ಚಿಕ್ಕಬಳ್ಳಾಪುರ : ಹೈನುಗಾರಿಕೆ, ಉಳುಮೆ, ಕೃಷಿ ಕೆಲಸದ ಸಾಗಾಣಿಕೆ ಮತ್ತಿತರೆ ಅಗತ್ಯಗಳಿಗಾಗಿ ಜಾನುವಾರುಗಳನ್ನು ಅವಲಂಬಿಸಿರುವ ರೈತರ ಹಿತಕ್ಕೆ ಮಾರಕವಾಗಿರುವ ಕರ್ನಾಟಕ ಜಾನುವಾರು ಸಂರಕ್ಷಣಾ ಹಾಗೂ ಹತ್ಯೆ ನಿಷೇಧ ಕಾಯ್ದೆ 2020 ಅನ್ನು ರದ್ದುಪಡಿಸಲು ಹಾಲು ಉತ್ಪಾದಕರ ರಾಜ್ಯ ಸಮಾವೇಶ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ” ಹಾಲು ಉತ್ಪಾದಕರ ರಾಜ್ಯ ಸಮಾವೇಶದಲ್ಲಿ ನಿರ್ಣಯವನ್ನು ತೆಗೆದುಕೊಳ್ಳಲಾಗಿದ್ದು. ಈ ನಿರ್ಣಯವನ್ನು ರೈತ ಮುಖಂಟ ಟಿ. ಯಶವಂತ ಮಂಡಿಸಿದ್ದು, ಇನ್ನೋರ್ವ ರೈತ ಮುಖಂಡರಾದ ಆರ್.ಕೆ. ದೇಸಾಯಿ ಅನುಮೋದಿಸಿದರು. ನಿರ್ಣಯದ ಸಾರಾಂಶ ಈ ಕೆಳಗಿನಂತಿದೆ.
ಹಸು,ದನ,ಎಮ್ಮೆ,ಕೋಣ ಮುಂತಾದ ಎಲ್ಲಾ ರೀತಿಯ ಜಾನುವಾರುಗಳ ಮಾರಾಟ, ಕೊಳ್ಳುವಿಕೆ,ಸಾಗಾಣಿಕೆ ಮುಂತಾದ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ನಿಷೇಧಿಸಿರುವ ಈ ಕಾಯ್ದೆಯಿಂದ ಕೃಷಿ ಜೀವನದ ಆರ್ಥಿಕ ಚಕ್ರವೇ ತುಂಡಾಗಿದೆ. ರೈತರ ಆದಾಯದಲ್ಲಿ ಜಾನುವಾರುಗಳ ಮಾರಾಟದ ಗಳಿಕೆ ಶೇಕಡಾ 25 ಕ್ಕಿಂತ ಹೆಚ್ಚಿನ ಪಾಲು ಹೊಂದಿರುವಾಗ ಜಾನುವಾರು ಆಧಾರಿತ ಆರ್ಥಿಕ ಚಟುವಟಿಕೆಗಳನ್ನು ನಿಷೇಧಿಸಿರುವುದು ಸಂಕಷ್ಟಕ್ಕೆ ಹಣ ಹೊಂದಿಸಿಕೊಳ್ಳುವ ರೈತರಿಗಿದ್ದ ಅವಕಾಶವನ್ನು ಕಿತ್ತುಕೊಂಡಂತಾಗಿದೆ. ಇದರಿಂದ ಈಗಾಗಲೇ ಕೃಷಿ ಬಿಕ್ಕಟ್ಟಿನಿಂದ ನರಳುತ್ತಿರುವ ರೈತರ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.
ಏಳು ವರ್ಷಗಳಿಗೂ ಹೆಚ್ಚಿನ ಜೈಲು ಶಿಕ್ಷೆ ಹಾಗೂ ಸಹಸ್ರಾರು ರೂಪಾಯಿಗಳ ದುಬಾರಿ ದಂಡ ವಿಧಿಸಲು ಅವಕಾಶ ಇರುವ ಕರ್ನಾಟಕ ಜಾನುವಾರು ಸಂರಕ್ಷಣಾ ಹಾಗೂ ಹತ್ಯೆ ನಿಷೇಧ ಕಾಯ್ದೆ ಹೈನುಗಾರಿಕೆಗೆ ಭಾರೀ ಮಾರಕವಾಗಿ ಪರಿಣಮಿಸಿದೆ. ಅನುಪಯುಕ್ತ, ಕರಾವು ನಿಂತು ಹೋದ ,ಗಂಡು ಕರು ಮುಂತಾದ ರಾಸುಗಳನ್ನು ವಿಲೇವಾರಿ ಮಾಡುವುದು ಈ ಕರಾಳ ಕಾಯ್ದೆಯಿಂದ ರೈತರಿಗೆ ಭಾರಿ ದೊಡ್ಡ ತಲೆ ನೋವಾಗಿದೆ .