ಮಾಸ್ಕೋ : ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಿಸಿದ್ದಾರೆ. ಉಕ್ರೇನ್ನಲ್ಲಿ ಐದು ಬಾರಿ ಸ್ಫೋಟಕ ಶಬ್ದ ಕೇಳಿಬಂದಿದೆ.
ರಷ್ಯಾ ಜೊತೆಗಿನ ಬಿಕ್ಕಟ್ಟು ಹಿನ್ನೆಲೆಯಲ್ಲಿ ಉಕ್ರೇನ್ ಸರ್ಕಾರ ಪೂರ್ವ ಉಕ್ರೇನ್ ನಲ್ಲಿ ವಿಮಾನ ನಿಲ್ದಾಣಗಳನ್ನು ಮಧ್ಯರಾತ್ರಿಯಿಂದ ಮುಚ್ಚಿದೆ.
ರಷ್ಯಾದ ವಾಯುಯಾನ ಅಧಿಕಾರಿಗಳು ವಾಯುಪ್ರದೇಶದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾರಣ ಉಕ್ರೇನಿಯನ್ ವಾಯುಯಾನ ಅಧಿಕಾರಿಗಳು ಪೂರ್ವ ಭಾಗದಲ್ಲಿ ಕೆಲವು ವಾಯುಪ್ರದೇಶಗಳನ್ನು “ಅಪಾಯಕಾರಿ ಪ್ರದೇಶಗಳು” ಎಂದು ಘೋಷಿಸಿದ್ದಾರೆ.
ಪೂರ್ವ ಉಕ್ರೇನ್ನ ವಾಯುಪ್ರದೇಶದಲ್ಲಿ ನಾಗರಿಕ ವಾಯು ಸಂಚಾರವನ್ನು ರಷ್ಯಾ ನಿಷೇಧಿಸಿದ ನಂತರ ಉಕ್ರೇನ್ ಈ ನಿರ್ಧಾರಕ್ಕೆ ಬಂದಿದೆ. ಕಳೆದ ವಾರ, ಇಲ್ಲಿನ ಪೈಲಟ್ ಗೆ ಎಚ್ಚರಿಕೆ ನೀಡಿದ್ದ ಉಕ್ರೇನ್ ವಾಯುಯಾನ ಅಧಿಕಾರಿಗಳು ವಾಯುಯಾನ ಪ್ರದೇಶಗಳ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿರುವ ರಷ್ಯಾ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿರಿಸುವಂತೆ ಮತ್ತು ಉಕ್ರೇನ್ ನ ನಿಯಂತ್ರಕರನ್ನು ಮಾತ್ರ ಗುರುತಿಸುವಂತೆ ಎಚ್ಚರಿಕೆ ನೀಡಿದ್ದರು.
ಉಕ್ರೇನ್ನಲ್ಲಿ ತುರ್ತು ಪರಿಸ್ಥಿತಿ : ರಷ್ಯಾದಿಂದ ಆಕ್ರಮಣ ಭೀತಿ ಹೆಚ್ಚಿದ ಬೆನ್ನಲ್ಲೇ ಉಕ್ರೇನ್ ತುರ್ತು ಪರಿಸ್ಥಿತಿ ಘೋಷಿಸಿದೆ. ಇಂದಿನಿಂದ (ಫೆಬ್ರುವರಿ 24) ಜಾರಿಗೆ ಬರಲಿದ್ದು, 30 ದಿನಗಳವರೆಗೆ ಜಾರಿಯಲ್ಲಿರಲಿದೆ. ರಕ್ಷಣೆಗಾಗಿ ಸೇನಾ ಮೀಸಲು ಪಡೆಗಳನ್ನು ಒಗ್ಗೂಡಿಸುತ್ತಿರುವ ಉಕ್ರೇನ್, ರಷ್ಯಾದಲ್ಲಿರುವ ನಾಗರಿಕರು ತಕ್ಷಣವೇ ಸ್ವದೇಶಕ್ಕೆ ವಾಪಸಾಗುವಂತೆ ಸೂಚಿಸಿದೆ.
ಈ ಮಧ್ಯೆ, ಪೂರ್ವ ಉಕ್ರೇನ್ನಲ್ಲಿ ಬಂಡುಕೋರರ ಹಿಡಿತದಲ್ಲಿರುವ ಎರಡು ಪ್ರದೇಶಗಳನ್ನು ಆಕ್ರಮಿಸಿಕೊಳ್ಳಲು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಸೇನಾ ಪಡೆಗಳನ್ನು ನಿಯೋಜಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸೇನೆಯ 2 ಲಕ್ಷಕ್ಕೂ ಹೆಚ್ಚು ಮೀಸಲು ಸಿಬ್ಬಂದಿಗೆ ಕರ್ತವ್ಯಕ್ಕೆ ಮರಳಲು ಸೂಚಿಸಿದ್ದಾರೆ. ಈ ಬೆಳವಣಿಗೆಗಳು ಉದ್ವಿಗ್ನತೆಯನ್ನು ಹೆಚ್ಚಿಸಿವೆ.