ಮೇ ಸಾಹಿತ್ಯ ಮೇಳ: ಸ್ವಾತಂತ್ರ್ಯ75 ನೆಲದ ದನಿಗಳು

  • 8ನೇ ಮೇ ಸಾಹಿತ್ಯ ಮೇಳ
  • ಜನರ ಬದುಕಿನ ಹಲವು ಪ್ರಶ್ನೆಗಳ ಕುರಿತು ಮೇಳ
  • ಸಾಹಿತ್ಯ ನೆಲೆಯ ವಿವಿಧ ಕಾರ್ಯಕ್ರಮ

ಬೆಂಗಳೂರು : ಲಡಾಯಿ ಪ್ರಕಾಶನ-ಗದಗ, ಕವಿ ಪ್ರಕಾಶನ-ಕವಲಕ್ಕಿ, ಚಿತ್ತಾರ ಕಲಾ ಬಳಗ-ಧಾರವಾಡ, ಮೇ ಸಾಹಿತ್ಯ ಮೇಳದ ಬಳಗ-ದಾವಣಗೆರೆ ಜಂಟಿಯಾಗಿ 8ನೇ ಮೇ ಸಾಹಿತ್ಯ ಮೇಳವನ್ನು ಹಮ್ಮಿಕೊಂಡಿದ್ದು, 2022ರ ಮೇ 27 ಮತ್ತು 28ರಂದು ದಾವಣಗೆರೆಯಲ್ಲಿ ನಡೆಯಲಿದೆ.

ಸ್ವಾತಂತ್ರ್ಯ-75 ನೆಲದ ದನಿಗಳು – ಗಳಿಸಿದ್ದೇನು? ಕಳಕೊಂಡಿದ್ದೇನು? ಎಂಬ ಪ್ರಮುಖ ವಿಷಯದ ಆಧಾರದಲ್ಲಿ ಜೀವಪರವಾಗಿ ಬರೆಯುವ, ಸಮಾಜ ಬದಲಾವಣೆಗಾಗಿ ಹೋರಾಟ ಮಾಡುವ ಮತ್ತು ಜನಸಾಮಾನ್ಯ ಮನಸುಗಳೆಲ್ಲ ಈ ಮೇಳದಲ್ಲಿ ಭಾಗಿಯಾಗಲಿದ್ದಾರೆ.

2022ನೇ ಇಸವಿಗೆ ಭಾರತವು ರಾಜಕೀಯ ಸ್ವಾತಂತ್ರ್ಯ ಪಡೆದು 75 ವರ್ಷಗಳಾದವು. ಹಿಂದೆ ಹಲವರ ಬಲಿದಾನ, ತ್ಯಾಗ, ದೂರದೃಷ್ಟಿಯ ಫಲವಾಗಿ ರೂಪುಗೊಂಡ ದೇಶದಲ್ಲಿ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ, ಸಾಮಾಜಿಕ, ಧಾರ್ಮಿಕ ನೆಲೆಯ ಸ್ವಾತಂತ್ರ್ಯವೂ ನೆಲೆಗೊಂಡಿವೆಯೇ? ಈ 75 ವರ್ಷಗಳಲ್ಲಿ ಭಾರತ ಸಂವಿಧಾನಬದ್ಧವಾಗಿ ಉನ್ನತಿ ಹೊಂದಿತ್ತಿದೆಯೇ? ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸರ್ವಧರ್ಮ ಸಮಭಾವದಂತಹ ಸಂವಿಧಾನದ ಉದಾತ್ತ ಆಶಯಗಳು ಸಾಕಾರಗೊಳ್ಳುತ್ತಿವೆಯೇ? ಈ ನೆಲದ ರೈತರು, ಆದಿವಾಸಿಗಳು, ದಲಿತ ಸಮುದಾಯಗಳು, ಮಹಿಳೆಯರು, ಲಿಂಗಪರಿವರ್ತಿತರು, ತರುಣರು, ಅಲ್ಪಸಂಖ್ಯಾತ ಸಮುದಾಯಗಳು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆಯೇ?  ಇಂತಹ ಜನರ ಬದುಕಿನ ಹಲವು ಪ್ರಶ್ನೆಗಳನ್ನು ಇಟ್ಟುಕೊಂಡು ಈ ಬಾರಿಯ ಈ ಬಾರಿಯ ಮೇ ಸಾಹಿತ್ಯ ಮೇಳ ನಡೆಯುತ್ತಿದೆ.

