ನಮಗೆ ನೆರಳು ನೀಡುವ ಕಟ್ಟಡ ಕಾರ್ಮಿಕರು ಬೀದಿಯಲ್ಲಿದ್ದಾರೆ – ವೆಂಕಟೇಶ್ ಗೌಡ

ಬೆಂಗಳೂರು : ಕಟ್ಟಡ ನಿರ್ಮಾಣಗಳ ಮೂಲಕ ನಗರ, ಗ್ರಾಮಗಳನ್ನು ಸುಂದರವಾಗಿ ಕಾಣುವಂತೆ ಮಾಡಿ, ನಮ್ಮನ್ನೆಲ್ಲ ನೆರಳಿನಲ್ಲಿ ಬದುಕುವಂತೆ ಮಾಡುವ ಕಟ್ಟಡ ಕಾರ್ಮಿಕನ ಬದುಕು ಬೀದಿಯಲ್ಲಿದೆ. ಮಳೆ. ಚಳಿಗೆ ಕಾರ್ಮಿಕನ ದೇಹ ನರಳುತ್ತಿದೆ ಎಂದು ಹಿರಿಯ ವಕೀಲ ಕೆ.ಆರ್. ವೆಂಕಟೇಶ್ ಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

ವಿಮಾನೌಕರರ ಭವನದಲ್ಲಿ ನಡೆದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (CWFI) ನ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, ಸಂಸತ್ತು, ವಿಧಾನಸೌಧ, ಆಡಳಿತದ ಕಚೇರಿಗಳು, ಸುಪ್ರೀಂ ಕೋರ್ಟ್, ಹೈಕೋರ್ಟ್ ಸೇರಿದಂತೆ ಎಲ್ಲಾ ಕಟ್ಟಡಗಳನ್ನು ನಿರ್ಮಾಣ ಮಾಡಿದ ಕೊಡುಗೆ ಕಟ್ಟಡ ಕಾರ್ಮಿಕರದ್ದಾಗಿದೆ. ದಿನಂಪ್ರತಿ ಈ ಕಾರ್ಮಿಕರನ್ನು ನೆನಪಿಸಿಕೊಂಡು, ನಮಿಸಿ ಸಂಸತ್ತು, ವಿಧಾನಸೌಧ, ಕೋರ್ಟ್ ಕಚೇರಿಗಳ ಒಳಗೆ ಪ್ರವೇಶಿಸಬೇಕು ಇದು ನಾವು ಅವರಿಗೆ ಸಲ್ಲಿಸಬೇಕಾದ ಗೌರವ ಎಂದರು.

ಈ ಕೋವಿಡ್ ಸಮಯದಲ್ಲಿ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ನೂರಾರು ಸಂಕಷ್ಟಗಳನ್ನು ಎದುರಿಸಿದರು. ಅವರ ಕಟ್ಟಿದ ಕಟ್ಟಡಗಳಲ್ಲಿ ಕುಳಿತ ಆಡಳಿತ ನಡೆಸಿದ ಸರಕಾರಗಳಿಗೆ ಕಟ್ಟಡ ಕಾರ್ಮಿಕರ ನೋವುಗಳು ಅರ್ಥವಾಗಲೇ ಇಲ್ಲ. ಕಾರ್ಮಿಕರನ್ನು ಬೀದಿಗೆ ತರುವ ಕಾನೂನುಗಳು ಬರುತ್ತಿವೆ ಇದರ ವಿರುದ್ದ ನೀವು ಹೋರಾಡಬೇಕು‌. ಬಸವಣ್ಣ, ಕಾರ್ಲ್ ಮಾರ್ಕ್ಸ್, ಮಹಾತ್ಮ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್, ಬುದ್ಧ, ಜ್ಯೋತಿ ಬಸು ರವರನ್ನು ನೀವು ಆದರ್ಶವಾಗಿಟ್ಟುಕೊಂಡು ಹೋರಾಟಕ್ಕೆ ಮುಂದಾಗಿ ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಐಟಿಯು ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ಎಸ್ ಮೀನಾಕ್ಷಿಸುಂದರಂ ಮಾತನಾಡಿ, ಕಟ್ಟಡ ಕಾರ್ಮಿಕರು ಸಂಘಟಿತರಾಗಬೇಕು. ಒಂದೆಡೆ ಸರಕಾರ ತರುತ್ತಿರುವ ನೀತಿಗಳು, ಇನ್ನೊಂದೆಡೆ ದುಡಿಸಿಕೊಳ್ಳುವ ಮಾಲಿಕರ ನೀತಿಗಳು ಇವುಗಳ ನಡುವೆ ಸಿಲುಕು ಕಟ್ಟಡ ಕಾರ್ಮಿಕರ ಬದುಕು ಸಂಕಷ್ಟದಲ್ಲಿದೆ. ಗ್ರಾಮೀಣ ಪ್ರದೇಶದ ಕಟ್ಟಡ ಕಾರ್ಮಿಕರಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ ಹಾಗಾಗಿ ನಮ್ಮ ಹಕ್ಕು ಮತ್ತು ಸೌಲಭ್ಯಗಳನ್ನು ಪಡೆಯಲು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

CWFI ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎರಡು ದಿನಗಳ ಕಾಲ ನಡೆಯುವ ಕಾರ್ಯಾಗಾರದಲ್ಲಿ ಕಟ್ಟಡ ಕಾರ್ಮಿಕರ ಹಕ್ಕುಗಳ ಬಗ್ಗೆ, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ಸಂಘಟನೆ ಬಲಪಡಿಸುವ ಮತ್ತು ರಾಜಕೀಯ ಪ್ರಜ್ಞೆ ನೀಡುವ ಚರ್ಚೆ ಸಂವಾದಗಳು ನಡೆಯಲಿವೆ ಎಂದರು.

ವೇದಿಕೆಯ ಮೇಲೆ CWFI ರಾಜ್ಯ ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ರಾಜ್ಯ ಖಜಾಂಚಿ ಸುರೇಶ್ ಕಲ್ಲಾಗರ ಇದ್ದರು. CWFI ಹಿರಿಯ ಉಪಾಧ್ಯಕ್ಷ ಬಿ.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಲಿಂಗರಾಜ ಮಳವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

 

Donate Janashakthi Media

Leave a Reply

Your email address will not be published. Required fields are marked *