ಮಾತ್ರವಲ್ಲ ರಾಸುಗಳ ವಹಿವಾಟಿನಿಂದ ಸಿಗುತ್ತಿದ್ದ ಆದಾಯಕ್ಕೂ ಕಲ್ಲು ಬಿದ್ದಿದೆ. ಹಸುಗಳನ್ನು ಖರೀದಿಸಲು ಹಾಗೂ ಮಾರಾಟ ಮಾಡಲು ಮತ್ತು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು ಪಶುಸಂಗೋಪನೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಕಿರುಕುಳ ಅನುಭವಿಸಬೇಕಾಗಿ ಬಂದಿದೆ. ಮುಕ್ತವಾಗಿ ಸಾಗಾಣಿಕೆ ಮಾಡುವ ರೈತರ ಸ್ವಾತಂತ್ರ್ಯ ವನ್ನು ಈ ಕಾಯ್ದೆ ಕಿತ್ತುಕೊಂಡಿದೆ. ಜಾನುವಾರು ರಕ್ಷಕರು ಎಂದು ಹೇಳಿಕೊಂಡು ಗೂಂಡಾಗಿರಿ ,ದೌರ್ಜನ್ಯ, ಕಿರುಕುಳ ನೀಡುವವರಿಗೆ ಈ ಕಾಯ್ದೆ ರಕ್ಷಣೆ ನೀಡಿದೆ. ಸ್ವಯಂಪ್ರೇರಿತ ವಾಗಿ ಕೇಸು ದಾಖಲಿಸಿಕೊಂಡು ರಾಸುಗಳನ್ನು ಜಪ್ತಿ ಮಾಡಿ ಕಿರುಕುಳ ನೀಡುವ ಅವಕಾಶವನ್ನು ಪೊಲೀಸರಿಗೆ ಈ ಕಾಯ್ದೆ ಕಲ್ಪಿಸಿಕೊಟ್ಟಿದೆ.
ಈ ಕಾಯ್ದೆ ಜಾರಿಗೆ ಬಂದ ಮೇಲೆ ಜಾನುವಾರುಗಳನ್ನು ಹೈನುಗಾರಿಕೆಗೆ ಹಾಗೂ ಕೃಷಿ ಕೆಲಸಕ್ಕೆ ಕೊಳ್ಳುವ ಅಥವಾ ಮಾರಾಟ ಮಾಡುವ ರೈತರು ಭಯದಿಂದ ವ್ಯವಹರಿಸಬೇಕಾದ ಪರಿಸ್ಥಿತಿಯನ್ನು ಉಂಟು ಮಾಡಿದೆ. ರಾಜ್ಯದ ಹಲವು ಕಡೆ ರೈತರ ಜಾನುವಾರು ಸಾಗಾಣಿಕೆ ವಾಹನಗಳನ್ನು ಅಡ್ಡಗಟ್ಟಿ ಹಲ್ಲೆ ನಡೆದಿರುವ ಘಟನೆಗಳು ವರದಿಯಾಗಿವೆ.ಕೆಲವು ಕಡೆ ಪೊಲೀಸ್ ಠಾಣೆಗೆ ಬಲವಂತವಾಗಿ ಕರೆದೊಯ್ದು ಕೇಸು ದಾಖಲಿಸಲಾಗಿದೆ. ಈ ಕಾಯ್ದೆ ಜಾರಿಗೆ ಬಂದ ಮೇಲೆ ಕಸಾಯಿಖಾನೆ ಹೆಸರಿನಲ್ಲಿ ರೈತರ ರಾಸುಗಳನ್ನು ಜಪ್ತಿ ಮಾಡಿ ಗೋಶಾಲೆಗೆ ಅಕ್ರಮವಾಗಿ ತೆಗೆದುಕೊಂಡು ಹೋಗುವ ಮಾಫಿಯಾಗೆ ಭಾರೀ ಬಲ ಬಂದಿದೆ. ಒಂದು ಕಡೆ ಗೋಶಾಲೆ ಹೆಸರಿನಲ್ಲಿ ಸರ್ಕಾರದಿಂದ ಅನುದಾನವನ್ನು ಕೊಳ್ಳೆ ಹೊಡೆಯಲಾಗುತ್ತಿದ್ದರೆ ಇನ್ನೊಂದು ಕಡೆ ಗೋಶಾಲೆಯಿಂದ ಅಕ್ರಮವಾಗಿ ರಾಸುಗಳನ್ನು ಕಾರ್ಪೊರೇಟ್ ಮಾಂಸ ಕಂಪನಿಗಳಿಗೆ ಮಾರಲಾಗುತ್ತಿದೆ.ಈ ಕಾಯ್ದೆಯಿಂದ ಸಾಂಪ್ರದಾಯಿಕ ಜಾನುವಾರು ಜಾತ್ರೆಗಳೇ ಬಹಳ ದೊಡ್ಡ ಆತಂಕವನ್ನು ಎದುರಿಸುತ್ತಿವೆ.
