ್ದರೆ ಹೀಗೇ ಆಗುತ್ತದೆ ಎಂದು ಅಂದುಕೊಂಡಿದ್ದೆ” ಎಂದು ಶರ್ಮಿಳಾ ಹೇಳಿದ್ದಾರೆ.
ಶರ್ಮಿಳಾ ಅವರಿಗೆ ರಾಜ್ಯಸಭಾ ಸ್ಥಾನ ಅಥವಾ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸ್ಥಾನವನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ. ಆದಾಗ್ಯೂ ಪಕ್ಷದಲ್ಲಿಅವರ ಪಾತ್ರವನ್ನು ಕಾಂಗ್ರೆಸ್ ಇನ್ನೂ ಘೋಷಿಸಿಲ್ಲ. ಜೊತೆಗೆ ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ (APCC) ಅವರು ಸಕ್ರಿಯ ಪಾತ್ರ ವಹಿಸಲಿದ್ದಾರೆಯೆ ಎಂಬುವುದು ತೀರ್ಮಾನವಾಗಿಲ್ಲ. ಒಂದು ವೇಳೆ ಅವರು ಆಂಧ್ರಪ್ರದೇಶದಲ್ಲಿ ಸಕ್ರಿಯ ರಾಜಕೀಯಕ್ಕಿಳಿದರೆ ಅದು ಅವರ ಸಹೋದರ, ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ನೇರವಾಗಿ ಸ್ಪರ್ಧೆಗೆ ಇಳಿಯಬೇಕಾಗುತ್ತದೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಷ್ಠೆ ಮತ್ತು ಶ್ರದ್ಧೆಯಿಂದ ನಿಭಾಯಿಸುತ್ತೇನೆ ಎಂದು ಶರ್ಮಿಳಾ ಹೇಳಿದ್ದಾರೆ.
ಇದನ್ನೂ ಓದಿ: ಅದಾನಿ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ತೀರ್ಪು ನಿರಾಶಾದಾಯಕ-ಸಿಪಿಐ(ಎಂ)
ತಮ್ಮ ತಂದೆಯ 72 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭವಾದ 2021ರ ಜುಲೈ 8 ರಂದು ಶರ್ಮಿಳಾ ಅವರು YSRTP ಅನ್ನು ಪ್ರಾರಂಭಿಸಿದ್ದರು. ಪಕ್ಷವು ಕಲ್ಯಾಣ ಮತ್ತು ಸಮಾನತೆಗೆ ಒತ್ತು ನೀಡಿದೆ ಎಂದು ಅವರು ಹೇಳಿದ್ದರು. 2023ರ ತೆಲಂಗಾಣ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ, ಅವರು ಭಾರತ್ ರಾಷ್ಟ್ರ ಸಮಿತಿಯ (BRS) ಆಡಳಿತದ ವಿರುದ್ಧ ಕಟುವಾದ ದಾಳಿ ಮಾಡಿದ್ದ ಅವರು ಪಾದಯಾತ್ರೆಯ ಮೂಲಕ ರಾಜ್ಯ ಪ್ರವಾಸ ಮಾಡಿದ್ದರು. ಈ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದರು ಮತ್ತು ಜೊತೆಗೆ ಅನೇಕ ಸಂದರ್ಭಗಳಲ್ಲಿ ಅವರ ಪ್ರತಿಭಟನೆಗಳಿಗೆ ಅನುಮತಿ ನಿರಾಕರಿಸಲಾಗಿತ್ತು.
ತೆಲಂಗಾಣ ಚುನಾವಣೆಗೆ ವಾರಗಳ ಮೊದಲು, ಶರ್ಮಿಳಾ ಅವರು ಕಾಂಗ್ರೆಸ್ನೊಂದಿಗೆ ವಿಲೀನಕ್ಕೆ ಪ್ರಯತ್ನಿಸಿದ್ದರು ಎಂದು ವರದಿಯಾಗಿತ್ತು. ಆದರೆ ಕೆಲವು ತೆಲಂಗಾಣ ಕಾಂಗ್ರೆಸ್ ನಾಯಕರ ವಿರೋಧದಿಂದಾಗಿ ಅವರ ಪ್ರಯತ್ನಗಳು ವಿಫಲವಾಗಿದ್ದವು. ನಂತರ ಅವರು ತಮ್ಮ ಪಕ್ಷವು ಕಾಂಗ್ರೆಸ್ನೊಂದಿಗೆ ಯಾವುದೇ ಮೈತ್ರಿ ಅಥವಾ ವಿಲೀನವಿಲ್ಲದೆ ಎಲ್ಲಾ 119 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದರು. ಅದಾಗಿ ಒಂದು ತಿಂಗಳ ನಂತರ, ತಾನು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ ಅವರು, BRS ವಿರೋಧಿ ಮತಗಳನ್ನು ವಿಭಜಿಸಲು ಮತ್ತು ಕಾಂಗ್ರೆಸ್ ಗೆಲ್ಲುವ ಸಾಧ್ಯತೆಗಳ ಮೇಲೆ ಪರಿಣಾಮ ಬೀರಲು ಬಯಸುವುದಿಲ್ಲ ಎಂದು ಹೇಳಿದ್ದರು.
2009 ರಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ವೈಎಸ್ಆರ್ ಅವರ ಮರಣದ ನಂತರ, ಜಗನ್ ಅವರು ಕಾಂಗ್ರೆಸ್ ಜೊತೆ ಸಂಬಂಧ ಕಡಿದುಕೊಂಡಿದ್ದರು ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು (ವೈಎಸ್ಆರ್ಸಿಪಿ) ಪ್ರಾರಂಭಿಸಿದ್ದರು. 2012ರಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಗನ್ ಜೈಲು ಪಾಲಾದಾಗ, ಅವರಿಗೆ ಸಾರ್ವಜನಿಕ ಬೆಂಬಲ ಪಡೆಯುವಲ್ಲಿ ಶರ್ಮಿಳಾ ಪ್ರಮುಖ ಪಾತ್ರ ವಹಿಸಿದ್ದರು. 2019 ರ ಅಸೆಂಬ್ಲಿ ಚುನಾವಣೆಯ ಮೊದಲು ಅವರು ಜಗನ್ ಪರವಾಗಿ ಸಕ್ರಿಯವಾಗಿ ಪ್ರಚಾರ ಮಾಡಿದ್ದರು. ಈ ಚುನಾವಣೆಯಲ್ಲಿ ಜನನ್ ನೇತೃತ್ವದ ವೈಎಸ್ಆರ್ಸಿಪಿ ಮೊದಲ ಬಾರಿಗೆ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆದರೆ ಅಂದಿನಿಂದ ಶರ್ಮಿಳಾ ತನ್ನ ಸಹೋದರನಿಂದ ದೂರವಾಗಿದ್ದರು.
ವಿಡಿಯೊ ನೋಡಿ: ಬರಗಾಲದಿಂದ ರೈತರು ಕಂಗಾಲು : ರಾಮ ಭಜನೆಯಲ್ಲಿ ಕೇಂದ್ರ ಸರ್ಕಾರ, ನಿದ್ದೆಗೆ ಜಾರಿದ ರಾಜ್ಯ ಸರ್ಕಾರ