ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಅವರ ಬೆಂಬಲಿಗರ ವಿರುದ್ಧ ನಟಿ ರಮ್ಯಾ ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ಡಿ ಕೆ ಶಿವಕುಮಾರ್ ಬೆಂಬಲಿಗರು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಕಮೆಂಟ್ ಗಳನ್ನು ಹಾಕುವವರಿಗೆ ಪ್ರತ್ಯುತ್ತರ ನೀಡಿದ್ದಾರೆ.
ನನ್ನ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ನಾಶಮಾಡಲು ಕೆಲವು ಸುದ್ದಿ ಚಾನೆಲ್ ಗಳಲ್ಲಿ ಈ ಬಗ್ಗೆ ಸುಳ್ಳು ಸುದ್ದಿ ಸೃಷ್ಟಿಸಲಾಯಿತು. ನಾನು ಎಲ್ಲಿಗೂ ಓಡಿಹೋಗಿಲ್ಲ. ನನ್ನ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದೆ. ನಾನು ಖಂಡಿತವಾಗಿಯೂ ಕಾಂಗ್ರೆಸ್ ಪಕ್ಷಕ್ಕೆ 8 ಕೋಟಿ ರೂಪಾಯಿ ವಂಚಿಸಿಲ್ಲ, ನಾನು ಸುಮ್ಮನೆ ಕುಳಿತಿದ್ದು ನನ್ನ ತಪ್ಪು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ನನಗೆ ಅವಕಾಶ ನೀಡಿದವರು ರಾಹುಲ್ ಗಾಂಧಿ, ನನ್ನ ಪರವಾಗಿ ನಿಂತುಕೊಂಡವರು ಕೂಡ ಅವರೇ, ನನಗೆ ಅವಕಾಶ ನೀಡಿರುವುದಾಗಿ ಹೇಳಿಕೊಳ್ಳುವ ಬೇರೆಯವರೆಲ್ಲ ಅವಕಾಶವಾದಿಗಳು. ಈ ಅವಕಾಶವಾದಿಗಳು ಬೆನ್ನಿಗೆ ಚೂರಿ ಹಾಕಿದ್ದಾರೆ, ನನ್ನನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ. ಟಿವಿಯಲ್ಲಿ ನೀವು ನೋಡುವುದೆಲ್ಲವೂ ಅವರ ವಂಚಕ ಮನಸ್ಸನ್ನು ಮರೆಮಾಚುಲು ಮಾಡುವ ಪಿತೂರೊಯಾಗಿದೆ ಎಂದಿದ್ದಾರೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ.
ಎರಡು ದಿನದ ಹಿಂದೆ ಡಿ.ಕೆ ಶಿವಕುಮಾರ್ ರನ್ನು ಕುರಿತು ಟೀಕಿಸಿ ಟ್ವೀಟ್ ಮಾಡಿದ್ದ ನಟಿ ರಮ್ಯಾ ಮತ್ತೆ ಸುದ್ದಿಯಲ್ಲಿದ್ದಾರೆ.
ರಮ್ಯಾ ರಾಜಕೀಯ ನಾಯಕರು ಪಕ್ಷಾತೀತವಾಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಸಹಜ. ಕೆಲವರು ಬೇರೆ ಬೇರೆ ಪಕ್ಷದ ನಾಯಕರು ಮದುವೆ ಮೂಲಕ ಸಂಬಂಧಿಕರಾಗಿದ್ದಾರೆ. ಎಂ.ಬಿ.ಪಾಟೀಲ್ ಮತ್ತು ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಭೇಟಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು. ಡಿ.ಕೆ. ಶಿವಕುಮಾರ್ ಅವರು ಎಂಬಿ ಪಾಟೀಲ್ ಅವರ ಬಗ್ಗೆ ನೀಡಿರುವ ಹೇಳಿಕೆ ನನಗೆ ಅಚ್ಚರಿ ಮೂಡಿಸಿದೆ ಎಂದು ನಟಿ ರಮ್ಯ ಹೇಳಿದ್ದಾರೆ. ಎಂ ಬಿ.ಪಾಟೀಲ್ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಕಾಂಗ್ರೆಸ್ ಪಕ್ಷ ಒಂದೇ ಘಟಕವಾಗಿ ಚುನಾವಣೆ ಎದುರಿಸಬೇಕಲ್ಲವೇ ಎಂದು ನೇರವಾಗಿ ಡಿಕೆಶಿ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.
ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹಳಷ್ಟು ಮಂದಿ ರಮ್ಯಾ ಅವರನ್ನು ಲೇವಡಿ ಮಾಡಿ ಕೆಣಕಿದ್ದಾರೆ. ಕೆಪಿಸಿಸಿ ಸಾಮಾಜಿಕ ಜಾಲತಾಣಗಳ ವಿಭಾಗದ ಅಧ್ಯಕ್ಷ ಬಿ.ಆರ್. ನಾಯ್ಡು ಕೂಡಾ ಟೀಕಿಸಿದ್ದಾರೆ.
ಕೆ.ಸಿ.ವೇಣುಗೋಪಾಲ್ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿದ್ದರು. ದಯವಿಟ್ಟು ನನ್ನ ಬಗ್ಗೆ ಈ ಆರೋಪಗಳಿಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ, ವೇಣುಗೋಪಾಲ್ ಜೀ ಅವರು ನನಗಾಗಿ ಮಾಡಬಹುದಾದ ಕನಿಷ್ಠ ಕೆಲಸ ಇದು ಎಂದಿರುವ ರಮ್ಯಾ, ಜೀವನದುದ್ದಕ್ಕೂ ನಾನು ಈ ನಿಂದನೆ ಮತ್ತು ಆರೋಪಗಳೊಂದಿಗೆ ಬದುಕಬೇಕಿಲ್ಲ ಎಂದಿದ್ದಾರೆ.
ಇಂದು(ಮೇ12) ಇದರ ಕುರಿತು ಮಾತನಾಡಿದ ಡಿಕ.ಕೆ ಶಿವಕುಮಾರ್ “ರಮ್ಯಾ ಏನ್ ಟ್ವೀಟ್ ಮಾಡಿದ್ದಾರೋ, ಏನ್ ಮಿಸ್ ಫೈಯರ್ ಆಗಿದೆಯೋ ಗೊತ್ತಿಲ್ಲ. ರಮ್ಯಾ, ಎಂಬಿ ಪಾಟೀಲ್ ಇಬ್ಬರೂ ನನಗೆ ಬೇಕಾದವರು, ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ಅಶ್ವತ್ಥ್ ನಾರಾಯಣ ಎಂ ಬಿ ಪಾಟೀಲ್ ಭೇಟಿ ಬಗ್ಗೆ ಮಾಧ್ಯಮಗಳು ನನ್ನನ್ನು ಪ್ರಶ್ನಿಸಿದರು, ಇರಬಹುದು ಅಂದಿದ್ದೇ ಅಷ್ಟೇ. ಅದನ್ನ ಯಾಕೆ ರಾಮಾಯಣ ಮಾಡಿದರೋ ಗೊತ್ತಿಲ್ಲ”ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.
ಅನ್ಯ ಪಕ್ಷದ ನಾಯಕರು ಪರಸ್ಪರ ಭೇಟಿಯಾಗುವುದು ಸಾಮಾನ್ಯ. ಆದರೆ, ಪಕ್ಷದ ನಿಷ್ಠಾವಂತರಾದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ಆಶ್ಚರ್ಯ ತಂದಿದೆ ಎಂದು ಮಾಜಿ ಸಂಸದೆ ರಮ್ಯಾ ಅವರು ಅಸಮಾಧಾನ ಹೊರ ಹಾಕಿದ್ದಾರೆ.