ನವದೆಹಲಿ : ಪಂಚಾಯತ್ ಚುನಾವಣೆಗಳ ವೇಳೆ ಪಶ್ಚಿಮ ಬಂಗಾಳದಾದ್ಯಂತ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಬೇಕು ಎಂಬ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಮಂಗಳವಾರ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಹೈಕೋರ್ಟ್ ಆದೇಶದ ವಿರುದ್ಧ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವಂತೆ ಮಾಡುವುದು ಹೈಕೋರ್ಟ್ ಆದೇಶದ ಉದ್ದೇಶವಾಗಿದೆ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಮನೋಜ್ ಮಿಶ್ರಾ ಅವರಿದ್ದ ರಜಾಕಾಲೀನ ಪೀಠ ಉಲ್ಲೇಖಿಸಿದೆ.
ಇದನ್ನೂ ಓದಿ: ದ್ವೇಷ ರಾಜಕಾರಣದ ಮೂಲಕ ರಾಷ್ಟ್ರ ವಿಭಜಿಸಲು ಯತ್ನ : ಬಿಜೆಪಿ ವಿರುದ್ಧ ಮಮತಾ ಕಿಡಿ
“ಸುಪ್ರೀಂಕೋರ್ಟ್ ಹಸ್ತಕ್ಷೇಪ ಮಾಡುವಂತಹ ಅಂಶಗಳು ಹೈಕೋರ್ಟ್ ಆದೇಶದಲ್ಲಿಲ್ಲ. ಹೈಕೋರ್ಟ್ ನೀಡಿರುವ ಯಾವುದೇ ಸೂಚನೆಗೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸುವುದಿಲ್ಲ. ಮೇಲ್ಮನವಿಗಳನ್ನು ವಜಾಗೊಳಿಸಲಾಗಿದೆ” ಎಂದು ಸುಪ್ರೀಂಕೋರ್ಟ್ ಹೇಳಿದೆ.
“ಚುನಾವಣೆ ಎಂಬುದು ಹಿಂಸಾಚಾರಕ್ಕೆ ನೀಡುವ ಪರವಾನಗಿಯಲ್ಲ. ಈ ಹಿಂದಿನ ಹಿಂಸಾಚಾರಗಳನ್ನು ಹೈಕೋರ್ಟ್ ಗಮನಿಸಿದ್ದು, ಚುನಾವಣೆಗಳು ಹಿಂಸಾಚಾರವನ್ನು ಒಳಗೊಳ್ಳುವಂತಿಲ್ಲ. ಯಾವುದೇ ವ್ಯಕ್ತಿ ನಾಮಪತ್ರ ಸಲ್ಲಿಸಲು ಸಾಧ್ಯವಾಗದೆ ಹೋದರೆ, ನಾಮಪತ್ರ ಸಲ್ಲಿಸುವುದಕ್ಕೂ ಮುನ್ನವೇ ಅವರನ್ನು ಹತ್ಯೆಗೈದರೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಸಾಧ್ಯವಾಗುತ್ತದೆಯೆ?” ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆ ನಡೆಸಿದ್ದ ಕಲ್ಕತ್ತಾ ಹೈಕೋರ್ಟ್, ಪಂಚಾಯತ್ ಚುನಾವಣೆಗಳ ವೇಳೆ ಪಶ್ಚಿಮ ಬಂಗಾಳದಾದ್ಯಂತ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಬೇಕು ಎಂದು ಆದೇಶಿಸಿತ್ತು.
ಈ ಆದೇಶದ ವಿರುದ್ಧ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಮಾಡಿತ್ತು.