ನವದೆಹಲಿ : ಸಿಐಟಿಯು, ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಮತ್ತು ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘ (ಎಐಎಡಬ್ಲ್ಯುಯು) ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕಾರ್ಮಿಕ-ವಿರೋಧಿ, ರೈತ ವಿರೋಧಿ, ಜನವಿರೋಧಿ ಮತ್ತು ರಾಷ್ಟ್ರ-ವಿರೋಧಿ ಧೋರಣೆಗಳ ವಿರುದ್ಧ ಜಂಟಿ ದೇಶವ್ಯಾಪಿ ಅಭಿಯಾನ ಮತ್ತು ಜಂಟಿ ಕಾರ್ಯಾಚರಣೆಗಳನ್ನು ಕೈಗೊಳ್ಳಲು ನಿರ್ಧರಿಸಿವೆ. ಅವು ಹೀಗಿವೆ:
- ಆಗಸ್ಟ್ 1, 2022 ರಂದು ಭೂಮಿ, ಕೂಲಿ ಮತ್ತು ಮನರೇಗ ಅಡಿಯಲ್ಲಿ ಕೆಲಸ ಇತ್ಯಾದಿಗಳ ಬೇಡಿಕೆಗಳ ಮೇಲೆ ದೇಶದ ಕೃಷಿ ಕಾರ್ಮಿಕರ ಸಂಘಗಳ ಜಂಟಿ ಹೋರಾಟ. ಇದಕ್ಕೆ ಸಿಐಟಿಯು ಮತ್ತು ಎಐಕೆಎಸ್ ಬೆಂಬಲ ಮತ್ತು ಸೌಹಾರ್ದ ಕಾರ್ಯಕ್ರಮ..
- ಆಗಸ್ಟ್ 1 ರಿಂದ ಹದಿನೈದು ದಿನಗಳ ಪ್ರಚಾರಾಂದೋಲನ. ಇದರಲ್ಲಿ ಕಾರ್ಮಿಕರು, ರೈತರು ಮತ್ತು ಕೃಷಿ ಕಾರ್ಮಿಕರ ಬೇಡಿಕೆಗಳನ್ನು ದೇಶದ ಮೂಲೆ-ಮೂಲೆಗಳಲ್ಲಿ ತಳಮಟ್ಟದವರೆಗೆ ಕಾರ್ಮಿಕರು, ರೈತರು ಮತ್ತು ಕೃಷಿ ಕಾರ್ಮಿಕರ ನಡುವೆ ಒಯ್ದು ಜನಜನಿತಗೊಳಿಸಲಾಗುವುದು. ಕರಪತ್ರಗಳ ವಿತರಣೆ, ಸಭೆಗಳು ಮತ್ತು ಇತರ ವಿಧಾನಗಳ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಕಾರ್ಮಿಕರು, ರೈತರು ಮತ್ತು ಇತರ ವರ್ಗಗಳ ಶ್ರಮಜೀವಿಗಳ ಪಾತ್ರವನ್ನು ಮತ್ತು ಸ್ವತಂತ್ರ ಭಾರತದ ಸ್ವರೂಪಕ್ಕೆ ಸಂಬಂಧಪಟ್ಟಂತೆ ದುಡಿಯುವ ಜನಸಮೂಹಗಳ ಕಣ್ಣೋಟವನ್ನು ಎತ್ತಿ ತೋರಿಸಲಾಗುವುದು ಮತ್ತು ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಹೋರಾಟದಲ್ಲಿ ಆರ್ಎಸ್ಎಸ್ನ ದಾಸ್ಯ ಮನೋಭಾವವನ್ನು ಮತ್ತು ಜನರಿಗೆ ಅವರ ದ್ರೋಹವನ್ನು ಬಹಿರಂಗಪಡಿಸಲಾಗುವುದು.. ಈ ಅಭಿಯಾನವು ಆಗಸ್ಟ್ 14 ರಂದು ಸಂಜೆ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಜಂಟಿ ಅಣಿನೆರಿಕೆ ಮತ್ತು ಜಾಗರಣಾ ಕಾರ್ಯಕ್ರಮಗಳು ಮತ್ತು ದೇಶದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣದೊಂದಿಗೆ ಸಮಾಪನಗೊಳ್ಳುತ್ತವೆ.
