ನಾ ದಿವಾಕರ
ಸಮನ್ವಯ ಸೌಹಾರ್ದತೆ ಬಯಸುವ ಮನಸ್ಸುಗಳಿಗೆ ಏನು ಕಳೆದುಕೊಂಡಿದ್ದೇವೆ ಎಂಬ ಅರಿವಿರಬೇಕು
ನಿನ್ನೆ ಮತ್ತು ನಾಳೆಗಳ ನಡುವೆ ಇರುವ ಕಡಲವ್ಯಾಪ್ತಿಯ ಅಂತರದಲ್ಲಿ ಜೀವನದ ಹಲವು ಅಮೂಲ್ಯ ಕ್ಷಣಗಳು ಕಳೆದುಹೋಗಿರುತ್ತವೆ. ಈ ಕ್ಷಣಗಳನ್ನು ಗಡಿಯಾರದ ಮುಳ್ಳುಗಳ ಮೂಲಕ ನೋಡದೆ, ನಮ್ಮ ನಿತ್ಯ ಬದುಕಿನ ಹೆಜ್ಜೆಗಳ ನಡುವೆ ಗುರುತಿಸಿದಾಗ, ನಾವು ಗತ ವರ್ಷದಲಿ ಸವೆಸಿದ ಹಾದಿಯ ಇಕ್ಕೆಲಗಳಲ್ಲಿ ಕಂಡಿರಬಹುದಾದ ಕಟು ವಾಸ್ತವಗಳನ್ನು, ಮರೆತಿರಬಹುದಾದ ಕಹಿ ಘಟನೆಗಳನ್ನು, ಕಣ್ಣಿಗೆ ಕಾಣದೆಯೇ ನಡೆದಿರಬಹುದಾದ ಕೃತ್ಯಗಳನ್ನು ಹಾಗು ಜಾಣ ಮರೆವಿನಿಂದ ವಿಸ್ಮೃತಿಗೆ ಜಾರಿರಬಹುದಾದ ಅನ್ಯಾಯಗಳನ್ನು ಮಗದೊಮ್ಮೆ ನೆನಪಿಸಿಕೊಳ್ಳಲುವ ಒಂದು ಸನ್ನಿವೇಶವನ್ನು ನಾಳೆಗೆ ತೆರೆದುಕೊಳ್ಳುವ ಹೊಷ ವರ್ಷದ ಸಡಗರ ನಮ್ಮ ಮುಂದಿರಿಸುತ್ತದೆ. ಹೊಸ ವರ್ಷದ ಆಗಮನವನ್ನು ನಡುರಾತ್ರಿಯಲ್ಲಿ ಸಂಭ್ರಮಿಸುವ ಸಮಾಜದ ಹಿತವಲಯಗಳಿಗೆ ಆ ಒಂದು ಕ್ಷಣ ರೋಮಾಂಚಕಾರಿಯಾಗಿ ಕಾಣಬಹುದಾದರೂ, ದುಡಿಮೆಯ ಬಳಲಿಕೆಯಿಂದ ವಿರಮಿಸುವ ಲಕ್ಷಾಂತರ ಶ್ರಮಜೀವಿಗಳಿಗೆ ಅದು ಸದ್ದಿಲ್ಲದೆ ಜಾರಿಹೋಗುತ್ತದೆ.
