ಇಂಫಾಲ: ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಸೋಮವಾರ ಸಂಜೆ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ನಾಲ್ಕು ಮಂದಿ ಹಿಂಸೆಗೆ ಬಲಿಯಾಗಿದ್ದಾರೆ. ಇತರ ಐದು ಮಂದಿಗೆ ಗಂಭೀರ ಸ್ವರೂಪದ ಗುಂಡೇಟು ತಗುಲಿದ ಘಟನೆ ಜರುಗಿದೆ.
ಇಲ್ಲಿನ ತೌಬಲ್ ಜಿಲ್ಲೆಯ ಲಿಲಾಂಗ್ ಚಿಂಗ್ಜಾವೊ ಪ್ರದೇಶದಲ್ಲಿ ಸೋಮವಾರ ಸಂಜೆ ಗುಂಡಿನ ದಾಳಿ ನಡೆದಿದೆ. ಲಿಲಾಂಗ್ ಚಿಂಗ್ಜಾವೊ ಪ್ರದೇಶದ ನಿವಾಸಿಯೊಬ್ಬರ ಬಳಿ ಕೆಲ ದಾಳಿಕೋರರು ಮಾತಿಗೆ ಮಾತು ಬೆಳಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ಸ್ಥಳೀಯರು ಜೊತೆಗೂಡಿ ಗುಂಪನ್ನು ಚದುರಿಸಿದ್ದಾರೆ. ದುಷ್ಕರ್ಮಿಗಳು ಪರಾರಿಯಾಗುತ್ತಿದ್ದಾಗ, ಗುಂಡು ಹಾರಿಸಿದ್ದಾರೆ. ಇದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಓರ್ವ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಮಣಿಪುರ | ಲೂಟಿ ಮಾಡಿದ 4,000 ಶಸ್ತ್ರಾಸ್ತ್ರಗಳು ಇನ್ನೂ ಜನರ ಕೈಯ್ಯಲ್ಲಿ ಇವೆ: ಲೆಫ್ಟಿನೆಂಟ್ ಜನರಲ್ ಆರ್. ಪಿ. ಕಲಿತಾ
ಈ ಘಟನೆಯನ್ನು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಖಂಡಿಸಿದ್ದಾರೆ. ಕಣಿವೆ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ರಾಜ್ಯದ ಐದು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಿದೆ. ತೌಬಾಲ್, ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ, ಕಕ್ಚಿಂಗ್ ಮತ್ತು ಬಿಷ್ಣುಪುರ್ ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. ದಾಳಿಯ ನಂತರ ಆಕ್ರೋಶಗೊಂಡ ಸ್ಥಳೀಯರು ದಾಳಿಕೋರರು ಆಗಮಿಸಿದ್ದ ನಾಲ್ಕು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ 180 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿದ್ದಾರೆ. ಸುಮಾರು 60,000 ಜನರು ನಿರಾಶ್ರಿತರಾಗಿದ್ದಾರೆ. ಮಹಿಳೆಯರಿಬ್ಬರನ್ನು ಬೆತ್ತಲೆ ಮಾಡಿ ಮೆರವಣಿಗೆ ನಡೆಸಿದ್ದು, ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು.
ಈ ವಿಡಿಯೋ ನೋಡಿ : ಮಣಿಪುರ ಧಗಧಗಿಸುತ್ತಿರುವುದೇಕೆ? ಕೈ ಕೊಟ್ಟ ಡಬಲ್ ಇಂಜಿನ್ ಸರ್ಕಾರ! Janashakthi Media