- ‘ಕ್ವಿಟ್ ಇಂಡಿಯಾ’ ದಿನದ ಸ್ಮರಣಾರ್ಥ 8ನೇ ಆಗಸ್ಟ್ 2022 ರಂದು ಮೂರೂ ಸಂಘಟನೆಗಳಿಂದ ಒಟ್ಟಾಗಿ ಜಿಲ್ಲಾ ಕೇಂದ್ರಗಳಲ್ಲಿ ಮತಪ್ರದರ್ಶನಗಳು.
- ಈ ಅಭಿಯಾನದ ಮುಂದುವರಿಕೆಯಾಗಿ, ಭವಿಷ್ಯದ ಪ್ರಚಾರ ಮತ್ತು ಕಾರ್ಯಾಚರಣೆಗಳನ್ನು ರೂಪಿಸಲು ಸಿಐಟಿಯು, ಎಐಕೆಎಸ್ ಮತ್ತು ಎಐಎಡಬ್ಲ್ಯುಯು ಸೆಪ್ಟೆಂಬರ್ 5 ರಂದು ರಾಷ್ಟ್ರ ರಾಜಧಾನಿ ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಜಂಟಿ ರಾಷ್ಟ್ರೀಯ ಸಮಾವೇಶ.
‘ಆಜಾದಿ ಕಾ ಅಮೃತ ಮಹೋತ್ಸವ’ ಎಂದು ಬಹಳ ಸದ್ದು-ಗದ್ದಲದ ಪ್ರಚಾರ ನಡೆಸುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕಾರ್ಯತಃ, ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮಲ್ಲಿದ್ದ ಎಲ್ಲವನ್ನೂ, ತಮ್ಮ ಬದುಕುಗಖನ್ನೂ ಕೂಡ ತ್ಯಾಗ ಮಾಡಿದ ಲಕ್ಷಾಂತರ ಶ್ರಮಜೀವಿಗಳು, ಕಾರ್ಮಿಕರು, ರೈತರು ಮತ್ತು ಕೃಷಿ ಕಾರ್ಮಿಕರು ಮತ್ತು ಇತರ ವರ್ಗಗಳ ಜನರ ಆಕಾಂಕ್ಷೆಗಳನ್ನು ಮತ್ತು ಕನಸುಗಳನ್ನು ನಿರಾಕರಿಸುವ ನೀತಿಗಳನ್ನು ಆಕ್ರಮಣಕಾರಿಯಾಗಿ ಅನುಸರಿಸುತ್ತಿದೆ ಎಂದು ಈ ಮೂರು ಸಂಘಟನೆಗಳು ನೀಡಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಪ್ರಸ್ತುತ ಮೋದಿ ಆಡಳಿತದಲ್ಲಿ ಕಾರ್ಮಿಕರು, ರೈತರು, ಕೃಷಿ ಕಾರ್ಮಿಕರು, ಕುಶಲಕರ್ಮಿಗಳು ಮತ್ತು ಶ್ರಮಜೀವಿಗಳ ಎಲ್ಲಾ ವರ್ಗಗಳ ಸ್ಥಿತಿಯು ನಿರಂತರವಾಗಿ ಹದಗೆಡುತ್ತಿದೆ. ಅದು ಕೋವಿಡ್ ಸಾಂಕ್ರಾಮಿಕವನ್ನು ಜನರ ಆರೋಗ್ಯ, ಜೀವನ ಮತ್ತು ಜೀವನೋಪಾಯವನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಜನರ ಮೇಲೆ ಹೆಚ್ಚಿನ ಹೊರೆಗಳನ್ನು ಹಾಕುವ ಅವಕಾಶವಾಗಿ ಬಳಸಿಕೊಂಡಿದೆ. ಜನರಿಗೆ ಯಾವುದೇ ಪರಿಹಾರವನ್ನು ನೀಡುವ ಬದಲು ಅದು ಸಾರ್ವಜನಿಕ ಹಣವನ್ನು ವಿದೇಶಿ ಏಕಸ್ವಾಮ್ಯ ಕಂಪನಿಗಳು ಸೇರಿದಂತೆ ದೊಡ್ಡ ಕಾರ್ಪೊರೇಟ್ಗಳಿಗೆ ‘ಉತ್ತೇಜನೆ’ ಮತ್ತು ರಿಯಾಯಿತಿಗಳನ್ನು ನೀಡಲು ಬಳಸಿದೆ ಮತ್ತು ಅಪಾರ ಸಂಪತ್ತನ್ನು ಸಂಗ್ರಹಿಸಲು ಸಹಾಯ ಮಾಡಿದೆ. ಅದರ ನೀತಿಗಳು ಸಂಪತ್ತು ಮತ್ತು ಆದಾಯದ ಅಸಮಾನತೆಗಳಲ್ಲಿ ಅಭೂತಪೂರ್ವ ಹೆಚ್ಚಳಕ್ಕೆ ಕಾರಣವಾಗಿವೆ.