ನಮ್ಮ ನಿತ್ಯ ಜೀವನದ ಪ್ರತಿಯೊಂದು ಕ್ಷಣವನ್ನೂ ಬಳಕೆಯಲ್ಲಿರುವ Gregorian Calender ಅನುಸಾರವಾಗಿಯೇ ಅಳೆಯುತ್ತಾ, ನಿನ್ನೆ ನಾಳೆಗಳ ಲೆಕ್ಕಾಚಾರದಲ್ಲಿ ಬದುಕುವ ಸಮಾಜದಲ್ಲಿ ಇತ್ತೀಚೆಗೆ ಜನವರಿ 1 ʼ ನಮ್ಮʼ ಹೊಸ ವರ್ಷ ಅಲ್ಲ ಎಂಬ ಧ್ವನಿಯೂ ಗಟ್ಟಿಯಾಗುತ್ತಿದೆ. ಈ ʼ ನಮ್ಮ ʼ ಎಂಬ ಪದಕ್ಕೆ ಮನುಜ ಸ್ಪರ್ಶಕ್ಕಿಂತಲೂ ಆಧ್ಯಾತ್ಮಿಕ ಅಥವಾ ಮತ ಧಾರ್ಮಿಕ ಸ್ಪರ್ಶ ಇರುವುದು ಸ್ಪಷ್ಟ. ಮತ್ತೊಂದೆಡೆ ದುಡಿಮೆಯನ್ನೇ ಆಧರಿಸಿ ಜೀವನ ಸವೆಸುವ ಕೋಟ್ಯಂತರ ಶ್ರಮಿಕರಿಗೆ ಒಂದನೆಯ ತಾರೀಖು ಎಂದರೆ ಅದು ಬರುವ ತಿಂಗಳ ಕುಟುಂಬ ನಿರ್ವಹಣೆಯನ್ನು ಲೆಕ್ಕಾಚಾರ ಹಾಕುವ ಒಂದು ದಿನ. 31ರ ರಾತ್ರಿ ಇರಬಹುದಾದ ವಿಷಾದದ ಛಾಯೆ ತಿಂಗಳ ಮೊದಲ ದಿನ ಕೊಂಚಮಟ್ಟಿಗಾದರೂ ದೂರವಾಗಿರುತ್ತದೆ. ಹೊಸ ವರ್ಷದ ಆಗಮನವನ್ನು ಈ ದೃಷ್ಟಿಯಿಂದ ನೋಡಿದಾಗ, ಸಂಭ್ರಮ-ಆಚರಣೆ-ಸಡಗರಗಳ ಪರಿಧಿಯಿಂದಾಚೆಗೆ ಒಂದು ಜಗತ್ತು ಕಾಣುವುದೇ ಆದರೆ ಅಲ್ಲಿ ಇದೇ ವಿಷಾದ ಮೀರಿದ ಸಂತಸದ ಛಾಯೆಯನ್ನು ಗುರುತಿಸಲು ಸಾಧ್ಯ.
ಇದನ್ನೂ ಓದಿ : ಹೊಸ ವೈರಸ್, ಹೊಸ ವರ್ಷ, ಮತ್ತು ಅದೇ ಹಳೆಯ ನಡೆ
ಶ್ರಮಿಕ ಬದುಕಿನ ವಾಸ್ತವಗಳು
ಆದರೆ 2024ರ ಕ್ಯಾಲೆಂಡರ್ ವರ್ಷವನ್ನು ಸ್ವಾಗತಿಸುವಾಗ ಈ ದುಡಿಮೆಯ ಜೀವಗಳು ಸಡಗರಕ್ಕಿಂತಲೂ ಆತಂಕಗಳನ್ನೇ ಸ್ವಾಗತಿಸಬೇಕಿರುವುದು ವರ್ತಮಾನ ಭಾರತದ ವಾಸ್ತವ. ಸಮಸ್ತ ಜನಕೋಟಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುವ ಆಳುವ ವರ್ಗದ ಪ್ರತಿನಿಧಿಗಳು ಗೋಡೆಯ ಮತ್ತೊಂದು ಬದಿಯಲ್ಲಿ ಕುಳಿತು ರೂಪಿಸುವ, ನಿರೂಪಿಸುವ ಆಡಳಿತ ನೀತಿಗಳು, ಇದೇ ಜನಕೋಟಿಯ ನಿತ್ಯ ಬದುಕಿನ ಹಾದಿಗಳಲ್ಲಿ ಹಲವು ಕಂಟಕಗಳನ್ನು, ಕಂದಕಗಳನ್ನು, ಅಡ್ಡಗೋಡೆಗಳನ್ನೂ ಸೃಷ್ಟಿಸುವಂತಿರುತ್ತವೆ. ದೇಶದ ಆಳ್ವಿಕೆಯ ಜವಾಬ್ದಾರಿ ಹೊತ್ತಿರುವ ಚುನಾಯಿತ ಪ್ರತಿನಿಧಿಗಳು ಜನಸಾಮಾನ್ಯರ ಹಾದಿಯಲ್ಲಿ ನಿರ್ಮಿಸುವ ರಸ್ತೆಉಬ್ಬುಗಳನ್ನು ದಾಟಿ ಹೋಗುವ ಶಕ್ತಿ, ಸಾಮರ್ಥ್ಯ ಮತ್ತು ಕ್ಷಮತೆ ಕೆಲವರಿಗೆ ಮಾತ್ರ ಇರಲು ಸಾಧ್ಯ. ಏಕೆಂದರೆ ಈ ಪ್ರತಿನಿಧಿಗಳೇ ರೂಪಿಸುವ ಆರ್ಥಿಕ ನೀತಿಗಳು ಬಹುಸಂಖ್ಯೆಯ ಜನರ ಚಲನೆಯ ಶಕ್ತಿಯನ್ನು ಕುಂದಿಸಿರುತ್ತವೆ.
