ಮಣಿಪುರ: 7 ಕುಕಿ ಮಹಿಳೆಯರ ಮೇಲೆ ಅತ್ಯಾಚಾರ ಆರೋಪ, ನಿರಾಕರಿಸಿದ ಸಿಎಂ ಬಿರೇನ್ ಸಿಂಗ್

ಮಣಿಪುರ ಹಿಂಸಾಚಾರ ಭುಗಿಲೆದ್ದ ನಂತರ 160 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ

ಇಂಫಾಲ್: ಮೇ 4 ರಂದು ಮಣಿಪುರದ ಕಾಂಗ್‌ಪೊಕ್ಪಿಯಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಜನಸಮೂಹವು ಬೆತ್ತಲೆ ಮೆರವಣಿಗೆ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿರುವ ಭಯಾನಕ ವೀಡಿಯೊ ಕಳೆದ ವಾರ ವೈರಲ್ ಆಗಿತ್ತು. ಇದರ ಬೆನ್ನಿಗೆ ಹಲವಾರು ಲೈಂಗಿಕ ದೌರ್ಜನ್ಯದ ಘಟನೆಗಳು ಬೆಳಕಿಗೆ ಬಂದಿವೆ. ಮೇ 3 ರಂದು ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾದಾಗಿನಿಂದ ಕನಿಷ್ಠ ಏಳು ಕುಕಿ-ಜೋಮಿ ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಸಮುದಾಯದ ವಿವಿಧ ಸಂಘಗಳು ಹೇಳಿಕೊಂಡಿವೆ.

ಆದಾಗ್ಯೂ, ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಇದನ್ನು ನಿರಾಕರಿಸಿದ್ದು, ಕೇವಲ ಒಂದು ಅತ್ಯಾಚಾರದ ಘಟನೆ ವರದಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಕಳೆದ ವಾರ ಕಾಣಿಸಿಕೊಂಡ ವೈರಲ್ ವೀಡಿಯೊದಲ್ಲಿದ್ದ ಒಬ್ಬ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ:ಪ್ರತಿರೋಧವಾಗಿ ಹೊರ ಹೊಮ್ಮಿದ ಕವಿತೆಗಳು

ವೈಪೈ ಪೀಪಲ್ಸ್ ಕೌನ್ಸಿಲ್, ಯಂಗ್ ವೈಪೈ ಅಸೋಸಿಯೇಷನ್, ಝೋಮಿ ಸ್ಟೂಡೆಂಟ್ಸ್ ಫೆಡರೇಶನ್ ಮತ್ತು ಕುಕಿ ಸ್ಟೂಡೆಂಟ್ಸ್ ಫೆಡರೇಶನ್ ಹಿಂಸಾಚಾರದಲ್ಲಿ ಏಳು ಕುಕಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಜುಲೈ 23 ರಂದು ಹೇಳಿವೆ.

ಒಟ್ಟು 27 ಸಂತ್ರಸ್ತ ಮಹಿಳೆಯರಲ್ಲಿ ಏಳು ಮಂದಿ ಅತ್ಯಾಚಾರಕ್ಕೊಳಗಾದರು, ಎಂಟು ಮಂದಿಯನ್ನು ಹೊಡೆದು ಸಾಯಿಸಲಾಯಿತು, ಇಬ್ಬರನ್ನು ಸುಟ್ಟು ಕೊಲ್ಲಲಾಯಿತು, ಐವರನ್ನು ಗುಂಡಿಕ್ಕಿ ಕೊಂದರು ಮತ್ತು ಮೂವರನ್ನು ಕೊಚ್ಚಿ ಕೊಲ್ಲಲಾಯಿತು. ಉಳಿದ ಮಹಿಳೆಯರ ಸಾವಿಗೆ ಕಾರಣ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

