ನವದೆಹಲಿ: ಗೋಕುಲಪುರಿ ಪ್ರದೇಶದಲ್ಲಿನ ಗುಡಿಸಲುಗಳಿಗೆ ಸಂಭವಿಸಿದ ಅಗ್ನಿ ದುರಂತದಿಂದಾಗಿ 7 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಬೆಂಕಿ ಹೊತ್ತಿಕೊಂಡಿತ್ತು. 13 ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸಿದ್ದು, ಶನಿವಾರ ಮುಂಜಾನೆವರೆಗೂ ಕಾರ್ಯಾಚರಣೆ ನಡೆಯಿತು.
ಘಟನೆಯು ಮುಂಜಾನೆ 1 ಗಂಟೆ ಸುಮಾರಿಗೆ ಆಗಿದ್ದು, ಎಂಬ ಮಾಹಿತಿ ಇದೆ. ಸುಮಾರು 60 ಗುಡಿಸಲುಗಳಲ್ಲಿ ಬೆಂಕಿ ಹೊತ್ತಿಕೊಂಡ ಬಗ್ಗೆ ನಮಗೆ ಕರೆ ಬಂತು ಎಂದು ದೆಹಲಿ ಅಗ್ನಿಶಾಮಕ ಸೇವೆ ತಿಳಿಸಿದೆ. ತಕ್ಷಣ ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ತೆರಳಿದವು. ಘಟನೆಯಲ್ಲಿ 6 ಜನರು ಸಜೀವವಾಗಿ ದಹನವಾಗಿದ್ದು, ಹಲವಾರು ಜನರಿಗೆ ಗಾಯಗಳಾಗಿವೆ.
ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಗುರುತಿಸಲಾಗದ ಸ್ಥಿತಿಯಲ್ಲಿವೆ, ಗುಡಿಸಲಿನಲ್ಲಿ ಜನರು ಗಾಢನಿದ್ದೆಯಲ್ಲಿದ್ದ ಸಮಯದಲ್ಲಿ ಅತ್ಯಂತ ವೇಗವಾಗಿ ಬೆಂಕಿ ಹರಡಿದ್ದರಿಂದ ಮಲಗಿದ್ದವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ದೆಹಲಿಯ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ಈಶಾನ್ಯ) ದೇವೇಶ್ ಕುಮಾರ್ ಮಹ್ಲಾ ಈ ಕುರಿತು ಪ್ರತಿಕ್ರಿಯೆ ನೀಡಿ “ರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿರುವ ಕುರಿತು ಮಾಹಿತಿ ತಿಳಿಯಿತು. ತಕ್ಷಣ 13 ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ತೆರಳಿತು. ಸುಮಾರು 4 ಗಂಟೆಯ ತನಕ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿವೆ” ಎಂದರು.
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ, ‘ಮುಂಜಾನೆ ಘಟನೆ ಬಗ್ಗೆ ಮಾಹಿತಿ ತಿಳಿಯಿತು. ನಾನು ಘಟನಾ ಸ್ಥಳಕ್ಕೆ ಹೋಗುತ್ತಿದ್ದೇನೆ. ಗಾಯಾಳುಗಳನ್ನು ಸಹ ಭೇಟಿಯಾಗುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.