ಇಷ್ಟೆಲ್ಲಾ ಜಿಜ್ಞಾಸೆಗಳ ನಡುವೆಯೂ ಹೊಸ ವರ್ಷದ ಆಗಮನವನ್ನು ಸಂಭ್ರಮಿಸುವ ಸಮಾಜ, ತಾನು ಸವೆಸಿದ ಹಾದಿಯನ್ನು ಹಿಂದಿರುಗಿ ನೋಡಿದಾಗ, ತಳಮಟ್ಟದ ಶ್ರೀಸಾಮಾನ್ಯನು ಗತ ವರುಷದಲ್ಲಿ ಏನೆಲ್ಲಾ ಕಳೆದುಕೊಂಡಿದ್ದಾನೆ ಎಂದು ನೋಡುವುದು ವಿವೇಕಯುತ ನಡೆ. ನಾಳಿನ ಕನಸುಗಳು ಎಷ್ಟೇ ಆಕರ್ಷಣೀಯವಾಗಿದ್ದರೂ ಈಡೇರುವವರೆಗೂ ಭ್ರಮೆಯಾಗೇ ಉಳಿದಿರುತ್ತದೆ. ಆದರೆ ಗತಿಸಿದ ದಿನಗಳಲ್ಲಿ ನುಚ್ಚುನೂರಾದ ಕನಸುಗಳು ಜನಸಾಮಾನ್ಯರನ್ನು ಭ್ರಮನಿರಸನರನ್ನಾಗಿ ಮಾಡುತ್ತದೆ. ನಿನ್ನೆ ಮತ್ತು ನಾಳಿನ ನಡುವೆ ಇರುವ ಈ ಸೂಕ್ಷ್ಮ ಅಂತರವನ್ನು ಗಮನಿಸದೆ ಹೋದರೆ ಇಡೀ ಸಮಾಜವೇ ಭ್ರಮಾಧೀನವಾಗಿ ನಾಳಿನ ಪೀಳಿಗೆಯನ್ನೇ ದಿಕ್ಕು ತಪ್ಪಿಸುವ ಸಾಧ್ಯತೆಗಳಿರುತ್ತವೆ. 2000ದಲ್ಲಿ ಹೊಸ ಶತಮಾನವನ್ನು ಸ್ವಾಗತಿಸಿದ ನವ ತಲೆಮಾರು ಈ ದ್ವಂದ್ವವನ್ನು ಎದುರಿಸಿಕೊಂಡೇ ಬಂದಿದೆ.
ಸ್ವತಂತ್ರ ಭಾರತದಲ್ಲಿ 60-70 ಹೊಸ ವರ್ಷಗಳನ್ನು ಕಂಡಿರುವ ಯಾವುದೇ ಪ್ರಜ್ಞಾವಂತ ವ್ಯಕ್ತಿಗಾದರೂ ಕಾಡಬೇಕಿರುವುದು ಈ ಹೊಸ ತಲೆಮಾರಿನ ನಾಳಿನ ದಿನಗಳ ಸ್ಥಿತ್ಯಂತರಗಳು. ಏಕೆಂದರೆ ಏಳು ದಶಕಗಳ ಸತತ ಪರಿಶ್ರಮದಿಂದ ಈ ದೇಶದ ಶ್ರಮಿಕ ವರ್ಗ ಕಟ್ಟಿ ಬೆಳೆಸಿದ, ಬೌದ್ಧಿಕ ವಲಯ ನೀರೆರೆದು ಪೋಷಿಸಿದ, ಔದ್ಯಮಿಕ ವರ್ಗ ಕಾಪಾಡಿಕೊಂಡು ಬಂದ ಸಾರ್ವಜನಿಕ ವಲಯದ ಔದ್ಯಮಿಕ ಆಸ್ತಿಯನ್ನು ನವ ಉದಾರವಾದದ ಮಾರುಕಟ್ಟೆ ಜಗುಲಿಯಲ್ಲಿಟ್ಟು ಹರಾಜು ಮಾಡಲಾಗುತ್ತಿದೆ. 