ಹೆಚ್‌ಬಿಆರ್‌ಗೆ ಹೊಸ ವಿದ್ಯುತ್‌ ಸರಬರಾಜು ವ್ಯವಸ್ಥೆ: ಇಂಧನ ಸಚಿವ ಜಾರ್ಜ್‌ ಚಾಲನೆ

ಬೆಂಗಳೂರು: ಬೆಂಗಳೂರಿನ ಕೇಂದ್ರ ಭಾಗಗಳಾದ ಸರ್ವಜ್ಞನಗರ, ಹೆಚ್‌ಬಿಆರ್‌ ಲೇಔಟ್‌, ಬಾಣಸವಾಡಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಗುಣಮಟ್ಟದ ವಿದ್ಯುತ್‌ ಒದಗಿಸುವ ಹೊಸ ವಿದ್ಯುತ್‌ ಸರಬರಾಜು ವ್ಯವಸ್ಥೆಗೆ ಹೆಚ್‌ಬಿಆರ್‌ ಸ್ಟೇಷನ್‌ನಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್‌ ಶುಕ್ರವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜೆ.ಜಾರ್ಜ್‌, “ಹೊಸ 66 ಕೆವಿ ಕೇಬಲ್ ಮಾರ್ಗ ಸೇರ್ಪಡೆ ಬೆಂಗಳೂರಿನ ವಿದ್ಯುತ್ ವಿತರಣಾ ಮೂಲಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಪ್ರದೇಶಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ” ಎಂದು ಹೇಳಿದರು.

220/60ಕೆವಿ ಹೆಚ್‌ಬಿಆರ್‌ ಜಿಐಎಸ್‌ ವಿದ್ಯುತ್ ಕೇಂದ್ರದಿಂದ 66 ಕೆ.ವಿ ಪಾಟರಿ ರಸ್ತೆ ವಿದ್ಯುತ್‌ ಉಪ ಕೇಂದ್ರಕ್ಕೆ ಸುಮಾರು 5.18 ಕಿ.ಮೀ. ಉದ್ದದ ಏಕಮಾರ್ಗ 1000 ಚದರ ಮಿ.ಮೀ. ಭೂಗತ ಕೇಬಲ್ಅನ್ನು ಕೆಪಿಟಿಸಿಎಲ್‌ ಅಳವಡಿಸಿದೆ. ಈಗಿರುವ 66 ಕೆವಿ ಪಾಟರಿ ರಸ್ತೆ ವಿದ್ಯುತ್‌ ಉಪಕೇಂದ್ರಕ್ಕೆ 66 ಕೆವಿ ಐಟಿಐ ವಿದ್ಯುತ್‌ ಉಪಕೇಂದ್ರದಿಂದ ದ್ವಿಮಾರ್ಗ ಪ್ರಸರಣ ಮಾರ್ಗ ಸಂಪರ್ಕದಲ್ಲಿದ್ದು, ಈ ಉಪಕೇಂದ್ರದಿಂದ ಬೆಂಗಳೂರಿನ ಕೇಂದ್ರ ಭಾಗಗಳಾದ ಸರ್ವಜ್ಞನಗರ, ಹೆಚ್‌ಬಿಆರ್‌ ಲೇಔಟ್‌, ನಾಗವಾರ, ಬಾಣಸವಾಡಿ, ಕಮ್ಮನಹಳ್ಳಿ, ಕಾಡಗೊಂಡನಹಳ್ಳಿ, ಲಿಂಗರಾಜಪುರ, ಅರೇಬಿಕ್‌ ಕಾಲೇಜು, ಟ್ಯಾನರಿ ರಸ್ತೆ, ಡೀವಿಸ್‌ ರಸ್ತೆ, ಪುಲಕೇಶಿನಗರ ಮತ್ತು ದಂಡು ರೈಲ್ವೆ ನಿಲ್ದಾಣ ಮತ್ತು ಸುತ್ತಮುತ್ತಲಿನ ಇತರ ಪ್ರದೇಶಗಳಿಗೆ ಕೈಗಾರಿಕೆ, ವಾಣಿಜ್ಯ ಹಾಗೂ ಗೃಹಬಳಕೆಯ ಉದ್ದೇಶಗಳಿಗಾಗಿ ವಿದ್ಯುತ್ ಒದಗಿಸಲಾಗುತ್ತಿದೆ.

ಈ ಪ್ರದೇಶಗಳಲ್ಲಿ ಕೈಗಾರಿಕೆ, ವಾಣಿಜ್ಯ ಹಾಗೂ ಗೃಹಬಳಕೆಯ ವಿದ್ಯುತ್‌ ಹೊರೆ ಏರುತ್ತಿರುವ ಹಿನ್ನಲೆಯಲ್ಲಿ ವಿದ್ಯುತ್‌ ಉಪಕೇಂದ್ರದಿಂದ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್‌ ಒದಗಿಸಲು 220/66 ಕೆವಿ ಹೆಚ್‌ಬಿಆರ್‌ ಜಿಐಎಸ್‌ ವಿದ್ಯುತ್‌ ಕೇಂದ್ರದಿಂದ ಸುಮಾರು 80 ಮೆಗಾ ವ್ಯಾಟ್‌ನಷ್ಟು ವಿದ್ಯುತ್‌ ಪ್ರಸರಣ ಮಾಡುವ ಸಾಮರ್ಥ್ಯವನ್ನು ಹೊಂದಿರುವ 1000 ಚ. ಮಿ.ಮೀ. ಸುತ್ತಳತೆಯ 66 ಕೆವಿ ಭೂಗತ ಕೇಬಲ್‌ ಹೊಸದಾಗಿ ಅಳವಡಿಸಲಾಗಿದೆ. 66 ಕೆವಿ ಪಾಟರಿ ವಿದ್ಯುತ್‌ ಉಪಕೇಂದ್ರಕ್ಕೆ ಮುಖ್ಯ ಹಾಗೂ ಪರ್ಯಾಯ ಪ್ರಸರಣಾ ಮಾರ್ಗದ ವ್ಯವಸ್ಥೆಗಳಾಗಿರುವುದರಿಂದ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್‌ ಒದಗಿಸಲು ನೆರವಾಗಲಿದೆ. ಅಂದಾಜು 39.05 ಕೋಟಿ ರೂ. ವೆಚ್ಚದ ಈ ಯೋಜನೆಯಿಂದ 17.603 ಮಿಲಿಯನ್ ಯೂನಿಟ್‌ ವಾರ್ಷಿಕ ಇಂಧನ ಉಳಿತಾಯವಾಗಲಿದೆ.

Donate Janashakthi Media

Leave a Reply

Your email address will not be published. Required fields are marked *