ಆದರೆ ಈ ಕಾಯ್ದೆಯು ಗೋಮಾಂಸ ಸೇವನೆಯನ್ನಾಗಲಿ ಅಥವಾ ಗೋಮಾಂಸ ಮಾರಾಟವನ್ನಾಗಲಿ ನಿಷೇಧಿಸಿಲ್ಲ. ಗೋ ಮಾಂಸ ರಪ್ತು ಮಾಡುವ ಕಾರ್ಪೊರೇಟ್ ಕಂಪನಿಗಳ ಜಾನುವಾರು ಕಸಾಯಿಖಾನೆಗಳನ್ನು ನಿಷೇಧಿಸಿಲ್ಲ. ಇದು ಬಹಳ ಸ್ಪಷ್ಟವಾಗಿ ಒಂದು ಕಡೆ ರೈತಾಪಿ ಕೃಷಿ ಹಾಗೂ ಹೈನುಗಾರಿಕೆ ಯನ್ನು ನಿರುತ್ಸಾಹಗೊಳಿಸುವ ಉದ್ದೇಶವನ್ನು ಹೊಂದಿದ್ದರೆ ಇನ್ನೊಂದು ಕಡೆ ಕಾರ್ಪೊರೇಟ್ ಕಂಪನಿಗಳ ಹೈನುಗಾರಿಕೆ ಹಾಗೂ ಮಾಂಸ ಮಾರಾಟ ಮತ್ತು ರಪ್ತು ಉದ್ಯಮದ ಹಿತಾಸಕ್ತಿಗಳನ್ನು ಪೋಷಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಕೃಷಿ ಹಾಗೂ ಹೈನುಗಾರಿಕೆಯನ್ನು ತೊರೆಯುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿರುವಾಗಲೇ ದೊಡ್ಡ ದೊಡ್ಡ ಮಾಲ್ ಗಳಲ್ಲಿ ದನದ ಮಾಂಸ ಮಾರಾಟ ವಹಿವಾಟು ಹಾಗೂ ರಪ್ತು ವಹಿವಾಟು ಹೆಚ್ಚುತ್ತಿರುವುದು ಈ ಕಾಯ್ದೆಯ ಕಾರ್ಪೊರೇಟ್ ಪಕ್ಷಪಾತವನ್ನು ಪುಷ್ಠಿಕರಿಸುತ್ತದೆ.
ರೈತರು ಜಾನುವಾರುಗಳನ್ನು ಪೋಷಿಸುತ್ತಿರುವುದರಿಂದಲೇ ಜಾನುವಾರು ಸಂತತಿ ಉಳಿದಿದೆ. ಜಾನುವಾರು ಪೋಷಣೆಯಿಂದ ರೈತರನ್ನು ದೂರ ತಳ್ಳುವ ಇಂತಹ ಈ ಕಾಯ್ದೆಯಿಂದ ವಾಸ್ತವವಾಗಿ ಇಡೀ ಜಾನುವಾರು ಸಂತತಿಯೇ ಅಪಾಯಕ್ಕೆ ಸಿಲುಕುತ್ತದೆ.ಅದ್ದರಿಂದ ಈ ಹಿಂದಿನಂತೆ ಭಯಮುಕ್ತವಾಗಿ ,ಯಾವುದೇ ಕಿರುಕುಳ ಇಲ್ಲದೇ ಜಾನುವಾರು ಮಾರುಕಟ್ಟೆ ನಡೆಯುವಂತಾಗಲು ಕರ್ನಾಟಕ ಜಾನುವಾರು ಸಂರಕ್ಷಣಾ ಹಾಗೂ ಹತ್ಯೆ ನಿಷೇಧ ಕಾಯ್ದೆ 2020 ಅನ್ನು ರದ್ದುಪಡಿಸಬೇಕು. ದೇಶೀಯ ಜಾನುವಾರು ತಳಿಗಳನ್ನು ಅಭಿವೃದ್ಧಿ ಪಡಿಸಿ ರಕ್ಷಿಸಲು ವಿಶೇಷವಾದ ಪ್ರೋತ್ಸಾಹ ಗಳನ್ನು ನೀಡಬೇಕು. ಆ ಮೂಲಕ ಹೈನುಗಾರಿಕೆ ಅವಲಂಬಿಸಿರುವ ರಾಜ್ಯದ ಸುಮಾರು 25 ಲಕ್ಷ ಕುಟುಂಬಗಳು ಸೇರಿದಂತೆ ರೈತಾಪಿ ಬೇಸಾಯದಲ್ಲಿ ತೊಡಗಿರುವ ಸುಮಾರು 75 ಲಕ್ಷ ರೈತ ಕುಟುಂಬಗಳನ್ನು ರಕ್ಷಿಸಬೇಕು ಎಂದು ಹಾಲು ಉತ್ಪಾದಕರ ರಾಜ್ಯ ಸಮಾವೇಶ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ. ಈ ಕಾಯ್ದೆಯನ್ನು ವಾಪಸ್ಸು ಪಡೆಯುವವರೆಗೆ ರೈತರ ಅನುಪಯುಕ್ತ ದನ,ಕರುಗಳನ್ನು ಮಾರುಕಟ್ಟೆ ದರದಲ್ಲಿ ರಾಜ್ಯ ಸರ್ಕಾರವೇ ಖರೀದಿಸಬೇಕೆಂದು ಹಾಲು ಉತ್ಪಾದಕರ ರಾಜ್ಯ ಸಮಾವೇಶವು ಆಗ್ರಹಿಸಿದೆ.