ರಾಯಚೂರು : ರಾಶಿ ಬಿದ್ದಿದ್ದ ತ್ಯಾಜ್ಯ ವಸ್ತುಗಳನ್ನು ಸೇವಿಸಿ 7 ಹಸುಗಳು ಸಾವನ್ನಪ್ಪಿದ್ದು, 8 ಹಸುಗಳು ತೀವ್ರ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಗುಂಜಳ್ಳಿ ಗ್ರಾಮದಲ್ಲಿ ನಡೆದಿದೆ.
ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ನಂತರ ಗ್ರಾಮದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯವನ್ನು ಹಸುಗಳು ತಿಂದಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನೂ ಹಲವಾರು ಹಸುಗಳಿಗೆ ಹೊಟ್ಟೆ ಉಬ್ಬರಿಸಿಕೊಂಡು ಬಂದಿದೆ. ಉಳಿದ ಆಹಾರ ಮತ್ತು ತ್ಯಾಜ್ಯ ಪದಾರ್ಥಗಳನ್ನು ಸೇವಿಸಿ ಇದುವರೆಗೆ ಏಳು ಹಸುಗಳು ಸಾವನ್ನಪ್ಪಿದ್ದು, ಎಂಟು ಹಸುಗಳು ತೀವ್ರ ಅಸ್ವಸ್ಥಗೊಂಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದಲ್ಲದೆ, ಎಮ್ಮೆಗಳು ಮತ್ತು ಇತರ ಪ್ರಾಣಿಗಳು ಸಹ ತ್ಯಾಜ್ಯ ವಸ್ತುಗಳನ್ನು ತಿಂದು ಅಸ್ವಸ್ಥವಾಗಿವೆ. ಹಸುಗಳನ್ನು ಸಾಕುತ್ತಿರುವ ರೈತರು ವಿಜಯ ಸಂಕಲ್ಪ ಯಾತ್ರೆ ಸಂಘಟಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಇಷ್ಟೆಲ್ಲ ನಡೆಯುತ್ತಿದ್ದರೂ ಪಶು ವೈದ್ಯರು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಸಂತ್ರಸ್ತರು ದೂರಿದ್ದಾರೆ.
ಕಳೆದ ಮಾರ್ಚ್ 10 ರಂದು ಗುಂಜಳ್ಳಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ಆಯೋಜಿಸಲಾಗಿದ್ದು, ಸಾವಿರಾರು ಜನರು ಸಮಾವೇಶದಲ್ಲಿ ಭಾಗವಹಿಸಿದ್ದರು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಭೋಜನವನ್ನು ಆಯೋಜಿಸಿತ್ತು. ಮಧ್ಯಾಹ್ನದ ಊಟದ ನಂತರ ಉಳಿದ ಆಹಾರ ಮತ್ತು ಪ್ಲಾಸ್ಟಿಕ್ ತಟ್ಟೆ ,ಲೋಟ, ಪೇಪರ್ ಗಳನ್ನು ಬಯಲು ಜಾಗದಲ್ಲಿ ಎಸೆದಿದ್ದರು. ಗೋವುಗಳ ಸಾವಿಗೆ ಕಾರಣವಾದ ಆಹಾರವನ್ನು ಸರಿಯಾಗಿ ವಿಲೇವಾರಿ ಮಾಡದಿರುವ ಬಗ್ಗೆ ಜನರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಜ.18 ರಿಂದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ
ಮಾತೆತ್ತಿದ್ದರೆ ನಾವು ಗೋವುಗಳ ರಕ್ಷಕರು, ಗೋವುಗಳ ನಮ್ಮ ಆರಾಧ್ಯ ದೈವ ಎನ್ನುವ ಬಿಜೆಪಿಯವರು ತಮ್ಮದೇ ರಾಜಕೀಯ ಲಾಭಕ್ಕಾಗಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಗೋವುಗಳ ಸಾವಿಗೆ ಕಾರಣವಾಗುತ್ತಿರುವುದು ಅವರಿಗಿರುವ ಪ್ರಾಣಿ ಪ್ರೀತಿ ಏನೆಂಬುದನ್ನು ತೋರಿಸುತ್ತದೆ. ಗೋ ರಕ್ಷಣೆ ಬಗ್ಗೆ ಬಿಜೆಪಿ ಹಾದಿಬೀದಿಯಲ್ಲಿ ಅರಚುತ್ತದೆಯೇ ಹೊರತು, ಗೋವುಗಳ ರಕ್ಷಣೆ ಮಾಡುವುದಿಲ್ಲ ಎಂಬುದನ್ನು ಇಂತಹ ಘಟನೆಗಳು ಮತ್ತೆ ಮತ್ತೆ ಸಾಕ್ಷೀಕರಿಸುತ್ತವೆ. ಇದೀಗ ಜೀವನೋಪಾಯಕ್ಕೆ ಆಧಾರವಾಗಿದ್ದ ಹಸುಗಳನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