ವ್ಯಕ್ತಿ ಸಾವನ್ನಪ್ಪಿದ್ದರೂ ವಿಷಯ ಮುಚ್ಚಿಟ್ಟು ಹಣ ಕಬಳಿಸಿದ್ದಾರೆಂದು ಆರೋಪ
ಮೈಸೂರು: ವೈದ್ಯರು ಸರಿಯಾಗಿ ಚಿಕಿತ್ಸೆ ಮಾಡದೆಯೇ ಯುವಕನೋರ್ವ ಮೃತ ಪಟ್ಟಿದ್ದು, ಮೃತರ ಕುಟುಂಬಕ್ಕೆ ಆಸ್ಪತ್ರೆ ಆಡಳಿತ ಮಂಡಳಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ನಾರಾಯಣ ಹೃದಯಾಲಯದ ಎದುರು ರೈತರು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.
ಪ್ರತಿಭಟನೆ ನಿರತ ರೈತರು ಮಾತನಾಡಿ, ಪಾಂಡವಪುರ ತಾಲ್ಲೂಕಿನ ದೇವೇಗೌಡನ ಕೊಪ್ಪಲು ಗ್ರಾಮದ ನಿವಾಸಿ 43 ವರ್ಷ ವಯಸ್ಸಿನ ಯೋಗೇಶ್ 29 ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದುವರೆವಿಗೂ ಚಿಕಿತ್ಸೆಗೆ 8 ಲಕ್ಷ 60ಸಾವಿರ ಹಣ ಕಟ್ಟಿಸಿಕೊಂಡಿದ್ದಾರೆ. ಇಂದು 5 ಲಕ್ಷದ 80 ಸಾವಿರ ಹಣ ಆಗಿದೆ ಎಂದು ಹೇಳಿರುವ ವೈದ್ಯರು ಯೋಗೇಶ್ ಮೃತ ಪಟ್ಟಿರುವುದಾಗಿ ಹೇಳಿದ್ದಾರೆ.
ಕಳೆದ ಒಂದು ವಾರದಿಂದ ಐಸಿಯು ನಲ್ಲಿ ಆತನನ್ನು ಇರಿಸಿದ್ದು, ಕುಟುಂಬಸ್ಥರಿಗೂ ಅವರನ್ನು ತೋರಿಸಿಲ್ಲ. ಅಲ್ಲದೆ ನಮ್ಮಲ್ಲಿ ಶವಕ್ಕೆ ಮಾತ್ರ ಮೂಗಿಗೆ ಹತ್ತಿ ಹಾಕುತ್ತಾರೆ. ಆದರೆ, ಈತನಿಗೆ ವಾರದಿಂದಲೂ ಹತ್ತಿ ಹಾಕಿದ್ದು, ವಾರದ ಹಿಂದೆಯೇ ಮೃತ ಪಟ್ಟಿರುವ ಶಂಕೆಯಿದೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯ ದಿಂದಲೇ ಸಾವು ಆಗಿದೆ. ಮೃತ ಯೋಗೀಶ್ ಗೆ 30 ವರ್ಷದ ಪತ್ನಿ ಹಾಗೂ ಎರಡು ಮಕ್ಕಳಿವೆ. ಹೀಗಾಗಿ ಆಸ್ಪತ್ರೆ ಆಡಳಿತ ಮಂಡಳಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ರಾತ್ರೋರಾತ್ರಿ ರಾತ್ರಿ 50 ಕ್ಕೂ ಹೆಚ್ಚು ಮಂದಿ ರೈತರು ಧರಣಿ ಕೂತ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.