ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಆರ್‌ಎಸ್‌ಎಸ್ ಕುರಿತು ಬರೆದಿರುವ ‘ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಕಿರು ಪುಸ್ತಕ ರಾಜ್ಯವ್ಯಾಪಿ ವೈರಲ್ ಆಗಿದೆ. 1 ಲಕ್ಷಕ್ಕೂ ಹೆಚ್ಚು ಪ್ರತಿಗಳನ್ನು ವಿವಿಧ ಪ್ರಕಾಶನಗಳು ಪ್ರಕಟಿಸಿವೆ. ಈಗ ಕೃತಿಯ ಕಿರಿತು ರಾಷ್ಟ್ರ ಮಟ್ಟದಲ್ಲೂ ಚರ್ಚೆಯಾಗುತ್ತಿದೆ. “ಬಿಬಿಸಿ ವಾರ್ತೆ” ಹಿಂದಿ ಅವತರಣಿಕೆಗೆ ದೇವನೂರ ಮಹಾದೇವ ಅವರು ನೀಡಿದ ಸಂದರ್ಶನದ ಕನ್ನಡದ ಪೂರ್ಣ ಪಾಠ. -ಸಂದರ್ಶಕರು :ಇಮ್ರಾನ್ ಖುರೇಷಿ
https://www.bbc.com/hindi/india-62339643
1) ಸಂವಿಧಾನಕ್ಕೆ ಭಗವದ್ಗೀತೆ ಹೇಗೆ ತೊಡಕಾಗುತ್ತದೆ?
ಸಾಮಾನ್ಯವಾಗಿ ಪುರಾಣಗಳಲ್ಲಿ, ಪುರಾತನ ಗ್ರಂಥಗಳಲ್ಲಿ ಪ್ರಕ್ಷಿಪ್ತಗಳು ಇರುತ್ತವೆ. ಪುರಾಣಗಳನ್ನು ವಾಸ್ತವ ಅಂತಲೂ ನಂಬುವವರು ಭಾರತದಲ್ಲಿ ಇದ್ದಾರೆ. ಅದರಲ್ಲೂ ದೇವರೇ ಹೇಳಿದ ಅಂದರಂತು ಭಾರತದ ಮುಗ್ಧ ಜನತೆ ಭಯ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ತಾರತಮ್ಯದ ಚಾತುರ್ವರ್ಣ ಸಾಮಾಜಿಕ ಪದ್ಧತಿಯನ್ನು ನಾನೇ ಮಾಡಿದ್ದು ಎಂದು ದೇವರ ಬಾಯಲ್ಲೆ ಭಗವದ್ಗೀತೆಯಲ್ಲಿ ಹೇಳಿಸಲಾಗಿದೆಯಲ್ಲ! ಅಲ್ಲಿಗೆ ಕತೆ ಮುಗೀತು. ಆದರೆ, ಈ ಭಗವದ್ಗೀತೆ ಮೂಲ ಮಹಾಭಾರತದಲ್ಲಿ ಇದ್ದಿರಲಾರದು, ಇದನ್ನು ಶಂಕರಾಚಾರ್ಯರು ರಚಿಸಿ ಸೇರ್ಪಡೆ ಮಾಡಿದ್ದಾರೆ ಎಂಬ ಮಾತೂ ಇದೆ. ಇದನ್ನು ನಾನು ಹೇಳುತ್ತಿರುವುದಲ್ಲ. ಸ್ವಾಮಿ ವಿವೇಕಾನಂದರು ಹೇಳುವ ಮಾತುಗಳು ಇದು. ಇದು ನನಗೂ ನಿಜವೆನ್ನಿಸುತ್ತದೆ.
ಇನ್ನುಳಿದಂತೆ ಭಗವದ್ಗೀತೆಯನ್ನು ನಾನು ಸಾರಾಸಗಟಾಗಿ ನಿರಾಕರಿಸುವುದಿಲ್ಲ. ಇದನ್ನು ಒಂದು ಸಾಹಿತ್ಯ ಕೃತಿ ಎಂಬಂತೆ ನೋಡುತ್ತೇನೆ. ಇಲ್ಲಿ ಭಾರತದ ಆ ಕಾಲಘಟ್ಟದ ಎಲ್ಲಾ ದರ್ಶನಗಳ ಸಾರ ಸಂಗ್ರಹ ಅಡಕವಾಗಿದೆ. ಬುದ್ಧಿಸಂ ಚಿಂತನೆಗಳೂ ಹೆಚ್ಚಾಗಿದೆ. ಭಗವದ್ಗೀತೆಯನ್ನು ಒಬ್ಬ ಪ್ರತಿಭಾವಂತ ಪ್ರಖರ ಬುದ್ಧಿವಂತ ಸೃಷ್ಟಿಸಿದಂತಿದೆ. ಇಷ್ಟೆಲ್ಲಾ ಇದ್ದು ಚಾತುರ್ವರ್ಣ ಸಾಮಾಜಿಕ ಪದ್ಧತಿಯನ್ನು ಎತ್ತಿ ಹಿಡಿಯಲಾಗಿರುವ ದುರಂತ ಇಲ್ಲಿ ಸಂಭವಿಸಿದೆ. ತಾರತಮ್ಯದ ಸಾಮಾಜಿಕ ಪದ್ಧತಿಗಳನ್ನು ಇರುವಂತೆಯೇ ಕಾಪಾಡಿಕೊಂಡು ದೊಡ್ಡದೊಡ್ಡ ಮಾತುಗಳನ್ನು ಆಡಿದಂತಿದೆ.