ಕೃಷಿ ಲಾಗುವಾಡುಗಳು ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಏರಿಕೆಯಾಗಿದೆ. ಕಾರ್ಮಿಕರ ನಿಜ ವೇತನ ಇಳಿಯುತ್ತಿದೆ. ಕೃಷಿ ಕಾಯಕ ನಡೆಸುವುದು ರೈತರಿಗೆ ಅದರಲ್ಲೂ ಬಡ ರೈತರಿಗೆ ದುಸ್ತರವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸದ ದಿನಗಳು ಕುಸಿದಿವೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಮೋದಿ ಸರ್ಕಾರದ ಬಹು ಪ್ರಚಾರಿತ ಆಶ್ವಾಸನೆಯ ಪೊಳ್ಳುತನ ಬಯಲಾಗಿದೆ, ಕೃಷಿ ಆದಾಯವುಹೆಚ್ಚುವ ಬದಲು ತೀವ್ರವಾಗಿ ಕುಸಿದಿದೆ. ಮನರೇಗ ಕಾಮಗಾರಿಗೆ ಬೇಡಿಕೆ ಹೆಚ್ಚಿದ್ದರೂ, ಸರ್ಕಾರ ಈ ಯೋಜನೆಗೆ ಬಜೆಟ್ ಹಂಚಿಕೆಯನ್ನು ಕಡಿಮೆ ಮಾಡಿದೆ. ಬಹುತೇಕ ಎಲ್ಲ ರಾಜ್ಯಗಳಲ್ಲಿ ಮಾಡಿದ ಕೆಲಸಕ್ಕೆ ಕೂಲಿ ಹಲವು ತಿಂಗಳುಗಳಿಂದ ಬಾಕಿ ಇದೆ. ನಿರುದ್ಯೋಗ ಆತಂಕಕಾರಿ ಮಟ್ಟ ತಲುಪಿದೆ. ಲಕ್ಷಗಟ್ಟಲೆ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಮುಚ್ಚಿದ್ದು, ಕೋಟ್ಯಂತರ ಉದ್ಯೋಗ ನಷ್ಟವಾಗಿದೆ. ಮೋದಿ ಸರ್ಕಾರವು ಘೋಷಿಸಿದ ಎಲ್ಲಾ ರಿಯಾಯಿತಿಗಳು ಮತ್ತು ಉತ್ತೇಜನೆಗಳ ಹೊರತಾಗಿಯೂ, ಖಾಸಗಿ ವಲಯದಲ್ಲಿ ಯಾವುದೇ ಹೊಸ ಉದ್ಯೋಗ ಸೃಷ್ಟಿಸುವ ಹೂಡಿಕೆಯು ಬರುತ್ತಿಲ್ಲ.
ಮೋದಿ ಸರ್ಕಾರವು ಮೂರು ರೈತ ವಿರೋಧಿ ಕಾನೂನುಗಳನ್ನು ರದ್ದುಗೊಳಿಸಲೇ ಬೇಕಾಗಿ ಬಂದರೂ ಖಾತರಿಪಡಿಸಿದ ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತರಿ ಸಂಬಂಧಿಸಿದ ತನ್ನ ಭರವಸೆಗಳನ್ನು ಜಾರಿಗೆ ತರಲು ಅದು ಯಾವುದೇ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಂಡಿಲ್ಲ. ವಿದ್ಯುಚ್ಛಕ್ತಿಯನ್ನು ಖಾಸಗೀಕರಣಗೊಳಿಸುವ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ತರುವ ಹುನನ್ಆರವನ್ನು ಮುಂದುವರೆಸುತ್ತಿದೆ. ಕಾರ್ಮಿಕರ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಿದೆ. ಖಾಸಗೀಕರಣದ ಧಾವಂತ ಮುಂದುವರೆದಿದೆ, ಅದೀಗ ರಾಷ್ಟ್ರೀಯ ಸೊತ್ತು ನಗದೀಕರಣ ಪೈಪ್ಲೈನ್ ಮತ್ತು ರಾಷ್ಟ್ರೀಯ ಭೂಮಿ ನಗದೀಕರಣ ನಿಗಮದ ರಚನೆಯೊಂದಿಗೆ ಹೊಸ ಅವತಾರ ತಳೆದಿದೆ.