60 ದಾಟಿರುವ ಶ್ರಮಿಕ ವರ್ಗಗಳಿಗೆ ತಾವೇ ಬೆಳೆಸಿದ ಹಸಿರು ವೃಕ್ಷಗಳ ಹನನವಾಗುತ್ತಿರುವುದನ್ನು ವಿಷಾದದಿಂದಲೇ ಸಹಿಸಿಕೊಳ್ಳಬೇಕಿದೆ. ಹೊಸ ವರ್ಷದಲ್ಲಿ ಆಳ್ವಿಕೆಯನ್ನು ವಹಿಸಿಕೊಳ್ಳುವ ಸರ್ಕಾರಗಳು ಈ ಸ್ಥಾವರ ಭಂಜಕ ನೀತಿಗಳನ್ನು ಮತ್ತಷ್ಟು ತೀವ್ರಗೊಳಿಸುವ ಆತಂಕವೂ ನಮ್ಮನ್ನು ಕಾಡಬೇಕಿದೆ. ದೇಶದ ಅತಿ ದೊಡ್ಡ ಸಾರ್ವಜನಿಕ ಆಸ್ತಿಯಾದ ರೈಲು ಮಾರ್ಗಗಳು ಕ್ರಮೇಣ ಕಾರ್ಪೋರೇಟ್ ಮಾರುಕಟ್ಟೆಯ ಪಾಲಾಗುವ ಲಕ್ಷಣಗಳು ನಿಚ್ಚಳವಾಗಿ ತೋರುತ್ತಿವೆ.
ದುಸ್ತರ ಬದುಕಿನ ನಡುವೆ
ಮತ್ತೊಂದೆಡೆ ನವ ಉದಾರವಾದಿ ಆರ್ಥಿಕ ನೀತಿಗಳು ಸೃಷ್ಟಿಸುವ ನಿರುದ್ಯೋಗಿಗಳ ಬೃಹತ್ ಪಡೆಗಳಿಗೆ ಜೀವನೋಪಾಯದ ಮಾರ್ಗಗಳನ್ನು ಕಲ್ಪಿಸುವ ದೊಡ್ಡ ಸವಾಲನ್ನು ಇಡೀ ಸಮಾಜವೇ ಎದುರಿಸಬೇಕಿದೆ. ಜಗತ್ತಿನ ಇತರ ದೇಶಗಳಲ್ಲಿ ಶ್ರಮಿಕರ ಕೊರತೆಯನ್ನು ನೀಗಿಸಲು ಭಾರತ ಮುಂದಾಗುತ್ತಿರುವುದಕ್ಕೆ ಕಾರಣ ಈ ನೆಲದಲ್ಲಿ ಬೆವರಿಳಿಸಿ ದುಡಿಯುವ ಶ್ರಮಿಕರ ಸಂಖ್ಯೆ ಹೇರಳವಾಗಿದೆ. ಈಗಾಗಲೇ ಹಲವು ದೇಶಗಳೊಡನೆ ಸಮಾಲೋಚನೆ ನಡೆಸಲಾಗಿದ್ದು ಟೈವಾನ್ ಭಾರತದಿಂದ ಒಂದು ಲಕ್ಷ ಶ್ರಮಿಕರನ್ನು ಸೆಳೆದುಕೊಳ್ಳಲು ಆಸಕ್ತಿ ತೋರಿದೆ. ಇಸ್ರೇಲ್ಗೆ ಭಾರತ 42 ಸಾವಿರ ಶ್ರಮಿಕರನ್ನು ಕಳುಹಿಸಲು ಸಜ್ಜಾಗಿದೆ. ಜಪಾನ್, ಫ್ರಾನ್ಸ್, ನೆದರ್ಲೆಂಡ್, ಗ್ರೀಸ್, ಡೆನ್ಮಾರ್ಕ್ ಮತ್ತು ಸ್ವಿಜರ್ಲೆಂಡ್ ಮುಂತಾದ ದೇಶಗಳಲ್ಲಿ ಜನಸಂಖ್ಯಾ ಕುಸಿತ ತೀವ್ರವಾಗಿರುವುದರಿಂದ ಅಲ್ಲಿನ ಉತ್ಪಾದಕೀಯತೆಯನ್ನು ಹೆಚ್ಚಿಸಲು ಭಾರತದ ಕಾರ್ಮಿಕರ ಶ್ರಮ ಲಾಭದಾಯಕವಾಗಿ ಪರಿಣಮಿಸುತ್ತದೆ. ಔದ್ಯೋಗಿಕ ಉತ್ಪಾದನೆ, ಕೃಷಿ ಮತ್ತು ವ್ಯವಸಾಯ, ಕಟ್ಟಡ ನಿರ್ಮಾಣ ಹಾಗೂ ಆರೋಗ್ಯ ಕಾಳಜಿಯ ಕ್ಷೇತ್ರಗಳಲ್ಲಿ ಭಾರತದಿಂದ ವಲಸೆ ಹೋಗುವ ಶ್ರಮಿಕರು ನೆರವಾಗುವ ಸಾಧ್ಯತೆಗಳಿವೆ.
