ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಜಾತಿಗಣತಿ ನಡೆಸುವ ತಮ್ಮ ಪಕ್ಷದ ಸಂಕಲ್ಪವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಪುನರುಚ್ಚರಿಸಿದ್ದಾರೆ. ನಾಗ್ಪುರದಲ್ಲಿ ಪಕ್ಷದ 139 ನೇ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಲಾದ ಕಾಂಗ್ರೆಸ್ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಒಬಿಸಿಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರಿಗೆ ದೇಶದ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವಿಲ್ಲ ಮತ್ತು ಪ್ರತಿಪಕ್ಷಗಳ ಇಂಡಿಯಾ ಮೈತ್ರಿ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಲಾಗುವುದು ಎಂದು ಅವರು ಪುನರುಚ್ಚರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮನ್ನು ತಾವು ಒಬಿಸಿ ಎಂದು ಬಣ್ಣಿಸಿಕೊಳ್ಳುತ್ತಿದ್ದರು. ಆದರೆ ನನ್ನ ಜಾತಿ ಗಣತಿ ಬೇಡಿಕೆ ನಂತರ ಅವರು ನಮ್ಮದು ಒಂದೇ ಜಾತಿ ಬಡವ ಜಾತಿ ಎಂದು ಹೇಳುತ್ತಿದ್ದಾರೆ. ಒಂದೇ ಜಾತಿ ಇದ್ದರೆ, ನೀವು ಒಬಿಸಿ ಎಂದು ಏಕೆ ಹೇಳುತ್ತೀರಿ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ತೊಗರಿ ಮತ್ತು ಉದ್ದಿನಬೇಳೆ ಆಮದು ಸುಂಕ ವಿನಾಯಿತಿ 2025 ರವರೆಗೆ ವಿಸ್ತರಿಸಿದ ಬಿಜೆಪಿ ಸರ್ಕಾರ
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳೆ ರಾಹುಲ್ ಗಾಂಧಿ ಅವರು ಜಾತಿ ಗಣತಿಯನ್ನು ಕಾಂಗ್ರೆಸ್ ಪಕ್ಷದ ಪ್ರಚಾರದ ಪ್ರಮುಖ ವಿಷಯಗಳಲ್ಲಿ ಒಂದಾಗಿಸಿದ್ದರು. ಆದರೆ ಈ ವಿಷಯ ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಮುಖ್ಯವಾಗಿ ಪ್ರತಿಧ್ವನಿಸಲಿಲ್ಲ, ಬದಲಾಗಿ ಮೂರು ರಾಜ್ಯಗಳಲ್ಲಿ ಮತದಾರರು ಬಿಜೆಪಿಗೆ ಅಧಿಕಾರ ನೀಡಿದ್ದರು.
ಪ್ರತಿಪಕ್ಷಗಳ ಜಾತಿಗಣತಿಯ ಬೇಡಿಕೆಯನ್ನು ಎದುರಿಸಲು ಪ್ರಧಾನಿ ಮೋದಿ ಅವರು ಬಡವರು, ಯುವಕರು, ಮಹಿಳೆಯರು ಮತ್ತು ರೈತರನ್ನು “ದೊಡ್ಡ ಜಾತಿಗಳು” ಎಂದು ಪ್ರತಿಪಾದಿಸಿದ್ದು, ಈ ನಾಲ್ಕು ಸಮುದಾಯದ ಉನ್ನತಿಯು ದೇಶವನ್ನು ಅಭಿವೃದ್ಧಿಪಡಿಸುತ್ತದೆ ಎಂದು ಹೇಳಿದ್ದಾರೆ.
ಬಿಹಾರದ ನಿತೀಶ್ ಕುಮಾರ್ ಸರ್ಕಾರವು ರಾಜ್ಯದಲ್ಲಿ ಕೈಗೊಂಡ ಜಾತಿ ಸಮೀಕ್ಷೆಯ ಫಲಿತಾಂಶಗಳನ್ನು ಬಿಡುಗಡೆ ಮಾಡಿದ ನಂತರ ರಾಷ್ಟ್ರವ್ಯಾಪಿ ಜಾತಿಗಣತಿ ನಡೆಸುವಂತೆ ವಿರೋಧ ಪಕ್ಷಗಳು ತೀವ್ರವಾಗಿ ಬೇಡಿಕೆ ಇಟ್ಟಿದೆ. ಬಿಹಾರ ಜಾತಿ ಸಮೀಕ್ಷೆಯು ಹಿಂದುಳಿದ ವರ್ಗಗಳು(ಇತರೆ ಹಿಂದುಳಿದ ವರ್ಗಗಳು (OBC) ಮತ್ತು ಅತ್ಯಂತ ಹಿಂದುಳಿದ ವರ್ಗಗಳು-EBC) ರಾಜ್ಯದ ಒಟ್ಟು 13 ಕೋಟಿ ಜನಸಂಖ್ಯೆಯ 63% ರಷ್ಟಿದೆ ಎಂದು ಬಹಿರಂಗಪಡಿಸಿದೆ.
ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆ : ಕಲ್ಲಡ್ಕ ಪ್ರಭಾಕರ್ ಭಟ್ನನ್ನು ಬಂಧಿಸಲ್ಲವೆಂದ ಸರ್ಕಾರ
ಜಾತಿಗಣತಿಯು ಪ್ರಮುಖ ಚುನಾವಣಾ ವಿಷಯವಾಗಿದೆ ಎಂದು ವಿರೋಧ ಪಕ್ಷವು ಸ್ಪಷ್ಟಪಡಿಸಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಬಿಜೆಪಿ ತನ್ನ ಹೊಸ ಸರ್ಕಾರಗಳಲ್ಲಿ ಜಾತಿ ಸಮತೋಲನವನ್ನು ಪ್ರಮುಖ ಅಂಶವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ಮಧ್ಯಪ್ರದೇಶದ ಹೊಸ ಸಂಪುಟದಲ್ಲಿ ಬಿಜೆಪಿ 11 ಒಬಿಸಿ, 6 ಪರಿಶಿಷ್ಟ ಜಾತಿ ಮತ್ತು 4 ಪರಿಶಿಷ್ಟ ಪಂಗಡದ ಸದಸ್ಯರನ್ನು ಸೇರ್ಪಡೆಗೊಳಿಸಿದೆ. ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಹೊಸ ನಾಯಕತ್ವವನ್ನು ನಿರ್ಧರಿಸುವಲ್ಲಿ ಜಾತಿ ಅಂಶವು ಪ್ರಮುಖ ಪಾತ್ರ ವಹಿಸಿದೆ.
ಬಿಜೆಪಿ ತನ್ನ ಹೊಸ ಮುಖ್ಯಮಂತ್ರಿಗಳನ್ನು ಹೆಸರಿಸಿದ ನಂತರ, ಇವೆಲ್ಲವೂ ಜಾತಿಗಣತಿಗೆ ರಾಹುಲ್ ಗಾಂಧಿಯವರ ಬೇಡಿಕೆಯ ಪರಿಣಾಮ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಹೇಳಿದ್ದಾರೆ. “ರಾಹುಲ್ ಅವರು ಜಾತಿ ಗಣತಿ ಬಗ್ಗೆ ಮಾತನಾಡಿದ ನಂತರ, ಈಗ (ರಾಜಸ್ಥಾನ, ಎಂಪಿ ಮತ್ತು ಛತ್ತೀಸ್ಗಢದಲ್ಲಿ) ಸಿಎಂಗಳನ್ನು ಜಾತಿ ಸಮೀಕರಣವನ್ನು ಗಮನದಲ್ಲಿಟ್ಟುಕೊಂಡು ನೇಮಕ ಮಾಡಲಾಗಿದೆ. ಮೋದಿ ಅವರು ಈಗ ರಾಹುಲ್ ಅವರ ಹಾದಿಯಲ್ಲಿ ನಡೆಯುತ್ತಿದ್ದಾರೆ. ಇದು ಜಾತಿ ಗಣತಿ ಬೇಡಿಕೆಯ ಪರಿಣಾಮವಾಗಿದೆ” ಎಂದು ಅಧೀರ್ ರಂಜನ್ ಹೇಳಿದ್ದರು.
ಬಿಜೆಪಿಯ ಆಕ್ರಮಣಕಾರಿ ಹಿಂದುತ್ವದ ಅಸ್ತ್ರವನ್ನು ಎದುರಿಸಲು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಜಾತಿಯ ಅಸ್ತ್ರವನ್ನು ಕೈಗೆತ್ತುವ ಆಶಯವನ್ನು ಹೊಂದಿವೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಈ ಪ್ರಯತ್ನ ವಿಫಲವಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಇದು ಪರಿಣಾಮ ಬೀರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ವಿಡಿಯೊ ನೋಡಿ: ತೀವ್ರಗೊಂಡ ಕರವೇ ಕನ್ನಡ ನಾಮಫಲಕ ಹೋರಾಟ Janashakthi Media