ಸರಕಾರ ಸಾಂವಿಧಾನಿಕ ತತ್ವಗಳನ್ನು ದುರ್ಬಲಗೊಳಿಸುತ್ತಿದೆ, ಜನರ ಮೂಲಭೂತ ಮತ್ತು ಮಾನವ ಹಕ್ಕುಗಳ ಮೇಲೆ ದಾಳಿ ಮಾಡುತ್ತಿದೆ ಮತ್ತು ತನ್ನ ನೀತಿಗಳಿಗೆ ಎಲ್ಲಾ ಭಿನ್ನಾಭಿಪ್ರಾಯ ಮತ್ತು ವಿರೋಧವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಜನರ ಮೂಲಭೂತ ಪ್ರಜಾಸತ್ತಾತ್ಮಕ ಮತ್ತು ಮಾನವ ಹಕ್ಕುಗಳ ಮೇಲೆ ನಿರ್ಲಜ್ಜವಾಗಿ ದಾಳಿ ಮಾಡಲಾಗುತ್ತಿದೆ. ಪತ್ರಕರ್ತರು, ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರು, ಮಾನವ ಹಕ್ಕುಗಳ ಹೋರಾಟಗಾರರು ಎಲ್ಲರಿಗೂ ಕಿರುಕುಳ, ಹಲ್ಲೆ, ಬಂಧನ ಮತ್ತು ಜಾಮೀನು ಇಲ್ಲದೆ ಜೈಲಿಗೆ ತಳ್ಳಲಾಗುತ್ತದೆ. ಭಿನ್ನಾಭಿಪ್ರಾಯವನ್ನು ಅಕ್ಷರಶಃ ‘ಬುಲ್ಡೋಜ್’ ಮಾಡಲು ಪ್ರಯತ್ನಿಸಲಾಗುತ್ತದೆ. ನಮ್ಮ ಬಹುಪಾಲು ಶ್ರಮಜೀವಿಗಳಾದ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಇತ್ಯಾದಿಗಳ ಮೇಲೆ ದಾಳಿಗಳು ಹೆಚ್ಚಿವೆ, ವಿಶೇಷವಾಗಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ. ಬಹುಸಂಖ್ಯಾಕವಾದಿ ಕೋಮುವಾದಿ ಶಕ್ತಿಗಳು ಜನಗಳ ಉಡುಗೆ, ಆಹಾರ, ಮದುವೆಯ ಆಯ್ಕೆ ಇತ್ಯಾದಿ ಸೇರಿದಂತೆ ಅವರ ಒಟ್ಟು ಜೀವನವನ್ನು ನಿರ್ದೇಶಿಸಲು ಹೆಚ್ಚೆಚ್ಚು ಪ್ರಯತ್ನಿಸುತ್ತಿವೆ. ಇದು ಅಲ್ಪಸಂಖ್ಯಾತ ಮೂಲಭೂತವಾದಿ ಶಕ್ತಿಗಳ ಉದಯಕ್ಕೆ ಕಾರಣವಾಗಿದೆ. ಈ ಎರಡೂ ಬಣ್ಣಗಳ ಕೋಮುವಾದ ಜನರ ಜೀವನ, ಅವರ ಏಕತೆ ಮತ್ತು ಸಾಮಾಜಿಕ ಸಾಮರಸ್ಯದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತವೆ.
ಇಂತಹ ಸಂದರ್ಭದಲ್ಲಿ ಸಿಐಟಿಯು, ಎಐಕೆಎಸ್ ಮತ್ತು ಎಐಎಡಬ್ಲ್ಯುಯು ನವ ಉದಾರವಾದಿ ನೀತಿಗಳು ಹಾಗೂ ಆರ್ಎಸ್ಎಸ್ ಮಾರ್ಗದರ್ಶನದ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕೋಮುವಾಧಿ ವಿಭಜಕ ಅಜೆಂಡಾದ ವಿರುದ್ಧ ದೇಶಾದ್ಯಂತ ಪ್ರಬಲ ಪ್ರತಿರೋಧವನ್ನು ಬೆಳೆಸಲು ಈ ಜಂಟಿ ಪ್ರಚಾರ ಮತ್ತು ಕಾರ್ಯಾಚರಣೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಈ ಜಂಟಿ ಹೇಳಿಕೆ ವಿವರಿಸಿದೆ.