ಇದರರ್ಥ ಭಾರತದಲ್ಲಿ ದುಡಿಮೆಯ ಕೈಗಳು ಹೆಚ್ಚಾಗಿವೆ. ಆದರೆ ನವ ಉದಾರವಾದದ ಮಾರುಕಟ್ಟೆ ಆರ್ಥಿಕತೆಯಲ್ಲಿ ಈ ಎಲ್ಲ ಕೈಗಳಿಗೂ ದುಡಿಮೆಯನ್ನು ನೀಡುವ ಅವಕಾಶಗಳು ಕಡಿಮೆ ಇದೆ. ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಪ್ರಮಾಣವನ್ನು ದಾಖಲಿಸಿರುವ ನವ ಭಾರತದ ಆರ್ಥಿಕತೆಯಲ್ಲಿ ದುಡಿಯುವ ಜೀವಗಳನ್ನು ಪೊರೆಯುವ ಮಾರ್ಗೋಪಾಯಗಳು ಸಂಕುಚಿತವಾಗುತ್ತಿವೆ. ಹಾಗಾಗಿಯೇ ಅನ್ಯ ದೇಶಗಳ ಉತ್ಪಾದನೆಯನ್ನು ಹೆಚ್ಚಿಸಲು ವಲಸೆ ಹೋಗುವ ಭಾರತದ ಲಕ್ಷಾಂತರ ಕಾರ್ಮಿಕರು ಅಲ್ಲಿಯೇ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದಿದ್ದರೂ, ಹಿಂದಿರುಗಿ ಬರುವಾಗ ಸುಸ್ಥಿರತೆಯನ್ನು ಪಡೆದುಕೊಳ್ಳುವ ನಿರೀಕ್ಷೆಗಳಿವೆ. ಎಲ್ಲಕ್ಕಿಂತಲೂ ಮಿಗಿಲಾಗಿ ಈ ವಲಸೆ ಕಾರ್ಮಿಕರಿಂದ ರವಾನೆಯಾಗುವ ವಿದೇಶಿ ವಿನಿಯಮ ಭಾರತದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಅನ್ಯ ದೇಶಗಳಲ್ಲಿ ಬದುಕು ಕಟ್ಟಿಕೊಳ್ಳುವುದು ವಲಸೆ ದುಡಿಮೆಗಾರರ ಆಶಯವಲ್ಲ ಬದಲಾಗಿ ವ್ಯವಸ್ಥೆ ಸೃಷ್ಟಿಸುವ ಅನಿವಾರ್ಯತೆ ಎಂಬ ಸೂಕ್ಷ್ಮವನ್ನು ಅರ್ಥಮಾಡಿಕೊಂಡರೆ ಸಾಕು. ಕಾರ್ಮಿಕ ಸಂಘರ್ಷಗಳು ಸೃಷ್ಟಿಸಲಾಗದ ಶ್ರಮಜೀವಿಗಳ ಅಂತಾರಾಷ್ಟ್ರೀಯತೆಯನ್ನು ಮಾರುಕಟ್ಟೆ ಎಷ್ಟು ವ್ಯವಸ್ಥಿತವಾಗಿ ಸೃಷ್ಟಿಸುತ್ತದೆ !!!!