“ಕೊಲೆ, ಬೆಂಕಿ ಹಚ್ಚುವಿಕೆ ಮತ್ತು ಗಲಭೆಗಳ ದೂರುಗಳೊಂದಿಗೆ ರಾಜ್ಯಾದ್ಯಂತ 6,068 ಎಫ್‌ಐಆರ್‌ಗಳು ದಾಖಲಾಗಿದೆ. ಇದರಲ್ಲಿ ಕೇವಲ ಒಂದೇ ಒಂದು ಅತ್ಯಾಚಾರದ ಘಟನೆ ಕಂಡುಬಂದಿದೆ” ಎಂದು ಬಿರೇನ್ ಸಿಂಗ್ ಖಾಸಗಿ ಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕಾರ್ ವಾಶ್‌ನಲ್ಲಿ ಇಬ್ಬರು ಹುಡುಗಿಯರು ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮತ್ತೊಂದು ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶವಪರೀಕ್ಷೆ ವರದಿಯು ಅತ್ಯಾಚಾರ ಅಥವಾ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯವನ್ನು ತಳ್ಳಿಹಾಕಿದೆ ಎಂದು ಬಿರೇನ್ ಸಿಂಗ್ ಹೇಳಿದ್ದಾರೆ. ಇಂಫಾಲ್ ಕಾರ್ ವಾಶ್‌ನಲ್ಲಿ ಕೆಲಸ ಮಾಡುತ್ತಿದ್ದ ಮಣಿಪುರದ ಕಾಂಗ್‌ಪೊಕ್ಪಿಯ ಇಬ್ಬರು ಯುವ ಬುಡಕಟ್ಟು ಮಹಿಳೆಯರನ್ನು ಮೇ 4 ರಂದು ಅವರ ಕೆಲಸದ ಸ್ಥಳದಲ್ಲಿ ಅಪಹರಿಸಿ ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮಣಿಪುರ ಘಟನೆ ಖಂಡಿಸಿದ ಲೈಂಗಿಕ ಕಿರುಕುಳ ಆರೋಪ ಹೊತ್ತ ಬಿಜೆಪಿ ಸಂಸದ ಬ್ರಿಜ್ ಭೂಷಣ್!

ಈ ಮಧ್ಯೆ ಕಲಹ ಪೀಡಿತ ರಾಜ್ಯಕ್ಕೆ ಭೇಟಿ ನೀಡಲು ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದ್ದರೂ, ದೆಹಲಿ ಮಹಿಳಾ ಆಯೋಗದ (DCW) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಜೊತೆಗೆ ಸಂವಾದ ನಡೆಸಲು ಇಂಫಾಲ್‌ಗೆ ತೆರಳಿದ್ದಾರೆ. “ದಯವಿಟ್ಟು ನನಗೆ ಅವಕಾಶ ಮಾಡಿಕೊಡಿ. ನಾನು ರಾಜಕೀಯ ಮಾಡಲು ಇಲ್ಲಿಗೆ ಬಂದಿಲ್ಲ. ನಾನು ಪ್ರಧಾನಿ ಮೋದಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮಣಿಪುರಕ್ಕೆ ಭೇಟಿ ನೀಡುವಂತೆ ವಿನಂತಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.

“ಅತ್ಯಾಚಾರಿಗಳನ್ನು ಬಿಡುವುದಿಲ್ಲ” ಎಂದು ಪ್ರಧಾನಿ ಮೋದಿ ಇತ್ತಿಚೆಗೆ ಹೇಳಿಕೆ ನೀಡಿದ್ದರೂ, ಮಣಿಪುರದ ಪರಿಸ್ಥಿತಿಯ ಬಗ್ಗೆ ಸಂಸತ್ತಿನಲ್ಲಿ ಪ್ರಧಾನಿ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಇಂದು ಲೋಕಸಭೆಯಲ್ಲಿ ‘ಇಂಡಿಯಾ ಫಾರ್ ಮಣಿಪುರ’ ಮತ್ತು ‘ಇಂಡಿಯಾ ಡಿಮ್ಯಾಂಡ್ ಪಿಎಂ ಸ್ಟೇಟ್‌ಮೆಂಟ್‌ ಮಣಿಪುರ’ ಎಂಬ ಫಲಕಗಳನ್ನು ವಿರೋಧ ಪಕ್ಷಗಳ ಸಂಸದರು ಹಿಡಿದುಕೊಂಡಿದ್ದರು.

ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ 160 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಮಣಿಪುರದ ಜನಸಂಖ್ಯೆಯ ಸುಮಾರು 53% ದಷ್ಟಿರುವ ಮೈತೇಯಿಗಳು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ನಾಗಾಗಳು ಮತ್ತು ಕುಕಿಗಳನ್ನು ಒಳಗೊಂಡಿರುವ ಬುಡಕಟ್ಟು ಜನಾಂಗದವರು 40% ರಷ್ಟಿದ್ದು, ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

ವಿಡಿಯೊ ನೋಡಿ: ಪ್ರೇಕ್ಷಕನ ಮನಗೆದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’  

Donate Janashakthi Media

Leave a Reply

Your email address will not be published. Required fields are marked *