ಬೆಂಗಳೂರು: 696 ಕಡೆ ಚರಂಡಿ ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್ ನೀಡಿದ ಬಿಬಿಎಂಪಿ

ಬೆಂಗಳೂರು: ನಗರದಲ್ಲಿ ಭಾರೀ ಮಳೆಯಿಂದಾಗಿ ಮಹದೇವಪುರ ಮತ್ತು ಬೊಮ್ಮನಹಳ್ಳಿ ಬಿಬಿಎಂಪಿ ವಲಯ ವ್ಯಾಪ್ತಿಯಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯು ಎದುರಾಗಿರುವ ಸಮಸ್ಯೆಗಳನ್ನು ಸರಿಪಡಿಸಲು ಮುಂದಾಗಿದೆ.

ಈ ಸಂಬಂಧ ಬಿಬಿಎಂಪಿ ಆಡಳಿತವು ಒಟ್ಟು 696 ಕಡೆ ಚರಂಡಿ ಒತ್ತುವರಿಯಾಗಿರುವುದನ್ನು ಗುರುತಿಸಿದ್ದು, ಅದರಲ್ಲೂ ಮಳೆನೀರು ಹರಿಯುವ ಚರಂಡಿಗಳನ್ನು ಒತ್ತುವರಿ ಮಾಡಿಕೊಂಡಿರುವವರು ಕೂಡಲೇ ತೆರವು ಮಾಡಲು ನೋಟಿಸ್‌ ಜಾರಿ ಮಾಡಲಾಗಿದೆ. ಪ್ರಮುಖವಾಗಿ ತೀವ್ರತರ ಸಮಸ್ಯೆಗೆ ಒಳಗಾಗಿರುವ ಪ್ರದೇಶಗಳನ್ನು ಆದ್ಯತೆಯಾಗಿ ಗುರುತಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಮಹದೇವಪುರ ಪ್ರದೇಶದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಸರಿಸುಮಾರು 175 ಕಡೆಗಳಲ್ಲಿ ಒತ್ತುವರಿಯಾಗಿದೆ. ಬೆಂಗಳೂರು ಪೂರ್ವ ವಲಯದಲ್ಲಿ 110 ಕಡೆಗಳಲ್ಲಿ ಒತ್ತುವರಿಯಾಗಿದ್ದರೆ, ಪಶ್ಚಿಮ ವಲಯದಲ್ಲಿ 59 ಕಡೆಗಳಲ್ಲಿ, ದಕ್ಷಿಣ ವಲಯದಲ್ಲಿ 20 ಕಡೆಗಳಲ್ಲಿ ಮತ್ತು ದಾಸರಹಳ್ಳಿ ವಲಯದಲ್ಲಿ 126 ಕಡೆಗಳಲ್ಲಿ ಒತ್ತುವರಿಯಾಗಿದೆ ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.

ಬೇಗೂರು ಕೆರೆಯ ಸುತ್ತಲೂ 81 ಅತಿಕ್ರಮಣಗಳು ಪತ್ತೆಯಾಗಿವೆ. ನಗರದಲ್ಲಿನ ಜಲಾವೃತ ಪ್ರದೇಶಗಳಲ್ಲಿ ಚರಂಡಿಗಳನ್ನು ಅತಿಕ್ರಮಣ ಮಾಡಿಕೊಂಡಿದ್ದ 32 ಜನರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಶೀಘ್ರದಲ್ಲೇ ಒತ್ತುವರಿಯನ್ನು ತೆರವು ಮಾಡಲಾಗುವುದು, ಮುಂದಿನ ದಿನಗಳಲ್ಲಿ ಮತ್ತೆ ಈ ರೀತಿ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗುವುದೆಂದು ತಿಳಿಸಿದ್ದಾರೆ.

ಸುಮಾರು 500 ಕಡೆ ಒತ್ತುವರಿ ತೆರವುಗೊಳಿಸಲು ಕ್ರಮ

ಬಿಬಿಎಂಪಿ ವ್ಯಾಪ್ತಿಯಲ್ಲಿನ ಸುಮಾರು 500 ಕಡೆಗಳಲ್ಲಿ ಒತ್ತುವರಿ ತೆರವು ಮಾಡುವ ಕಾರ್ಯ ಬಾಕಿ ಉಳಿದಿದೆ. ಬಿಬಿಎಂಪಿ ಅಧಿಕಾರಿಗಳು ಅತಿಕ್ರಮಣ ತೆರವು ಪ್ರಕ್ರಿಯೆಯನ್ನು ನೋಡಿಕೊಳ್ಳಲಿದ್ದಾರೆ. ದೊಡ್ಡ ಬೊಮ್ಮಸಂದ್ರದಲ್ಲಿ ಒತ್ತುವರಿ ತೆರವಿಗೆ ಕಾರ್ಯಾಚರಣೆ ನಡೆದಿದೆ. ಜಿಡಿ ಲೇಔಟ್ ಬಳಿ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.

ಜುಲೈ 26, 2022 ರ ನ್ಯಾಯಾಲಯ ಹೊರಡಿಸಿದ ನಿರ್ದೇಶನಗಳ ಪ್ರಕಾರ ಕೆರೆಯ ಒತ್ತುವರಿ ಭಾಗಗಳ ಸಮೀಕ್ಷೆ ಮತ್ತು ಭೌತಿಕ ಗುರುತು ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *