ರಸ್ತೆ ಕಾಮಗಾರಿ ಉದ್ಘಾಟನೆ : ತೆಂಗಿನಕಾಯಿ ಬದಲು ರಸ್ತೆಯೇ ಹೋಳಾಯ್ತು – ಇದು ಯೋಗಿ ಮಾಡಲ್

ಲಕ್ನೋ : 1.16 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿದ್ದ 7 ಕಿ.ಮೀ. ಉದ್ದದ ಹೊಸ ರಸ್ತೆಯ ಉದ್ಘಾಟನೆ ವೇಳೆ ತೆಂಗಿನಕಾಯಿ ಒಡೆದಾಗ, ಕಾಯಿ ಬದಲು ರಸ್ತೆಯೇ ಹೋಳಾಗಿರುವ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ನಡೆದಿದೆ. ಈ ಘಟನೆಯಿಂದ ಯೋಗಿ ಸರಕಾರ ತೀವ್ರ ಮುಜುಗರಕ್ಕೊಳಗಾಗಿದೆ.  ಆಡಳಿತಾರೂಢ ಬಿಜೆಪಿ ಶಾಸಕಿ ಸುಚಿ ಮೌಸಂ ಚೌಧರಿ, ರಸ್ತೆಯ ಕಳಪೆ ಕಾಮಗಾರಿಗೆ ಕಾರಣವಾದವರ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆಯೂ ಜರುಗಿದೆ.

ಮೂರು ಗಂಟೆಗಳ ಕಾಲ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದ ಶಾಸಕ ಒತ್ತಡಕ್ಕೆ ಮಣಿದ ಅಧಿಕಾರಿಗಳ ತಂಡವು ಆಗಮಿಸಿ ತನಿಖೆಗಾಗಿ ರಸ್ತೆಯ ಮಾದರಿಗಳನ್ನು ತೆಗೆದುಕೊಂಡು ಹೋಯಿತು. ಶಾಸಕಿಯು ಇದಕ್ಕೆ ಹೊಣೆಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅಲ್ಲದೆ ಕಳಪೆ ಕಾಮಗಾರಿ ತನಿಖೆಗಾಗಿ ರಸ್ತೆ ಮಾದರಿ ಸಂಗ್ರಹಿಸಲು ಅಧಿಕಾರಿಗಳು ಬರುವವರೆಗೆ 3 ಗಂಟೆಗಳ ಕಾಲ ಎಲ್ಲೂ ಹೋಗದೇ ಸ್ಥಳದಲ್ಲೇ ಕಾದರು.

ತಮ್ಮ ಕ್ಷೇತ್ರದಲ್ಲಿ ನೀರಾವರಿ ಇಲಾಖೆ 1.16 ಕೋಟಿ ರು. ವೆಚ್ಚದಲ್ಲಿ 7.5 ಕಿ.ಮೀ. ರಸ್ತೆ ಕಾಮಗಾರಿ ಕೈಗೊಂಡಿದೆ. ಇದರ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಲಾಗಿತ್ತು. ಆದರೆ ನಾನು ಬಂದು ತೆಂಗಿನಕಾಯಿ ಒಡೆದಾಗ, ಕಾಯಿ ತುಂಡಾಗದೇ ರಸ್ತೆಯೇ ಹೋಳಾಗಿದೆ. ಈ ವೇಳೆ ಪರಿಶೀಲನೆ ನಡೆಸಿದಾಗ, ಕಾಮಗಾರಿಯಲ್ಲಿ ದಕ್ಷತೆ ಇಲ್ಲದಿರುವುದು ಕಂಡುಬಂದಿದೆ ಎಂದು ಬಿಜನೋರ್‌ ಶಾಸಕಿ ತಿಳಿಸಿದ್ದಾರೆ.

ರಸ್ತೆ ನಿರ್ಮಾಣಕ್ಕೆ ಸರಕಾರ 1,16,38000 ರೂ.ಗಳನ್ನು ಮಂಜೂರು ಮಾಡಿತ್ತು. ಮುಜುಗರದ ಪರಿಸ್ಥಿತಿಯ ನಂತರ, ಜಿಲ್ಲಾಧಿಕಾರಿಗಳು ಸ್ಟ್ರೆಚ್ ನಿರ್ಮಾಣದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ರಸ್ತೆಯನ್ನು ಹಲ್ದೌರ್ ಪೊಲೀಸ್ ಠಾಣೆಯ ಖೇಡಾ ಅಜೀಜ್‌ಪುರ ಗ್ರಾಮದಲ್ಲಿ ಬಿಜ್ನೋರ್ ಸದರ್ ಸೀಟ್‌ನಲ್ಲಿ ನಿರ್ಮಿಸಲಾಗಿದೆ.

ಶಾಸಕರ ಬೆಂಬಲಿಗರು ನೀರಾವರಿ ಇಲಾಖೆ ವಿರುದ್ಧ ವಾಗ್ದಾಳಿ ನಡೆಸಿದರು.ಇದೀಗ ಬಿಜ್ನೋರ್ ಜಿಲ್ಲಾ ಅಧಿಕಾರಿ ಉಮೇಶ್ ಕುಮಾರ್ ನೇತೃತ್ವದ ತಂಡ ಈ ಬಗ್ಗೆ ತನಿಖೆ ನಡೆಸುತ್ತಿದೆ. ನೀರಾವರಿ ಇಲಾಖೆಯ ಜೆಇ, ಎಸ್‌ಡಿಒ ಹಾಗೂ ಕಾರ್ಯಪಾಲಕ ಎಂಜಿನಿಯರ್ ವಿರುದ್ಧ ಶಾಸಕ ಸುಚಿ ಚೌಧರಿ ಗಂಭೀರ ಆರೋಪ ಮಾಡಿದ್ದು, ಈ ಅಧಿಕಾರಿಗಳ ಶಾಮೀಲಾಗಿ ಈ ಅವ್ಯವಹಾರ ನಡೆದಿದೆ. ಹಗರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರು ಒತ್ತಾಯಿಸಿದ್ದಾರೆ.

ತಾನು ದಕ್ಷ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವುದಾಗಿ ಮುಖ್ಯಮಂತ್ರಿ ಆದಿತ್ಯನಾಥ್ ಬಿಂಬಿಸುತ್ತಿರುವಾಗ ರಾಜ್ಯ ಚುನಾವಣೆಗೆ ಮೂರು ತಿಂಗಳ ಮುಂಚೆಯೇ ನಡೆದಿರುವ ಈ ಘಟನೆಯು ಬಿಜೆಪಿ ಸರಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

Donate Janashakthi Media

One thought on “ರಸ್ತೆ ಕಾಮಗಾರಿ ಉದ್ಘಾಟನೆ : ತೆಂಗಿನಕಾಯಿ ಬದಲು ರಸ್ತೆಯೇ ಹೋಳಾಯ್ತು – ಇದು ಯೋಗಿ ಮಾಡಲ್

Leave a Reply

Your email address will not be published. Required fields are marked *