ಆದರೆ ಇಲ್ಲೇ ಉಳಿಯುವ ಈ ಶ್ರಮಿಕರ ಕುಟುಂಬಗಳು ಹಾಗೂ ಇತರ ಕೋಟ್ಯಂತರ ಶ್ರಮಜೀವಿಗಳಿಗೆ ಬದುಕು ಅದೇ ಅನಿಶ್ಚಿತತೆಯೊಡನೆ ಮುಂದುವರೆಯುತ್ತದೆ. ಕುಂಠಿತ ಉದ್ಯೋಗಾವಕಾಶಗಳ ನಡುವೆ ತಮ್ಮ ನಿತ್ಯ ಬದುಕು ಸವೆಸಲು ಆಂತರಿಕವಾಗಿ ವಲಸೆಗಾರರಾಗುವ ಲಕ್ಷಾಂತರ ಶ್ರಮಜೀವಿಗಳು ಸರ್ಕಾರಗಳು ಒದಗಿಸುವ ಅಡುಗೆ ಅನಿಲ, ಪಡಿತರ, ಸಾರಿಗೆ ಇನ್ನಿತರ ಗ್ಯಾರಂಟಿ ಸವಲತ್ತುಗಳನ್ನೇ ಆಧರಿಸಿ ತಮ್ಮ ಬುಕು ಕಟ್ಟಿಕೊಳ್ಳಬೇಕಾಗುತ್ತದೆ. ಸಮರ್ಪಕ ಆದಾಯವಿಲ್ಲದ ತಳಮಟ್ಟದ ಸಮಾಜದ ಬಹುಸಂಖ್ಯಾತ ಜನತೆಗೆ ಜನಕಲ್ಯಾಣ ನೀತಿಗಳಡಿ ಸೌಕರ್ಯ/ಸವಲತ್ತುಗಳನ್ನು ಒದಗಿಸುವ ಸರ್ಕಾರಗಳೂ, ಈ ಬೃಹತ್ ಜನಸಂಖ್ಯೆಯ ಭವಿಷ್ಯದ ಪೀಳಿಗೆಯ ಸುಸ್ಥಿರ ಬದುಕಿಗೆ ಪೂರಕವಾಗುವ ಮೂಲಭೂತ ಶಿಕ್ಷಣ, ಆರೋಗ್ಯಸೇವೆ ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಆಲೋಚನೆಯನ್ನೂ ಮಾಡದಂತೆ ನವ ಉದಾರವಾದ ಎಚ್ಚರವಹಿಸುತ್ತದೆ.
ಮತ್ತೊಂದೆಡೆ ಸಾಮಾಜಿಕ ನೆಲೆಯಲ್ಲಿ 2023ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹಲವು ಶಾಸನಗಳು ವಸಾಹತು ಆಳ್ವಿಕೆಯ ಕಾಯ್ದೆಗಳ ಛಾಯೆಯಲ್ಲೇ ಇನ್ನೂ ಬಿಗಿಯಾದ ಆಡಳಿತ ವ್ಯವಸ್ಥೆಯನ್ನು ರೂಪಿಸಲಿವೆ. 2024ರಲ್ಲಿ ಹೊಸ ಆಳ್ವಿಕೆಯನ್ನು ಆಯ್ಕೆ ಮಾಡಲಿರುವ ದೇಶದ ಜನತೆಯ ಮುಂದೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಸಂರಕ್ಷಿಸುವ ಬಹುದೊಡ್ಡ ಜವಾಬ್ದಾರಿ ಇದೆ. ಈ ಹೊರೆಯನ್ನು ಹೊತ್ತುಕೊಂಡೇ ಜನತೆ ತಮ್ಮ ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ಕಾಪಾಡಿಕೊಳ್ಳಬೇಕಿದೆ. ಅತ್ಯಾಚಾರಿಗಳನ್ನು ಸಮ್ಮಾನಿಸುವ, ಮಹಿಳಾ ದೌರ್ಜನ್ಯದ ಅಪರಾಧಿಗಳನ್ನು ಸಹಿಸಿಕೊಳ್ಳುವ ಹೊಸ ನಾಗರಿಕ ವಿಧಾನಗಳಿಗೆ 2023ರ ವರ್ಷ ಸಾಕ್ಷಿಯಾಗಿದೆ. ಕಾಕತಾಳೀಯವಾಗಿ ವರ್ಷದ ಕೊನೆಯಲ್ಲಿ ಒಲಂಪಿಕ್ ಕ್ರೀಡಾಪಟು ವಿನೇಶ್ ಪೋಗಟ್ ತಮ್ಮ ಖೇಲ್ ರತ್ನ-ಅರ್ಜುನ ಪ್ರಶಸ್ತಿಗಳನ್ನು ಪಾದಚಾರಿ ರಸ್ತೆಯಲ್ಲಿ ವರ್ಜಿಸುವ ಮೂಲಕ ನೊಂದ ಮಹಿಳೆಯರ ಹಾಗೂ ನಾಗರಿಕತೆಯ ಪ್ರಜ್ಞಾವಂತಿಕೆಗೆ ಸಾಕ್ಷಿಯಾಗಿದ್ದಾರೆ.
ಅತಿ ಹೆಚ್ಚಿನ ಅತ್ಯಾಚಾರಗಳು, ಮಹಿಳಾ-ಜಾತಿ ದೌರ್ಜನ್ಯಗಳು, ಲೈಂಗಿಕ ಕಿರುಕುಳಗಳು, ಅಸ್ಪಶ್ಯತೆಯ ಪ್ರಕರಣಗಳು ಹಾಗೂ ಕ್ರಿಮಿನಲ್ ಅಪರಾಧಗಳಿಗೆ ಸಾಕ್ಷಿಯಾಗಿರುವ 2023ರ ಕಹಿ ಪ್ರಸಂಗಗಳನ್ನು ವಿಸ್ಮೃತಿಯ ಕಣಜದಲ್ಲಿಟ್ಟು 2024ರ ಹೊಸ ವರ್ಷವನ್ನು ಸ್ವಾಗತಿಸುವ ಮುನ್ನ, ಈ ಅಪರಾಧಗಳಿಗೆ ಸಿಲುಕಿ ಶಾಶ್ವತ ಸಂತ್ರಸ್ತರಾಗಿರುವ ಲಕ್ಷಾಂತರ ಜನತೆಗೆ ನಾಗರಿಕತೆ ಉತ್ತರ ನೀಡಬೇಕಿದೆ. ಈಶಾನ್ಯದ ಮಣಿಪುರದಿಂದ ದಕ್ಷಿಣದ ಬೆಳಗಾವಿಯವರೆಗೆ ವ್ಯಾಪಿಸಿರುವ ಮಹಿಳೆಯರ ಮೇಲಿನ ಅತ್ಯಾಚಾರಗಳ ಚರಿತ್ರೆಯನ್ನು ಅಳಿಸಿಹಾಕಲಾಗುವುದಿಲ್ಲ. ಆದರೆ ಮುಂಬರುವ ವರ್ಷದಲ್ಲಾದರೂ ಈ ದೇಶದ ಸಾಮಾನ್ಯ ಮಹಿಳೆ ತನ್ನ ಹೆಣ್ತನದ ಘನತೆಯನ್ನು ಕಾಪಿಟ್ಟುಕೊಳ್ಳುವ ಆಶಯ ಹೊಂದಿರಬಹುದಲ್ಲವೇ ? ಈ ಕನಸು ಸಾಕಾರವಾಗಬೇಕಾದರೆ ಸಂವಿಧಾನದ ಸ್ತುತಿ ಸಾಲುವುದಿಲ್ಲ. ಸಾಂವಿಧಾನಿಕ ಆಶಯಗಳು ತಳಮಟ್ಟದವರೆಗೂ ವಿಸ್ತರಿಸಿ ಸಾಕಾರಗೊಳ್ಳಬೇಕಾಗುತ್ತದೆ.
