ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 9 ವರ್ಷಕ್ಕೆ ಕಡಿತಗೊಳಿಸುವ ಹೊಸ ಮಸೂದೆ ಇರಾಕ್ ಸರ್ಕಾರ ಸಂಸತ್ ನಲ್ಲಿ ಮಂಡಿಸಲು ಮುಂದಾಗಿದೆ. ಇದು ಜಗತ್ತಿನಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.
ಪ್ರಸ್ತುತ ಇರಾಕ್ ನಲ್ಲಿ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 18 ವರ್ಷಕ್ಕೆ ನಿಗದಿಗೊಳಿಸಲಾಗಿದೆ. ಆದರೆ ಜಸ್ಟಿಸ್ ಸಚಿವಾಲಯ ಮದುವೆ ವಯಸ್ಸನ್ನು ಅರ್ಧಕ್ಕೆ ಕಡಿತಗೊಳಿಸಿ ಅಂದರೆ 9 ವರ್ಷಕ್ಕೆ ಮದುವೆ ಮಾಡಬಹುದು ಎಂಬ ಕಾನೂನು ಜಾರಿಗೆ ತರಲು ಮುಂದಾಗಿದೆ.
ಒಂದು ವೇಳೆ ಕಾನೂನು ಜಾರಿಯಾದರೆ ಇರಾಕ್ ನಲ್ಲಿ ಹೆಣ್ಣುಮಕ್ಕಳು 9 ಮತ್ತು ಗಂಡು ಮಕ್ಕಳು 15ನೇ ವಯಸ್ಸಿಗೆ ಮದುವೆ ಆಗಬಹುದಾಗಿದೆ.
ನೂತನ ಕಾನೂನಿನಲ್ಲಿ ಕುಟುಂಬಗಳು ತಮ್ಮ ಹೆಣ್ಣು ಮಕ್ಕಳ ಮದುವೆಯನ್ನು ಧರ್ಮದ ಆಧಾರದ ಮೇಲೆ ಸಂವಿಧಾನದಲ್ಲಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ. ಇದು ಬಾಲ್ಯ ವಿವಾಹವಾಗಿದ್ದು, ಇದರಿಂದ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ವಿಚ್ಛೇದನ, ಗೃಹ ಬಂಧನ ಮುಂತಾದವುಗಳು ಹೆಚ್ಚಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಚಿಕ್ಕವಯಸ್ಸಿಗೆ ಮದುವೆ ಮಾಡುವುದರಿಂದ ಮಹಿಳೆಯ ಹಕ್ಕು, ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನ ಇದಾಗಿದೆ. ದಶಕಗಳಿಂದ ಹೆಣ್ಣು ಮಕ್ಕಳ ಹಕ್ಕಿಗೆ ಹೋರಾಟ ನಡೆಯುತ್ತಿರುವಾಗ ಹಿಂದಕ್ಕೆ ಹೋಗುವುದು ಎಷ್ಟು ಸರಿ ಎಂಬ ವಾದಗಳು ಕೇಳಿ ಬರುತ್ತಿದೆ.