ಬೆಂಗಳೂರು : ಅಥಿತಿ ಉಪನ್ಯಾಸಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಎಲ್ಲರನ್ನು ಸೇವೆಯಲ್ಲಿ ಮುಂದುವರೆಸಬೇಕು ಹಾಗೂ ಸೇವಾ ಭದ್ರತೆಯನ್ನು ನೀಡಬೇಕು ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ಆಗ್ರಹಿಸಿದರು.
ಮೌರ್ಯ ವೃತ್ತದ ಬಳಿ ಅತಿಥಿ ಉಪನ್ಯಾಸಕರು ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಕಾರದ ಅವೈಜ್ಞಾನಿಕ ನಿರ್ಧಾರದಿಂದ ರಾಜ್ಯದ ಬಹುಪಾಲು ಅತಿಥಿ ಉಪನ್ಯಾಸಕರು ನಿರುದ್ಯೋಗಿಗಳಾಗಿದ್ದಾರೆ. ರಾಜ್ಯದಲ್ಲಿ
ಸಾವಿರಾರು ಅತಿಥಿ ಉಪನ್ಯಾಸಕರು ಕೆಲಸವನ್ನು ಕಳೆದುಕೊಂಡು ಅತಂತ್ರರಾಗಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಎರಡು ತಿಂಗಳಿನಿಂದ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸರಕಾರವು ಕುಮಾರ ನಾಯಕ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿತ್ತು. ಸಮಿತಿಯ ವರದಿಯನ್ನು ಬಹಿರಂಗಪಡಿಸದೆ,
ಕೇವಲ ಸಭೆಯನ್ನು ನಡೆಸಲಾಗಿದೆ. ಸಭೆಯಲ್ಲಿ ಅತಿಥಿ ಉಪನ್ಯಾಸಕರ ವೇತನವನ್ನು ದುಪ್ಪಟ್ಟು ಮಾಡುವ
ತೀರ್ಮಾನವನ್ನು ತೆಗೆದುಕೊಂಡು ಕಾರ್ಯಭಾರ ಹೆಚ್ಚಿಸಲಾಗಿದೆ. ಹಾಗಾಗಿ ಸುಮಾರು 3,000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡು
ನಿರುದ್ಯೋಗಿಗಳಾಗಿದ್ದಾರೆ ಎಂದು ವರಲಕ್ಷ್ಮೀ ಆರೋಪಿಸಿದರು.
SFI ರಾಜ್ಯಾಧ್ಯಕ್ಷ ಅಮರೇಶ ಕಡಗದ್ ಮಾತನಾಡಿ, ರಾಜ್ಯ ಸರಕಾರ ಅತಿಥಿ ಉಪನ್ಯಾಸಕರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಶಿಕ್ಷಣ ತಜ್ಞರು ಅತಿಥಿ ಉಪನ್ಯಾಸಕ ಸಂಘದ ಪ್ರತಿನಿಧಿಗಳನ್ನು ಯೋಜನಾ ಇಲಾಖೆ ಮತ್ತು ಉಪನ್ಯಾಸಕರ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸುವ ಬದಲಿಗೆ ಕಾಲೇಜು ಶಿಕ್ಷಣ ಇಲಾಖೆಯ ಆಡಳಿತ ಮಂಡಳಿ ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳನ್ನು ಮಾತ್ರ ಬಳಸಿಕೊಂಡು ರಚಿಸಿದ ಸಮಿತಿ ನಿರೀಕ್ಷೆ ಪ್ರಕಾರ ಕೆಲಸ ಮಾಡಿಲ್ಲ. ಆ ಸಮಿತಿ ಅತಿಥಿ ಉಪನ್ಯಾಸಕರಿಗೆ ದ್ರೋಹ ಎಸಗಿದೆ ಎಂದು ಆರೋಪಿಸಿದರು.
ಈ ವೇಳೆ ಅತಿಥಿ ಉಪನ್ಯಾಸಕರಗಳಾದ ಫಯಾಜ್, ನಾಗಣ್ಣ ಜಿ.ಕೆ, ನರಸಿಂಹಮೂರ್ತಿ, ಹನುಮಂತರಾಜು, ಈಶ್ವರಿ, ಕಾವ್ಯ, ಮಧು, SFI ಜಂಟಿ ಕಾರ್ಯದರ್ಶಿ ಭೀಮನಗೌಡ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ಹೋರಾಟದಲ್ಲಿ ಭಾಗವಹಿಸಿದ್ದರು.