ವೇದರಾಜ ಎನ್.ಕೆ
ಭಾರತದ ದೊಡ್ಡ ಕಾರ್ಪೊರೇಟ್‍ಗಳಿಗೆ 2019ರಲ್ಲಿ ತೆರಿಗೆ ದರಗಳಲ್ಲಿ ಗಮನಾರ್ಹ ಕಡಿತ ಮತ್ತು ಇತರ ರಿಯಾಯ್ತಿಗಳನ್ನು ಪ್ರಾರಂಭಿಸಲಾಯಿತು. 400 ಕೋಟಿ ರೂ.ವರೆಗಿನ ವಾರ್ಷಿಕ ವಹಿವಾಟು ಹೊಂದಿರುವ ಕಂಪನಿಗಳ ತೆರಿಗೆ ದರ 25% ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟಿನ ಕಂಪನಿಗಳಿಗೆ 30% ಇದ್ದದ್ದು 2019ರಿಂದ 21.2%ಕ್ಕೆ ಇಳಿಯಿತು. ಹೊಸ ತಯಾರಿಕಾ ಕಂಪನಿಗಳಿಗೆ ಕೆಲವು ಸಂದರ್ಭಗಳಲ್ಲಿ ಇನ್ನೂ ಹೆಚ್ಚಿನ ತೆರಿಗೆ ಕಡಿತ ನೀಡಲಾಯಿತು.
ಇದರಿಂದಾಗಿ ಮತ್ತು ಅಂದಿನಿಂದ ಕೊಡುತ್ತಿರುವ ಇತರ ತೆರಿಗೆ ರಿಯಾಯ್ತಿಗಳಿಂದಾಗಿ ಕಳೆದ 5ವರ್ಷಗಳಲ್ಲಿ ದೊಡ್ಡ ಕಾರ್ಪೊರೇಟ್‍ಗಳಿಗೆ 8ಲಕ್ಷ ಕೋಟಿ ರೂ. ಗಳಿಗಿಂತಲೂ ಹೆಚ್ಚಿನ ಪ್ರಯೋಜನ ದಕ್ಕಿದೆ ಎಂದು ‘ದಿ ಹಿಂದೂ’(ನವಂಬರ್ 28) ದೈನಿಕ ಲೆಕ್ಕ ಹಾಕಿದೆ. ಅಂದರೆ ದೇಶದ ಖಜಾನೆಗೆ ಬರಬೇಕಾಗಿದ್ದ ಆದಾಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಖೋತಾ ಆಗಿದೆ.
ವಾಸ್ತವಿಕ ತೆರಿಗೆ ದರ(%) ಕಳೆದ 10 ವರ್ಷಗಳಲ್ಲಿ ಹೀಗಿದ್ದವು:
(* ಮುಂಬೈ ಶೇರು ಮಾರುಕಟ್ಟೆಯಲ್ಲಿ ದಾಖಲಾತಿ ಪಡೆದ 500 ಕಂಪನಿಗಳು)
ಕೇವಲ ದರ ಕಡಿತಗಳಿಂದಾಗಿಯೇ ದೊಡ್ಡ ಕಂಪನಿಗಳಿಗೆ ರೂ.3.14 ಲಕ್ಷ ಕೋಟಿ ರೂ.ಗಳ ತೆರಿಗೆ ಉಳಿತಾಯದಿಂದ ಲಾಭವಾಗಿದೆ ಎಂದು 2019 ರ ವರೆಗಿನ ತೆರಿಗೆ ವಸೂಲಿ ಮತ್ತು ಅದರ ಆಧಾರದಲ್ಲಿ ಮುಂದಿನ 5 ವರ್ಷಗಳಲ್ಲಿ ಬರಬಹುದಾಗಿದ್ದ ತೆರಿಗೆ ಆದಾಯವನ್ನು ಮತ್ತು ವಾಸ್ತವಿಕ ತೆರಿಗೆ ವಸೂಲಿಯನ್ನು ಹೋಲಿಸಿ ಈ ಲೆಕ್ಕವನ್ನು ಹಾಕಲಾಗಿದೆ.
ಇದನ್ನೂ ಓದಿ: ಸಂವಿಧಾನ ಮೌಲ್ಯಗಳೂ ತಿದ್ದುಪಡಿಯ ಹಪಹಪಿಯೂ ಅಡ್ಡಬೇಲಿಗಳಿಲ್ಲದ ಸಮಾಜ ಬಯಸುವ ಸಂವಿಧಾನಕ್ಕೆ ಗೋಡೆ ಕಟ್ಟುವ ಯೋಚನೆ ಅಕ್ಷಮ್ಯ
ಇದಲ್ಲದೆ , ಕಾರ್ಪೊರೇಟ್‍ಗಳು ಪಡೆದ ಇತರ ತೆರಿಗೆ ರಿಯಾಯ್ತಿಗಳನ್ನು ಪರಿಗಣಿಸಿದರೆ, 2012-13 ರಿಂದ 2021-22 ರವರೆಗೆ , ಬಜೆಟ್ ದಸ್ತಾವೇಜುಗಳ ಪ್ರಕಾರ, 8.22 ಲಕ್ಷ ಕೋಟಿ ರೂ.ಗಳಷ್ಟು ಸರಕಾರದ ತೆರಿಗೆ ಆದಾಯಕ್ಕೆ ಕತ್ತರಿ ಬಿದ್ದಿದೆ.
2019 ರ ಹಣಕಾಸು ವರ್ಷದ ಮೊದಲು ಕಾರ್ಪೊರೇಟ್‍ಗಳ ಲಾಭದಲ್ಲಿ 10.4%ದಷ್ಟು ವಾರ್ಷಿಕ ಹೆಚ್ಚಳವಾಗುತ್ತಿದ್ದರೆ, ಆನಂತರ ಅದು 32.5% ದರದಲ್ಲಿ ಏರಿದೆ, ಆದರೆ ಇದೇ ಅವಧಿಯಲ್ಲಿ ಅವು ಕೊಟ್ಟ ತೆರಿಗೆ ಮೊತ್ತದಲ್ಲಿ ಆಗಿರುವ ಹೆಚ್ಚಳ ಕೇವಲ 18.6%.
ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಹೆಸರಿನಲ್ಲಿ ಮತ್ತು ಹೆಚ್ಚಿನ ಹೂಡಿಕೆಗೆ ಮತ್ತು ಉದ್ಯೋಗಾವಕಾಶ ನಿರ್ಮಾಣಕ್ಕೆ ಹಾಗೂ “ಕೆಲವು ದೇಶೀ ಕಂಪನಿಗಳಿಗೆ ಒಂದು ಜಾಗತಿಕವಾಗಿ ಸ್ಪರ್ಧಾತ್ಮಕವಾದ ವ್ಯವಹಾರ ಪರಿಸರವನ್ನು ಸ್ಥಾಪಿಸುವ ‘ಉತ್ತೇಜನೆ’ಯ ಹೆಸರಿನಲ್ಲಿ ಕೊಡಲಾಗುತ್ತಿರುವ ಇಂತಹ ಕಡಿತಗಳನ್ನು ಬಜೆಟಿನಲ್ಲಿ ‘ಬಿಟ್ಟು ಕೊಟ್ಟ ಆದಾಯ’ ಎಂದು ನಮೂದಿಸಲಾಗುತ್ತಿದೆ.
ಇಂತಹ ತೆರಿಗೆ ಕಡಿತಗಳು, ರಿಯಾಯ್ತಿಗಳಿಂದಾಗಿ ‘ವ್ಯವಹಾರ ಪರಿಸರ ಸ್ಪರ್ಧಾತ್ಮಕ’ಗೊಂಡಿದೆ ಎಂಬುದಕ್ಕೆ ಸಾಕ್ಷಿ ಬಹಳ ಕಡಿಮೆ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಬಹುಪಾಲು ಜನಗಳ ಕೊಳ್ಳುವ ಶಕ್ತಿ ಹೆಚ್ಚುವ ಬದಲು, ಇಳಿಯುತ್ತಿರುವ ಸನ್ನಿವೇಶದಲ್ಲಿ ಈ ಉತ್ತೇಜನೆಗಳು ಆರ್ಥಿಕ ಬೆಳವಣಿಗೆಯನ್ನು ತರುವುದು ಕೂಡಾ ಸಾಧ್ಯವಿಲ್ಲ ಎಂದು ಪ್ರೊ. ಪ್ರಭಾತ್ ಪಟ್ನಾಯಕ್ ತೋರಿಸಿಕೊಟ್ಟಿದ್ದಾರೆ.
2023-24 ರಲ್ಲಿ ಮತ್ತೆ ರೂ.1.7 ಲಕ್ಷ ಕೋಟಿ ಮೊತ್ತದ ಸುಸ್ತಿ ಸಾಲಗಳ ರೈಟ್-ಆಫ್
ಅದರ ಹಿಂದಿನ ದಿನ, ನವಂಬರ್ 27ರಂದು, ಈ ಬಾರಿ (2023-24ರಲ್ಲಿ) ಬ್ಯಾಂಕುಗಳು ಒಟ್ಟು 1.7ಲಕ್ಷ ಕೋಟಿ ರೂ.ಗಳಷ್ಟು ಸುಸ್ತಿ ಸಾಲಗಳನ್ನುರೈಟ್-ಆಫ್ ಮಾಡಿವೆ, ಅಂದರೆ ಸಂಬಂಧಪಟ್ಟ ಭ್ಯಾಂಕುಗಳ ಲೆಕ್ಕಪತ್ರಗಳಿಂದ ಹೊರಗೆ ಹಾಕಿವೆ ಎಂದು ಎಲ್ಲ ಪತ್ರಿಕೆಗಳಲ್ಲಿ ವರದಿಯಾಗಿತ್ತು.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಈ ಮಾಹಿತಿಯನ್ನು ತಿಳಿಸುತ್ತ, ಇದು ಕಳೆದ ಐದು ವರ್ಷಗಳಲ್ಲಿ ಅತ್ಯಂತ ಕಡಿಮೆ ರೈಟ್ ಆಫ್ ಎಂದಿದ್ದಾರೆ ಎಂದೂ ವರದಿಯಾಗಿದೆ.
2019-20 ರಲ್ಲಿ ಇದು ಗರಿಷ್ಟ ಮಟ್ಟವನ್ನು, ಅಂದರೆ 2.34 ಲಕ್ಷ ಕೋಟಿ ರೂ. ತಲುಪಿತ್ತು. ಆ ವರ್ಷದಿಂದ ಪ್ರತಿವರ್ಷ ರೈಟ್- ಆಫ್ ಮಾಡಿರುವ ಸುಸ್ತಿ ಸಾಲಗಳ ಮೊತ್ತ ಇಳಿಮುಖವಾಗಿವೆ, ಆದರೆ ಈಗಲೂ ಲಕ್ಷ ಕೋಟಿ ರೂ.ಗಳಲ್ಲೇ ಇದೆ ಎಂಬುದನ್ನೂ, ಮೇಲೆ ಹೇಳಿದಂತೆ ಐದು ವರ್ಷಗಳಲ್ಲಿ 8ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಿನ ತೆರಿಗೆ ದರ ಕಡಿತ ಮತ್ತು ಇನ್ನಿತರ ರಿಯಾಯ್ತಿಗಳ ನಂತರವೂ ಇದು ಮುಂದುವೆಯುತ್ತಲೇ ಇವೆ ಎಂಬುದನ್ನು ಗಮನಿಸಬೇಕಾಗಿದೆ ಎಂದು ಪರಿಣಿತರು ಟಿಪ್ಪಣಿ ಮಾಡಿದ್ದಾರೆ.
ಸಾಲದ ರೈಟ್-ಆಫ್ ಎಂದರೆ ಸಾಲದಾತ ಸಾಲವನ್ನು ನಷ್ಟವೆಂದು ಪರಿಗಣಿಸುತ್ತಾರೆಯೇ ಹೊರತು, ಅದು ವಾಪಾಸು ಬರುವಂತದ್ದಲ್ಲ, ಸಾಲಮನ್ನಾ ಎಂದು ಅರ್ಥವಲ್ಲ ಎಂದು ಇದಕ್ಕೆ ಸಮರ್ಥನೆಯಲ್ಲದಿದ್ದರೂ ಸಮಜಾಯಿಷಿ ಕೊಡಲಾಗುತ್ತದೆ. ಅದೇ ಪ್ರಕಾರ ಸಚಿವ ಚೌಧರಿಯವರು ಕೂಡ ಈ ರೈಟ್-ಆಫ್‌ಗಳು ಸಾಲಗಾರರನ್ನು ಅವರ ಹೊಣೆಗಾರಿಕೆಗಳಿಂದ ಮುಕ್ತಗೊಳಿಸುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ಬ್ಯಾಂಕುಗಳಿಗೆ 81.3% ‘ಹೇರ್ ಕಟ್’!
ಆದರೆ ಇತ್ತೀಚೆಗಷ್ಟೇ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (ಎಐಬಿಇಎ) ಬಹಿರಂಗಪಡಿಸಿದ ಅಂಕಿಅಂಶಗಳು ಬೇರೆ ಕತೆಯನ್ನೇ ಹೇಳುತ್ತವೆ. ಸುಸ್ತಿದಾರರಾದ 10 ಕಂಪನಿಗಳನ್ನು ಅದಾನಿ ಸಮೂಹ ಖರೀದಿಸಿತು. ಈ ವ್ಯವಹಾರದ ಭಾಗವಾಗಿ ಒಟ್ಟು 61832 ಕೋಟಿ ರೂ. ಗಳಷ್ಟಿದ್ದ ಈ ಕಂಪನಿಗಳ ಸುಸ್ತಿ ಸಾಲಗಳನ್ನು ಕೇವಲ 15,977 ಕೋಟಿ ರೂ.ಗೆ ಇತ್ಯರ್ಥ ಗೊಳಿಸಲಾಯಿತು.