ಇಲ್ಲಿ ಇನ್ನೊಂದು ಅಂಶ- ಶಂಕರಾಚಾರ್ಯರನ್ನು ‘ಪ್ರಚ್ಛನ್ನ ಬುದ್ಧ’ ಅಂತಲೂ ಕರೆಯುತ್ತಾರೆ. ಬುದ್ಧಿಸಂ ಎಂಬ ವೃಕ್ಷವನ್ನು ಬುಡಮೇಲು ಮಾಡಿದವರು, ಅಂದರೆ, ವೃಕ್ಷದ ಬೇರು ಕಿತ್ತು ವೃಕ್ಷದ ಬೇರುಗಳನ್ನು ಮೇಲೆ ಮಾಡಿ ಅದರ ಜೀವ ತೆಗೆದವರು ಎಂಬ ಖ್ಯಾತಿಯನ್ನೂ ಪಡೆದಿದ್ದಾರೆ. ಇದನ್ನೆಲ್ಲಾ ನೋಡಿದಾಗ, ವಿವೇಕಾನಂದರು ಹೇಳುವಂತೆ ಶಂಕರಾಚಾರ್ಯರ ಮೇಲೆಯೇ ನನಗೂ ಗುಮಾನಿ ಇದೆ. ಈ ಕಾಲಕ್ಕೆ ಬಂದರೆ, ಚಾತುರ್ವರ್ಣ ಎಂಬ ಹಿಂದೂ ಪ್ರಭೇದದ ಸಮರ್ಥನೆ ಭಾರತದ ಸಂವಿಧಾನಕ್ಕೆ ನೇರ ಹೊಡೆತವಲ್ಲವೆ?
2) ಸಮಾಜದಲ್ಲಿ ಮನುಧರ್ಮವನ್ನು ಆರ್ ಎಸ್ ಎಸ್ ಹೇಗೆ ಅಳವಡಿಕೆ ಮಾಡುತ್ತದೆ?
ಕರ್ನಾಟಕ ಸರ್ಕಾರದ ‘ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ’ ಎಂಬ ಹೆಸರಿರುವ ಕಾಯ್ದೆಯಲ್ಲಿ ಅಸ್ವಸ್ಥಚಿತ್ತರು, ಅಪ್ರಾಪ್ತರು, ಮಹಿಳೆ ಮತ್ತು ದಲಿತರನ್ನು ಒಂದೇ ಎಂಬಂತೆ ನೋಡಲಾಗಿದೆ. ಹಾಗಾದರೆ ಮಹಿಳೆಯರು, ದಲಿತರು, ಅಸ್ವಸ್ಥಚಿತ್ತರೇ ಅಥವಾ ಅಪ್ರಾಪ್ತರೆ? ಈ ಸರ್ಕಾರ ಮಹಿಳೆ ಮತ್ತು ದಲಿತರನ್ನು ಎರಡನೆ ದರ್ಜೆ ಪ್ರಜೆಗಳನ್ನಾಗಿಸಿಬಿಟ್ಟಿತು. ಇಲ್ಲಿ ಮನುಧರ್ಮ ಶಾಸ್ತ್ರದ ಕಾನೂನುಗಳಂತೆ- ತಮ್ಮ ಪ್ರಜೆಗಳಿಗೆ ಒಂದೇ ಅಪರಾಧಕ್ಕೆ ಅವರವರ ವರ್ಗ/ವರ್ಣಕ್ಕೆ ಅನುಗುಣವಾಗಿ ಬೇರೆ ಬೇರೆ ಶಿಕ್ಷೆ ಎಂಬಂತೆಯೇ ಈ ಕಾಯ್ದೆಯಲ್ಲೂ ಇದೆಯಲ್ಲವೆ? ಹೀಗಿರುವಾಗ ಈ ಕಾಯ್ದೆ ಮನುಧರ್ಮಶಾಸ್ತ್ರದ ನವರೂಪ ಅನ್ನುವುದಕ್ಕೆ ಶಾಸ್ತ್ರ ಕೇಳಬೇಕೆ?
3) ಬಿಜೆಪಿಯು OBC/SC/ST ಬೆಂಬಲ ಪಡೆಯುತ್ತಿರುವಾಗ ಭಾರತದಲ್ಲಿ ಜರ್ಮನಿಯ ನಾಜಿ ಜನಾಂಗೀಯವಾದವು ಹೇಗೆ ಪ್ರತಿಬಿಂಬಿಸಬಹುದು? ವಿವರಿಸುತ್ತೀರಾ?
OBC/SC/ST ಸಮುದಾಯಗಳು ಬಿಜೆಪಿಗೆ ಅಲ್ಲಲ್ಲಿ ಸಪೋರ್ಟ್ ಮಾಡುತ್ತಿರುವುದು ಸ್ವಲ್ಪ ಮಟ್ಟಿಗೆ ನಿಜವೆ. ಇಲ್ಲಿ ದುಡ್ಡು ಸುರಿಯಲಾಗುತ್ತಿದೆ. ಜೊತೆಗೆ, ಮಾರಿಕೊಂಡ ಮಾಧ್ಯಮಗಳು, ಅವರ IT ಸೆಲ್ನ ದಿನಗೂಲಿ ನಿರುದ್ಯೋಗಿಗಳು ಸತತ ಶ್ರಮಿಸುತ್ತಿದ್ದಾರೆ. ಇದನ್ನು ಬೃಹತ್ ಎಂಬಂತೆ ಎದ್ದು ಕಾಣಿಸಲು Event Management ನಡೆಯುತ್ತಿದೆ. ಇದಿರಲಿ, ಇಲ್ಲಿ ಭಾರತದ ಪರಿಸ್ಥಿತಿ ಮತ್ತು ಮನಸ್ಥಿತಿ ಎರಡನ್ನೂ ನಾವು ಮೊದಲು ಸಾಧ್ಯವಾದಷ್ಟು ಅರ್ಥ ಮಾಡಿಕೊಳ್ಳಬೇಕು. ಪರಿಸ್ಥಿತಿ ನೋಡುವುದಾದರೆ ಭಾರತದ ಅಭಿವೃದ್ಧಿಗಳಲ್ಲಿ ಇಂದು ಎದ್ದು ಕಾಣುತ್ತಿರುವುದು ‘ನಿರುದ್ಯೋಗದ ಅಭಿವೃದ್ಧಿ’. ನಿರುದ್ಯೋಗದಿಂದ ತಪ್ಪಿಸಿಕೊಳ್ಳಲು OBC/SC/ST ತರುಣರು ಸಿಕ್ಕ ಸಿಕ್ಕ ಕಡೆಗೆ ನುಗ್ಗುತ್ತಿದ್ದಾರೆ. ಅಸಮರ್ಥ ಆಳ್ವಿಕೆಯು ಜನರ ಬದುಕಲ್ಲಿ ಇಂತಹ ದುಃಸ್ಥಿತಿ ಉಂಟು ಮಾಡಿದೆ. ಆಳ್ವಿಕೆಯು ತನ್ನ ಅಸಮರ್ಥತೆಯನ್ನು ಮುಚ್ಚಿ ಹಾಕಲು ಈ OBC/SC/ST ಸಮುದಾಯಗಳ ದುಃಸ್ಥಿತಿಗೆ ಕಾರಣ ಎಂದು ಇಸ್ಲಾಂ, ಕ್ರಿಶ್ಚಿಯನ್, ಕಾಂಗ್ರೆಸ್ನ್ ಶತ್ರುಗಳನ್ನಾಗಿಸಿ, ಅವರ ಮುಂದಿಟ್ಟಿದೆ.
ಇನ್ನು ಭಾರತದ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದಾದರೆ- ಚಾತುರ್ವರ್ಣ ಸಾಮಾಜಿಕ ಪದ್ಧತಿಯನ್ನು ಸಮಾಜದಲ್ಲಿ ಸ್ವಭಾವ ಮಾಡಲು ಧರ್ಮ ಸ್ಥಾಪನೆ ಹೆಸರಲ್ಲಿ ಇಲ್ಲಿ ಶಾಸ್ತ್ರಗಳನ್ನೆ ಶಸ್ತ್ರ ಮಾಡಿಬಿಟ್ಟರು. ಈ ಚಾತುರ್ವರ್ಣ ಪದ್ಧತಿಯನ್ನು ಕಾಯಲು ದೇವರುಗಳನ್ನೆ ಕವಾಲುಗಾರರನ್ನಾಗಿಸಿಬಿಟ್ಟಿರುವ ಇತಿಹಾಸ ಭಾರತಕ್ಕಿದೆ. -ಹೀಗೆಲ್ಲಾ ಇರುವುದರಿಂದ ಹಾಲಿ ನಿರುದ್ಯೋಗದಿಂದ ಬೇಯುತ್ತಿರುವ ಯುವಜನತೆಗೆ ದ್ವೇಷವೇ ಆಹಾರವಾಗಿಬಿಟ್ಟಿದೆ. ದ್ವೇಷವನ್ನೆ ಅವರಿಗೆ ಉಣ್ಣಿಸಿ, ತಿನ್ನಿಸಿ ಅನ್ಯಧರ್ಮಗಳ ಮೇಲೆ ಛೂ ಬಿಟ್ಟಿದ್ದಾರೆ. ಗೋಲ್ವಾಲ್ಕರ್, ಸಾವರ್ಕರ್ ಅವರು ಖಚಿತ ಮಾತುಗಳಲ್ಲೆ ನಾಜಿ ಪ್ರತಿಪಾದಕರಾಗಿದ್ದಾರಲ್ಲಾ! ಅದು ಈಗ ಬಿಜೆಪಿ ಆಳ್ವಿಕೆಯಲ್ಲಿ ಅದು ವ್ಯವಸ್ಥಿತವಾಗಿ ಮೇಲೆದ್ದಿದೆ.
4) ಮನುಧರ್ಮಶಾಸ್ತ್ರವನ್ನು ಸೂಕ್ಷ್ಮವಾಗಿ ಹೇಗೆ ರಾಜಕೀಯದಲ್ಲಿ ಹಾಗೂ ನಾಗರಿಕರ ಹಕ್ಕುಗಳು ಮತ್ತು ಪೌರತ್ವದಲ್ಲಿ ಅಳವಡಿಸಲಾಗುತ್ತಿದೆ?
ಪ್ರಧಾನಿ ಮೋದಿಯವರು ಒಂದೇ ಏಟಿಗೆ EWS ವರ್ಗಕ್ಕೆ 10% ಮೀಸಲಾತಿ ತಂದು ಬಿಟ್ಟರು. ಸಾಮಾಜಿಕ ನ್ಯಾಯದ ಪರಿಕಲ್ಪನೆಯಾದ ಮೀಸಲಾತಿಗೆ ಸಾಮಾಜಿಕವಾಗಿ ಹಿಂದುಳಿದಿರುವಿಕೆ, ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ ಹಾಗೂ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪ್ರಾತಿನಿಧ್ಯದ ಕೊರತೆ- ಇವು ಅಳತೆಗೋಲಾಗಿದ್ದವು. ಇದರಲ್ಲೊಂದು ನ್ಯಾಯವಿತ್ತು. ಇದಕ್ಕೊಂದು ಚಾರಿತ್ರ್ಯ ಇತ್ತು. ಆದರೆ ಸಾಮಾಜಿಕವಾಗಿ ಮುಂದುವರೆದ ಹಾಗೂ ಶಿಕ್ಷಣ ಮತ್ತು ಉದ್ಯೋಗ ಪ್ರಾತಿನಿಧ್ಯದಲ್ಲಿ ಅತಿ ಹೆಚ್ಚು ಪ್ರಾತಿನಿಧ್ಯವಿರುವ ಜೊತೆಗೆ ಜನಸಂಖ್ಯೆಯಲ್ಲಿ ಶೇಕಡ 5 ರಷ್ಟಿರುವ EWS ವರ್ಗಕ್ಕೆ ಶೇ.10% ಮೀಸಲಾತಿ ತಂದುಬಿಟ್ಟರು. ಇದರಿಂದ ಈ ಹಿಂದೆ ಮೀಸಲಾತಿಗೆ ಇದ್ದ ನ್ಯಾಯ ಅನ್ನುವುದು ನೆಗೆದು ಬಿತ್ತು. ಅದಕ್ಕಿದ್ದ ಚಾರಿತ್ರ್ಯವೂ ಹರಣವಾಯ್ತು. ಇದು ‘ಹೆಚ್ಚು ಮೇಲ್ಪಟ್ಟವರಿಗೇ ಹೆಚ್ಚು ಸಲ್ಲಬೇಕು’ ಎಂಬ ಮನುಧರ್ಮ ಶಾಸ್ತ್ರದ ನೀತಿಗೇ ಅನುಗುಣವಾಗಿದೆಯಲ್ಲವೆ?
5) ಆರ್ ಎಸ್ ಎಸ್ ಬಿಜೆಪಿ ಮೂಲದವರು “ಆರ್ ಎಸ್ ಎಸ್ ಆಳ ಮತ್ತು ಅಗಲ”ವನ್ನು ಕಾಂಗ್ರೆಸ್ ನವರು ಬರೆದು ನಿಮ್ಮ ಹೆಸರನ್ನು ಹಾಕಿದ್ದಾರೆ” ಅಂತ ಆರೋಪಿಸುತ್ತಾರಲ್ಲ?
ಮೊದಲನೆಯದಾಗಿ ನಾನು ಸ್ವರಾಜ್ ಇಂಡಿಯಾ ಎಂಬ ಪಕ್ಷದ ಸದಸ್ಯ. ಕಾಂಗ್ರೆಸ್ ಬರೆದು ನನ್ನ ಹೆಸರು ಹಾಕಿದೆ ಎಂಬ ಮಾತನ್ನು ನಾನೂ ಕೇಳಿದ್ದೇನೆ. ಅದೆಲ್ಲಾ ಅವರ ಕಸುಬಿನ ರೀತಿ, ನನಗೆ ಸಂಬಂಧಪಟ್ಟಿದ್ದಲ್ಲ. ಈ ಪುಸ್ತಕವನ್ನು ಕಾಂಗ್ರೆಸ್ನವರೂ ಹಂಚುತ್ತಿದ್ದಾರೆ, ಜೆಡಿಎಸ್ನವರೂ ಕೂಡ ಹಂಚುತ್ತಿದ್ದಾರೆ. ಕೆಲವು ಬಿಜೆಪಿ ನಾಯಕರೂ ಗೌಪ್ಯವಾಗಿ ಹಂಚುತ್ತಿದ್ದಾರೆ! ಈ ಪಟ್ಟಿಗೆ ಆರ್ ಎಸ್ ಎಸ್ ನವರು ಸೇರಿದರೆ ಅದು ಭಾರತಕ್ಕೆ ಸುವರ್ಣಯುಗ.
6. ಅವರಿಂದಲೇ ‘ಆರ್ ಎಸ್ ಎಸ್ ಆಳ ಮತ್ತು ಅಗಲ’ ಪುಸ್ತಕವು ಟ್ರ್ಯಾಷ್ ಎಂತಲೂ ಅನ್ನಿಸಿಕೊಳ್ಳುತ್ತಿದೆಯಲ್ಲಾ?
ಇದಕ್ಕೆ ನಾನೇನು ಪ್ರತಿಕ್ರಿಯೆ ಮಾಡಲಿ? ಆರ್ ಎಸ್ ಎಸ್ ಆಳ ಮತ್ತು ಅಗಲ ಪುಸ್ತಕದಲ್ಲಿ ಗೋಲ್ವಾಲ್ಕರ್, ಸಾವರ್ಕರ್ ಮಾತುಗಳ ಉಲ್ಲೇಖವಿದೆ. ಗೋಲ್ವಾಲ್ಕರ್, ಸಾವರ್ಕರ್ ಆ ರೀತಿ ಹೇಳಿಲ್ಲ ಎಂದಾದರೂ ಅವರು ಹೇಳಬೇಕಿತ್ತು ಅಥವಾ ಅವರು ಮೊದಲು ಹೇಳಿದ್ದರು ನಾವು ಈಗ ಅದನ್ನು ಒಪ್ಪುವುದಿಲ್ಲ ಎಂದಾದರೂ ಹೇಳಬೇಕಿತ್ತು. ಅಥವಾ ನಾವು ಅವರ ಮಾತುಗಳನ್ನು ಸಮರ್ಥಿಸುತ್ತೇವೆ ಎಂದಾದರೂ ಹೇಳಬೇಕಿತ್ತು. ಸುಮ್ಮನೆ ಟ್ರ್ಯಾಷ್ ಅಂದರೆ ಅದು ಗೋಲ್ವಾಲ್ಕರ್, ಸಾವರ್ಕರ್ರಿಗೆ ಸಲ್ಲುತ್ತದಲ್ಲವೆ?
7. ದೇಶ ಮುಂದೆ ಎತ್ತ ಚಲಿಸಬಹುದು?
ಮುಂದಿನ ದಿನಗಳು ಇರಲಿ, ಇಂದು ವರ್ತಮಾನದಲ್ಲಿ ನಾವೇನು ಮಾಡಬೇಕು? ನಾವು ಏನನ್ನು ಆಲೋಚಿಸಬೇಕು ಹಾಗೂ ಕ್ರಿಯಾಶೀಲವಾಗಬೇಕು? ಇದೇ ಔಚಿತ್ಯ ಅನ್ನಿಸುತ್ತದೆ. ವಿಕೇಂದ್ರೀಕರಣಕ್ಕಾಗಿ, ಸ್ವಾವಲಂಬನೆ ಬದುಕಿಗಾಗಿ, ಸರ್ವ-ಸಹಭಾಗಿ ಪ್ರಜಾಪ್ರಭುತ್ವಕ್ಕಾಗಿ, ಭಾರತದ ಸಾಂಸ್ಕೃತಿಕ ವೈವಿಧ್ಯಮಯ ಚೆಲುವನ್ನು ಉಳಿಸಿಕೊಳ್ಳುವುದಕ್ಕಾಗಿ ನಾವು ಸಮಾಜದ ಒಳಗೆ ಬೆರೆತು ಸಮುದಾಯ ಮಾತಾಡುವಂತಾಗಲು ನಾವು ವೇಗವರ್ಧಕ ಅಂದರೆ ಕೆಟಲಿಸ್ಟ್ ಆಗಬೇಕಾಗಿದೆ, ಕ್ರಿಯಾಶೀಲವಾಗಬೇಕಾಗಿದೆ.
8 ದೇಶದ ಬಹುಸಂಖ್ಯಾತ ಜನತೆ ಸಂವಿಧಾನವನ್ನು ಬೆಂಬಲಿಸಬಹುದೆಂದು ನಿಮಗೆ ಅನ್ನಿಸುತ್ತದೆಯೆ?
I think so. ಸಂವಿಧಾನ ನನಗೆ ಅಗತ್ಯವಿದೆ. ಬಹುಶಃ ನಿಮಗೂ ಅಗತ್ಯವಿದೆ. ದೇಶಕ್ಕೂ ಹೆಚ್ಚು ಅಗತ್ಯವಿದೆ. ಇದನ್ನು ಜಾಗೃತರಾದವರು ಸಮುದಾಯಕ್ಕೆ ಮನದಟ್ಟು ಮಾಡುತ್ತಲೇ ಇರಬೇಕು.
9. ಭಾರತದ ಭವಿಷ್ಯದ ಬಗ್ಗೆ ಭರವಸೆ ಇದೆಯೆ?
ಭಾರತವು ಪ್ರಮುಖವಾಗಿ ದರ್ಶನಗಳ ನೆಲ. ಭಾರತದ ಮಹೋನ್ನತ ದರ್ಶನಗಳಾದ ಶ್ರಮಣ/ಶರಣ ಮುಂತಾದ ಧರ್ಮಗಳು, ಪಂಥಗಳು, ಅನೇಕಾನೇಕ ಪ್ರಯೋಗಗಳು ಈ ಭೂಮಿಯಲ್ಲಿ ಅಹಿಂಸೆ, ಸಹನೆ, ಕಾರುಣ್ಯ, ಸಮತ್ವ, ಪ್ರಕೃತಿಯ ಜೊತೆಗೆ ಜೀವದ ಸಹಬಾಳ್ವೆ, ಸಹ-ಅನುಭೂತಿ ಇತ್ಯಾದಿ ಬೆಲೆ ಕಟ್ಟಲಾಗದ ಬೆಳೆಗಳನ್ನು ಬಿತ್ತಿ ಬೆಳೆದಿದ್ದಾರೆ. ಅವು ಇಂದು ಶಿಥಿಲವಾಗಿವೆ. ಎಷ್ಟೊ ಕಟ್ಟಡಗಳು ಉರುಳಿ ಬಿದ್ದಿವೆ. ಈಗ ಹೆಸರಲ್ಲಿ ನಾವು ಹುಡುಕಬಾರದು. ಗುಣಗಳನ್ನು ಆಯ್ದು ಕೊಳ್ಳಬೇಕು. ಈ ಬೆಳಕಲ್ಲಿ ವರ್ತಮಾನದಲ್ಲಿ ಸಣ್ಣಪುಟ್ಟ ಕ್ರಿಯೆಗಳನ್ನು ಮಾಡಿದರೆ ಈ ಬಂಜರು ಭೂಮಿಯಲ್ಲೂ ಧರ್ಮ ಚಿಗುರುತ್ತದೆ. ಭಾರತ ಸಂವಿಧಾನದ ಪ್ರಸ್ತಾವನೆಯಲ್ಲೂ ಸ್ಥೂಲವಾಗಿ ಇವಿವೇ ಆಶಯಗಳು ಇದೆಯಲ್ಲಾ!
10) ಪ್ರಧಾನಮಂತ್ರಿ OBC ಗೆ ಸೇರಿದವರು, ರಾಷ್ಟ್ರಪತಿಗಳು ಆದಿವಾಸಿ ಪಂಗಡದವರು- ಹೀಗಿರುವಾಗ ಹೇಗೆ ಮನುಧರ್ಮ ಅನುಸರಿಸಲ್ಪಡುತ್ತದೆ?
ಬಿಜೆಪಿ ಮೂಲತಃ ಸಂವಿಧಾನೇತರ ಸಂಘ ನಿಯಂತ್ರಣದ ರಾಜಕೀಯ ಪಕ್ಷ. ಗರ್ಭಗುಡಿಯ ದೇವರು ನಾಗಪುರದಲ್ಲಿ ಕೂತಿರುತ್ತದೆ. ಬಿಜೆಪಿ ನಾಯಕತ್ವವು ಗರ್ಭಗುಡಿ ದೇವರು ಹೂ ಕೊಟ್ಟಂತೆ ನಿರ್ಧರಿಸಲ್ಪಡುತ್ತದೆ. ಅದಕ್ಕಾಗೇನೆ ಬಿಜೆಪಿ ನಾಯಕರ ದಂಡು ನಾ ಮುಂದು ತಾ ಮುಂದು ಅಂತ ಆರ್ಎಸ್ಎಸ್ ಮೆಚ್ಚಿಸಲು ಮುಗಿಬೀಳುತ್ತಿರುವುದು! ಅದಕ್ಕಾಗಿಯೇ ಸಂವಿಧಾನೇತರ ನಿಯಂತ್ರಣದ ಪಕ್ಷದಲ್ಲಿ ಸ್ವಂತಿಕೆ ಇರುವ ಬಲಿಷ್ಠ ನಾಯಕರುಗಳೂ ಉದುರಿಹೋಗುತ್ತಿರುವುದು. ಆಯ್ತು, ಪ್ರಧಾನಿ ಮೋದಿಯವರು OBC ಗೆ ಸೇರಿದವರು. ಆದರೆ ಅವರು OBC ಸಮುದಾಯಕ್ಕೆ ಮೂರು ಕಾಸಿನ ಪ್ರಯೋಜನವನ್ನಾದರೂ ಮಾಡಿಕೊಟ್ಟಿದ್ದಾರ? ಕೋಟ್ಯಾಧಿಪತಿಗಳಿಗೇನೆ Tax ಕಮ್ಮಿ ಮಾಡಿ, ಅವರ ಸಾಲಗಳನ್ನು write off ಮಾಡಿ, ಸಾರ್ವಜನಿಕ ಸಂಸ್ಥೆಗಳನ್ನೂ ಬಂಡವಾಳಗಾರರಿಗೆ ಮಾರುತ್ತ ಆ ಬಂಡವಾಳಿಗರ ಸಂಪತ್ತು ಲಕ್ಷ ಲಕ್ಷ ಕೋಟಿ ವೃದ್ಧಿಯಾಗುವಂತೆ ಕಾಯುತ್ತಿದ್ದಾರೆ.
ಆಯ್ತು, ಈ ಹಿಂದೆ ಬಹುತೇಕ ರಾಜರು, ಪಾಳೆಗಾರರು ಆಳ್ವಿಕೆ ಮಾಡುತ್ತಿದ್ದಾಗಲೂ ಚಾತುರ್ವರ್ಣ ಸಾಮಾಜಿಕ ಪದ್ಧತಿ ಕಾಪಾಡಿಕೊಂಡವರು ಮಾತ್ರ ಅಧಿಕಾರದಲ್ಲಿ ಉಳಿಯುತ್ತಿದ್ದರಲ್ಲ? ಕಾಪಾಡದವರ ತಲೆದಂಡವಾಗುತ್ತಿತ್ತಲ್ಲ! ಹಾಗಾಗಿ ನಿಜವಾಗಿ ಆಳ್ವಿಕೆ ನಡೆಸುತ್ತಿದ್ದವರು ಯಾರು? ಈ ರೀತಿ ಅದರ ಮರ್ಮಸ್ಥಾನ ಹಿಡಿದು ನೋಡಬೇಕಾಗಿದೆ.
11) ಪುಸ್ತಕಕ್ಕೆ ಕಾಪಿರೈಟ್ ಬಿಟ್ಟುಕೊಟ್ಟಿರುವುದೂ ಅಲ್ಲದೆ ಪ್ರಕಟಣೆಯನ್ನು ವಿಕೇಂದ್ರಿಕೃತ ಮಾಡಿದ್ದೀರ? ಏನು ಕಾರಣ?
ನಾನು ಕಾಪಿರೈಟ್ ಬಿಟ್ಟುಕೊಟ್ಟಿಲ್ಲ. ಆದರೆ ಬೆಲೆಯನ್ನು 40 ರೂಪಾಯಿಗಳಿಗೆ ನಿಗದಿ ಮಾಡಿದವರು ಗೌರವಧನ ನೀಡಬೇಕಾಗಿಲ್ಲ ಎಂದು ವಿನಂತಿಸಿದ್ದೇನೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತಲುಪಲಿ ಅಂತ. ಈಗ ವಿದ್ಯಾರ್ಥಿಗಳೇ ಪ್ರಕಟಿಸಿ ಕ್ಯಾಂಪಸ್ಗಳಲ್ಲಿ ಹಂಚುತ್ತಿದ್ದಾರಲ್ಲ! ತಾಲ್ಲೂಕುಗಳೂ, ಸಂಘ ಸಂಸ್ಥೆಗಳೂ ತಾವೇ ಪ್ರಕಟಿಸುತ್ತಿವೆ. ಜೂನ್ 30 ರಂದು 6 ಜನ ಪ್ರಕಾಶಕರು ಜೊತೆಗೂಡಿ 9 ಸಾವಿರ ಪ್ರತಿಗಳನ್ನು ಪ್ರಕಟಿಸಿ ಅವು 2 ದಿನಗಳಲ್ಲೆ ಖರ್ಚಾಗಿ ಮರು ಮುದ್ರಣಗಳು ಆಗತೊಡಗಿತು. ಈಗ ಜುಲೈ 24ಕ್ಕೆ 1 ಲಕ್ಷ 2 ಸಾವಿರ ಪ್ರತಿ ಮುಟ್ಟಿದೆ. ಆದರೂ ಮರುಮುದ್ರಣಕ್ಕೆ ಆರ್ಡರ್ ಗಳು ಬರುತ್ತಲೇ ಇವೆ! ಸ್ಥಳೀಯವಾಗೇ ಬೆಳವಣಿಗೆಯಾದರೆ ಇಡೀ ದೇಶವೇ ನಿಜವಾಗಿ ಬೆಳವಣಿಗೆಯಾಗುತ್ತದೆ ಎಂದು ವಿಕೇಂದ್ರಿಕೃತವಾಗಿ ಪ್ರಯೋಗ ಸಂದೇಶ ನೀಡುತ್ತಿರಬಹುದೆ?
12) ಇಷ್ಟೊಂದು ಜನರು ನಿಮ್ಮ ಪುಸ್ತಕವನ್ನು ಮುಗಿಬಿದ್ದು ಓದುತ್ತಿರುವುದಕ್ಕೆ ಕಾರಣ ಏನಿರಬಹುದು?
Anything wrong in it? ನಾನು ‘ಕುಸುಮ ಬಾಲೆ’ ಕಾದಂಬರಿ ಬರೆದು ಮುದ್ರಣಕ್ಕೆ ನೀಡಿದಾಗ ಒಂದು ಸಾವಿರ ಪ್ರತಿ ಖರ್ಚಾದರೆ ಅದು ಪುಣ್ಯ ಅಂದುಕೊಂಡಿದ್ದೆ. ಅದರ ಭಾಷೆ ಆ ರೀತಿ ಇತ್ತು. ಇದು 50 ಸಾವಿರ ಪ್ರತಿ ದಾಟಿದೆ. ಹಾಗೆ ‘ಒಡಲಾಳ’ ಎಂಬ ಕಿರು ಕಾದಂಬರಿ ಲಕ್ಷದ ಮೇಲೆ ದಾಟಿದೆ. ನಾನು ಲೆಕ್ಕ ಇಟ್ಟಿಲ್ಲ. ‘ಎದೆಗೆ ಬಿದ್ದ ಅಕ್ಷರ’ ಎಂಬ ಗದ್ಯ ಬರೆಹಗಳ ಸಂಗ್ರಹವು 25ನೇ ಮುದ್ರಣ ಕಂಡಿದೆ. ಇದಕ್ಕೆ ನಾನು ಏನು ಹೇಳಲಿ? ನಾನು ಓದುಗರಿಗೆ ಕೃತಜ್ಞತೆ ಸಲ್ಲಿಸಬೇಕಷ್ಟೆ. ಕಾರಣವನ್ನು ನೀವು ಓದುಗರನ್ನೆ ಕೇಳಿ ತಿಳಿದುಕೊಳ್ಳಬೇಕಾಗಿದೆ!
Very meaningful interview
It is correct
Wonderful, Realistic, what is going on is reflecting, That is called Devanuru