ಮೇ 27ರಂದು ಬೆಳಿಗ್ಗೆ 9.30ಕ್ಕೆ ಹೋರಾಟದ ಹಾಡುಗಳೊಂದಿಗೆ ಪ್ರಾರಂಭವಾಗುವ ಮೇಳವು ಆರಂಭದಲ್ಲಿ ಉದ್ಘಾಟನಾ ಕಾರ್ಯಕ್ರಮದ ಮೂಲಕ ಚಾಲನೆಗೊಳ್ಳಲಿದೆ.

ಆಶಯಗೀತೆ: ಇಪ್ಟಾ, ಆರ್‌ಸಿಎಫ್‌, ದಲಿತ ಕಲಾ ಮಂಡಳಿ ಸಂಗಾತಿಗಳಿಂದ. ಸಂವಿಧಾನ ಪ್ರಸ್ತಾವನೆ ಓದು: ಮುತ್ತು ಬಿಳೆಯಲಿ, ಪ್ರಾಸ್ತಾವಿಕ ಮಾತುಗಳನ್ನು ಬಿ. ಶ್ರೀನಿವಾಸ್‌ ಮಾಡಲಿದ್ದಾರೆ. ಇಡೀ ಮೇಳದ ಚಾಲನೆ ಶ್ರಮಿಕರು ಮಾಡಲಿದ್ದು, ದಿಕ್ಸೂಚಿ ಮಾತುಗಳನ್ನು ಜಸ್ಟಿಸ್‌ ಕೆ. ಚಂದ್ರು(ಚೆನ್ನೈ), ಪತ್ರಕರ್ತ ಪಿ. ಸಾಯಿನಾಥ್‌, ಕವಿತಾ ಕೃಷ್ಣ, ಅಬ್ದುಸ್ಸಲಾಂ ಪುತ್ತಿಗೆ ಅವರುಗಳು ಆಡಲಿದ್ದಾರೆ.

ಅಭಿವ್ಯಕ್ತಿ, ಗ್ರಾಮ ಭಾರತ, ಕಾವ್ಯ ಪ್ರಸ್ತುತಿ, ಕವಿಗೋಷ್ಠಿ, ಬಹುತ್ವ ಭಾರತ, ಮಹಿಳಾ ಭಾರತ, ಅನುಭವ ಕಥನ, ತರುಣ ಭಾರತ, ಹೊನಲು ಬೆಳಕಿನ ಕವಿಗೋಷ್ಠಿ, ಕಾರ್ಯಕ್ರಮಗಳು ನಡೆಯಲಿದೆ.

ಮೊದಲ ದಿನ ಸಂಜೆ 7.45ಕ್ಕೆ ನಂಗೇಲಿ ಏಕವ್ಯಕ್ತಿ ಪ್ರದರ್ಶನ ಹಾಗೂ 8.15ಕ್ಕೆ ಕಿಸಾನ್‌ ಸತ್ಯಾಗ್ರಹ ಸಾಕ್ಷ್ಯಚಿತ್ರ ಪ್ರದರ್ಶನವು ಇರಲಿದೆ. ನಂತರದಲ್ಲಿ ಸಂವಾದ ನಡೆಯಲಿದ್ದು ನಿರ್ದೇಶಕ ಕೇಸರಿ ಹರವೂ, ಪ್ರಾಂತ ರೈತ ಸಂಘದ ರಾಜ್ಯ ನಾಯಕ ನವೀನ್ ಕುಮಾರ್ ಭಾಗವಹಿಸಲಿದ್ದಾರೆ.

ಸಂಜೆ 5 ಗಂಟೆಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಭಾ ಸಾಹಿತ್ಯ ಪ್ರಶಸ್ತಿ, ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ, ನವಲಕಲ್‌ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಪ್ರಶಸ್ತಿ-2022 ಪ್ರಧಾನ ಮಾಡಲಾಗುತ್ತಿದೆ ಎಂದು ಸಂಘಟಿಕರು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *