ಇತ್ತೀಚೆಗೆ, ಅಂದರೆ ಜುಲೈ20 ಮತ್ತು 27ರಂದು ಸಂಸತ್ತಿನಲ್ಲಿ ಕೇಳಿದ ಎರಡು ಪ್ರಶ್ನೆಗಳಿಗೆ ಸರ್ಕಾರ ಕೊಟ್ಟಿರುವ ಉತ್ತರಗಳು ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ಖಾಲಿ ಹುದ್ದೆಗಳ ಭಯಾನಕ ಸ್ಥಿತಿಯನ್ನು ಬಹಿರಂಗಪಡಿಸುತ್ತವೆ. ಒಂದು ಪ್ರಶ್ನೆಯಲ್ಲಿ (#1803,ಜುಲೈ 27 ರಂದು) ಕೇಂದ್ರ ಸರ್ಕಾರದಲ್ಲಿ ಎಷ್ಟು ಜನರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ಎಷ್ಟು ಜನರು ಖಾಯಂ ಉದ್ಯೋಗಗಳನ್ನು ಪಡೆದರು ಎಂದು ಕೇಳಲಾಗಿತ್ತು.. ಉತ್ತರವಾಗಿ, ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯ ಸಚಿವರೂ ಆಗಿರುವ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ರಾಜ್ಯ ಸಚಿವರು, 2014 ಮತ್ತು 2022 ರ ನಡುವೆ, ಉದ್ಯೋಗಗಳಿಗಾಗಿ 22.06 ಕೋಟಿ ಅರ್ಜಿಗಳನ್ನು ಕೇಂದ್ರವು ಸ್ವೀಕರಿಸಿದೆ ಎಂದು ಉತ್ತರಿಸಿದರು. ಸರ್ಕಾರ ಅದರಲ್ಲಿ 7.22 ಲಕ್ಷ ಜನರನ್ನು ನೇಮಿಸಿಕೊಂಡಿದೆ. ಅಂದರೆ ಸುಮಾರು 0.3% ನೇಮಕಾತಿ ಅಥವಾ ಪ್ರತಿ 1,000 ಅರ್ಜಿದಾರರಲ್ಲಿ 3 ಮಂದಿ ಮಾತ್ರ ನೌಕರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತೊಂದು ಪ್ರಶ್ನೆ (#463 ಜುಲೈ 20) ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳ ಬಗ್ಗೆ. ಮಾರ್ಚ್ 1, 2021 ರವರೆಗೆ ಕೇಂದ್ರ ಸರ್ಕಾರದಲ್ಲಿ 40.35 ಲಕ್ಷ ಮಂಜೂರಾದ ಹುದ್ದೆಗಳಿದ್ದು, ಅವುಗಳಲ್ಲಿ 30.56 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಅದೇ ಸಚಿವರು ಉತ್ತರಿಸಿದರು. ಅಂದರೆ ಸುಮಾರು 9.79 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ.
ಸಂಸತ್ತಿನಲ್ಲಿ ನೀಡಿದ ಈ ಎರಡು ಉತ್ತರಗಳನ್ನು ಹೇಗೆ ಅರ್ಥೈಸಬೇಕು? ಅತ್ಯಂತ ತಾರ್ಕಿಕ ವ್ಯಾಖ್ಯಾನವೆಂದರೆ 7 ಲಕ್ಷ ಜನರನ್ನು ನೇಮಕ ಮಾಡಿದ ನಂತರವೂ ಸರ್ಕಾರವು ಇನ್ನೂ 9 ಲಕ್ಷ ಹುದ್ದೆಗಳನ್ನು ಖಾಲಿ ಇರಿಸಿದೆ.
2014ರ ಚುನಾವಣಾ ಪ್ರಚಾರದ ವೇಳೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಪ್ರಧಾನ ಮಂತ್ರಿಗಳು ಭರವಸೆ ನೀಡಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದರ ಪ್ರಕಾರ ಇದುವರೆಗೆ ಕನಿಷ್ಟ 14 ಕೋಟಿ ಉದ್ಯೋಗಗಳ ಸೃಷ್ಟಿಯಾಗಬೇಕಿತ್ತು! ಸರಕಾರವೇ ಕೊಟ್ಟಿರುವ ಈ ಮಾಹಿತಿಗಳನ್ನು ನೋಡಿದರೆ, ಉದ್ಯೋಗ ಸೃಷ್ಟಿಯಂತೂ ದೂರ, ಸರಕಾರ ತನ್ನ ನೇರ ಹತೋಟಿಯಲ್ಲಿರುವ ಉದ್ಯೋಗಗಳನ್ನೇ ಕೊಟ್ಟಿಲ್ಲ, ಕೊಡುವ ಇಚ್ಛೇಯೂ ಅದಕ್ಕೆ ಇದ್ದಂತಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ.
ಕೇಂದ್ರೀಯ ಶಾಲೆಗಳಲ್ಲೂ 15 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಯಾಗಿಲ್ಲ !
ಲೋಕಸಭೆಯಲ್ಲಿ ನೀಡಿದ ಇನ್ನೊಂದು ಉತ್ತರದ ಪ್ರಕಾರ, ಕೇಂದ್ರೀಯ ವಿದ್ಯಾಲಯಗಳಲ್ಲಿ 12,044 ಸಾವಿರ ಬೋಧಕ ಮತ್ತು 1332 ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಿಲ್ಲ. 9161 ಶಿಕ್ಷಕರಿಂದ ಕಾಂಟ್ರಾಕ್ಟ್ ಆಧಾರದಲ್ಲಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಅತಿ ಹೆಚ್ಚು ಹುದ್ದೆಗಳು ಖಾಲಿ ಇರುವುದು ತಮಿಳುನಾಡಿನಲ್ಲಿ 1162, ಮಧ್ಯಪ್ರದೇಶದಲ್ಲಿ 1066 ಮತ್ತು ಕರ್ನಾಟಕದಲ್ಲಿ 1006. ಮಧ್ಯಪ್ರದೇಶ ಮತ್ತು ಕರ್ನಾಟಕ ಆಳುವ ಪಕ್ಷದ ಪ್ರಚಾರದ ಪ್ರಕಾರ ‘ಡಬಲ್ ಇಂಜಿನ್’’ ಸರಕಾರಗಳು. ಇದಲ್ಲದೆ ಕೇಂದ್ರವೇ ನಡೆಸುವ ನವೋದಯ ಶಾಲೆಗಳಲ್ಲೂ 2021ರ ವೇಳೆಗೆ 3156 ಶಿಕ್ಷಕ ಹುದ್ದೆಗಳು ಖಾಲಿ ಇವೆ.