ಡಿಜಿಟಲ್ ಯುಗದ ಕನಸುಗಳು
2024ರ ಆಗಮನದ ಸಡಗರದಲ್ಲಿ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್(ಎಕ್ಸ್)ಗಳ ಮೂಲಕ ಕೋಟ್ಯಂತರ ಶುಭಾಶಯಗಳ ಸಂದೇಶ ಹರಿದಾಡುತ್ತದೆ. ಯಾಂತ್ರಿಕವಾಗಿ ಹರಿದಾಡುವ ಈ ಶುಭ ಸಂದೇಶಗಳನ್ನು ರವಾನಿಸುವ ಪ್ರತಿ ವ್ಯಕ್ತಿಯ ಮನಸ್ಸಿನಲ್ಲೂ 2023ರ ಘಟನೆಗಳ ಪುನರಾವಲೋಕನ ಸಾಧ್ಯವಾಗುವುದಾದರೆ, ಬೆತ್ತಲಾದ ಅಮಾಯಕ ಮಹಿಳಾ ಜೀವಗಳು, ದೌರ್ಜನ್ಯಕ್ಕೊಳಗಾದ ಸಾಕ್ಷಿ ಮಲ್ಲಿಕ್ಗಳು, ವಿನೇಶ್ ಪೋಗಟ್ಗಳು ಹಾಗೂ ಮಾರುಕಟ್ಟೆ ಆರ್ಥಿಕತೆಯಿಂದ ನಲುಗಿಹೋಗಿರುವ ಲಕ್ಷಾಂತರ ಕಾರ್ಮಿಕರು, ಜೀವ ಕಳೆದುಕೊಂಡಿರುವ ರೈತ ಬಾಂಧವರು ಹಾಗೂ ಮತಾಂಧರ ದಾಳಿಯಿಂದ ಶಿಕ್ಷಣ ವಂಚಿತರಾದ ಸಾವಿರಾರು ಮಕ್ಕಳು ನೆನಪಾಗಲೇಬೇಕಲ್ಲವೇ ? ಈ ನೊಂದ ಜೀವಗಳು ನಡುರಾತ್ರಿಯಲ್ಲಿ ಸಂಭ್ರಮಿಸುವುದಿಲ್ಲ. ನಾಳಿನ ಸುಂದರ ಕನಸುಗಳನ್ನು ಕಾಣುತ್ತಾ ವಿರಮಿಸಿರುತ್ತವೆ. ಆದರೆ ಹೊಸ ವರ್ಷದ ಮೊದಲ ಸೂರ್ಯೋದಯ ಇವರ ಪಾಲಿಗೆ ಬೆಳಕನ್ನೇ ತರುವುದೋ ಅಥವಾ ಅದೇ ಅಂಧಕಾರದತ್ತ ಕರೆದೊಯ್ಯುವುದೋ ಎಂಬ ಆತಂಕ ಇಡೀ ಸಮಾಜವನ್ನು ಕಾಡಬೇಕಲ್ಲವೇ ?
ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಯಾಂತ್ರಿಕವಾಗಿ ಪರಸ್ಪರ ಹಂಚಿಕೊಳ್ಳುವ ಮುನ್ನ, 2024 ಭಿನ್ನವಾಗಿರಲಿ ಎಂಬ ಆಶಯವನ್ನಾದರೂ ಹೊತ್ತು ನಾಳೆಗೆ ತೆರೆದುಕೊಳ್ಳೋಣ. 2023 ಕಳೆದು ಹೋಗುವ ಒಂದು ಕಾಲ ಆದರೆ ಈ ವರ್ಷದಲ್ಲಿ ಭಾರತದ ಸಮಾಜ ಕಂಡಂತಹ ಮನುಜ ವಿರೋಧಿ ಧೋರಣೆಗಳು, ಆಚರಣೆಗಳು ಕಳೆದುಹೋಗುವುದಿಲ್ಲ. ಮತ್ತೆಮತ್ತೆ ನಮ್ಮನ್ನು ಕಾಡುತ್ತಲೇ ಇರುತ್ತವೆ. ಹೀಗೆ ಕಾಡಲಿರುವ ಗತಕಾಲದ ಪ್ರವೃತ್ತಿಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಾನವ ಸಮಾಜ ಸಂಕಲ್ಪ ಮಾಡಬೇಕಿದೆ. ತನ್ಮೂಲಕ ಆರ್ಥಿಕ ಅಸಮಾನತೆ, ಸಾಮಾಜಿಕ ತಾರತಮ್ಯ, ಸಾಂಸ್ಕೃತಿಕ ಅಧೀನತೆಗಳನ್ನು ತೊಡೆದುಹಾಕಲು ಹೊಸ ತಲೆಮಾರಿನ ಮನಸುಗಳನ್ನು ಸಿದ್ಧಪಡಿಸಬೇಕಿದೆ. ಕ್ಯಾಲೆಂಡರ್ ತಿರುವಿ ಹಾಕುವ ಮುನ್ನ ಈ ಜಾಗ್ರತೆ ನಮ್ಮೊಳಗಿದ್ದರೆ “ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ” ಎಂಬ ಸಂದೇಶವೂ ಸಾರ್ಥಕವಾದೀತು.