ಅಂದರೆ ಬ್ಯಾಂಕುಗಳು ಈ 10 ಕಂಪನಿಗಳ ಸುಮಾರು 46,000 ಕೋಟಿ ರೂ.ಗಳನ್ನು, ಅಂದರೆ 74%ದಷ್ಟು ಸುಸ್ತಿ ಸಾಲಗಳನ್ನು ಮನ್ನಾ ಮಾಡಿದಂತಾಗಿದೆ. ಇದನ್ನು ಬ್ಯಾಂಕ್ ಲೆಕ್ಕಾಚಾರಗಳ ಭಾಷೆಯಲ್ಲಿ ‘ಹೇರ್ ಕಟ್’ (ಚೌರ)ಎನ್ನುತ್ತಾರೆ.
ಕಳೆದ ಐದು ವರ್ಷಗಳಲ್ಲಿ, ಹಲವಾರು ವಸೂಲಾತಿ ಕ್ರಮಗಳನ್ನು ಬಳಸಿದ್ದರೂ ಸಹ, 81.30% ಸಾಲವನ್ನು ವಸೂಲಿ ಮಾಡಲು ಬ್ಯಾಂಕ್‌ಗಳು ವಿಫಲವಾಗಿವೆ ಎಂದು ಈ ವರ್ಷದ ಆಗಸ್ಟ್‌ನಲ್ಲಿ ಒಂದು ಆರ್‌ಟಿಐ ಅರ್ಜಿಯು ಬಹಿರಂಗಪಡಿಸಿದೆಯಂತೆ.
ತೆರಿಗೆ ದರ ಕಡಿತ, ವಿನಾಯ್ತಿಗಳಲ್ಲದೆ, ಇಂತಹ ‘ಹೇರ್ ಕಟ್’ ಗಳ ‘ಉತ್ತೇಜನ’ಗಳನ್ನೂ ದೊಡ್ಡ ಕಾರ್ಪೊರೇಟ್‍ಗಳು ಧಾರಾಳವಾಗ ಪಡೆಯುತ್ತಿವೆ.
ಆದರೂ, ಜಿಡಿಪಿ ದರದಲ್ಲೂಲ್ಲಿ ಮತ್ತೆ ಭಾರೀ ಇಳಿಕೆ ವರದಿಯಾಗಿದೆ.
ಜಿಡಿಪಿ ಬೆಳವಣಿಗೆ ದರವು 2024 ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಏಳು ತ್ರೈಮಾಸಿಕಗಳ ಕನಿಷ್ಠ ಮಟ್ಟಕ್ಕೆ, 5.4% ಕ್ಕೆ ಕುಸಿದಿದೆ ಎಂದು ವರದಿಯಾಗಿದೆ. ಈ ಕುಸಿತ ಮತ್ತು ಉತ್ಪಾದನೆಯಲ್ಲಿನ ನಿಧಾನಗತಿಯ ಬೆಳವಣಿಗೆಗೆ ಮುಖ್ಯ ಕಾರಣ ತಯಾರಕಾ ವಲಯಲ್ಲಿನ ಅತಿನಿಧಾನ ಬೆಳವಣಿಗೆ ಕಾರಣ ಎಂದೂ ಹೇಳಲಾಗಿದೆ.
ಅಂದರೆ ಸರಕಾರದ ಹಲವು ಲಕ್ಷ ಕೋಟಿ ರೂ.ಗಳ ‘ಉತ್ತೇಜನೆ’ಯ ನಂತರವೂ ಖಾಸಗಿ ವಲಯದಲ್ಲಿ ನಿರೀಕ್ಷಿತ ಉತ್ಪಾದಕ ಹೂಡಿಕೆಗಳು ಮತ್ತು ಆ ಮೂಲಕ ಉದ್ಯೋಗಾವಕಾಶಗಳ ನಿರ್ಮಾಣ ನಡೆಯುತ್ತಿಲ್ಲ ಎಂಬುದನ್ನು ಇದು ತೋರಿಸುತ್ತದೆ.
ಇದನ್ನೂ ನೋಡಿ: ಮಂಗಳೂರು | ನಗರ ಪೊಲೀಸ್ ಕಮೀಷನರ್ ಹಟಾವೋ ಎಂದ ಯುವಜನ ಕಾರ್ಯಕರ್ತರುJanashakthi Media